ಎಣ್ಣೆ ಏಟು, ಕರೆಂಟ್ ಶಾಕು; ಬಾಗಿಲು ಮುಚ್ಚುತ್ತಿರುವ ಪಬ್‌ಗಳು
ಕುಡಿಯಬೇಡಿರಣ್ಣ, ಕುಡಿದು ಮನೆಯ ಹಾಳು ಮಾಡದಿರಣ್ಣ ಅಂತ ನಮ್ಮ ದೊಡ್ಡವರು ಸಮಾಜ ಪಾಠ ಮಾಡುತ್ತಾರೆ. ನಮ್ಮಲ್ಲಿ ಕುಡಿತ ಸಾಮಾಜಿಕ ಪಿಡುಗು. ಆದರೆ, ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಕುಡಿತ ಒಂದು ಸಾಮಾಜಿಕ ಸಂಸ್ಕೃತಿ ವಿಶೇಷ. ಬ್ರಿಟನ್ ದೇಶದ ಸಾಮಾಜಿಕ ಜೀವನಕ್ಕೆ ಪಬ್‌ಗಳು ಮುಖ್ಯ. ಕುಡಿದು ಕುಪ್ಪಳಿಸಿ ತೂರಾಡುವುದೇ ಇಲ್ಲಿನ ಜನರ ಜೀವನಶೈಲಿಯ ಒಂದು ಭಾಗ.
ಇಂಥ ಬ್ರಿಟನ್ ದೇಶದಲ್ಲಿ ಈಗ ಹೆಂಡದಂಗಡಿಗಳು ಸಾಲು ಸಾಲಾಗಿ ಬಾಗಿಲು ಮುಚ್ಚುತ್ತಿವೆ. ಜನರು ವಿಲವಿಲ ಒದ್ಧಾಡುವಂತಾಗಿದೆ. ಪಬ್ ಮಾಲೀಕರು, ಮದ್ಯ ಮಾರಾಟಗಾರರು ಸರಕಾರದ ಸಹಾಯ ಯಾಚಿಸುತ್ತಿದ್ದಾರೆ. ಶ್ರೀಮಂತರ ನಾಡೆನಿಸಿದ ಬ್ರಿಟನ್ ದೇಶದಲ್ಲಿ ಯಾಕಿಂಥ ಸ್ಥಿತಿ...?
ಪಬ್‌ಗಳು ಬಂದ್ ಆಗುತ್ತಿರುವುದು ಯಾಕೆಂದು ಕಾರಣ ತಿಳಿದರೆ ನಿಮಗೆ ನಂಬಲು ಕಷ್ಟವಾಗಬಹುದು. ವಿದ್ಯುತ್ ದುಬಾರಿಯಾಗುತ್ತಿರುವುದರಿಂದ ಪಬ್‌ಗಳು ಬಾಗಿಲು ಮುಚ್ಚುತ್ತಿವೆಯಂತೆ. ಅಷ್ಟಿಷ್ಟು ಹೆಚ್ಚಾಗಿಲ್ಲ, ಮೂರ್ನಾಲ್ಕು ಪಟ್ಟು ಬೆಲೆ ಹೆಚ್ಚಳವಾಗಿದೆ. ವಿದ್ಯುತ್ ಬಿಲ್ ಕಟ್ಟಲಾಗದೆಯೇ ಅನೇಕ ಪಬ್‌ಗಳು ಬಾರ್‌ಗಳು ಬಾಗಿಲು ಮುಚ್ಚುತ್ತಿರುವ ಪರಿಸ್ಥಿತಿ ಬಂದೊದಗಿದೆ.
ಪಬ್‌ಗಳಿಗೆ ಆಗುತ್ತಿರುವ ಬಿಸಿನೆಸ್‌ಗೂ ಬರುತ್ತಿರುವ ಕರೆಂಟ್ ಬಿಲ್‌ಗೂ ತಾಳೆಯಾಗುತ್ತಿಲ್ಲ. ವಿದ್ಯುತ್ ಬಿಲ್ ಕಟ್ಟಲು ಕಷ್ಟವಾಗುತ್ತಿದೆ. ವಿದ್ಯುತ್ ಪೂರೈಕೆ ಕಂಪನಿಗಳು ಕರೆಂಟ್ ಸಪ್ಲೈ ಕಟ್ ಮಾಡುತ್ತಿವೆ.

ಕಷ್ಟ ಹೇಳಿಕೊಳ್ಳುವ ಪಬ್‌ಗಳು
"ವಿದ್ಯುತ್ ಬಿಲ್‌ಗಳು ಶೇ. 300ರಷ್ಟು ಹೆಚ್ಚುತ್ತಿವೆ. ವಿದ್ಯುತ್ ಸರಬರಾಜು ಮಾಡಲು ಕಂಪನಿಗಳು ನಿರಾಕರಿಸುತ್ತಿವೆ... ಕೆಲ ಕಡೆ ನಮ್ಮ ಬಾಡಿಗೆದಾರರು ಈ ವಿದ್ಯುತ್ ವೆಚ್ಚಕ್ಕೆ ತಕ್ಕಂತೆ ವ್ಯಾಪಾರ ಆಗುತ್ತಿಲ್ಲ ಎನ್ನುತ್ತಿದ್ದಾರೆ" ಎಂದು ಜೆಡಬ್ಲ್ಯೂ ಲೀಸ್ ಪಬ್ ಗ್ರೂಪ್‌ನ ಎಂಡಿ ವಿಲಿಯಮ್ ಲೀಸ್ ಜೋನ್ಸ್ ಹೇಳಿದ್ದಾರೆ.
ಜೆಡಬ್ಲ್ಯು ಲೀಸ್ ಗ್ರೂಪ್‌ವೊಂದೇ ಅಲ್ಲ, ಗ್ರೀನ್ ಕಿಂಗ್ ಗ್ರೂಪ್ ಮೊದಲಾದ ಅನೇಕ ಪಬ್ ಗ್ರೂಪ್‌ಗಳೂ ಸಂಕಷ್ಟದಲ್ಲಿವೆ. ಗ್ರೀನ್ ಗ್ರೂಪ್ ಕಿಂಗ್ ಸಂಸ್ಥೆಗೆ ಬಂದಿರುವ ವಿದ್ಯುತ್ ಬಿಲ್‌ನಲ್ಲಿ 33 ಸಾವಿರ ಪೌಂಡ್ ಹಣದಷ್ಟು ಹೆಚ್ಚಳವಾಗಿದೆ. 33 ಸಾವಿರ ಪೌಂಡ್ ಎಂದರೆ ಸುಮಾರು 30 ಲಕ್ಷ ರೂಪಾಯಿಯಷ್ಟು ಹೆಚ್ಚು ಬಿಲ್ ಬಂದಿದೆ.
ದೊಡ್ಡ ದೊಡ್ಡ ಪಬ್ ಗ್ರೂಪ್‌ಗಳಿಂದ ಬಾಡಿಗೆ ಪಡೆದು ಪಬ್‌ಗಳನ್ನು ನಡೆಸುತ್ತಿರುವ ಜನರಿಗೆ ಕರೆಂಟ್ ಶಾಕ್ ಆಗುತ್ತಿದೆ. ಪಬ್‌ಗಳಿಂದ ಬರುತ್ತಿರುವ ಲಾಭದಿಂದ ದುಬಾರಿ ವಿದ್ಯುತ್ ಬಿಲ್ ಅನ್ನು ಸರಿದೂಗಿಸಲು ಆಗುತ್ತಿಲ್ಲವೆಂದು ಬಾಡಿಗೆದಾರರು ಅಲವತ್ತುಕೊಳ್ಳುತ್ತಿದ್ದಾರೆ.

ಸರಕಾರದ ಸಹಾಯಕ್ಕೆ ಮನವಿ
ಬ್ರಿಟನ್‌ನಲ್ಲಿ ಮನೆಗಳಿಗೆ ಸರಬರಾಜಾಗುವ ವಿದ್ಯುತ್‌ನ ಬೆಲೆಯನ್ನು ಸರಕಾರ ನಿಯಂತ್ರಿಸುತ್ತದೆ. ಗರಿಷ್ಠ ಬೆಲೆಯನ್ನು ಸರಕಾರ ನಿಗದಿ ಮಾಡುತ್ತದೆ. ಹೀಗಾಗಿ, ಗೃಹ ಬಳಕೆ ವಿದ್ಯುತ್‌ನ ಬೆಲೆಯನ್ನು ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚು ಏರಿಸುವಂತಿಲ್ಲ. ಆದರೆ, ಇದು ಉದ್ಯಮಗಳಿಗೆ ಪೂರೈಕೆಯಾಗುವ ವಿದ್ಯುತ್ ವಿಚಾರಕ್ಕೆ ಅನ್ವಯ ಅಗಲ್ಲ.
ಗೃಹಬಳಕೆ ವಿದ್ಯುತ್‌ನಂತೆ ವಾಣಿಜ್ಯ ಬಳಕೆಯ ವಿದ್ಯುತ್‌ಗೂ ಬೆಲೆ ಮಿತಿ ಹಾಕುವಂತೆ ಪಬ್ ಗ್ರೂಪ್ ಕಂಪನಿಗಳು ಬ್ರಿಟನ್ ಸರಕಾರಕ್ಕೆ ಮನವಿ ಮಾಡಿವೆ. ಗ್ರೀನ್ ಕಿಂಗ್, ಜೆಡಬ್ಲ್ಯು ಲೀಸ್, ಕಾರ್ಲ್ಸ್‌ಬರ್ಗ್ ಮಾರ್ಸ್‌ಟನ್ಸ್, ಅಡ್ಮಿರಲ್ ಟಾವರ್ನ್ಸ್, ಡ್ರೇಕ್ ಅಂಡ್ ಮಾರ್ಗನ್, ಸೇಂಟ್ ಆಸ್ಟೆಲ್ ಬ್ರಿವರಿ ಸಂಸ್ಥೆಗಳು ಸರಕಾರಕ್ಕೆ ಬಹಿರಂಗ ಪತ್ರ ಬರೆದು, ವಿದ್ಯುತ್ ಬೆಲೆ ಏರಿಕೆ ಸಮಸ್ಯೆ ನಿವಾರಿಸಲು ಮಧ್ಯಪ್ರವೇಶಿಸುವಂತೆ ಮನವಿ ಮಾಡಿವೆ.
"ಸರಕಾರ ಮಧ್ಯಪ್ರವೇಶ ಮಾಡಿ ಬೆಂಬಲ ನೀಡದೇ ಹೋದರೆ ಪಬ್‌ಗಳು ತಮ್ಮ ಬಿಲ್‌ಗಳನ್ನು ಕಟ್ಟಲು ಅಸಾಧ್ಯವಾಗುತ್ತದೆ. ಉದ್ಯೋಗಗಳು ಹೋಗುತ್ತವೆ. ಪಬ್‌ಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಬರುತ್ತದೆ. ಕೋವಿಡ್ ಸಾಂಕ್ರಾಮಿಕ ಸ್ಥಿತಿಯಲ್ಲೂ ಪಬ್‌ಗಳು ತೆರೆಯಲಾಗುವಂತೆ ಮಾಡಿದ ಪ್ರಯತ್ನಗಳೆಲ್ಲಾ ಈಗ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ" ಎಂದು ಪಬ್ ಗ್ರೂಪ್ ಸಂಸ್ಥೆಗಳು ಹೇಳಿವೆ..

ಬಾಗಿಲು ಮುಚ್ಚುತ್ತಿರುವ ಪಬ್‌ಗಳು
ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಇರುವ ಪಬ್‌ಗಳ ಸಂಖ್ಯೆ ಈ ವರ್ಷ ಮೊದಲ ಬಾರಿಗೆ 40 ಸಾವಿರಕ್ಕಿಂತ ಕಡಿಮೆಗೆ ಇಳಿದಿದೆ. ಪಬ್‌ಗಳಷ್ಟೇ ಅಲ್ಲ, ಬೇರೆ ಹಲವು ರೆಸ್ಟೋರೆಂಟ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಮೀನಿನ ಫ್ರೈ, ಚಿಪ್ಸ್ ಇತ್ಯಾದಿ ಆಹಾರವಸ್ತುಗಳನ್ನು ಮಾರುವವರೂ ಕೂಡ ಪರಿಪಾಟಲು ಅನುಭವಿಸುತ್ತಿದ್ದಾರೆ.
ಸೋಮವಾರ 750ಕ್ಕೂ ಹೆಚ್ಚು ಅಂಗಡಿಗಳು ಒಟ್ಟು ಸೇರಿ ಸರಕಾರಕ್ಕೆ ಬಹಿರಂಗ ಪತ್ರ ಬರೆದು, ಆಹಾರ ಬೆಲೆ ಮತ್ತು ವಿದ್ಯುತ್ ಬೆಲೆ ಏರಿಕೆಯಿಂದ ಆಗುತ್ತಿರುವ ಕಷ್ಟವನ್ನು ವಿವರಿಸಿವೆ. ಸಿಬ್ಬಂದಿ ಕೊರತೆ, ಸರಬರಾಜು ವಿಳಂಬ ಇತ್ಯಾದಿ ಅಂಶಗಳೂ ಕೂಡ ತಮ್ಮ ವ್ಯವಹಾರವನ್ನು ಕುಂದಿಸುತ್ತಿವೆ ಎಂದು ಈ ಅಂಗಡಿಗಳು ಹೇಳಿಕೊಂಡಿವೆ.

ಸಂಕಷ್ಟದಲ್ಲಿ ಬ್ರಿಟನ್
ಬ್ರಿಟನ್ ದೇಶ ಹಲವು ದಶಕಗಳಲ್ಲೇ ಅತ್ಯಂತ ಸಂಕಷ್ಟದ ಆರ್ಥಿಕ ಪರಿಸ್ಥಿತಿಗೆ ಸಿಲುಕಿದೆ. ಹಣದುಬ್ಬರ ವಿಪರೀತವಾಗಿ ಏರಿದೆ. ಕೋವಿಡ್ ಸಾಂಕ್ರಾಮಿಕ ಸ್ಥಿತಿಯನ್ನು ಹೇಗೋ ಈಜಿ ಜಯಸಿದ ಬ್ರಿಟನ್ ದೇಶಕ್ಕೆ ಈಗ ರಷ್ಯಾ ಉಕ್ರೇನ್ ಯುದ್ಧ ಮಾರಕ ಪೆಟ್ಟು ನೀಡಿದೆ.
ರಷ್ಯಾ ಮತ್ತು ಉಕ್ರೇನ್‌ನಿಂದ ಬ್ರಿಟನ್ ಸೇರಿ ಅನೇಕ ಐರೋಪ್ಯ ದೇಶಗಳು ಬಹಳಷ್ಟು ಪ್ರಮಾಣದಲ್ಲಿ ಅಮದು ಮಾಡಿಕೊಳ್ಳುತ್ತಿದ್ದವು. ಈಗ ಯುದ್ಧದಿಂದಾಗಿ ಬಹುತೇಕ ಆಮದು ಸ್ಥಗಿತಗೊಂಡಿದೆ. ರಷ್ಯಾದ ಇಂಧನದ ಮೇಲೆ ಅವಲಂಬಿತವಾಗಿರುವ ಬ್ರಿಟನ್‌ಗೆ ಈಗ ಅದರ ಪರಿಣಾಮವು ಅನೇಕ ಕ್ಷೇತ್ರಗಳ ಮೇಲಾಗಿದೆ.
ರಷ್ಯಾದಿಂದ ಇಂಧನದ ಜೊತೆಗೆ ವೈಟ್ ಫಿಶ್ ಪೂರೈಕೆಯೂ ನಿಂತು ಹೋಗಿದೆ. ಬಿಳಿ ಮೀನಿನ ಫ್ರೈ ಬ್ರಿಟನ್ನಿಗರ ಫೇವರಿಟ್ ಆಹಾರ. ಈಗ ಅದನ್ನು ಮಾರುವವರ ಕಥೆ ಹೇಳತೀರದು. ಇನ್ನು, ಉಕ್ರೇನ್‌ನಿಂದ ಸರಬರಾಜಾಗುತ್ತಿದ್ದ ಎಣ್ಣೆ ಕೂಡ ನಿಂತಿದೆ. ಇದೂ ಕೂಡ ಬ್ರಿಟನ್‌ನಲ್ಲಿ ಹೋಟೆಲ್ ಉದ್ಯಮಕ್ಕೆ ಹೊಡೆತ ಕೊಟ್ಟಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications