ಶಿವಮೊಗ್ಗ ಚುನಾವಣಾ ಕಣ: ಮಾಜಿ ಸಿಎಂಗಳ ಕುಟುಂಬದ ಪ್ರತಿಷ್ಠೆ!

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಮತ್ತೊಂದು ಲೋಕಸಭಾ ಮಹಾಸಮರಕ್ಕೆ ತಯಾರಾಗಿದೆ. ಈಗಾಗಲೇ ಚನಾವಣಾ ವೇಳಾಪಟ್ಟಿ ಘೋಷಣೆಯಾಗಿದ್ದು, ಮೇ 7ರಂದು ಶಿವಮೊಗ್ಗ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ. ಕ್ಷೇತ್ರದ ಚುನಾವಣಾ ಚಿತ್ರಣ ಈ ಬಾರಿ ಕುತೂಹಲಕ್ಕೆ ಕಾರಣವಾಗಿದೆ.

ನಾಡಿಗೆ ಮುಖ್ಯಮಂತ್ರಿಗಳನ್ನು ಕೊಟ್ಟ ಜಿಲ್ಲೆ ಶಿವಮೊಗ್ಗ. ಇಲ್ಲಿನ ಲೋಕಸಭಾ ಫೈಟ್‌ ಬಿ. ಎಸ್. ಯಡಿಯೂರಪ್ಪ ಮತ್ತು ಎಸ್. ಬಂಗಾರಪ್ಪ ಕುಟುಂಬದ ನಡುವಿನ ಪ್ರತಿಷ್ಠೆಯ ಹೋರಾಟವಾಗುತ್ತಿದೆ. ಯಡಿಯೂರಪ್ಪ ಕುಟುಂಬವೇ ಮೇಲುಗೈ ಸಾಧಿಸುತ್ತಿದೆ. ಈ ಬಾರಿಯೂ ಯಡಿಯೂರಪ್ಪ ಪುತ್ರ, ಹಾಲಿ ಸಂಸದ ಬಿ. ವೈ. ರಾಘವೇಂದ್ರಗೆ ಎದುರಾಳಿ ಕಾಂಗ್ರೆಸ್‌ನಿಂದ ಬಂಗಾರಪ್ಪ ಪುತ್ರಿ, ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್.

Lok Sabha Election 2024 Shivamogga Lok Sabha Seat Round Up

ಶಿವಮೊಗ್ಗದಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚು. ಇದು ಕಾಂಗ್ರೆಸ್, ಗೀತಾ ಶಿವರಾಜ್ ಕುಮಾರ್ ಪಾಲಿಗೆ ವರವಾಗಲಿದೆಯೇ? ಎಂದು ಕಾದು ನೋಡಬೇಕಿದೆ. ಚುನಾವಣಾ ಆಯೋಗದ ಸದ್ಯದ ಮಾಹಿತಿಯಂತೆ ಶಿವಮೊಗ್ಗದ ಒಟ್ಟು ಮತದಾರರು 17,29,901. ಇವರಲ್ಲಿ ಪುರುಷರು 8,52,107, ಮಹಿಳಯೆರು 8,77,761 ಮತ್ತು ಇತರರು 33.

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ ಬಳಿಕ, ಶಿಕಾರಿಪುರದ ಶಾಸಕ ಬಿ. ವೈ. ವಿಜಯೇಂದ್ರ ಕರ್ನಾಟಕ ಬಿಜೆಪಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಲೋಕಸಭೆ ಚುನಾವಣೆ ಇದು. ಶಿವಮೊಗ್ಗದಲ್ಲಿ ಕಣದಲ್ಲಿರುವುದು ಯಡಿಯೂರಪ್ಪ ಪುತ್ರ, ಬಿ. ವೈ. ವಿಜಯೇಂದ್ರ ಸಹೋದರ ಬಿ. ವೈ. ರಾಘವೇಂದ್ರ. ಆದ್ದರಿಂದ ಹೆಚ್ಚು ಮತಗಳ ಅಂತರದಲ್ಲಿ ಗೆದ್ದರೆ ಮಾತ್ರ ಚುನಾವಣೆಯ ಫಲಿತಾಂಶಕ್ಕೂ ಗತ್ತು ಬರುತ್ತದೆ.

2008ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಬದಲಾಯಿತು. ಚನ್ನಗಿರಿ ಮತ್ತು ಹೊನ್ನಾಳಿ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸೇರಿತು. ಶಿವಮೊಗ್ಗದ ವ್ಯಾಪ್ತಿಗೆ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ಸೇರ್ಪಡೆಗೊಂಡಿತು. ಶಿವಮೊಗ್ಗ ಕ್ಷೇತ್ರದಲ್ಲಿ ಶಿವಮೊಗ್ಗ ನಗರ (ಬಿಜೆಪಿ), ಶಿವಮೊಗ್ಗ ಗ್ರಾಮಾಂತರ (ಜೆಡಿಎಸ್), ಭದ್ರಾವತಿ (ಕಾಂಗ್ರೆಸ್), ಸೊರಬ (ಕಾಂಗ್ರೆಸ್), ಸಾಗರ (ಕಾಂಗ್ರೆಸ್), ತೀರ್ಥಹಳ್ಳಿ (ಬಿಜೆಪಿ), ಶಿಕಾರಿಪುರ (ಬಿಜೆಪಿ), ಬೈಂದೂರು (ಬಿಜೆಪಿ) ಶಾಸಕರು ಇದ್ದಾರೆ.

ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ ಮುಂತಾದವು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಆರ್ಥಿಕ ಶಕ್ತಿ. ರಸ್ತೆ, ರೈಲು, ವಿಮಾನ ಹೀಗೆ ರಾಜಧಾನಿ ಬೆಂಗಳೂರು ಮತ್ತು ಶಿವಮೊಗ್ಗಕ್ಕೆ ಸಂಚಾರ ವ್ಯವಸ್ಥೆ ಉತ್ತಮವಾಗಿದೆ. ಬೆಂಗಳೂರು-ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು ಬೇಕು ಎಂಬ ಬೇಡಿಕೆ ಇದೆ. 2023ರ ಫೆಬ್ರವರಿಯಲ್ಲಿ ಶಿವಮೊಗ್ಗದ ವಿಮಾನ ನಿಲ್ದಾಣ ಲೋಕಾರ್ಪಣೆಯಾಗಿದೆ. ಶಿವಮೊಗ್ಗ-ತುಮಕೂರು ನಡುವಿನ 6 ಪಥದ ರಸ್ತೆ ಕಾಮಗಾರಿ ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಈ ಬಾರಿ ಬಿ. ವೈ. ರಾಘವೇಂದ್ರ, ಕಾಂಗ್ರೆಸ್‌ನ ಗೀತಾ ಶಿವರಾಜ್ ಕುಮಾರ್ ನಡುವಿನ ಹೋರಾಟದ ನಡುವೆ ಕೆ. ಎಸ್. ಈಶ್ವರಪ್ಪ ಬಂದಿದ್ದಾರೆ. ಹಾವೇರಿಯಲ್ಲಿ ಪುತ್ರ ಕಾಂತೇಶ್‌ಗೆ ಟಿಕೆಟ್ ಸಿಕ್ಕದ ಕಾರಣ ಮುನಿಸಿಕೊಂಡಿರುವ ಅವರು ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದಾರೆ. ಇದು ಬಿಜೆಪಿ ನಾಯಕರ ತಲೆ ನೋವಿಗೆ ಕಾರಣವಾಗಿದೆ. ಬಿಜೆಪಿ ಪರ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯೇ ಮಾರ್ಚ್ 18ರಂದು ಶಿವಮೊಗ್ಗಕ್ಕೆ ಬಂದಿದ್ದಾರೆ.

ಕ್ಷೇತ್ರದ ಚುನಾವಣಾ ಇತಿಹಾಸ: ಶಿವಮೊಗ್ಗ ಲೋಕಸಭಾ ಕ್ಷೇತ್ರ ಈಗ ಬಿಜೆಪಿ ಭದ್ರಕೋಟೆ. ಆದರೆ ಮೂರು ದಶಕಗಳ ಕಾಲ ಇಲ್ಲಿ ಕಾಂಗ್ರೆಸ್ ಬಾವುಟ ಹಾರಿತ್ತು. 1971, 1977, 1980, 1984, 1989 ಮತ್ತು 1991ರಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಗೆದ್ದರು. 1996ರಲ್ಲಿ ಕಾಂಗ್ರೆಸ್ ಜೊತೆ ಮುನಿಸಿಕೊಂಡ ಎಸ್. ಬಂಗಾರಪ್ಪ ಕೆಸಿಪಿ ಕಟ್ಟಿ ತಾವೇ ಕಣಕ್ಕಿಳಿದು ಗೆದ್ದು, ಕಾಂಗ್ರೆಸ್‌ನಿಂದ ಕ್ಷೇತ್ರ ಕಸಿದುಕೊಂಡರು.

ಬಿಜೆಪಿ ಶಿವಮೊಗ್ಗದಲ್ಲಿ ಮೊದಲ ಸಲ ಗೆದ್ದಿದ್ದು 1998ರಲ್ಲಿ ಆಯನೂರು ಮಂಜುನಾಥ್ ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದ ಎಸ್. ಬಂಗಾರಪ್ಪ ಸೋಲಿಸಿದರು. 1999ರಲ್ಲಿ ಮತ್ತೆ ಕಾಂಗ್ರೆಸ್‌ಗೆ ಎಸ್. ಬಂಗಾರಪ್ಪ ಮರಳಿದರು. ಆದರೆ 2004ರಲ್ಲಿ ಬಿಜೆಪಿ ಸೇರಿ ಪಕ್ಷದ ಅಭ್ಯರ್ಥಿಯಾಗಿ ಗೆದ್ದರು. 2004ರ ಚುನಾವಣೆಯ ಶಿವಮೊಗ್ಗದಲ್ಲಿ ಬಿಜೆಪಿಗೆ ಭಾರೀ ಶಕ್ತಿ ತುಂಬಿತು. ಅಹಿಂದ ಮತಗಳು ಬಂಗಾರಪ್ಪ ಪರವಾಗಿ ಬಂದವು. ಆದರೆ ಬಂಗಾರಪ್ಪ ಬಿಜೆಪಿ ತೊರೆದರು. ಅವರ ಜೊತೆ ಬಂದವರು ಬಿಜೆಪಿಯಲ್ಲಿಯೇ ಉಳಿದರು. ಮತಗಳು ಬಿಜೆಪಿಗೆ ಹಿಡಿತದಲ್ಲೇ ಈಗಲೂ ಉಳಿದಿವೆ. 2004 ರಿಂದ 2024ರ ಚುನಾವಣೆ ತನಕ ನೋಡಿದರೆ ಶಿವಮೊಗ್ಗದಲ್ಲಿ ಬಿಜೆಪಿ ಹಿಡಿತ ಬಲುಗಟ್ಟಿಯಾಗಿದೆ.

ಯಡಿಯೂರಪ್ಪ, ಬಂಗಾರಪ್ಪ ಕುಟುಂಬ: 2009ರ ಲೋಕಸಭೆ ಚುನಾವಣೆ ಯಡಿಯೂರಪ್ಪ ಮತ್ತು ಬಂಗಾರಪ್ಪ ಕುಟುಂಬದ ನಡುವಿನ ಹೋರಾಟಕ್ಕೆ ನಾಂದಿ ಹಾಡಿತು. ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದರು. ಕಾಂಗ್ರೆಸ್‌ನಿಂದ ಎದುರಾಳಿಯಾಗಿದ್ದು ಸ್ವತಃ ಎಸ್. ಬಂಗಾರಪ್ಪ. ಈ ಚುನಾವಣೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಿತು. ರಾಘವೇಂದ್ರ ಮೊದಲ ಚುನಾವಣೆಯಲ್ಲಿಯೇ 482,783 ಮತಗಳನ್ನು ಪಡೆದು ಎಸ್. ಬಂಗಾರಪ್ಪ (429,890 ಮತಗಳು) ಸೋಲಿಸಿದರು. ಈ ಮೂಲಕ ಬಂಗಾರಪ್ಪ ಕುಟುಂಬಕ್ಕೆ ಮೊದಲ ಹಿನ್ನಡೆ ಆಯಿತು.

2014ರ ಚುನಾವಣೆಯಲ್ಲಿ ಪುತ್ರ ರಾಘವೇಂದ್ರ ಬದಲು ಬಿಜೆಪಿ ಯಡಿಯೂರಪ್ಪಗೆ ಟಿಕೆಟ್ ನೀಡಿತು. ಮತ್ತೆ ಬಂಗಾರಪ್ಪ ಕುಟುಂಬ ಎದುರಾಳಿ. ಆದರೆ ಜೆಡಿಎಸ್ ಪಕ್ಷದಿಂದ ಗೀತಾ ಶಿವರಾಜ್ ಕುಮಾರ್ ತಂದೆಯ ಹಿಂದಿನ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ಜೆಡಿಎಸ್‌ನಿಂದ ಕಣಕ್ಕಿಳಿದರು. ಆದರೆ ಚುನಾವಣೆಯಲ್ಲಿ ಯಡಿಯೂರಪ್ಪ 606,216 ಮತಗಳನ್ನು ಪಡೆದು ಜಯಗಳಿಸಿದರು. ಕಾಂಗ್ರೆಸ್‌ನ ಮಂಜುನಾಥ ಭಂಡಾರಿ 242,911 ಮತಗಳಿಂದ 2ನೇ ಸ್ಥಾನ, ಗೀತಾ ಶಿವರಾಜ್ ಕುಮಾರ್ 240,636 ಮತಗಳನ್ನು ಪಡೆದು 3ನೇ ಸ್ಥಾನ ಪಡೆದರು.

ಸಂಸದರಾಗಿದ್ದ ಯಡಿಯೂರಪ್ಪ 2018ರ ವಿಧಾನಸಭೆ ಚುನಾವಣೆಗೆ ಶಿಕಾರಿಪುರದಿಂದ ಕಣಕ್ಕಿಳಿದರು. ಆಗ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತ್ತೆ ರಾಘವೇಂದ್ರ ಕಣಕ್ಕಿಳಿದರು. ಆಗ ಜೆಡಿಎಸ್‌ನಿಂದ ಎದುರಾಳಿಯಾಗಿದ್ದು, ಎಸ್. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ. ಉಪ ಚುನಾವಣೆಯಲ್ಲಿ ಬಿ. ವೈ. ರಾಘವೇಂದ್ರ 50 ಸಾವಿರ ಮತಗಳ ಅಂತರದಲ್ಲಿ ಗೆದ್ದು ಬಂಗಾರಪ್ಪ ಕುಟುಂಬಕ್ಕೆ ಮತ್ತೊಂದು ಹಿನ್ನಡೆ ಉಂಟು ಮಾಡಿದರು.

2019ರ ಲೋಕಸಭೆ ಚುನಾವಣೆಯಲ್ಲಿ ಬಿ. ವೈ. ರಾಘವೇಂದ್ರ ಮತ್ತೆ ಬಿಜೆಪಿ ಅಭ್ಯರ್ಥಿಯಾದರು. ಎದುರಾಳಿಯಾಗಿ ಮತ್ತೆ ಮಧು ಬಂಗಾರಪ್ಪ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾದರು. ಚುನಾವಣೆಯಲ್ಲಿ ರಾಘವೇಂದ್ರ 729,872 ಮತಗಳನ್ನು ಪಡೆದು ಗೆಲುವು ಸಾಧಿಸಿ ಮೂರನೇ ಬಾರಿ ಸಂಸತ್ ಪ್ರವೇಶ ಮಾಡಿದರು. ಮಧು ಬಂಗಾರಪ್ಪ 506,512 ಮತಗಳನ್ನು ಪಡೆದು ಸೋಲುವ ಮೂಲಕ ಮತ್ತೆ ಯಡಿಯೂರಪ್ಪ ಕುಟುಂಬ ಮೇಲುಗೈ ಪಡೆಯಿತು.

ಈಗ ರಾಜಕೀಯ ಚಿತ್ರಣವೇ ಬದಲಾಗಿದೆ. ಮಧು ಬಂಗಾರಪ್ಪ ಕಾಂಗ್ರೆಸ್ ಸೇರಿ ಸೊರಬದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು. ಗೀತಾ ಶಿವರಾಜ್ ಕುಮಾರ್ ಸಹ ಸಹೋದರನ ಜೊತೆ ಕಾಂಗ್ರೆಸ್‌ಗೆ ಬಂದಿದ್ದು, ಶಿವಮೊಗ್ಗದಿಂದ ಈ ಬಾರಿ ಅಭ್ಯರ್ಥಿಯಾಗಿ ಮತ್ತೆ ಯಡಿಯೂರಪ್ಪ, ಬಂಗಾರಪ್ಪ ಕುಟುಂಬದ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+