ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಮೇಲೆ ಸಿಬಿಐ ತನಿಖೆ ಯಾಕೆ? ಏನಿದು ಪ್ರಕರಣ?
ನವದೆಹಲಿ, ಆಗಸ್ಟ್ 19: ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನೆ ಮೇಲೆ ಸಿಬಿಐ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಕಳೆದ ತಿಂಗಳು ಆಮ್ ಆದ್ಮಿ ಸರಕಾರ ರದ್ದು ಮಾಡಿದ ಮದ್ಯ ನೀತಿ ವಿರುದ್ಧ ಅವ್ಯವಹಾರದ ಆರೋಪ ಬಂದ ಹಿನ್ನೆಲೆಯಲ್ಲಿ ಸಿಬಿಐ ರೇಡ್ ಮಾಡಿದೆ.
ಏಳು ರಾಜ್ಯಗಳ 20 ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದ್ದಾರೆ. ಮನೀಶ್ ಸಿಸೋಡಿಯ ಮನೆ ಅಲ್ಲದೇ ದಾಮನ್ ಮತ್ತು ದಿಯುನಲ್ಲಿರುವ ದೆಹಲಿಯ ಮಾಜಿ ಅಬಕಾರಿ ಆಯುಕ್ತ ಎ ಗೋಪಿಕೃಷ್ಣ ಅವರ ಮನೆ ಮೇಲೂ ಅಧಿಕಾರಿಗಳು ದಾಳಿ ಮಾಡಿದ್ದಾರೆ.
"ಸಿಬಿಐ ನನ್ನ ಮನೆ ಬಳಿ ಬಂದಿದೆ. ನನ್ನ ವಿರುದ್ಧ ಅವರಿಗೆ ಏನೂ ಸಿಗುವುದಿಲ್ಲ. ಆದರೆ, ತನಿಖೆಗೆ ನನ್ನ ಸಹಕಾರವಂತೂ ಇರುತ್ತದೆ," ಎಂದು ಮನೀಶ್ ಸಿಸೋಡಿಯಾ ಶುಕ್ರವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈ ಹಿಂದೆಯೇ ಮನೀಶ್ ಸಿಸೋಡಿಯಾ ಮೇಲೆ ಕೇಂದ್ರ ಸರಕಾರ ಟಾರ್ಗೆಟ್ ಮಾಡುತ್ತದೆ ಎಂದು ಹೇಳಿದ್ದರು. ಶುಕ್ರವಾರ ನಡೆದ ರೇಡ್ ಬಗ್ಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, "ಹಿಂದೆಯೂ ಹಲವು ಬಾರಿ ರೇಡ್‌ಗಳಾಗಿವೆ. ಏನೂ ಸಿಕ್ಕಿಲ್ಲ. ಈಗಲೂ ಏನೂ ಸಿಕ್ಕಲ್ಲ" ಎಂದು ಹೇಳಿದ್ದಾರೆ.

ಏನಿದು ಪ್ರಕರಣ?
ಮನೀಶ್ ಸಿಸೋಡಿಯಾ ಮನೆ ಸೇರಿ ಇಂದು 21 ಸ್ಥಳಗಳ ಮೇಲೆ ಸಿಬಿಐ ರೇಡ್ ಮಾಡಿರುವುದು ದೆಹಲಿಯ ಅಬಕಾರಿ ನೀತಿ ಪ್ರಕರಣದ ಸಂಬಂಧ. ದೆಹಲಿಯಲ್ಲಿದ್ದ ಹಿಂದಿನ ಅಬಕಾರಿ ನೀತಿಯನ್ನು ರದ್ದು ಮಾಡಿ ದೆಹಲಿ ಸರಕಾರ ಕಳೆದ ವರ್ಷ ಹೊಸ ಅಬಕಾರಿ ನೀತಿಯನ್ನು ತಂದಿತ್ತು. ಇದರಲ್ಲಿ ಅವ್ಯವಹಾರ ನಡೆದಿದೆ ಎಂಬುದು ಸದ್ಯ ಕೇಳಿಬಂದಿರುವ ಪ್ರಮುಖ ಆರೋಪ.
ಮದ್ಯ ಮಾರಾಟ ಪರವಾನಿಗೆಗಳನ್ನು ಅಕ್ರಮವಾಗಿ ನೀಡಲಾಗಿದೆ. ಪರವಾನಿಗೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ನೀತಿ ರೂಪಿಸಲಾಗಿದೆ ಎಂಬ ಆರೋಪಗಳಿವೆ.
ಜುಲೈನಲ್ಲಿ ದೆಹಲಿಯ ಮುಖ್ಯ ಕಾರ್ಯದರ್ಶಿ ನೀಡಿದ ವರದಿ ಆಧಾರದ ಮೇಲೆ ಸಿಬಿಐ ತನಿಖೆ ನಡೆಯುತ್ತಿದೆ.

ಸಿಸೋಡಿಯಾ ಮೇಲಿನ ಆರೋಪವೇನು?
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಗಮನಕ್ಕೆ ಬಾರದೆಯೇ ಅಬಕಾರಿ ನೀತಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಪರವಾನಿಗೆ ಶುಲ್ಕದ ಮೇಲೆ 144.36 ಕೋಟಿ ರೂ ಮನ್ನಾ ಮಾಡುವ ನಿರ್ಧಾರವನ್ನೂ ಲೆಫ್ಟಿನೆಂಟ್ ಗವರ್ನರ್ ಗಮನಕ್ಕೆ ತಾರದೆಯೇ ಮಾಡಲಾಗಿದೆ ಎಂಬ ಆರೋಪ ಇದೆ.
ವಿದೇಶೀ ಮದ್ಯದ ದರಗಳನ್ನು ಪರಿಷ್ಕರಿಸುವ ಮೂಲಕ ಮತ್ತು ಬಿಯರ್ ಮೇಲಿನ ಆಮದು ಸುಂಕವನ್ನು ತೆಗೆದುಹಾಕುವ ಮೂಲಕ ಲಿಕರ್ ಲೈಸೆನ್ಸ್‌ದಾರರಿಗೆ ಉದ್ದೇಶಪೂರ್ವಕವಾಗಿ ಅನುಕೂಲ ಆಗುವಂತೆ ಮನೀಶ್ ಸಿಸೋಡಿಯಾ ನೋಡಿಕೊಂಡರು. ವಿದೇಶೀ ಮದ್ಯ ಸರಕು ಕಡಿಮೆಗೆ ಲಭ್ಯವಾಗುವ ಹಿನ್ನೆಲೆಯಲ್ಲಿ ಸ್ಥಳೀಯ ಸರಕಾರದ ಬೊಕ್ಕಸಕ್ಕೆ ಆದಾಯ ಕಡಿಮೆ ಆಗುತ್ತದೆ ಎಂಬ ವಾದ ಇದೆ.

ಅಕ್ರಮ ಹೇಗೆ?
ಮದ್ಯ ಮಾರಾಟಕ್ಕೆ ಲೈಸೆನ್ಸ್ ನೀಡಿಕೆಯಲ್ಲಿ ನಡೆದ ಅವ್ಯವಹಾರ ಒಂದೆಡೆಯಾದರೆ, ಸರಕಾರದ ಅಬಕಾರಿ ನೀತಿಯಲ್ಲಿ ಮಾಡಲಾದ ಬದಲಾವಣೆಯನ್ನು ಲೆಫ್ಟಿನೆಂಟ್ ಗವರ್ನರ್ ಗಮನಕ್ಕೆ ತಾರದೇ ಇದ್ದದ್ದೂ ಅಕ್ರಮ ಎನಿಸಿದೆ.
ನಿಯಮಗಳ ಪ್ರಕಾರ ಈಗಾಗಲೇ ಜಾರಿಯಲ್ಲಿರುವ ಒಂದು ನೀತಿಯಲ್ಲಿ ಏನೇ ಬದಲಾವಣೆ ಮಾಡಬೇಕಿದ್ದರೂ ಅದನ್ನು ಸಂಪುಟದ ಮುಂದಿಡಬೇಕು. ಅನುಮೋದನೆಗೆ ಲೆಫ್ಟಿನೆಂಟ್ ಗವರ್ನರ್‌ಗೆ ಕಳುಹಿಸಬೇಕು. ಎಲ್‌ಜಿ ಮತ್ತು ಕ್ಯಾಬಿನೆಟ್ ಅನುಮೋದನೆ ಇಲ್ಲದೆ ಮಾಡಲಾದ ಬದಲಾವಣೆಗಳು ಸಿಂಧು ಎನಿಸುವುದಿಲ್ಲ. ಇದು 2010ರ ದೆಹಲಿ ಅಬಕಾರಿ ನಿಯಮ ಹಾಗೂ 1993ರ ವ್ಯವಹಾರ ವಹಿವಾಟು ನಿಯಮಗಳಲ್ಲಿ ಸ್ಪಷ್ಟವಾಗಿ ನಮೂದಿತವಾಗಿದೆ.

ಕಳೆದ ತಿಂಗಳು ಅಬಕಾರಿ ನೀತಿ ರದ್ದು
ದೆಹಲಿ ಸರಕಾರದ ಹೊಸ ಅಬಕಾರಿ ನೀತಿಯನ್ನು ಸದ್ಯ ರದ್ದು ಮಾಡಲಾಗಿದೆ. ಜುಲೈ 30ರಂದು ಡಿಸಿಎಂ ಮನೀಶ್ ಸಿಸೋಡಿಯಾ ಅಬಕಾರಿ ನೀತಿ ರದ್ದು ಮಾಡಿರುವುದನ್ನು ಪ್ರಕಟಿಸಿದರು. ಆಗಸ್ಟ್ 1ರಿಂದ ಮತ್ತೆ ಹಳೆಯ ನೀತಿಯನ್ನೇ ಜಾರಿಗೆ ತರಲಾಗಿದೆ.
ಈಗ ದೆಹಲಿ ಸರಕಾರ ತನ್ನ ಹೊಸ ಅಬಕಾರಿ ನೀತಿಯನ್ನು ಪರಿಷ್ಕರಿಸುತ್ತಿದೆ. ಇದು ಸಿದ್ಧಗೊಂಡ ಬಳಿಕ ಮತ್ತೆ ಹೊಸ ನೀತಿ ಜಾರಿಗೆ ಬರಲಿದೆ. ಈ ಹೊಸ ನೀತಿಯಲ್ಲಿ ಮದ್ಯದಂಗಡಿಗಳು ಬೆಳಗ್ಗೆ 3ಗಂಟೆಯವರೆಗೆ ಬಾಗಿಲು ತೆರೆಯಲು ಅವಕಾಶ ಇರಲಿದೆ. ಪರವಾನಿಗೆದಾರರು ಎಷ್ಟು ಬೇಕಾದರೂ ರಿಯಾಯಿತಿ ನೀಡಬಹುದು. ಮದ್ಯದ ಸರಕುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಬಹುದು. ಇವೇ ಮುಂತಾದ ಹಲವು ಸೌಲಭ್ಯಗಳಿಗೆ ಅವಕಾಶ ಸಿಗುತ್ತದೆ.
ಇನ್ನು, ದೆಹಲಿಯ ಹಳೆಯ ಮದ್ಯ ನೀತಿಯಲ್ಲಿ ಸರಕಾರಿ ಸ್ವಾಮ್ಯದ ಮಳಿಗೆಗಳು ಮಾತ್ರವೇ ಮದ್ಯ ಮಾರಾಟ ಮಾಡಲು ಅವಕಾಶ ಇದೆ. ಇದೂ ಸೇರಿ ಮದ್ಯ ಮಾರಾಟಕ್ಕೆ ಇನ್ನೂ ಹತ್ತು ಹಲವು ನಿರ್ಬಂಧಗಳು ಇವೆ.
(ಒನ್ಇಂಡಿಯಾ ಸುದ್ದಿ)
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications