ಯೋಗ್ಯ ಗುರು ಸಿಗದೇ ಹೋದರೆ ಸಂಕಷ್ಟ ತಪ್ಪಿದಲ್ಲ: ಯಾಕೆ ಗೊತ್ತಾ?
ನಾವು ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜತೆಗೆ ಅವರು ಕೇಳಿದ್ದನೆಲ್ಲ ಕೊಟ್ಟು ಬೆಳೆಸುತ್ತಿದ್ದೇವೆ. ಆದರೆ ಒಂದೊಳ್ಳೆಯ ಸಂಸ್ಕಾರ ಕಲಿಸುವಲ್ಲಿ ಎಡವುತ್ತಿದ್ದೇವೆ. ಹಾಗೆಯೇ ಮಕ್ಕಳು ವಿದ್ಯಾಭ್ಯಾಸವನ್ನೇನೋ ಮಾಡುತ್ತಿದ್ದಾರೆ ಆದರೆ ಯೋಗ್ಯ ಗುರುಗಳನ್ನು ಪಡೆಯುವುದರಲ್ಲಿ ವಂಚಿತರಾಗುತ್ತಿದ್ದಾರೆ. ಗುರುಗಳು ಎಂದ ತಕ್ಷಣ ಪಾಠ ಮಾಡುವ ಶಿಕ್ಷಕರು ಮಾತ್ರವಲ್ಲ ನಮಗೆ ಬದುಕಿನ ದಾರಿ ತೋರಿಸಿ, ಒಂದೊಳ್ಳೆಯ ಮಾರ್ಗದರ್ಶನ ಪ್ರತಿಯೊಬ್ಬರೂ ಗುರುಗಳೇ. ಆದರೆ ಅಂತಹ ಗುರುಗಳನ್ನು ಪಡೆಯುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಹೀಗಾಗಿ ನಮ್ಮ ಕಾರ್ಯಕ್ಷೇತ್ರದಲ್ಲಿ ಉನ್ನತಿ ಪಡೆಯಲು ಕಷ್ಟವಾಗುತ್ತದೆ.
ನಿಜ ಹೇಳಬೇಕೆಂದರೆ ನಮ್ಮೆಲ್ಲ ಕಾರ್ಯ ಸಾಧನೆಗಾಗಿ ನಮಗೊಬ್ಬ ಗುರು ಬೇಕೇ ಬೇಕು. ನಾವು ತಿಳಿದುಕೊಳ್ಳಲಿರುವ ವಿಷಯ, ಮಾಡುವ ಕೆಲಸ ಹೀಗೆ ಯಾವುದೇ ಆಗಿರಲಿ ಅದರ ಬಗ್ಗೆ ಪರಿಪೂರ್ಣವಾಗಿ ಅರಿತುಕೊಳ್ಳಬೇಕಾದರೆ ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇದ್ದೇ ಇದೆ. ಆಗ ನಾವು ಎಂತಹವರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎನ್ನುವುದು ಬಹುಮುಖ್ಯವಾಗುತ್ತದೆ. ಹಿಂದಿನ ಕಾಲದಲ್ಲಿ ಗುರುಕುಲಗಳಿದ್ದವು. ಅಲ್ಲಿ ಗುರುಗಳೇ ಸಕಲ ವಿದ್ಯೆಗಳನ್ನು ತನ್ನ ಶಿಷ್ಯಂದಿರಿಗೆ ಧಾರೆ ಎರೆಯುತ್ತಾ ಶಿಷ್ಯರನ್ನು ಸಕಲ ರೀತಿಯಲ್ಲಿ ವಿದ್ಯಾಪಾರಂಗತರನ್ನಾಗಿ ಮಾಡುತ್ತಿದ್ದರು. ಶಿಷ್ಯರು ಗುರುಗಳ ಸೇವೆ ಮಾಡುತ್ತಾ ವಿದ್ಯೆಗಳನ್ನು ಕಲಿಯುತ್ತಿದ್ದರು.

ಆಧ್ಯಾತ್ಮಿಕ ವಿಚಾರದಲ್ಲಿ ನಮಗೆ ಯೋಗ್ಯ ಗುರು ಏಕೆ ಬೇಕು? ಗುರುವಿನಿಂದ ನಮಗ್ಯಾವ ರೀತಿಯ ಉಪಯೋಗವಿದೆ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಇದಕ್ಕೆ ಉತ್ತರವಾಗಿ ಸ್ವಾಮಿ ವಿವೇಕಾನಂದರು ಹೀಗೆ ವಿವರಿಸಿದ್ದಾರೆ. ಅವರ ಪ್ರಕಾರ ಪ್ರತಿಯೊಂದು ಜೀವಿಯೂ ಅಂತಿಮವಾಗಿ ಪರಿಪೂರ್ಣತೆ ಪಡೆಯಲೇ ಬೇಕು. ನಾವು ಈಗ ಏನಾಗಿದ್ದೇವೆಯೋ ಅದಕ್ಕೆ ನಮ್ಮ ಹಿಂದಿನ ಕರ್ಮಗಳು ಹಾಗೂ ಆಲೋಚನೆಗಳೇ ಕಾರಣ. ನಾಳೆ ಏನಾಗುವೆವೋ ಅದಕ್ಕೆ ಈಗ ನಾವು ಏನು ಮಾಡುವೆವೋ, ಆಲೋಚಿಸುವೆವೋ ಅದೇ ಕಾರಣವಾಗಿ ಬಿಡುತ್ತದೆ.
ಎಲ್ಲ ಸಂಬಂಧಗಳಿಗೆ ಮಿಗಿಲಾದ ಸಂಬಂಧ
ಹಾಗೆನೋಡಿದರೆ ಬಹುಪಾಲು ಜನರಿಗೆ ಅನ್ಯರ ಸಹಾಯ ಅತ್ಯವಶ್ಯಕ. ಆ ಸಹಾಯ ಒದಗಿದಾಗ ಜೀವನದ ಉತ್ತಮ ಶಕ್ತಿಗಳು, ಸಾಧ್ಯತೆಗಳು ಬಹುಬೇಗ ವೃದ್ಧಿಯಾಗುತ್ತವೆ. ಅಷ್ಟೇ ಅಲ್ಲ. ಆಧ್ಯಾತ್ಮಿಕ ಜೀವನ ಜಾಗೃತವಾಗುವುದು. ಬೆಳವಣಿಗೆ ಚುರುಕಾಗುತ್ತದೆ. ಪರಿಪೂರ್ಣ ಜೀವನ ಪ್ರಾಪ್ತಿಯಾಗುತ್ತದೆ. ಬಹುಶಃ ಇಂತಹ ಉತ್ತೇಜಕ ಶಕ್ತಿಯು ಗ್ರಂಥಗಳನ್ನು ಓದುವುದರಿಂದ ಕೆಲವೊಮ್ಮೆ ದೊರಕಲಾರದು. ಅದು ಒಂದು ಜೀವಿಯಿಂದ ಮತ್ತೊಂದು ಜೀವಿಗೆ ದೊರಕಬೇಕಷ್ಟೇ. ಯಾರಿಂದ ಇಂತಹ ಅದ್ಭುತ ಉತ್ತೇಜನ ಬರುವುದೋ ಅವನೇ ಗುರು. ಯಾರಿಗೆ ಇದು ನೀಡಲ್ಪಟುವದೋ ಅವನೇ ಶಿಷ್ಯ.
ಇಂತಹದೊಂದು ಸಂಬಂದ ಎಲ್ಲಾ ಸಂಬಂಧಗಳಿಗೂ ಮಿಗಿಲಾದದ್ದು ಶಿಷ್ಯನಿಗೆ ಅದ್ಭುತ ಉತ್ತೇಜನ ಶಕ್ತಿಯನ್ನು ಧಾರೆಯೆರೆಯುವ ಗುರುವಿಗೆ ಆ ಶಕ್ತಿಯಿರಬೇಕು. ಹಾಗೆಯೇ ಅದನ್ನು ಸ್ವೀಕರಿಸುವ ಶಿಷ್ಯ ಯೋಗ್ಯನಾಗಿರಬೇಕು. ಈ ಒಂದು ಸಂಬಂಧ ಸರಿಯಾಗಿದ್ದರೆ ಮಾತ್ರ ಅದ್ಭುತ ಆಧ್ಯಾತ್ಮಿಕತೆ ವಿಕಾಸವಾದುವದು. 'ಆಶ್ವರ್ಯೋ ವಕ್ತಾ ಕುಶಲೋ ಅಸ್ಯಲಬ್ದಾ' ಎನ್ನುವಂತೆ ಗುರುವು ಅದ್ಭುತ ವ್ಯಕ್ತಿಯಾಗಿರಬೇಕು. ಶಿಷ್ಯನು ಜಾಣನಾಗಿರಬೇಕು. ಇಬ್ಬರೂ ಅದ್ಭುತ ವ್ಯಕ್ತಿಗಳಾದಾಗ ಮಾತ್ರ ಅಸಾಧಾರಣ ಆಧ್ಯಾತ್ಮಿಕ ಜಾಗೃತಿ ಉಂಟಾಗುತ್ತದೆ.

ಯೋಗ್ಯ ಸಿಗದಿದ್ದರೆ ಸಂಕಷ್ಟ ತಪ್ಪಿದಲ್ಲ
ಇಲ್ಲದಿದ್ದರೆ ಶಿಷ್ಯ ತನ್ನಲ್ಲಿ ಏಳುವ ತಾತ್ಕಾಲಿಕ ಉದ್ವೇಗವನ್ನು ನಿಜವಾದ ಆಧ್ಯಾತ್ಮಿಕ ಹಂಬಲ ಎಂದು ತಪ್ಪು ತಿಳಿಯಬಹುದು. ಅಷ್ಟೇ ಅಲ್ಲ ಅದನ್ನು ನಮ್ಮ ಜೀವನದಲ್ಲಿ ಪರೀಕ್ಷಿಸಿಕೊಳ್ಳಬಹುದು. ಬಹಳಷ್ಟು ಸಲ ನಮ್ಮ ಜೀವನದಲ್ಲಿ ಹಲವು ರೀತಿಯಲ್ಲಿ ಆಘಾತ ಉಂಟಾಗಬಹುದು. ಪ್ರಪಂಚ ನಮ್ಮ ಕೈಗಳಿಂದ ನುಸುಳಿ ಹೋದಂತೆ ಭಾಸವಾಗಬಹುದು. ಇನ್ನೇನೋ ಕೆಲವು ರೀತಿಯ ಕ್ಷಣಿಕ ಉದ್ವೇಗ ಏಳಬಹುದು. ಈ ರೀತಿ ಆದಾಗ ನಿಷ್ಕಲ್ಮಷವಾದ ಆಧ್ಯಾತ್ಮಿಕ ದಾಹ ಪ್ರಾಪ್ತವಾಗುವುದಿಲ್ಲ. ಈ ಸಂದರ್ಭ ಗುರುವಿನ ಸಹಾಯ ಬೇಕಾಗುತ್ತದೆ.
ಕೆಲವೊಮ್ಮೆ ಯೋಗ್ಯ ಗುರುವು ದೊರೆಯದೇ ಹೋದಾಗ ಹಲವು ರೀತಿಯ ಅಪಾಯಗಳು ಎದುರಾಗುತ್ತವೆ. ಅಜ್ಞಾನದಲ್ಲಿ ಮುಳುಗಿ ಹೋದ ಗುರುಗಳು ಅಹಂಕಾರದಿಂದ ಉನ್ನತರಾಗಿ ತಾವೇ ಸರ್ವಜ್ಞರೆಂಬಂತೆ ವರ್ತಿಸುತ್ತಾರೆ. ಜೊತೆಗೆ ಇತರರ ಜವಾಬ್ದಾರಿಯನ್ನೂ ಕೂಡ ತಾವೇ ಸ್ವೀಕರಿಸುತ್ತಾರೆ. ಆಗ ಕರುಡ ಕುಡುಡನಿಗೆ ಮಾರ್ಗದರ್ಶಕನಾಗಿ ಇಬ್ಬರೂ ಹಳ್ಳಕ್ಕೆ ಬಿದ್ದಂತಾಗುತ್ತದೆ. ತಾವೇ ಅರಿತವರೆಂಬಂತೆ ಅಹಂಪಡುತ್ತಾ ಗುರುವಾಗಲು ಇಚ್ಚೆಪಡುತ್ತಾ ಮುನ್ನಡೆದರೆ ಅವರಿಂದ ಶಿಷ್ಯರಿಗೂ ಒಳ್ಳೆಯ ವಿದ್ಯೆ ದೊರೆಯಲಾರದು. ಶಿಷ್ಯರೂ ಕೂಡ ಗುರುವಿನ ಮಾರ್ಗ ಹಿಡಿಯಬಹುದು. ಹಾಗಾಗದಂತೆ ನೋಡಿಕೊಳ್ಳಬೇಕಾದರೆ ನಮಗೊಬ್ಬ ಯೋಗ್ಯ ಗುರು ಬೇಕಾಗುತ್ತದೆ.












Click it and Unblock the Notifications