Maha Kumbh Mela 2025: ಮಹಾ ಕುಂಭಮೇಳದ ಮೊನಾಲಿಸಾ ಮನೆ ಪರಿಸ್ಥಿತಿ ಹೇಗಿದೆ ಗೊತ್ತಾ?
ಭಾರತದಲ್ಲಿ ಹಿಂದೂ ಧರ್ಮದಲ್ಲಿ ಅತ್ಯಂತ ದೊಡ್ಡ ಹಾಗೂ ಅತ್ಯಂತ ಪವಿತ್ರವಾದ ಉತ್ಸವಗಳಲ್ಲಿ ಪ್ರಮುಖವಾದ ಮಹಾ ಕುಂಭಮೇಳಕ್ಕೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಜನವರಿ 13ರಿಂದ ಚಾಲನೆ ಸಿಕ್ಕಿದ್ದು, ಕಳೆದ ಎರಡು ವಾರಗಳಿಂದ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಸದ್ಯ ಟ್ರೆಂಡಿಂಗ್‌ನಲ್ಲಿರುವ ಮಹಾ ಕುಂಭಮೇಳದ ಲಕ್ಷಾಂತರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಪೈಕಿ ಮಣಿಗಳ ಸರ ಮಾರುವ ಹುಡುಗಿಯ ವಿಡಿಯೋಗಳು ಹೊಸ ಟ್ರೆಂಡ್‌ಅನ್ನೇ ಸೃಷ್ಟಿಸಿತು.
ಆಕರ್ಷಕ ಕಣ್ಣುಗಳ ಚೆಲುವೆ ಮೊನಾಲಿಸಾ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾಳೆ. ಮೊನಾಲಿಸಾ ಹಾಗೂ ಆಕೆಯ ತಂಗಿ ಮಹಾ ಕುಂಭಮೇಳ ಮಾತ್ರವಲ್ಲ ಎಲ್ಲಿ ಜನ ದಟ್ಟಣೆ ಇರುತ್ತದೆಯೋ ಅಲ್ಲಿ ಮಣಿ ಸರಗಳನ್ನು, ಹೂವುಗಳನ್ನು ಮಾರಿ ತಮ್ಮ ಜೀವನ ನಡೆಸುತ್ತಿದ್ದರು. ಮಧ್ಯಪ್ರದೇಶದ ಇಂದೋರ್‌ನ ಬಡ ಕುಟುಂಬದ ಮೊನಾಲಿಸಾ ತಂದೆ-ತಾಯಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಸರಗಳ ಮಾರಾಟ ಮಾಡುತ್ತಿದ್ದಳು. ಆದರೆ ಈಗ ಮಹಾ ಕುಂಭ ಮೇಳ ಮೊನಾಲಿಸಾ ಅಂತಾನೇ ಸಖತ್ ಫೇಮಸ್ ಆಗಿದ್ದಾಳೆ.

ಈಕೆಯ ಬಗ್ಗೆ ಅನೇಕರು ಮಾಹಿತಿ ಕಲೆ ಹಾಕುತ್ತಿದ್ದು, ಮೊನಾಲಿಸಾ ಬಗೆಗಿನ ಕೆಲವು ವಿಚಾರಗಳು ಇಲ್ಲಿದೆ. ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರ ವಾರ್ಡ್‌ನಲ್ಲಿ ಮೊನಾಲಿಸಾ ಅವರ ಕುಟುಂಬವು ಹಲವು ವರ್ಷಗಳಿಂದ ವಾಸವಿದೆ. 17 ವರ್ಷದ ಮೊನಾಲಿಸಾ ಹಾಗೂ ಆಕೆಯ ತಂದೆ, ತಾಯಿ, ತಂಗಿ ಹೂ ಹಾಗೂ ಮಣಿಸರ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ಮೊನಾಲಿಸಾಗೆ ಒಬ್ಬ ಸಹೋದರಿ, ಇಬ್ಬರು ಸಹೋದರರು ಇದ್ದಾರೆ. ಮೊನಾಲಿಸಾ ಕುಟುಂಬ ವಾರಾಣಸಿ ಮತ್ತು ಹರಿದ್ವಾರಕ್ಕೆ ಹೋಗಿ ಕಚ್ಚಾ ವಸ್ತುಗಳನ್ನು ತಂದು ರುದ್ರಾಕ್ಷಿ ಮತ್ತು ಇತರೆ ಮುತ್ತಿನ ಮಣಿಗಳನ್ನು ತಂದು ಹಾರ ಮಾಡಿ ಮಾರಾಟ ಮಾಡುತ್ತಾರೆ. ಒಂದೇ ರೂಮಿನ ಮನೆಯಲ್ಲಿ ಮೊನಾಲಿಸಾ ಅವರ ಇಡೀ ಕುಟುಂಬ ವಾಸಿಸುತ್ತಿದೆಯಂತೆ. ಮೊದಲೇ ಕಷ್ಟದಲ್ಲಿದ್ದ ಮೊನಾಲಿಸಾ ಕುಟುಂಬಕ್ಕೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಮಹಾ ಕುಂಭ ಮೇಳ ಆರಂಭವಾಗ ಮೊದಲೆರಡು ದಿನಗಳು ವ್ಯಾಪಾರ ಮಾಡಿಕೊಂಡಿದ್ದ ಮೊನಾಲಿಸಾ ಅದ್ಯಾವಾಗ ಒಬ್ಬ ವಿಡಿಯೋ ಕಂಟೆಂಟ್ ಕ್ರಿಯೇಟರ್ ಕಣ್ಣಿಗೆ ಬಿದ್ದಳೋ ಗೊತ್ತಿಲ್ಲ. ಅಂದಿನಿಂದ ಇಂದಿನವರೆಗೂ ಸಾಮಾಜಿಕ ಜಾಲತಾಣದಲ್ಲಿ ಆಕೆಯದ್ದೇ ಹವಾವಾಗಿದೆ. ಮುಗ್ಧ ನಗು, ಆಕರ್ಷಕ ಕಣ್ಣುಗಳು, ಕೈಯಲ್ಲಿ- ಕುತ್ತಿಗೆಯಲ್ಲಿ ಒಂದಿಷ್ಟು ಮಣಿಗಳು, ಜೊತೆಗೆ ರುದ್ರಾಕ್ಷಿ ಹಾಗೂ ಮಣಿ ಸರಗಳ ಮಾರಾಟ ಮಾಡುತ್ತಿದ್ದ ಮೊನಾಲಿಸಾ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆದಳು. ನೂರಾರು ಜನ ಆಕೆಯನ್ನು ಹುಡುಕಿ ಬಂದು ಮಾತನಾಡಿಸಿ ವಿಡಿಯೋ ಮಾಡಿಕೊಳ್ಳಲು ಆರಂಭಿಸಿದರು. ಇದೇ ಈಗ ಆಕೆಗೆ ಮುಳ್ಳಾಗಿದ್ದು, ಸದ್ಯ ಆಕೆ ಹೊಟ್ಟೆಪಾಡಿಗಾಗಿ ಬಂದ ಈ ಊರನ್ನೇ ತೊರೆಯುವಂತಾಗಿದೆ.
ಯಾವಾಗ ಮೊನಾಲಿಸಾ ವಿಡಿಯೋಗಳು ವೈರಲ್ ಆದವೋ ಅಂದಿನಿಂದ ಆಕೆಗೆ ವ್ಯಾಪಾರ ಮಾಡಲು ಸಹ ಸಾಧ್ಯವಾಗಲಿಲ್ಲ. ಬಂದವರೆಲ್ಲಾ ಫೋಟೋ ವಿಡಿಯೋ ಅಂತಾ ಆಕೆಯ ಹಿಂದೆ ಬಿದ್ದರು. ಇದರಿಂದ ಬೇಸತ್ತ ಆಕೆಯ ತಂದೆ ನೀನು ಇಲ್ಲಿ ಇರುವುದೇ ಬೇಡ ಎಂದು ಆಕೆಯನ್ನು ಮಹಾ ಕುಂಭ ಮೇಳದಿಂದ ಕರೆದುಕೊಂಡು ಊರಿಗೆ ಹೋಗಿದ್ದಾರೆ.












Click it and Unblock the Notifications