ಹಾವು ಕಡಿತ, ಗಾಬರಿ ಬೇಡ: ಪ್ರಾಥಮಿಕ ಚಿಕಿತ್ಸೆ ಹೇಗೆ?
ಹಲವು ಸಂಶೋಧನೆಗಳು ನಡೆದರೂ, ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಹೊಸ ಹೊಸ ಔಷಧಿಗಳು ಬಂದರೂ ಸಹ ಇಂದಿಗೂ ಹಾವು ಕಡಿತದಿಂದ ಜನರು ಸಾವನ್ನಪ್ಪುತ್ತಿದ್ದಾರೆ. ಸರಿಯಾದ ಮಾಹಿತಿ ಹೊಂದದೇ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಹಾವು ಕಡಿತದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯು ಅತ್ಯಗತ್ಯವಾಗಿದೆ. ಈ ಕುರಿತಂತೆ ಮಾಹಿತಿಗಳನ್ನು ಹಂಚಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಹಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ಗಾಬರಿಗೊಳಿಸದೆ, ಅವರೊಂದಿಗೆ ಶಾಂತವಾಗಿ ವರ್ತಿಸಿ, ಹತ್ತಿರದ ಆಸ್ಪತ್ರೆಗೆ ತಕ್ಷಣವೇ ಕರೆದುಕೊಂಡು ಬಂದು ಚುಚ್ಚುಮದ್ದು ಕೊಡಿಸುವ ಮೂಲಕ ಜೀವ ಹಾನಿಯಾಗದಂತೆ ತಡೆಯಲು ಎಲ್ಲರೂ ಕೈ ಜೋಡಿಸಬೇಕು ಎಂದು ಬಳ್ಳಾರಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ. ವಿ. ಕೆ. ಜನರಿಗೆ ಮನವಿ ಮಾಡಿದ್ದಾರೆ.

ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಗ್ರಾಮ ಪಂಚಾಯತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿಡಿಗಿನಮೊಳ ಇವರು ಜಂಟಿಯಾಗಿ 'ಹಾವು ಕಡಿತ ಕುರಿತು ಜಾಗೃತಿ' ಕಾರ್ಯಕ್ರಮ ಕೈಗೊಂಡಿದ್ದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಾ. ಮರಿಯಂಬಿ. ವಿ. ಕೆ. ಹಾವು ಕಚ್ಚಿದಾಗ ಗಾಬರಿಯಾಗುವುದು ಸಾಮಾನ್ಯವಾಗಿದ್ದು, ಇದರಿಂದ ವ್ಯಕ್ತಿಯ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ವಿಷಕಾರಿ ಹಾವು ಕಡಿತದ ಸಂದರ್ಭದಲ್ಲಿ ವ್ಯಕ್ತಿಯನ್ನು ಯಾವುದೇ ವಾಹನ ಅಥವಾ 108 ಅಂಬುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ವೈದ್ಯಾಧಿಕಾರಿ ಡಾ. ಸಂತೋಷ್ ಹೆಬ್ಬಾಳ್ ಮಾತನಾಡಿ, "ಹಾವು ಕಚ್ಚಿದಾಗ ಕಚ್ಚಿದ ಜಾಗದ ಪಕ್ಕದಲ್ಲಿ ಬಟ್ಟೆಯನ್ನು ಕಟ್ಟುವುದು, ಬ್ಲೇಡ್ ಅಥವಾ ಚಾಕುವಿನಿಂದ ಗಾಯ ಮಾಡುವುದು, ಗಾಯವನ್ನು ಸುಡುವುದು, ನಾಟಿ ಔಷಧಿಗಳನ್ನು ನೀಡುವುದು ಮುಂತಾದವುಗಳನ್ನು ಮಾಡಬೇಡಿ" ಎಂದು ಕರೆ ನೀಡಿದರು.
ತೆಗೆದುಕೊಳ್ಳಬೇಕಾದ ಕ್ರಮಗಳು; ಹಾವು ಕಚ್ಚಿದಾಗ ರೋಗಿಯನ್ನು ಕೂರಿಸಿ ಹಾವು ಕಚ್ಚಿರುವ ಭಾಗ ಹೃದಯದ ಕೆಳಗೆ ಬರುವ ಹಾಗೆ ಇರಲಿ ರಕ್ತಪರಿಚಲನೆಗೆ ತಡೆಯಾಗುವಂತಹ ಕೈ ಗಡಿಯಾರ, ಬಳೆ, ಉಂಗುರ ಮುಂತಾದವುಗಳನ್ನು ತೆಗೆದು, ಕಚ್ಚಿದ ಭಾಗವು ಅಲುಗಾಡದಂತೆ ನೋಡಿಕೊಳ್ಳಬೇಕು.
ಮುಖ್ಯವಾಗಿ ಆಸ್ಪತ್ರೆಗೆ ಹೋಗುವಾಗ ವ್ಯಕ್ತಿಯ ರೋಗ ಲಕ್ಷಣಗಳಾದ ತೇಲುಗಣ್ಣು, ಕಣ್ಣು ಮುಚ್ಚುವುದು, ನಾಲಿಗೆ ತೊದಲುವಿಕೆ, ನುಂಗಲು ಕಷ್ಟವಾಗುವುದು, ಉಸಿರಾಟ ತೊಂದರೆ ಮುಂತಾದವುಗಳನ್ನು ಗಮನಿಸಬೇಕು.
ಹಾಗೆಯೇ ಗಾಯದ ಜಾಗದಲ್ಲಿ ತೀವ್ರ ಉರಿ, ನೋವು ಹರಡುವಿಕೆ ಅಥವಾ ಊದುವಿಕೆ ಗಾಯದ ಸುತ್ತ ಬಣ್ಣಹೀನವಾಗುವುದು, ಕೆಳಬೆನ್ನಿನಲ್ಲಿ ನೋವು ಮುಂತಾದ ಲಕ್ಷಣಗಳು ಅಂಗಾಂಗಕ್ಕೆ ಹಾನಿ ಮಾಡುವ ವಿಷದ ಅಂಶವಾಗಿರುತ್ತದೆ.
ಈ ಲಕ್ಷಣಗಳನ್ನು ರೋಗಿಯಲ್ಲಿ ಕಂಡುಬಂದರೆ ಜೊತೆಗಿರುವ ವ್ಯಕ್ತಿಯು ವೈದ್ಯರಿಗೆ ತಿಳಿಸುವ ಮೂಲಕ ವ್ಯಕ್ತಿಯ ಜೀವ ಕಾಪಾಡಲು ಸಾಧ್ಯವಾಗುವ ಚಿಕಿತ್ಸೆ ಒದಗಿಸಲು ಸಹಾಯಕವಾಗುತ್ತದೆ.
ಜನರಲ್ಲಿ ಜಾಗೃತಿ ಮೂಡಿಸಿ: ಗ್ರಾಮೀಣ ಪ್ರದೇಶದಲ್ಲಿ ಹಾವು ಕಡಿತಕ್ಕೆ ನಾಟಿ ವೈದ್ಯರು ಗಿಡಮೂಲಿಕೆಗಳ ಔಷಧಿ ನೀಡುತ್ತಾರೆ. ಇದು ವೈಜ್ಞಾನಿಕ ಪದ್ಧತಿ ಅಲ್ಲ. ನಾಟಿ ವೈದ್ಯರಿಗೆ ವೈದ್ಯಕೀಯ ಹಿನ್ನೆಲೆ, ಓದು, ಅನುಭವ ಇರುವುದಿಲ್ಲ. ಅವರಿಗೆ ಚಿಕಿತ್ಸೆ ಬಗ್ಗೆ ಸರಿಯಾದ ತಿಳುವಳಿಕೆ ನೀಡಬೇಕು. ಅವರ ಬಳಿ ಚಿಕಿತ್ಸೆಗೆ ಬರುವ ಸಾರ್ವಜನಿಕರನ್ನು ಆಸ್ಪತ್ರೆಗೆ ಕಳುಹಿಸಲು ಸೂಚಿಸಬೇಕು. ಈ ಕುರಿತು ಜಾಗೃತಿ ಮೂಡಿಸಬೇಕಿದೆ.
ಹಾವು ಕಡಿದ ವ್ಯಕ್ತಿಗೆ ಗಿಡಮೂಲಿಕೆ ಔಷಧಿ ಹೆಸರಿನಲ್ಲಿ ಸಮಯ ವ್ಯರ್ಥ ಮಾಡಿದರೆ, ಸಂಬಂಧಿಸಿದವರ ಮೇಲೆ ಅಗತ್ಯವಿದ್ದಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಜಿಲ್ಲಾಡಳಿತಗಳು ಎಚ್ಚರಿಕೆಯನ್ನು ನೀಡುತ್ತಿವೆ.












Click it and Unblock the Notifications