ಕರ್ನಾಟಕದಲ್ಲಿ ಕನ್ನಡ ಮಾತ್ರ ಎನ್ನುವುದನ್ನು ಬಿಟ್ಟು, ತುಳುವನ್ನು ಗೌರವಿಸಿ- ವಿಡಿಯೋಕ್ಕೆ ನೆಟ್ಟಿಗರು ಕೆಂಡಾಮಂಡಲ
ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಭಾಷೆ ಬಗ್ಗೆ ಒಂದು ಹುಡುಗಿ ಮಾತನಾಡುತ್ತಾಳೆ. ಆಟೋದಲ್ಲಿ ಪ್ರಯಾಣ ಮಾಡುತ್ತಿರುವ ಹುಡುಗಿ ಕರ್ನಾಟಕದಲ್ಲಿ ಕನ್ನಡ ಮಾತ್ರ ಮಾತೃ ಭಾಷೆಯಾದರೆ ಮಂಗಳೂರಿನಲ್ಲಿ ತುಳು ಮಾತೃ ಭಾಷೆಯಂದು ಹೇಳುತ್ತಾಳೆ. ಈ ವಿಡಿಯೋಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಒಂದೇ ಒಂದು ಮಾತೃ ಭಾಷೆ ಅದು ಕನ್ನಡ. ರಾಜ್ಯದಾದ್ಯಂತ ಕನ್ನಡವನ್ನೇ ಪ್ರಥಮ ಭಾಷೆಯಾಗಿ ಮಾತನಾಡಬೇಕು. ಇದು ಕನ್ನಡಿಗರಾಗಿ ನಾವು ನಮ್ಮ ಭಾಷೆಗೆ ನೀಡುವ ಗೌರವ. ಆದರೆ ಇಲ್ಲೊಬ್ಬ ಹುಡುಗಿ ಆಡುವ ಮಾತುಗಳನ್ನ ಕೇಳಿದರೆ ಕನ್ನಡಿಗರ ಕೋಪ ನೆತ್ತಿಗೇರದೇ ಇರದು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಹುಡುಗಿ ಆಟೋ ಚಾಲಕನ ಪ್ರಶ್ನೆಗೆ ಉತ್ತರ ನೀಡುತ್ತಾ, 'ಕರ್ನಾಟಕದಲ್ಲಿ ಕನ್ನಡ ಮಾತ್ರ ಮಾತೃ ಭಾಷೆಯಾದರೆ ಮಂಗಳೂರಿನಲ್ಲಿ ತುಳು ಮಾತೃ ಭಾಷೆ ಅರ್ಥ ಆಯ್ತಾ. ಮಂಗಳೂರಿನಲ್ಲಿ ಎಲ್ಲರೂ ತುಳು ಮಾತನಾಡುತ್ತಾರೆ. ಮಂಗಳೂರು ಉಡುಪಿಯಲ್ಲಿ ಯಾರೂ ಕೂಡ ಕನ್ನಡ ಮಾತನಾಡುವುದಿಲ್ಲ. ಎಲ್ಲರೂ ತುಳು ಮಾತನಾಡುವುದು ಗೊತ್ತಾಯಿತಾ?' ಎಂದು ಆಟೋ ಚಾಲಕನಿಗೆ ಭಾಷೆ ಬಗ್ಗೆ ದುರಹಂಕಾರದ ಮಾತುಗಳನ್ನಾಡುತ್ತಾಳೆ.
ಈ ವಿಡಿಯೋ ಸಾಮಾಜಿಕ ಜಾಲತಾಣದ ರಘು ಎಂಬುವವರ 'X' ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 'ಕರ್ನಾಟಕದಲ್ಲಿ ಕನ್ನಡ ಮಾತ್ರ ಮಾತೃ ಭಾಷೆಯಾದರೆ, ಕರ್ನಾಟಕದ ಮಂಗಳೂರು ಮಾತೃ ಭಾಷೆ ತುಳು. ಯಾಕೆಂದರೆ ಅಲ್ಲಿ ಎಲ್ಲಾರೂ ತುಳುವನ್ನೇ ಹೆಚ್ಚಾಗಿ ಮಾತನಾಡುತ್ತಾರೆ' ಎಂದು ವಿಡಿಯೋದೊಂದಿಗೆ ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ.
Chad Auto Anna : Karnataka’s national language in #Karnataka is #Kannada
— Raaghu ರಾಘು 🇮🇳 (@raghavvk) September 2, 2024
Tulubedi : In Karnataka’s Myangalore national language is Tulunad, Tulu. There most of them speak Tulu only.
pic.twitter.com/8jJvGmFC7G
ಜೊತೆಗೆ ಈ ವಿಡಿಯೋದೊಂದಿಗೆ, ''ಕರ್ನಾಟಕದಲ್ಲಿ ಕನ್ನಡ ಮಾತ್ರ ಎನ್ನುವುದನ್ನು ಬಿಟ್ಟು, ಕರ್ನಾಟಕದಲ್ಲಿರುವ ಇತರ ಭಾಷೆಗಳನ್ನು ಕನ್ನಡದಂತೆ ಗೌರವಿಸುವುದನ್ನು ಕಲಿಯಿರಿ' ಎಂದು ಬರೆಯಲಾಗಿದೆ. ಈ ವಿಡಿಯೋಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ಕನ್ನಡ ಮಾತ್ರ ಮಾತೃ ಭಾಷೆಯಾಗಿದೆ. ಬೇರೆ ಯಾವುದೇ ಭಾಷೆ ಮಾತೃ ಭಾಷೆಯಾಗಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಈ ವಿಡಿಯೋದಲ್ಲಿ ಮಾತನಾಡಿದ ಹುಡುಗಿ ಯೂಟ್ಯೂಬರ್ ತುಳುವೆದಿ ರಕ್ಷಿತಾ. ಈಕೆ ತುಳು ಭಾಷೆಯಲ್ಲಿ ಕಾಮಿಡಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾಳೆ. ಹಾಗೇ ಕನ್ನಡ ಭಾಷೆಯನ್ನ ಬಿಟ್ಟು ತುಳುವನ್ನು ಮಾತೃ ಭಾಷೆ ಎಂದು ಹೇಳಿರುವ ವಿಡಿಯೋವನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದೀಗ ವೈರಲ್ ಆಗಿದೆ.
ಕರ್ನಾಟಕದಲ್ಲಿ ಕನ್ನಡ ನೆಲದ ಅನ್ನ ತಿಂದ ಮೇಲೆ ಕನ್ನಡ ಭಾಷೆ, ನೆಲ, ಜಲವನ್ನು ನಾವು ಗೌರವಿಸಬೇಕು. ಅನ್ಯ ಭಾಷೆಗಳು ಕಲಿಕೆಗೆ, ಬರವಣಿಗೆಗೆ ಸ್ವಾಗತವಾಗಿವೆ. ಆದರೆ ಅವುಗಳನ್ನು ಮಾತೃ ಭಾಷೆಯಾಗಿ ಸ್ವೀಕರಿಸಲು ಸಾಧ್ಯವೇ ಇಲ್ಲ. ಈ ವಿಡಿಯೋ ಕರ್ನಾಟಕದ ನೆಲ, ಜಲ, ಭಾಷೆಗೆ ಮಾಡುತ್ತಿರುವ ಅವಮಾನ. ಈ ಹೇಳಿಕೆ ಖಂಡನೀಯ ಎಂದು ನೆಟ್ಟಿಗರು ವಿಡಿಯೋ ಹಂಚಿಕೊಂಡವರ ವಿರುದ್ಧ ಕಿಡಿ ಕಾರಿದ್ದಾರೆ.
ತುಳು ಭಾಷೆ:
ನೀವು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಓಡಾಡಿದರೆ ಸದಾ ನಿಮ್ಮ ಕಿವಿಗೆ ಬೀಳುವುದು ಕನ್ನಡಕ್ಕಿಂತ ಹೆಚ್ಚಾಗಿ ತುಳು ಭಾಷೆ. ದೇವಸ್ಥಾನ, ಬಸ್ ನೊಳಗೆ, ಬೀದಿಯಲ್ಲಿ, ಮಳಿಗೆ -ಮಾಲ್ ಎಲ್ಲಿ ಹೋದರೂ ಕೇಳಿಬರುವ ಭಾಷೆಯಿದು. ತುಳು ಭಾಷೆಯು, ದ್ರಾವಿಡ ಕುಲಕ್ಕೆ ಸೇರಿದ ಪುರಾತನ ಭಾಷೆಗಳಲ್ಲಿ ಒಂದು. ತುಳುವ ಜನರನ್ನು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಬಹುತೇಕ, ಕೊಂಚಮಟ್ಟಿಗೆ ಕೊಡಗಿನಲ್ಲೂ ಕಾಣಬಹುದು. ಉತ್ತರದಲ್ಲಿ ಕಲ್ಯಾಣಪುರ ನದಿ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಘಟ್ಟ ಹಾಗೂ ದಕ್ಷಿಣದಲ್ಲಿ ಪಯಸ್ವಿನಿ / ಚಂದ್ರಗಿರಿ ನದಿಯಿಂದ ತುಳುನಾಡು ಆವೃತವಾಗಿದೆ. ಬಂಟರು, ಬಿಲ್ಲವರು, ಮೊಗವೀರರು, ಒಕ್ಕಲಿಗ ಗೌಡರು, ದಲಿತರು ಹಾಗೂ ಶಿವಳ್ಳಿ ಬ್ರಾಹ್ಮಣರು ತುಳು ಭಾಷೆಯನ್ನು ಮಾತನಾಡುತ್ತಾರೆ. ತುಳು ಸಾಹಿತ್ಯ ಅಕಾಡೆಮಿಯೂ ಇದೆ. ಸ್ವಂತ ಲಿಪಿಯೂ ಇದೆ. ಹಾಗಾಗಿಯೇ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಬೇಡಿಕೆ ಬಹಳ ಕಾಲದ್ದು.












Click it and Unblock the Notifications