ಮೋಜು ಮಸ್ತಿ ಬಿಟ್ಟರೆ.. ಸಂಸ್ಕಾರ ನಮ್ಮ ಬದುಕನ್ನು ಸುಂದರವಾಗಿಸುತ್ತದೆ
ಮಕ್ಕಳು ಯಾವುದೇ ರೀತಿಯ ಕಷ್ಟ ಕೋಟಲೆಗಳನ್ನು ಎದುರಿಸಬಾರದು ಎಂಬ ಕಾರಣಕ್ಕೆ ಹೆತ್ತವರು ತಮ್ಮ ಕಷ್ಟವನ್ನು ಮರೆಮಾಚಿ ಮಕ್ಕಳು ಸುಖವಾಗಿರಬೇಕೆಂದು ಬಯಸುತ್ತಾರೆ. ಅವರಿಗೆ ವಿದ್ಯಾಭ್ಯಾಸ ನೀಡಿ ಕೆಲಸವನ್ನು ಕೊಡಿಸಿ ಅವರು ತಮ್ಮ ಬದುಕನ್ನು ಕಟ್ಟಿಕೊಂಡಾಗ ಅದನ್ನು ನೋಡಿ ಖುಷಿಪಡುತ್ತಾರೆ. ಆದರೆ ಇಷ್ಟೆಲ್ಲ ಮಾಡುವ ಹೆತ್ತವರು ಕೇವಲ ಅವರಿಗೆ ಸಂಪಾದನೆಯನ್ನಷ್ಟೆ ಕಲಿಸಿ, ಸಂಸ್ಕಾರವನ್ನು ಕಲಿಸದೆ ಹೋದರೆ ಅದರಿಂದ ಸಂಕಷ್ಟಗಳೇ ಜಾಸ್ತಿ.
ನಿಜ ಹೇಳಬೇಕೆಂದರೆ ನಮ್ಮ ಬದುಕನ್ನು ಸಂಸ್ಕಾರಗಳು ಸುಂದರಗೊಳಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಂಸ್ಕಾರವನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ಕಲಿಸಬೇಕಾಗುತ್ತದೆ. ಇಲ್ಲದೆ ಹೋದರೆ ಹೊರ ಜಗತ್ತು ಒಳ್ಳೆಯದಕ್ಕಿಂತ ಕೆಟ್ಟದನ್ನೇ ಕಲಿಸುತ್ತದೆ. ಹಣವನ್ನು ಎಲ್ಲರೂ ಸಂಪಾದಿಸಿಕೊಳ್ಳಬಹುದು ಆದರೆ ಆ ಹಣವನ್ನು ನಾವು ಹೇಗೆ ಸಂಪಾದಿಸುತ್ತಿದ್ದೇವೆ ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ.

ಬದುಕನ್ನು ಜಾಲಿಯಾಗಿ ಕಳೆಯಬೇಕೆಂಬ ಮನೋಭಾವ ಹೆಚ್ಚುತ್ತಿರುವುದರಿಂದ ಮತ್ತು ಕೈಗೆಟುಕದ್ದನ್ನು ಪಡೆಯುವ ಹುಚ್ಚು ಹಠಗಳು.. ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆನ್ನುವ ಬಯಕೆಗಳು, ಅವರಿಗಿಂತ ನಾನೇನು ಕಡಿಮೆ ಎಂಬ ಅಹಂ, ಹಾಸಿಗೆಯಿದ್ದಷ್ಟೇ ಕಾಲು ಚಾಚು ಎಂಬ ಗಾದೆಗೆ ಗೋಲಿ ಹೊಡೆದು ಸಾಮರ್ಥ್ಯ ಮೀರಿ ಕಾಲು ಚಾಚುವ ಪ್ರಯತ್ನಗಳು.. ಹೀಗೆ ಹತ್ತಾರು ನಮ್ಮ ಹುಚ್ಚಾಟಗಳು ನಮಗರಿವಿಲ್ಲದಂತೆ ನಮ್ಮ ಬದುಕಿಗೆ ಮಾರಕವಾಗಿ ಬಿಡುತ್ತಿವೆ.
ಸಾಮರ್ಥ್ಯಕ್ಕೆ ನಿಲುಕದಕ್ಕೆಲ್ಲ ಆಶೆಪಡಬೇಡಿ
ಭೂಮಿ ಮೇಲೆ ಹುಟ್ಟಿದ ಮನುಷ್ಯನಿಗೆ ಅವನದ್ದೇ ಆದ ಗುರುತು ಪರಿಚಯವಿದೆ. ಆದ್ದರಿಂದ ಬೇರೆಯವರಂತೆ ಬದುಕೋದಕ್ಕಿಂತ ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ತನ್ನನ್ನು ಬೇರೆಯವರಿಗೆ ಹೋಲಿಸಿಕೊಂಡು ದುಃಖಪಡುವುದಕ್ಕಿಂತ ಅವನಲ್ಲಿರದ ಯಾವುದೋ ಒಂದು ಪ್ರತಿಭೆ ನಮ್ಮಲ್ಲಿರಬಹುದು ಅದನ್ನು ಗುರುತಿಸಿ ಬೆಳೆಸುವ ಪ್ರಯತ್ನ ಮಾಡಬೇಕು. ಎಲ್ಲವನ್ನು ಗುಡ್ಡೆ ಹಾಕಿಕೊಂಡು ನೆಮ್ಮದಿಯಿಲ್ಲದೆ ಬದುಕುವುದಕ್ಕಿಂತ ಏನಿಲ್ಲದಿದ್ದರೂ ನೆಮ್ಮದಿಯನ್ನು ಜೊತೆಯಾಗಿಸಿಕೊಂಡು ಬದುಕೋದರಲ್ಲಿಯೂ ಜಾಣತನವಿದೆ. ಉದಾರಭಾವವಿಲ್ಲದ ಬದುಕಿನಿಂದ ಪ್ರಯೋಜನವಿಲ್ಲ.
ಇವತ್ತಿನ ಆಧುನಿಕ ಬದುಕಿನಲ್ಲಿ ಶ್ರೀಮಂತರಾಗಿದ್ದರೆ ಮಾತ್ರ ಸಮಾಜದಲ್ಲಿ ಗೌರವ ಎನ್ನುವ ಮನೋಭಾವಕ್ಕೆ ಜೋತು ಬಿದ್ದಿರುವುದರಿಂದ ಇದ್ಯಾವುದೂ ಇಲ್ಲದೆ ಬದುಕೇ ಗೌಣ ಎಂಬ ತೀರ್ಮಾನಕ್ಕೆ ಬಂದು ಬಿಟ್ಟಿದ್ದೇವೆ. ಇದನ್ನೆಲ್ಲಾ ಪಡೆದೇ ತೀರಬೇಕೆಂಬ ಹಠಕ್ಕೆ ಬಿದ್ದು ಸಮಾಜದಲ್ಲಿ ಅಂತಸ್ತನ್ನು ಉಳಿಸಿಕೊಳ್ಳುವ ಸಲುವಾಗಿ ನಮ್ಮ ಸಾಮರ್ಥ್ಯಕ್ಕೆ ನಿಲುಕದ್ದನೆಲ್ಲ ಕೈವಶ ಮಾಡಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಾ ನೆಮ್ಮದಿಯಿಲ್ಲದ ಬದುಕಿಗೆ ಶರಣಾಗಿ ಬಿಡುತ್ತಾರೆ.

ಮೋಜು ಮಸ್ತಿಗೆ ಮುಂದಾದರೆ ಸಂಕಷ್ಟ
ನಾವು ಮಾಡುತ್ತಿರುವ ಸಂಪಾದನೆಯಲ್ಲಿ ದಿನಕಳೆಯುವುದೇ ಕಷ್ಟವಾಗಿರುವಾಗ ಮೋಜು ಮಸ್ತಿಗೆ ಮುಂದಾದರೆ ಏನಾಗಬಹುದು? ಕಷ್ಟ ಪಟ್ಟು ದುಡಿದ ಹಣವನ್ನು ದ್ವಿಗುಣಗೊಳಿಸುವ ಸಲುವಾಗಿ ಸುಲಭ ಮಾರ್ಗದಲ್ಲಿ ಮತ್ತಷ್ಟು ಸಂಪಾದಿಸುವ ಭ್ರಮೆಯಲ್ಲಿ ಜೂಜುಗೆ ಕಟ್ಟಿ ಬರಿ ಕೈಯ್ಯಲ್ಲಿ ಹಿಂತಿರುಗುವವರು ಎಷ್ಟೊಂದು ಜನರಿಲ್ಲ. ಮಾಡಿದ ಸಂಪಾದನೆಯನ್ನು ಹೆಂಡಕ್ಕೆ ಹಾಕಿ ಹೆಂಡತಿ ಮಕ್ಕಳನ್ನು ಉಪವಾಸ ಬೀಳಿಸುವವರೂ ಇದ್ದಾರೆ.
ನಾವೆಲ್ಲರೂ ಹಣ ಮತ್ತು ಅದರಿಂದ ಪಡೆಯಬಹುದಾದ ಐಷಾರಾಮಿ ಜೀವನದ ಬಗ್ಗೆ ಚಿಂತಿಸುತ್ತೇವೆಯೇ ಹೊರತು ನಮ್ಮ ಇತಿಮಿತಿಯಲ್ಲಿ ಒಂದೊಳ್ಳೆ ಬದುಕನ್ನು ಕಟ್ಟಿಕೊಳ್ಳಲು ಮುಂದಾಗುವುದೇ ಇಲ್ಲ. ಹೀಗಾಗಿಯೇ ನಾವು ಅನಗತ್ಯ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರುತ್ತೇವೆ. ನೆಮ್ಮದಿ ಕಳೆದುಕೊಂಡು ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತೇವೆ. ಸದಾ ಭಯ ಆತಂಕದಲ್ಲೇ ದಿನ ಕಳೆಯುತ್ತೇವೆ.
ಉದಾರ ಭಾವ ನಮ್ಮಲ್ಲಿ ಬೆಳೆಯಬೇಕು
ನಮಗೆ ನಮ್ಮ ಮುಂದೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವವರು ಕಾಣುತ್ತಾರೆ. ಅವರ ಏಳಿಗೆ ನಮ್ಮ ಮನಸ್ಸನ್ನು ಕೆಡಿಸುತ್ತದೆ. ಅವನು ಚೆನ್ನಾಗಿರಲಿ ಹಾಗೆಂಬ ಉದಾರ ಭಾವ ನಮ್ಮಲ್ಲಿ ಇಲ್ಲದಿರುವುದರಿಂದಾಗಿ ಆತನ ಏಳಿಗೆ ನಮಗೆ ಸಹಿಸದಾಗುತ್ತದೆ. ನಾವು ನಮ್ಮ ಬಗ್ಗೆ ಚಿಂತಿಸದೆ ಆತನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೇವೆ. ನಮ್ಮ ಕಣ್ಣ ಮುಂದೆಯೇ ಆತ ಏಳಿಗೆಯಾಗಿ ಬಿಟ್ಟನಲ್ಲ ಎಂಬ ಚಿಂತೆ ನಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತದೆ.

ಮತ್ತೊಬ್ಬರ ಏಳಿಗೆಯನ್ನು ಕಂಡು ಖುಷಿಪಡುವ ಮತ್ತು ಪ್ರೋತ್ಸಾಹಿಸುವ ಉದಾರ ಭಾವ ನಮ್ಮಲ್ಲಿ ಬೆಳೆಸಿಕೊಳ್ಳದೆ ಹೋದರೆ ಖಂಡಿತಾ ಉದ್ದಾರವಾಗಲು ಸಾಧ್ಯವಿಲ್ಲ. ಇನ್ನೊಬ್ಬರ ಯಶಸ್ಸು, ಅಭಿವೃದ್ಧಿಯನ್ನು ದೂರದಿಂದ ನೋಡಿ ಸಂತೋಷ ಪಡುವ, ಹತ್ತಿರವಿದ್ದಾಗ ಬೆನ್ನುತಟ್ಟಿ ಇನ್ನಷ್ಟು ಅವರನ್ನು ಹುರಿದುಂಬಿಸುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಳ್ಳಬೇಕು. ಇದೆಲ್ಲ ಸಾಧ್ಯವಾಗಬೇಕಾದರೆ ಸಂಸ್ಕಾರ ಬೇಕಾಗುತ್ತದೆ. ಅದು ಬಾಲ್ಯದಿಂದಲೇ ಬರಬೇಕಾಗುತ್ತದೆ.
Photo credit:This is an AI generated aticle image through WISE












Click it and Unblock the Notifications