Krishna Byre Gowda profile; ರಾಹುಲ್ ಆಪ್ತರು ಈ ಯುವ ನಾಯಕ!
ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ ಪರಿಚಯ.
ಬೆಂಗಳೂರು ನಗರದ ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ. 5 ಬಾರಿ ಶಾಸಕರಾಗಿರುವ ಕರ್ನಾಟಕ ಕಾಂಗ್ರೆಸ್‌ನ ಯುವ ನಾಯಕ ಹೈಕಮಾಂಡ್ ಮಟ್ಟದಲ್ಲಿಯೂ ತಮ್ಮ ಪ್ರಭಾವ ಹೊಂದಿದ್ದಾರೆ. ಎಐಸಿಸಿಯ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಪ್ತರಲ್ಲಿ ಕೃಷ್ಣ ಬೈರೇಗೌಡ ಸಹ ಒಬ್ಬರು. ಅಮೆರಿಕದಲ್ಲಿ ವ್ಯಾಸಂಗ ಮಾಡಿರುವ ಇವರು ಕರ್ನಾಟಕದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
1973ರ ಏಪ್ರಿಲ್ 4ರಂದು ಕೃಷ್ಣ ಬೈರೇಗೌಡ ಕೋಲಾರ ಜಿಲ್ಲೆಯ ಗರುಡಾಪಾಳ್ಯದಲ್ಲಿ ಜನಿಸಿದರು. ತಂದೆ ದಿ. ಸಿ. ಬೈರೇಗೌಡ, ಮಾಜಿ ಸಚಿವರು. ಅಮೆರಿಕದಲ್ಲಿ ಅಂತರರಾಷ್ಟ್ರೀಯ ವಿಚಾರಗಳು ವಿಷಯಲ್ಲಿ ಸ್ನಾತಕೋತ್ತರ ಪದವಿಯನ್ನು ಕೃಷ್ಣ ಬೈರೇಗೌಡ ಪಡೆದಿದ್ದಾರೆ. ಒಕ್ಕಲಿಗ ಸಮುದಾಯದ ನಾಯಕ ತಂದೆ ನಿಧನದ ಬಳಿಕ 2003ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕೋಲಾರದ ವೇಮಗಲ್ ಕ್ಷೇತ್ರದಿಂದ ಕಣಕ್ಕಿಳಿದರು, ಜಯಗಳಿಸಿ ವಿಧಾನಸಭೆ ಪ್ರವೇಶ ಮಾಡಿದರು.

2004ರ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಪುನಃ ಆಯ್ಕೆಯಾದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾದಾಗ ವೇಮಗಲ್ ಕ್ಷೇತ್ರ ಅಸ್ತಿತ್ವ ಕಳೆದುಕೊಂಡಿತು. ಕೃಷ್ಣ ಬೈರೇಗೌಡ ಬೆಂಗಳೂರು ನಗರ ವ್ಯಾಪ್ತಿಯ ಬ್ಯಾಟರಾಯನಪುರ ಕ್ಷೇತ್ರ ಆಯ್ಕೆ ಮಾಡಿಕೊಂಡರು. ಚುನಾವಣೆಯಲ್ಲಿ ನಿಂತು ಜಯಗಳಿಸಿದರು. 2013, 2018ರಲ್ಲಿಯೂ ಅದೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.
ಕೃಷ್ಣ ಬೈರೇಗೌಡರು ಲೋಕಸಭಾ ಚುನಾವಣೆಯಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. 2009ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಎದುರಾಳಿಯಾಗಿದ್ದು ಕೇಂದ್ರದಲ್ಲಿ ಅತ್ಯಂತ ಪ್ರಭಾವಿಯಾಗಿದ್ದ ನಾಯಕ ಅನಂತ್ ಕುಮಾರ್. ಚುನಾವಣೆಯಲ್ಲಿ ಅನಂತ್ ಕುಮಾರ್ 437,953 ಮತ ಪಡೆದು ಗೆದ್ದಿದ್ದರು. ಕೃಷ್ಣ ಬೈರೇಗೌಡರು 400,341 ಮತಗಳನ್ನು ಪಡೆದು ಪ್ರಬಲ ಪೈಪೋಟಿ ನೀಡಿದ್ದರು.

2 ಬಾರಿ ಸಚಿವ ಸ್ಥಾನ; ಕೃಷ್ಣ ಬೈರೇಗೌಡರು 2013ರ ಚುನಾವಣೆಯಲ್ಲಿ ಗೆದ್ದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದರು. ಜಿಎಸ್‌ಟಿ ಕೌನ್ಸಿಲ್‌ನಲ್ಲಿ ರಾಜ್ಯದ ಪ್ರತಿನಿಧಿಯಾಗಿದ್ದರು. 2018ರ ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮತ್ತೊಮ್ಮೆ ಸಚಿವ ಸ್ಥಾನ ಒಲಿದು ಬಂತು. ಸರ್ಕಾರ ಪತನಗೊಂಡ ಬಳಿಕ ಸಚಿವ ಸ್ಥಾನವನ್ನು ಕಳೆದುಕೊಂಡರು. ಕೃಷಿ, ನೀರಾವರಿ, ರೈತರ ಸಮಸ್ಯೆ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಅಂಕಿ-ಅಂಶಗಳ ಸಮೇತ ವಿಷಯ ಮಂಡಿಸಿ ಆಡಳಿತ ಪಕ್ಷದ ನಾಯಕರ ಮೆಚ್ಚುಗೆ ಸಹಗಳಿಸುತ್ತಾರೆ.
2007ರಲ್ಲಿ ಕೃಷ್ಣ ಬೈರೇಗೌಡ ಯುವ ಕಾಂಗ್ರೆಸ್‌ನ ಅಧ್ಯಕ್ಷರೂ ಆಗಿದ್ದರು. ಯುಎಸ್‌ಎ, ಯುರೋಪ್ ಮುಂತಾದ ದೇಶಗಳಿಗೆ ಭೇಟಿ ನೀಡಿದ್ದಾರೆ. ಕ್ರಿಕೆಟ್, ಟೇಬಲ್ ಟೆನಿಸ್ ಮುಂತಾದ ಕ್ರೀಡೆಗಳನ್ನು ಇಷ್ಟಪಡುತ್ತಾರೆ. ಸಂಸದ ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಾಯಕರಲ್ಲಿ ಇವರು ಸಹ ಒಬ್ಬರು. 2020ರಲ್ಲಿ ಎಐಸಿಸಿ ಪುನಾರಚನೆ ವೇಳೆ ಕೇಂದ್ರ ಚುನಾವಣಾ ಮಂಡಳಿ ಸದಸ್ಯರಾಗಿ ಅವರನ್ನು ನೇಮಿಸಲಾಗಿತ್ತು.
ಈ ಬಾರಿಯ ಚುನಾವಣೆಯಲ್ಲಿ ಸಹ ಕೃಷ್ಣ ಬೈರೇಗೌಡರಿಗೆ ಟಿಕೆಟ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕರ್ನಾಟಕ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೇವೆ ಎಂದು ಪಟ್ಟಿ ಮಾಡಿರುವ ಕ್ಷೇತ್ರದಲ್ಲಿ ಬ್ಯಾಟರಾಯನಪುರ ಸಹ ಒಂದು. ಕೋಲಾರ ಜಿಲ್ಲೆಯ ರಾಜಕೀಯದ ಮೇಲೆಯೂ ಕೃಷ್ಣ ಬೈರೇಗೌಡರು ಪ್ರಭಾವ ಹೊಂದಿದ್ದಾರೆ. ಸಿದ್ದರಾಮಯ್ಯ ಕೋಲಾರದಲ್ಲಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ ಸಮಾವೇಶ ಆಯೋಜನೆ ಸೇರಿದಂತೆ ಹಲವು ಕಾರ್ಯಕ್ರಮ ರೂಪಿಸಿದವರಲ್ಲಿ ಕೃಷ್ಣ ಬೈರೇಗೌಡ ಸಹ ಒಬ್ಬರು.












Click it and Unblock the Notifications