ಜೋರು ಮಳೆಯಲ್ಲೂ ಕೊಡಚಾದ್ರಿ ಚಾರಣ, ಮೈ ನಡುಗಿಸುವ ಜೀಪ್ ಪಯಣ
ಅಬ್ಬಬ್ಬಾ, ಏನು ಮಳೆ! ಈ ಬಗ್ಗೆ ಸುಳಿವೇ ಇಲ್ಲದೆ ಹೋಗಿ ಬಂದ ಚಾರಣವೊಂದರ ಅನುಭವ ನಿಮ್ಮ ಮುಂದೆ ಹೇಳಿಕೊಳ್ಳಬೇಕಿದೆ. ಈಗ ಟೀವಿ ಎದುರು ಕೂತು ಆ ಮಳೆಯ ದೃಶ್ಯಗಳನ್ನು ನೋಡಿದಾಗ ಎದೆ ಝಲ್ ಎನಿಸುತ್ತಿದೆ. ಅಂದಹಾಗೆ ನಾನು ಹೋಗಿಬಂದದ್ದು ಕೊಡಚಾದ್ರಿ ಚಾರಣಕ್ಕೆ.
ಆಗಸ್ಟ್ 10ನೇ ತಾರೀಕು, ಶುಕ್ರವಾರ ರಾತ್ರಿ 10 ಗಂಟೆಗೆ ಬೆಂಗಳೂರಿಂದ ಹೊರಟೆವು. ಅಲ್ಲಿ ತಲುಪಿದಾಗ ಮಾರನೇ ದಿನ ಆಗಸ್ಟ್ 11, ಶನಿವಾರ ಬೆಳಗ್ಗೆ 7 ಗಂಟೆಯಾಗಿತ್ತು. ಬೆಂಗಳೂರಿನಿಂದ ಕೊಡಚಾದ್ರಿಗೆ 397 ಕಿ.ಮೀ. ದೂರ. ಕೊಲ್ಲೂರಿಗೆ ಈ ಸ್ಥಳವು ಬಹಳ ಹತ್ತಿರ. ನಾವು ಉಳಿದುಕೊಂಡಿದ್ದು ಪರ್ವತ ರೆಸಿಡೆನ್ಸಿ ಹೋಮ್ ಸ್ಟೇನಲ್ಲಿ.
ನಮ್ಮ ತಂಡದಲ್ಲಿ ಇದ್ದಿದ್ದು ಹತ್ತೊಂಬತ್ತು ಹುಡುಗಿಯರು, ಹತ್ತು ಜನ ಹುಡುಗರು ಸೇರಿ ಒಟ್ಟು ಇಪ್ಪತ್ತೊಂಬತ್ತು ಮಂದಿ. ನಮ್ಮ ಚಾರಣದ ಇಡೀ ಯೋಜನೆಯನ್ನು ಮಾಡಿ, ಅದಕ್ಕೆ ಎಲ್ಲ ವ್ಯವಸ್ಥೆ ಮಾಡಿದ್ದವರು ಪ್ಲಾನ್ ದಿ ಅನ್ ಪ್ಲಾನ್ಡ್ ಅಸೋಸಿಯೇಷನ್. ಅವರ ಶ್ರಮವನ್ನು ಮನಸಾರೆ ಸ್ಮರಿಸಲೇಬೇಕು.

ಹಿಂಡುಮನೆ ಜಲಪಾತದ ಸೊಗಸು
ಶನಿವಾರ ಬೆಳಗ್ಗೆ ಒಂಬತ್ತಕ್ಕೆ ಪರ್ವತ ರೆಸಿಡೆನ್ಸಿಯಿಂದ ಹೊರಟವರು ಮಧ್ಯಾಹ್ನ ವಾಪಸ್ ಬರುವವರೆಗೆ ಧಾರಾಕಾರ ಮಳೆ. ಮೊದಲ ದಿನ ಹಿಂಡುಮನೆ ಜಲಪಾತ ಮೂಲಕ ಕಾಡಿನ ಮಧ್ಯದ ದಾರಿಯಲ್ಲಿ ಸಾಗುತ್ತಾ ಜೀಪು ಮೂಲಕ ಸಾಗುವ ರಸ್ತೆಗೆ ಸೇರಿದೆವು. ಹಿಂಡುಮನೆ ಜಲಪಾತದ ಸೊಗಸು, ರಭಸ, ಚೆಲುವಿನ ಬಗ್ಗೆಯೇ ಒಂದು ಲೇಖನ ಆದೀತು. ಅಂಥ ಜಲಪಾತವದು. ನೀರು ಚಿಮ್ಮುವ ರಭಸಕ್ಕೆ ಹತ್ತಿರದಿಂದ ಅದರ ಕಡೆಗೆ ಮುಖ ಮಾಡಿ ನಿಲ್ಲುವಂಥ ಧೈರ್ಯ ಕೂಡ ನಾನು ಮಾಡಲಿಲ್ಲ. ಅಲ್ಲಿಂದ ಮುಂದೆ ಹೋಗುವಾಗ ಮೂಲ ಮೂಕಾಂಬಿಕಾ ದೇವಸ್ಥಾನ ದರ್ಶನವಾಯಿತು. ಆ ನಂತರ ಕಾಲ ಭೈರವೇಶ್ವರ ದೇವಸ್ಥಾನ. ಮತ್ತೆ ಮುಂದೆ ನಾಗ ದೇವಸ್ಥಾನ, ದುರ್ಗಾ ಪರಮೇಶ್ವರಿ ದೇವಸ್ಥಾನ. ಹೀಗೇ ಕೊಡಚಾದ್ರಿ ಪೀಕ್ ಪಾಯಿಂಟ್ ನಲ್ಲಿ ಶಂಕರಾಚಾರ್ಯರ ದಿವ್ಯ ಸನ್ನಿಧಿ ಸಿಗುತ್ತದೆ. ಅಲ್ಲಿ ತಲುಪುವ ಹೊತ್ತಿಗೆ ಸಂಜೆ ನಾಲ್ಕು ಗಂಟೆ ಆಗಿತ್ತು. ಅದೇ ದಾರಿಯಲ್ಲಿ ವಾಪಸ್ ಬಂದೆವು. ತುಂಬ ಹೊತ್ತಾಗಿದ್ದರಿಂದ ಹಾಗೂ ಕತ್ತಲಾಗುತ್ತಿದ್ದುದರಿಂದ ದಾರಿ ಮಧ್ಯ ಸಿಕ್ಕ ಜೀಪಿನಲ್ಲಿ ಬಂದೆವು.

ದಿನಕ್ಕೆ ಹದಿನೈದರಿಂದ ಹದಿನೇಳು ಟ್ರಿಪ್ ಮಾಡುವ ಚಾಲಕರು
ಎಂಟು ಜನ ಒಂದು ಜೀಪಿನಲ್ಲಿ ಕೂತೆವು. ಅವು ಮಹೀಂದ್ರಾ ಮೇಜರ್ ಅಂಡ್ ಕಮ್ಯಾಂಡರ್ ಜೀಪ್ ಗಳು. ಡೋರ್ ಗಳು ಇರಲಿಲ್ಲ. ಅಲ್ಲಿನ ಚಾಲಕರೇ ಹೇಳಿದ ಪ್ರಕಾರ, ಕೆಲವರು ದಿನಕ್ಕೆ ಹದಿನೈದರಿಂದ ಹದಿನೇಳು ಟ್ರಿಪ್ ಮಾಡ್ತಾರೆ. ಕೆಲವರು ಮೂರರಿಂದ ನಾಲ್ಕು ಟ್ರಿಪ್ ಗೆ ಸುಸ್ತಾಗ್ತಾರೆ. ಆದರೆ ಜೀಪ್ ಸಾಗುವ ದಾರಿ ಮಾತ್ರ ಬಹಳ ಕಡಿದಾಗಿ ಇರುತ್ತದೆ. ಅದು ಯಾವ ಪರಿ ಅಲ್ಲಾಡುತ್ತಾ ಇರುತ್ತದೆ ಅಂದರೆ ಚಾರಣ ಅಂತ ನಡೆದು ಸಾಗುವ ಅನುಭವದ ತೂಕ ಒಂದಾದರೆ, ಜೀಪಿನಲ್ಲಿ ಸಾಗಿಬರುವ ರಮಣೀಯ ದೃಶ್ಯದ ಅನುಭವ ಮತ್ತೊಂದು ಬಗೆಯದು. ಜೀಪಿನ ಒಳಗೆ ಕೂತಿರುವ ನಮಗೆ ಭಯ ಆಗುತ್ತಿರುತ್ತದೆ. ಆದರೆ ಜೀಪ್ ಚಾಲಕರಿಗೆ ಅದು ಬಲು ಸಲೀಸಾದ ಕೆಲಸ.

ಚಾರಣಕ್ಕೆ ಗುಂಪಿನಲ್ಲಿ ಹೋದರೆ ಉತ್ತಮ
ಕೊಡಚಾದ್ರಿ ಇಳಿದು ಅಲ್ಲಿಂದ ವಾಪಸ್ ಬಂದು ಪರ್ವತ ರೆಸಿಡೆನ್ಸಿಯಲ್ಲಿ ಉಳಿದುಕೊಂಡ ನಂತರವೂ ಅವೇ ಕಡಿದಾದ ರಸ್ತೆಗಳು, ವಾಲಾಡುತ್ತಾ ಇಗೋ ಬಿದ್ದೆ- ಅಗೋ ಬಿದ್ದೆ ಎಂದು ಹೆದರಿಸುತ್ತಿದ್ದ ಜೀಪ್ ಗಳು ಕನಸಿನಲ್ಲಿ ಬಿಟ್ಟೂ ಬಿಡದೆ ಕಾಡಿದವು. ಬೆಳಗ್ಗೆ ಲಗಿಬಗೆಯಲ್ಲಿ ಎದ್ದು, ಮಾರನೇ ದಿನ ನಗರದ ಕೋಟೆ ನೋಡಿಕೊಂಡು ವಾಪಸ್ ಬೆಂಗಳೂರಿಗೆ ಬಂದೆವು. ಮಾರನೇ ದಿನವೂ ಸಿಕ್ಕಾಪಟ್ಟೆ ಮಳೆ ಇತ್ತು. ಇಡೀ ಎರಡೂ ದಿನ ಭಾರೀ ಮಳೆ ಬರುತ್ತಲೇ ಇತ್ತು. ಮಳೆಗಾಲ ಅಲ್ಲದಿದ್ದರೆ ನಾವೇ ಹೋಗಬಹುದು. ಇಲ್ಲಿ ರಸ್ತೆ ಕಡಿದಾದರೂ ಅಂಥ ಸವಾಲೇನೂ ಇಲ್ಲ. ಆದರೆ ಕಾಲು ದಾರಿಯಲ್ಲಿ ಹೋದರೆ ಚಾರಣದ ಅನುಭವ ಕೂಡ ಆಗುತ್ತದೆ. ಸ್ಥಳೀಯವಾಗಿ ಸಿಗುವ ಗೈಡ್ ಗಳ ಮಾರ್ಗದರ್ಶನ ಪಡೆದರೆ ಉತ್ತಮ. ಚಾರಣಕ್ಕೆ ಹೋಗುವಾಗ ಆದಷ್ಟು ಗುಂಪಿನಲ್ಲಿ ಹೋಗುವುದು ಬಹಳ ಒಳ್ಳೆಯದು. ಏಕೆಂದರೆ ಇಲ್ಲಿ ಕಾಟಿಗಳ ಓಡಾಟ ಹೆಚ್ಚು. ಸುಮ್ಮನೆ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುವುದು ಒಳ್ಳೆಯದಲ್ಲ.

ಚಾರಣಕ್ಕೆ ಎಂಥ ದಿರಿಸು ಉತ್ತಮ?
ಇನ್ನು ಊಟ- ತಿಂಡಿ ವ್ಯವಸ್ಥೆಗೆ ಪರ್ವತ ರೆಸಿಡೆನ್ಸಿ ಇದೆ. ಅವರು ಮಲೆನಾಡಿನವರು. ಅಲ್ಲಿನ ಊಟ- ತಿಂಡಿ ಬಹಳ ಸೊಗಸಾಗಿರುತ್ತದೆ. ಜತೆಗೆ ಉಪಚಾರವೂ ಜೋರಾಗಿತ್ತು. ಇಂಥ ಸಾಕಷ್ಟು ಹೋಮ್ ಸ್ಟೇಗಳು ಇಲ್ಲಿವೆ. ನಾವು ಉಳಿದುಕೊಂಡಿದ್ದ ಹೋಮ್ ಸ್ಟೇ ಇದು ಮತ್ತು ಚೆನ್ನಾಗಿತ್ತು ಅನ್ನೋ ಕಾರಣಕ್ಕೆ ಹೇಳಿದ್ದೇನೆ ಅಷ್ಟೇ. ಉಳಿದಂತೆ ಅದು ನಿಮ್ಮ ಆಯ್ಕೆಗೆ ಬಿಟ್ಟ ವಿಚಾರ. ಮಳೆಗಾಲದಲ್ಲಿ ರೈನ್ ಜಾಕೆಟ್, ಟ್ರೌಷರ್, ನೈಲಾನ್ ಟೀಶರ್ಟ್, ನೈಲಾನ್ ಒಳ ಉಡುಪು, ಟ್ರೆಕ್ಕಿಂಗ್ ಷೂ... ಬೇಸಿಗೆ ಕಾಲ ಆದರೆ ಶಾರ್ಟ್ಸ್, ಟೀ ಷರ್ಟ್, ಮೂರು ಲೀಟರ್ ನಷ್ಟು ನೀರು, ಕಾಡಿನಲ್ಲಿ ಸಾಗುವ ದಾರಿ ಮಧ್ಯದಲ್ಲಿ ಊಟ ಮಾಡುವುದಕ್ಕೆ ಬುತ್ತಿ ಕಟ್ಟಿಕೊಂಡೇ ಹೋಗಿ. ಚಿಪ್ಸ್, ಬಿಸ್ಕೆಟ್, ಎನರ್ಜಿ ಡ್ರಿಂಕ್ಸ್ ಇಂಥವೆಲ್ಲ ಬೇಡವೇ ಬೇಡ. ಡ್ರೈ ಫ್ರೂಟ್ಸ್- ನೀರು ಇಟ್ಟುಕೊಂಡರೆ ಸಾಕು.

ಎರಡು ದಿನಗಳ ಚಾರಣ, ಒಟ್ಟು ಹದಿನಾಲ್ಕು ಕಿ.ಮೀ.
ಮೊದಲೇ ಹೇಳಿದ ಹಾಗೆ ಇದು ಎರಡು ದಿನಗಳ ಚಾರಣ. ಒಟ್ಟು ಹದಿನಾಲ್ಕು ಕಿ.ಮೀ. ಒಂದು ಕಡೆ ದೂರ. ಅಷ್ಟು ದೂರ ಅಂದರೆ ಹದಿನಾಲ್ಕು ಕಿ.ಮೀ. ಬೆಟ್ಟ ಹತ್ತಿ, ಆ ನಂತರ ಎರಡು ಕಿ.ಮೀ. ನಡೆದು, ಜೀಪ್ ನಲ್ಲಿ ಬರ್ತೀರಿ. ಕೊಲ್ಲೂರು ಮೂಕಾಂಬಿಕೆ ಮೂಲ ದೇವಿಯ ಸ್ಥಾನ ಇಲ್ಲಿದೆ. ಶಂಕರಾಚಾರ್ಯರ ಪೀಠವೂ ಇದೆ. ಮಳೆಯಲ್ಲಿ, ಆ ಪ್ರಕೃತಿ ಮಧ್ಯೆ ಚಾರಣ ಮಾಡುವುದರ ಅನುಭವವನ್ನು ಅಕ್ಷರಗಳಲ್ಲಿ ಕಟ್ಟಿಕೊಡುವುದು ತುಸು ಕಷ್ಟವೇ. ಆದರೂ ನಾನು ಈ ಬಾರಿ ಹೋಗಿದ್ದ ಗುಂಪು ಬಹಳ ಚೆನ್ನಾಗಿತ್ತು. ಉತ್ಸಾಹ, ಆಸಕ್ತಿ ಎಲ್ಲವೂ ನನ್ನಲ್ಲಿ ಹೊಸ ಚೈತನ್ಯ ಮೂಡಿಸುತ್ತಿತ್ತು. ನಿಮಗೂ ಕೊಡಚಾದ್ರಿ ಚಾರಣಕ್ಕೆ, ಅಷ್ಟೇ ಅಲ್ಲ ಇನ್ಯಾವುದಾದರೂ ಚಾರಣಕ್ಕೆ ಹೋಗಬೇಕು ಎಂದಿದ್ದರೆ ಅಡ್ವೆಂಚರ್ ಅಡ್ಡಾ, ಎಸ್ಕೇಪ್ ಟು ಎಕ್ಸ್ ಫ್ಲೋರ್ ನಂಥ ಅಸೋಸಿಯೇಷನ್ ಗಳೂ ಇವೆ. ಪ್ರಯತ್ನಿಸಿ ನೋಡಿ.
-
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications