Yaduveer Wadiyar: ರಾಜಾಳ್ವಿಕೆಯಿಂದ ರಾಜಕೀಯದೆಡೆಗೆ... ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹಿನ್ನೆಲೆಯೇನು?
ಲೋಕಸಭಾ ಚುನಾವಣೆಗೆ ಭಾರಿ ಕುತೂಹಲ ಕೆರಳಿಸಿದ್ದ ಮೈಸೂರು -ಕೊಡಗು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಬದಲಿಗೆ ಯದುವೀರ್ ಒಡೆಯರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ರಾಜ ವಂಶದವರಾದ ಯದುವೀರ್ ಒಡೆಯರ್ ಈಗ ಪ್ರಜಾಪ್ರತಿನಿಧಿಯಾಗಲು ಹೊರಟಿದ್ದಾರೆ. ಇದೇ ವೇಳೆ ಅವರ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಸ್ವರೂಪ ಗೋಪಾಲರಾಜೇ ಅರಸ್ ಮತ್ತು ತ್ರಿಪುರ ಸುಂದರಾದೇವಿ ಅವರ ಮಗನಾಗಿ ಯದುವೀರ್ ಜನಿಸಿದ್ದು 24 ಮಾರ್ಚ್ 1992 ರಂದು ಬೆಂಗಳೂರಿನಲ್ಲಿ. ಯದುವೀರ್ ಗೋಪಾಲರಾಜೇ ಅರಸ್ ಅವರನ್ನು ಮಕ್ಕಳಿಲ್ಲದ ಕಾರಣ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪತ್ನಿ ಪ್ರಮೋದಾ ದೇವಿ ಒಡೆಯರ್ ಅವರು ದತ್ತು ಪಡೆದರು, ಮೇ 28, 2015 ರಂದು ದತ್ತು ಸ್ವೀಕಾರದ ಸಮಯದಲ್ಲಿ ಅವರ ಹೆಸರನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ಮರುನಾಮಕರಣ ಮಾಡಲಾಯಿತು. ಅವರು ಕೊನೆಯ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಹಿರಿಯ ಪುತ್ರಿ ರಾಜಕುಮಾರಿ ಗಾಯತ್ರಿ ದೇವಿಯ ಮೊಮ್ಮಗ.
2015 ರ 'ದಸರಾ' ಹಬ್ಬದ ವೇಳೆಗೆ ಅವರಿಗೆ ಪಟ್ಟಾಭಿಷೇಕ ಮಾಡಲಾಗಿದೆ. ಅರಮನೆಯ ಆವರಣದಲ್ಲಿನ 14 ದೇವಾಲಯಗಳ ಅರ್ಚಕರುಗಳು, ಅಪಾರ ಬಂಧು ಬಾಂಧವರು, ಹಿತೈಷಿಗಳು, ಮಿತ್ರರು, ದತ್ತು ಸ್ವೀಕಾರ ಸಮಯದಲ್ಲಿ ಹಾಜರಿದ್ದರು. ರಾಜವಂಶದ 27 ನೇ ರಾಜನಾದರು.

ಯದುವೀರ್ ಒಡೆಯರ್ ಅವರು ಬೆಂಗಳೂರಿನ ವಿದ್ಯಾನಿಕೇತನ್ ಶಿಕ್ಷಣ ಸಂಸ್ಥೆಯಲ್ಲಿ ಎಸ್. ಎಸ್.ಎಲ್.ಸಿ ಮುಗಿಸಿ, ಕೆನೆಡಿಯನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ 12 ನೆಯ ತರಗತಿಯವರೆಗೆ ಓದಿದ್ದಾರೆ ಬಳಿಕ ಅಮೆರಿಕದ 'ಬಾಸ್ಟನ್ ವಿಶ್ವವಿದ್ಯಾಲಯ'ದಲ್ಲಿ ಅರ್ಥಶಾಸ್ತ್ರ ಮತ್ತು ಆಂಗ್ಲಭಾಷಾ ವಿಷಯಗಳಲ್ಲಿ ಪದವಿ ಪಡೆದಿದ್ದಾರೆ.
ಇನ್ನು, ಯದುವೀರ್ ಒಡೆಯರ್ ಗಿಟಾರ್ ಮತ್ತು ಸರಸ್ವತಿ ವೀಣೆಯನ್ನು ನುಡಿಸುತ್ತಾರೆ. ಇತಿಹಾಸದಲ್ಲಿ ಆಸಕ್ತಿ ಹೊಂದಿರುವ ಯದುವೀರ್ ಟೆನಿಸ್ ಕೂಡ ಆಡುತ್ತಾರೆ ಮತ್ತು ಕುದುರೆ ರೇಸಿಂಗ್ ಉತ್ಸಾಹಿ. ರಾಜಸ್ಥಾನದ ಡುಂಗರ್ಪುರ್ ರಾಜಮನೆತನದಿಂದ ಬಂದ ತ್ರಿಷಿಕಾ ಕುಮಾರಿ ಒಡೆಯರ್ ಅವರನ್ನು ವಿವಾಹವಾಗಿದ್ದಾರೆ. ತ್ರಿಷಿಕಾ ಅವರ ತಂದೆ ಹರ್ಷವರ್ಧನ್ ಸಿಂಗ್ ಬಿಜೆಪಿ ರಾಜ್ಯಸಭಾ ಸಂಸದರಾಗಿದ್ದರು.
ಮೈಸೂರು ರಾಜಮನೆತನಕ್ಕೆ ರಾಜಕೀಯ ಹೊಸದೇನಲ್ಲ. ಹಿಂದಿನ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಮೈಸೂರು ಲೋಕಸಭಾ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದರು. ಒಮ್ಮೆ ಸೋಲು ಕಂಡಿದ್ದಾರೆ. ಶ್ರೀಕಂಠದತ್ತ ಒಡೆಯರ್ ಅವರು ಹೆಚ್ಚಾಗಿ ಕಾಂಗ್ರೆಸ್‌ನಲ್ಲಿಯೇ ಇದ್ದರು. ಆದರೆ ಬಿಜೆಪಿಯೊಂದಿಗೂ ಕೆಲ ಕಾಲ ಸಂಬಂಧ ಹೊಂದಿದ್ದರು.
ಮೈಸೂರಿನ ಕೊನೆಯ ಮಹಾರಾಜರಾದ ಶ್ರೀಕಂಠದತ್ತ ಒಡೆಯರ್ ಅವರ ತಂದೆ ಜಯಚಾಮರಾಜೇಂದ್ರ ಒಡೆಯರ್ ಅವರು ಸ್ವಾತಂತ್ರ್ಯದ ನಂತರ ಗವರ್ನರ್ ಹುದ್ದೆಯನ್ನು ಅಲಂಕರಿಸಿದ್ದರು. ಹಳೆಯ ಮೈಸೂರು ಪ್ರದೇಶದಲ್ಲಿ ರಾಜಮನೆತನವು ಇನ್ನೂ ತನ್ನ ಗೌರವ ಮತ್ತು ಪ್ರೀತಿಯನ್ನು ಹಾಗೆ ಉಳಿಸಿಕೊಂಡಿದೆ.
ಸದ್ಯ ಯದುವೀರ್ ಒಡೆಯರ್ ಮೈಸೂರು ಹಾಗೂ ಬೆಂಗಳೂರು ಅರಮನೆಯ ಉಸ್ತುವಾರಿ, ರಾಜವಂಶಸ್ಥ ಆಸ್ತಿಗಳು, ಸಂಸ್ಥೆಗಳನ್ನು ಯದುವೀರ್ ಒಡೆಯರ್ ನೋಡಿಕೊಳ್ಳುತ್ತಿದ್ದಾರೆ. ವಿಶ್ವವಿಖ್ಯಾತ ದಸರಾ ಹಬ್ಬ ಸೇರಿದಂತೆ ಅರಮನೆಯಲ್ಲಿ ನಡೆಯುವ ಹಲವು ಸಂಪ್ರದಾಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈಗ ಪ್ರಜಾಪ್ರತಿನಿಧಿಯಾಗಲು ಹೊರಟಿದ್ದಾರೆ. ಮೈಸೂರನ ಜನ ರಾಜನನ್ನು ರಾಜಕೀಯ ವ್ಯಕ್ತಿಯನ್ನಾಗಿಸಿ ಸಂಸತ್ತಿಗೆ ಕಳುಹಿಸುತ್ತಾರಾ ಎಂದು ಕಾದುನೊಡಬೇಕಿದೆ.












Click it and Unblock the Notifications