ಶಾಂತಿಯಿಂದ ಬದುಕುವುದನ್ನು ಕಲಿಯೋಣ: ಯಾಕೆ ಗೊತ್ತಾ?
ಇಂದಿನ ವೈಜ್ಞಾನಿಕ ಯುಗದಲ್ಲಿ ಪ್ರತಿಯೊಬ್ಬರೂ ದಿನಪೂರ್ತಿ ದುಡಿಯುತ್ತಿದ್ದು, ಪೈಪೋಟಿ ಸ್ಪರ್ಧೆಗಳ ನಡುವೆ ತಮ್ಮ ಬದುಕನ್ನು, ವ್ಯವಹಾರವನ್ನು ಭದ್ರಪಡಿಸಿಕೊಳ್ಳಲು ಹೋರಾಟ ನಡೆಸುತ್ತಲೇ ಇರುತ್ತಾರೆ. ಹೀಗಾಗಿ ಬರೀ ಹಣ, ದುಡಿಮೆಯ ಬಗ್ಗೆಯೇ ಆಲೋಚಿಸುವ ನಾವು ಎಲ್ಲೋ ಒಂದು ಕಡೆ ನಮ್ಮನ್ನು ನಾವೇ ಕಳೆದುಕೊಳ್ಳುತ್ತಿದ್ದೇವೆ ಎಂಬುವುದೇ ಅರಿವಿಗೆ ಬಾರದೆ ಹೋಗುತ್ತದೆ. ಜೊತೆಗೆ ಸದಾ ಹಣ ಸಂಪಾದನೆಯತ್ತಲೇ ಗಮನಹರಿಸುವ ನಾವು ಮತ್ತೊಂದು ಕಡೆಯಲ್ಲಿ ಶಾಂತಿಯನ್ನು ಕಳೆದುಕೊಳ್ಳುತ್ತೇವೆ.
ಒಂದು ಕ್ಷಣ ಯೋಚಿಸಿ ನೋಡಿದರೆ ಈ ಬದುಕಿನಲ್ಲಿ ಏನಿದೆ? ಇಂದು ಹುಟ್ಟಿ ನಾಳೆ ಸಾಯುವ ನಾವು ಕೊಂಡೊಯ್ಯುವುದು ಏನನ್ನೂ ಇಲ್ಲ. ಹೀಗಿದ್ದರೂ ಹೋರಾಡುತ್ತೇವೆ, ಕೂಡಿಡುತ್ತೇವೆ. ಮತ್ತೊಬ್ಬರನ್ನು ಮಣಿಸಿ ನಮ್ಮ ಸಾಮ್ರಾಜ್ಯವನ್ನು ಗಟ್ಟಿ ಮಾಡಿಕೊಳ್ಳುತ್ತೇವೆ. ನಾನು, ನನ್ನದು ಎಂಬ ವ್ಯಾಮೋಹವುಳ್ಳ ಶಾಂತಿ ಕಳೆದುಕೊಂಡು ಕೆಲವೊಮ್ಮೆ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತೇವೆ. ಯಾರ ಮೇಲೆಯೋ ಎಗರಾಡುತ್ತೇವೆ. ಕೂಗಾಡುತ್ತೇವೆ. ಚಿಕ್ಕ ವಿಚಾರಕ್ಕೂ ಕೋಪ ಮಾಡಿಕೊಳ್ಳುತ್ತೇವೆ. ಇದೆಲ್ಲವನ್ನು ತಡೆಯುವುದು ಹೇಗೆ ಮತ್ತು ಶಾಂತಿಯನ್ನು ಹುಡುಕಿಕೊಳ್ಳುವುದು ಹೇಗೆ?.

ನಮಗೆ ಶಾಂತಿ ಬೇಕಾದರೆ ನಾವೇನು ಮಾಡಬೇಕು ಎಂಬುವುದನ್ನು ಆಧ್ಯಾತ್ಮಿಕ ಚಿಂತಕರು ವಿವಿಧ ರೀತಿಯಲ್ಲಿ ಹೇಳಿದ್ದಾರೆ. ದೇವರ ಬಗ್ಗೆ ಭಕ್ತಿಯುಳ್ಳವನು, ಸದಾ ದೇವರ ಸ್ಮರಣೆಯಲ್ಲಿಯೇ ಇರುವ ಯೋಗಿಗಳು ಶಾಂತಚಿತ್ತರಾಗಿರುತ್ತಾರೆ. ಶಾಂತಿಯನ್ನು ನಾವು ಹೇಗೆ ಪಡೆಯಬಹುದು ಎಂಬುವುದನ್ನು ಸ್ವಾಮಿ ಪ್ರಭುಪಾದರು ತಮ್ಮ ಬರವಣಿಗೆಯಲ್ಲಿ ಹೀಗೆಯೇ ವಿವರಿಸಿದ್ದಾರೆ. ಪ್ರಪಂಚದಲ್ಲಿ ಪ್ರತಿಯೊಬ್ಬನಿಗೂ ಶಾಂತಿ ಬೇಕು. ಶಾಂತಿವಾದಿಗಳಿಗೆ ಶಾಂತಿಯನ್ನು ಹೇಗೆ ಪಡೆಯಬೇಕೆಂಬುವುದೇ ಗೊತ್ತಿಲ್ಲ. ಆದರೆ ಶಾಂತಿ ಬೇಕು.
ನಾನು ಕ್ಯಾಂಟರ್ ಬರಿಯ ಚರ್ಚ್ ಬಿಷಪ್ ರ ಭಾಷಣ ಓದಿದೆ. ಅದು ಹೀಗಿತ್ತು. ನಮಗೆ ದೇವರಿಲ್ಲದ ದೇವ ಸಾಮ್ರಾಜ್ಯ ಬೇಕು. ಇದು ನಮ್ಮ ದೋಷ, ನಮಗೆ ಶಾಂತಿ ಬೇಕೇ ಬೇಕಾದರೆ ಆಗ ಭಗವಂತನನ್ನು ಅರಿಯುವುದೇ ಶಾಂತಿ ಪಡೆಯುವ ವಿಧಾನ ಎಂದು ಅರ್ಥಮಾಡಿಕೊಳ್ಳಿ. ಇದನ್ನು ಭಗವದ್ಗೀತೆಯಲ್ಲಿಯೂ ಹೇಳಿದೆ. ಪರಮ ಪ್ರಭುವಾದ ಕೃಷ್ಣನ ಸಂಪರ್ಕವಿಲ್ಲದೆ ನಿಮಗೆ ಶಾಂತಿ ದೊರಕದು. ಆದ್ದರಿಂದ ನಮ್ಮ ಹತ್ತಿರ ಬೇರೆಯೇ ಆದ ಶಾಂತಿ ಸೂತ್ರವಿದೆ.

ನಿಜವಾದ ಶಾಂತಿ ಸೂತ್ರವೆಂದರೆ, ಭಗವಂತನು ಇಡೀ ಜಗತ್ತಿನ ಒಡೆಯ ಎಂಬುವುದನ್ನು ಅರಿಯಬೇಕು. ಆದರೆ, ಇಂದು ನಾವು ನಮಗೆ ನಾವೇ ಒಡೆಯರು ಎಂಬಂತೆ ತಿಳಿದುಕೊಂಡಿದ್ದೇವೆ. ಹಾಗಾಗಿ ಕಾದಾಟ, ವೈಷಮ್ಯಗಳು ಹುಟ್ಟಿಕೊಳ್ಳುತ್ತಿದ್ದು ಶಾಂತಿಯನ್ನು ಹರಣ ಮಾಡುತ್ತಿವೆ. ನಾವು ಮೊದಲಿಗೆ ದೇವರೇ ಎಲ್ಲದರ ಒಡೆಯನೆಂದು ಒಪ್ಪಿಕೊಳ್ಳಬೇಕು. ನಾವು ಈ ಜಗತ್ತಿಗೆ ಬರಿ ಅತಿಥಿಗಳಷ್ಟೆ. ನಾವು ಬರುತ್ತೇವೆ, ಹೋಗುತ್ತೇವೆ ಅಷ್ಟೆ. ಆದರೆ ನಾವು ಇದು ನನ್ನ ಜಮೀನು, ಇದು ನನ್ನ ಕುಟುಂಬ, ಇದು ನನ್ನ ಶರೀರ. ಇದು ನನ್ನ ಆಸ್ತಿ ಎಂದುಕೊಳ್ಳುತ್ತೇವೆ.
ದೇವರ ಆಜ್ಞೆ ಬಂದಾಗ ಎಲ್ಲವನ್ನೂ ಬಿಟ್ಟು ಹೋಗಲೇ ಬೇಕಾಗುತ್ತದೆ. ಹಾಗಾದರೆ ಈ ಜಗತ್ತಿನಲ್ಲಿ ಸಂಪಾದಿಸಿಟ್ಟಿದ್ದು, ಕೂಡಿಟ್ಟಿದ್ದು ಯಾವುದೂ ನನ್ನದಲ್ಲ. ಕೊನೆಗೆ ನಾನು ಎಂದು ಹೇಳಿಕೊಳ್ಳುವ ದೇಹವೂ ನನ್ನದಲ್ಲ ಅದರ ಒಡೆಯರು ಕೂಡ ನಾವಲ್ಲ. ಆದರೂ ನಾನೇ ಈ ದೇಹವೆಂದು ಹೇಳುತ್ತೇನೆ. ನಿಜವಾಗಿ ಇದು ಮೂರ್ಖತನವಾದ್ದರಿಂದ ಶಾಂತಿ ಹೊಂದಲು ಹೇಗೆ ಸಾಧ್ಯ ಎಂದು ಸ್ವಾಮಿ ಪ್ರಭುಪಾದರು ಪ್ರಶ್ನಿಸುತ್ತಾರೆ. ಜೊತೆಗೆ ಪರಿಹಾರವನ್ನು ಕೂಡ ಅವರು ತಿಳಿಸಿದ್ದಾರೆ. ಅದೇನೆಂದರೆ ಭಗವಂತನೇ ಎಲ್ಲದರ ಒಡೆಯ ಎಂಬುವುದನ್ನು ಅರಿತಾಗ ಮತ್ತು ಅದನ್ನು ಒಪ್ಪಿದಾಗ ಶಾಂತಿ ಸಿಗುತ್ತದೆ ಎಂಬುದಾಗಿ ಹೇಳಿದ್ದಾರೆ.












Click it and Unblock the Notifications