ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾದರ್ ಸ್ಟ್ಯಾನ್ ಸ್ವಾಮಿ ಸಾವಿನ ತನಿಖೆಗೆ ಪಿಯುಸಿಎಲ್ ಕರ್ನಾಟಕ ಒತ್ತಾಯ

|
Google Oneindia Kannada News

ಸ್ಟ್ಯಾನ್ ಸ್ವಾಮಿ ಒಬ್ಬ ಸಂತ. ಅಸಮಾನತೆ ಸಹಿಸದೆ ಪ್ರಭುತ್ವದ ಜೊತೆ ರಾಜಿ ಮಾಡಿಕೊಳ್ಳದೆ, ನಿಷ್ಠುರತೆಯಿಂದ ಆದಿವಾಸಿಗಳ ಸಾಮಾಜಿಕ ನ್ಯಾಯಕ್ಕಾಗಿ ಕಾನೂನು ಚೌಕಟ್ಟಿನಲ್ಲಿ ಹೋರಾಟ ನಡೆಸಿದವರು. ಆದಿವಾಸಿಗಳ ಬದುಕಿನ ಮೇಲೆ ದಾಳಿ ನಡೆಸುತ್ತಿರುವ ಪ್ರಭುತ್ವದ ಮತ್ತು ಬಂಡವಾಳಶಾಹಿಗಳ ಹುನ್ನಾರಗಳ ಕುರಿತು ಜಾಗೃತಿ ಮೂಡಿಸಿ, ಚಳವಳಿ ರೂಪ ಕೊಟ್ಟವರು. ಆದಿವಾಸಿಗಳನ್ನು ಸಂಘಟಿಸಿ ಸಾಮೂಹಿಕ ಪ್ರತಿಭಟನೆಗೆ ಸಜ್ಜು ಮಾಡಿದವರು. ಜೊತೆಗಿದ್ದು ನಾಯಕತ್ವ ಬೆಳೆಸಿದವರು.

ಸುಪ್ರೀಂ ಕೋರ್ಟ್ ಆದೇಶವನ್ನು ಅನುಷ್ಠಾನಕ್ಕೆ ತರಲು ಪತ್ತರ್‍ಗಡಿ ಚಳವಳಿಗೆ ಆದಿವಾಸಿಗಳನ್ನು ಪ್ರೇರೇಪಿಸಿದರು. ಚಳವಳಿ ವ್ಯಾಪಕವಾಗಿ ಹರಡಿತು, ಪೊಲೀಸ್ ಮತ್ತು ಪ್ರಭುತ್ವಕ್ಕೆ ನಡುಕ ಶುರುವಾಯಿತು. ಸಾವಿರಾರು ಆದಿವಾಸಿ ಯುವ ನಾಯಕರನ್ನು ಬಂಧಿಸಿದರು. ಆದರೂ ಛಲಬಿಡದೆ ಚಳವಳಿಗೆ ಸ್ಫೂರ್ತಿ ತುಂಬಿ ಶಕ್ತಿ ನೀಡುತ್ತಿದ್ದ ಪಾದ್ರಿ ಸ್ಟ್ಯಾನ್ ಸ್ವಾಮಿ ಸರಕಾರದ ಪಾಲಿಗೆ ನುಂಗಲಾರದ ತುತ್ತಾದರು. ಬಂಧಿತ ಆದಿವಾಸಿ ಯುವಕರನ್ನು ಬಿಡಿಸಿಕೊಳ್ಳಲು ಕಾನೂನು ಸಮರಕ್ಕೆ ಸಜ್ಜಾದರು. ಕೆಲವು ವಕೀಲರು, ಮಾನವ ಹಕ್ಕು ಕಾರ್ಯಕರ್ತರು ಹಾಗೂ ನಾಗರೀಕ ಸಂಸ್ಥೆಗಳ ಸಹಕಾರದಿಂದ ಪ್ರಾಸಿಕ್ಯೂಟೆಡ್ ಪ್ರಿಸನರ್ಸ್ ಸಾಲಿಡಾರಿಟಿ ಸಮಿತಿ ರಚಿಸಿ ಅವರ ನೆರವಿನಿಂದ ಜಾಮೀನಿನ ಮೇಲೆ ಸಾವಿರಕ್ಕೂ ಹೆಚ್ಚು ಆದಿವಾಸಿ ಯುವಜನರನ್ನು ಜೈಲಿಂದ ಬಿಡಿಸಿ ತಂದರು. ಫಾದರ್ ಸ್ಟ್ಯಾನ್ ಸ್ವಾಮಿ ಚಳವಳಿಯ ಹಿಂದಿನ ಶಕ್ತಿ ಎಂದು ಮನಗಂಡ ಪೊಲೀಸ್ ಮತ್ತು ಆಳುವ ಸರಕಾರ ಸಂಚು ರೂಪಿಸಿ ಅವರನ್ನು ಚಳವಳಿಯಿಂದ ಪ್ರತ್ಯೇಕಿಸಲು ಭಯೋತ್ಪಾದಕ / ನಕ್ಸಲೇಟ್ ಎಂಬ ಪಟ್ಟಕಟ್ಟಿ, ಸುಳ್ಳು ಕೇಸು ದಾಖಲಿಸಿ ಭೀಮ ಕೊರೆಗಾಂವ್ ಪ್ರಕರಣಕ್ಕೆ ಲಿಂಕ್ ಮಾಡಿ ಕಾನೂನುಬಾಹಿರವಾಗಿ 2020ರ ಆಗಷ್ಟ 8 ರಂದು ಬಂಧಿಸಿ ಅವರನ್ನು ಮುಂಬೈ ತಳೋಜ ಜೈಲಿಗಟ್ಟಲಾಯಿತು. ಮುಂದೆ ಓದಿ...

 ಜೈಲಿನಲ್ಲಿ ಕಿರುಕುಳ

ಜೈಲಿನಲ್ಲಿ ಕಿರುಕುಳ

84ರ ಪಾದ್ರಿಗೆ ಜೈಲಿನಲ್ಲಿ ಇನ್ನಿಲ್ಲದ ಕಿರುಕುಳ ನೀಡಲಾಯಿತು. ಕನಿಷ್ಠ ಆಹಾರ ನೀಡದೆ ಪಾರ್ಕಿನ್ಸನ್ ಕಾಯಿಲೆಯಿಂದ ನರಳುತ್ತಿದ್ದ ಅವರು ತಾವೇ ನೀರೂ ಕುಡಿಯಲಾಗದ ಕಾರಣ ನೀರು ಕುಡಿಯಲು ಸಿಪ್ಪರ್ ಪೈಪ್ ನೀಡಲು ಜೈಲು ಸಿಬ್ಬಂದಿ ನಿರಾಕರಿಸಿತು. ಸುಮಾರು ಹಲವಾರು ದಿನಗಳ ನಂತರ ಕೋರ್ಟ್ ಆದೇಶದ ಮೇರೆಗೆ ಸಿಪ್ಪರ್ ಪೈಪ್ ಕೊಡಲಾಯಿತು. ಕನಿಷ್ಠ ಔಷಧೋಪಚಾರದಿಂದ ವಂಚಿತರಾದರು, ತೀವ್ರ ಅನಾರೋಗ್ಯಕ್ಕೆ ತುತ್ತಾದರು. ಹೀಗೆ ಅವರನ್ನು ಅತ್ಯಂತ ಅಮಾನವೀಯಾವಾಗಿ ನಡೆಸಿಕೊಳ್ಳಲಾಯಿತು.

ಸ್ಟಾನ್‌ರ 'ಸಾಂಸ್ಥಿಕ ಹತ್ಯೆ': ಜೈಲಿನಲ್ಲಿ ಉಪವಾಸ ಕುಳಿತ ಎಲ್ಗಾರ್ ಪರಿಷತ್ ಪ್ರಕರಣದ ಆರೋಪಿಗಳುಸ್ಟಾನ್‌ರ 'ಸಾಂಸ್ಥಿಕ ಹತ್ಯೆ': ಜೈಲಿನಲ್ಲಿ ಉಪವಾಸ ಕುಳಿತ ಎಲ್ಗಾರ್ ಪರಿಷತ್ ಪ್ರಕರಣದ ಆರೋಪಿಗಳು

ಜೈಲಿನ ವಾತಾವರಣ ಮತ್ತು ಅಗತ್ಯ ಔಷಧ, ಪೌಷ್ಟಿಕ ಆಹಾರದ ಕೊರತೆಯಿಂದ ಸ್ವಾಮಿಯವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರತೊಡಗಿತು. ಅಲ್ಲಿನ ಆಯುರ್ವೇದ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ಅವರನ್ನು ಪದೇಪದೇ ಬೇರೆ ಸರಕಾರಿ ಆಸ್ಪತ್ರೆಗೆ ಸೇರಿಸತೊಡಗಿದರು. ಅಲ್ಲಿಯೂ ಸರಿಯಾದ ಆರೈಕೆ ಮತ್ತು ಚಿಕಿತ್ಸೆ ನೀಡದೆ ಹಿಂಸಿಸಲಾಯಿತು. ನಿಶ್ಶಕ್ತರಾದರು. ಕೊರೊನಾ ಸೋಂಕಿಗೂ ತುತ್ತಾದರು. ಚಿಕಿತ್ಸೆಯಿಂದ ಪೂರ್ಣ ಗುಣಮುಖರಾದರೆಂದು ಪುನಃ ಜೈಲಿಗೆ ಕರೆತರಲಾಯಿತು.

"ಜಾಮೀನು ಕೊಡಿ ಇಲ್ಲವೆ ನಾನು ಜೈಲಿನಲ್ಲೇ ಸಾಯಲು ಬಿಡಿ"

ಕೆಲ ದಿನಗಳ ನಂತರ ಮತ್ತೆ ಆರೋಗ್ಯ ಬಿಗಡಾಯಿಸಿತು. ಪುನಃ ಆಸ್ಪತ್ರೆಗೆ ಸೇರಿಸಲು ಜೈಲು ಸಿಬ್ಬಂದಿ ಮುಂದಾದರು. ಈ ಬಾರಿ ಸರಕಾರಿ ಆಸ್ಪತ್ರೆಗೆ ಹೋಗಲು ಖಡಾಖಂಡಿತವಾಗಿ ಫಾದರ್ ನಿರಾಕರಿಸಿ, ಸತ್ತರೆ ನಾನು ಜೈಲಿನಲ್ಲೇ ಸಾಯುವೆ. ಇಲ್ಲವಾದರೆ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಎಂದು ಪಟ್ಟು ಹಿಡಿದರು. ಜಾಮೀನಿಗಾಗಿ ಜಿಲ್ಲಾ ಮತ್ತು ಮುಂಬೈ ಉಚ್ಚನ್ಯಾಯಾಲಯಗಳಲ್ಲಿ ಇವರ ಅರ್ಜಿ ಪದೇಪದೇ ತಿರಸ್ಕೃತಗೊಂಡವು. ಆರೋಗ್ಯ ಗಂಭೀರ ಪರಿಸ್ಥಿತಿ ತಲುಪಿದಾಗ ಪುನಃ ಮುಂಬೈ ಉಚ್ಚನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಹಾಕಲಾಯಿತು. ಜಾಮೀನು ನೀಡದ ನ್ಯಾಯಾಲಯ ಪುನಃ ಸರಕಾರಿ ಆಸ್ಪತ್ರೆಗೆ ಸೇರಿಸಲು ಆದೇಶ ನೀಡಿತು. ಜಾಮೀನು ಕೊಡಿ ಇಲ್ಲವೆ ನಾನು ಜೈಲಿನಲ್ಲೇ ಸಾಯಲು ಬಿಡಿ ಎಂದು ಪಟ್ಟು ಹಿಡಿದರು. ನ್ಯಾಯಾಲಯದ ಈ ತೀರ್ಪು ಒಂದು ರೀತಿ ವಿಚಾರಣೆ ಮಾಡದೆ ಮರಣದಂಡನೆ ವಿಧಿಸಿದಂತೆ ಎನ್ನಬಹುದು. ಇಲ್ಲಿಯೂ ಅವರು ತಮ್ಮ ನಾಗರೀಕ ಹಕ್ಕು ಪ್ರತಿಪಾದನೆ ಮಾಡಿದರು. ಅಂತಿಮವಾಗಿ ಫಾದರ್ ಪರ ವಕೀಲ ಮಿಹಿರ್ ದೇಸಾಯಿ ಅವರ ಮನವೊಲಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಒಪ್ಪಿಸಿದರು. ಅದಾಗಲೇ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಬಹು ಅಂಗಾಂಗಗಳ ವೈಫಲ್ಯ ಎದುರಾಗಿ ಚಿಕಿತ್ಸೆ ಫಲಕಾರಿಯಾಗದೆ 2021ರ ಜುಲೈ 5 ರಂದು ಕೊನೆಯುಸಿರೆಳೆದರು.

 ಇದು ಸಹಜ ಸಾವಲ್ಲ

ಇದು ಸಹಜ ಸಾವಲ್ಲ

ಪೂರ್ವಾಗ್ರಹ ಪೀಡಿತ ಪೊಲೀಸರು ಮತ್ತು ಎನ್‍ಐಎ ಅಧಿಕಾರಿಗಳು ಕರಾಳ ಕಾನೂನು ಯುಎಪಿಎ ಕಾಯ್ದೆಯಡಿ ಭಯೋತ್ಪಾದಕ ಎಂದು ಇವರನ್ನು ಬಂಧಿಸಿದ್ದರು. ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾದ ನ್ಯಾಯಾಲಯ ನಿರ್ಲಕ್ಷ್ಯದಿಂದ ತಪ್ಪು ಆದೇಶ ನೀಡಿ ಸ್ಟ್ಯಾನ್ ಸ್ವಾಮಿ ಅವರನ್ನು ಜೈಲಿಗಟ್ಟಿ ಅವರ ಸಾವಿಗೆ ಕಾರಣರಾಗಿದ್ದಾರೆ. ಜೈಲಿನಲ್ಲಿದ್ದಷ್ಟೂ ದಿನ ಅಧಿಕಾರಿಗಳು ಸೂಕ್ತ ಆಹಾರ, ಆರೈಕೆ ಮತ್ತು ಚಿಕಿತ್ಸೆ ನೀಡದೆ ಅವರಿಗೆ ಕಿರುಕುಳ ನೀಡಿ ಕ್ರೌರ್ಯ ಮೆರೆದಿದ್ದಾರೆ. ಜೈಲಿನಲ್ಲಿ ಕೈದಿಗಳ ಮಾನವ ಹಕ್ಕುಗಳ ನಿಗಾವಹಿಸಬೇಕಾದ ಮಾನವ ಹಕ್ಕುಗಳ ಆಯೋಗಗಳು ತಮ್ಮ ಕರ್ತವ್ಯದಿಂದ ವಿಮುಖವಾಗಿವೆ. ಆದ್ದರಿಂದ ಸ್ವಾಮಿಯವರ ಸಾವು ಸಾವಲ್ಲ ಅದೊಂದು ‘ಸಾಂಸ್ಥಿಕ ವ್ಯವಸ್ಥಿತ ಕೊಲೆ' ಎಂದು ಪರಿಗಣಿಸಬೇಕಿದೆ. ಜನವಿರೋಧಿ ಕರಾಳ ಯುಎಪಿಎ, ಎನೈಎ ಕಾಯ್ದೆಗಳನ್ನು ಬಳಸಿ ಚಾಲ್ತಿಯಲ್ಲಿರುವ ಇಂಡಿಯನ್ ಪೀನಲ್ ಕೋಡ್ ವಿರುದ್ಧ ಬಳಸಿ ಜನರನ್ನು ಹಿಂಸಿಸಲಾಗುತ್ತಿದೆ. ನ್ಯಾಯಾಂಗ ವ್ಯವಸ್ಥೆ ನಿಷ್ಕ್ರಿಯಗೊಳಿಸಲಾಗುತ್ತಿದೆ. ಇಂತಹ ಅಮಾನವೀಯ ಕಾನೂನು ಬಾಹಿರ ನಡೆ ಇಡೀ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯನ್ನೇ ದಾರಿ ತಪ್ಪಿಸಿದ ಕೀರ್ತಿ ಇಂದಿನ ಆಳುವ ವರ್ಗಕ್ಕೆ ಸಲ್ಲುತ್ತದೆ. ಇವೆಲ್ಲವೂ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

'ಫಾ. ಸ್ಟಾನ್ ಸ್ವಾಮಿ ನಿಧನದಿಂದ ದುಃಖಿತರಾಗಿದ್ದೇವೆ': ಅಮೆರಿಕ'ಫಾ. ಸ್ಟಾನ್ ಸ್ವಾಮಿ ನಿಧನದಿಂದ ದುಃಖಿತರಾಗಿದ್ದೇವೆ': ಅಮೆರಿಕ

ಮೇಲಿನ ಪ್ರಕರಣ ಕೇವಲ ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಸೀಮಿತವಾಗಿಲ್ಲ. ದೇಶದೆಲ್ಲೆಡೆ ಸರ್ಕಾರದ ವಿರುದ್ಧ ಭಿನ್ನಮತ ವ್ಯಕ್ತಪಡಿಸಿರುವ ಸಾವಿರಾರು ಜನರ ಸದ್ದಡಗಿಸುವ ಕೃತ್ಯ ನಡೆಯುತ್ತಿದೆ. ಕರಾಳ ಕಾನೂನುಗಳ ಬಳಕೆ ಹೆಚ್ಚು ಬಳಸಲಾಗುತ್ತಿದೆ. ಬಂಧಿತರ ನಿಖರ ಅಂಕಿಅಂಶಗಳನ್ನು ಗೌಪ್ಯವಾಗಿಡಲಾಗಿದೆ.

Recommended Video

ಪ್ರತಿಯೊಬ್ಬರಿಗೂ ಕೈಲಾದ ಸಹಾಯ ಮಾಡುತ್ತಿರುವ ಬಿಜೆಪಿ ಶಾಸಕ | Oneindia Kannada
 ಪಿಯುಸಿಎಲ್ ಕರ್ನಾಟಕದ ಆಗ್ರಹಗಳು

ಪಿಯುಸಿಎಲ್ ಕರ್ನಾಟಕದ ಆಗ್ರಹಗಳು

ಇಂತಹ ಸಂದರ್ಭದಲ್ಲಿ ಮಾನವ ಹಕ್ಕು ಹೋರಾಟದಲ್ಲಿ ತೊಡಗಿರುವ, ಸಂವಿಧಾನ ಉಳಿಸಿ ಮತ್ತು ಪ್ರಜಾಪ್ರಭುತ್ವ ರಕ್ಷಣೆಗೆ ಶ್ರಮಿಸುತ್ತಿರುವ ಪಿಯುಸಿಎಲ್ ಕರ್ನಾಟಕ ಕೆಳಗಿನ ಒತ್ತಾಯಗಳನ್ನು ಮಂಡಿಸುತ್ತಿದೆ.
1. ಫಾದರ್ ಸ್ಟ್ಯಾನ್ ಸ್ವಾಮಿ ಸಾವಿನ ಸುತ್ತ ನಡೆದ ಪೂರ್ವಾಗ್ರಹ ಪೀಡಿತ ಕಾನೂನುಬಾಹಿರ ಕ್ರಮಗಳ ಕುರಿತ ತನಿಖೆ ನಡೆಸಿ ಸತ್ಯಾಂಶಗಳನ್ನು ಬಹಿರಂಗಗೊಳಿಸುವಂತೆ ಆದೇಶಕ್ಕಾಗಿ ನ್ಯಾಯಾಲಯದ ಮೊರೆ ಹೋಗುವುದು.
2. ಕರಾಳ ಕಾನೂನುಗಳಾದ ಸೆಡೀಷನ್, ಯುಎಪಿಎ, ರಾಷ್ಟ್ರೀಯ ಭದ್ರತಾ ಕಾಯ್ದೆಗಳಡಿ ಬಂಧಿತ ವಿಚಾರಣಾಧೀನರೆಲ್ಲರನ್ನು ಜಾಮೀನಿನ ಮೇಲೆ ಕೂಡಲೇ ಬಿಡುಗಡೆ ಮಾಡಬೇಕು. ಮುಂದಾಗುವ ‘ಸಾಂಸ್ಥಿಕ ಕೊಲೆ'ಗಳನ್ನು ತಡೆಗಟ್ಟಬೇಕು. ಯಾವುದೇ ಕಾನೂನಿರಲಿ ಎಲ್ಲಾ ವಿಚಾರಣಾಧೀನ ಕೈದಿಗಳಿಗೆ ನಿಗದಿತ 90 ದಿನಗಳ ನಂತರ ಜಾಮೀನು ಪಡೆಯಲು ಅರ್ಹರು ಎಂದು ಪರಿಗಣಿಸಬೇಕು ಎಂಬುದು ನಮ್ಮ ಒತ್ತಾಯ.
3. ನ್ಯಾಯಾಂಗ ಬಂಧನದಲ್ಲಿದ್ದ ಸ್ಟ್ಯಾನ್ ಸ್ವಾಮಿ ಕಾನೂನುಬಾಹಿರವಾಗಿ ಕೊಲೆಯಾಗಿದ್ದಾರೆ. ನಿಮ್ಮ ಪ್ರತಿಕ್ರಿಯೆ ಏನು ಎಂದು ಬಹಿರಂಗವಾಗಿ ಕೆಲಸ ಪಿಯುಸಿಎಲ್ ಮತ್ತೆಲ್ಲರೂ ಮಾಡಬೇಕಿದೆ. ನ್ಯಾಯಾಂಗ ವ್ಯವಸ್ಥೆ ಪ್ರಮುಖವಾಗಿ ನ್ಯಾಯಾಧೀಶರು / ನ್ಯಾಯಮೂರ್ತಿಗಳು ತಮ್ಮ ವೃತ್ತಿ ನೈತಿಕತೆಯನ್ನು ಗಂಭಿರವಾಗಿ ಪರಿಗಣಿಸಿ ಆ ಹುದ್ದೆಗೆ ಘನತೆ ತರುವ ಕೆಲಸ ಮುಂದಾದರೂ ಆಗಲಿ ಎಂದು ಆಗ್ರಹಿಸುವ ಸಂದರ್ಭ ಇದು. ಮಾನವ ಹಕ್ಕು ಆಯೋಗಗಳು ಆತ್ಮ ವಂಚನೆ ಮಾಡಿಕೊಳ್ಳದಿರಲಿ ಎಂಬ ಆಗ್ರಹ ಕೂಡ ಮಾಡಬೇಕಿದೆ.
4. ಪೊಲೀಸರೇ ರಾಜಕಾರಣಿಗಳ ಗುಲಾಮರಾಗದಿರಿ, ಕೊಲೆಗಡುಕರಾಗದಿರಿ, ಪೊಲೀಸ್ ವ್ಯವಸ್ಥೆಯ ಘನತೆ ಕಾಪಾಡಿ, ಕಾನೂನು ರಕ್ಷಕರಾಗಿರಿ ಜನಪೀಡಕರಾಗದಿರಿ. ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ ಎಚ್ಚರಗೊಳ್ಳಿ ಎಂಬ ಗಮನ ಸೆಳೆವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
5. ಪ್ರಜಾಪ್ರಭುತ್ವದ ಪ್ರಮುಖ ಅಂಗ ಮಾಧ್ಯಮ ತಮ್ಮನ್ನು ತಾವು ಮಾರಿಕೊಳ್ಳದಿರಲಿ, ವ್ಯಕ್ತಿ ಪೂಜೆ ನಿಲ್ಲಿಸಿ, ಜನಪರ ನಿಲುವು ನಿಮ್ಮದಾಗಲಿ, ಸುಳ್ಳು ಸುದ್ದಿ ವೈಭವೀಕರಿಸದಿರಿ, ಜಾಹಿರಾತುಗಳಿಗೆ ಮಾಧ್ಯಮ ಮೌಲ್ಯಗಳನ್ನು ಮಾರದಿರಿ, ಆತ್ಮವಂಚನೆ ಮಾಡಿಕೊಳ್ಳದಿರಿ ಎಂದು ಎಚ್ಚರಿಸುವ ಪ್ರಯತ್ನ ಪಿಯುಸಿಎಲ್ ಮುಂದುವರೆಸುತ್ತದೆ.
ಅಲ್ಲದೇ, ಕಾನೂನುಬಾಹಿರ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳ ಬಗ್ಗೆ ಬಹಿರಂಗವಾಗಿ ಹೆಚ್ಚು ಸಮಾಲೋಚನೆ ನಡೆಸುವ ಕ್ರಮ ಕೈಗೊಳ್ಳಲಾಗುವುದು ಎಂದು ಪಿಯುಸಿಎಲ್-ಕರ್ನಾಟಕದ ಮುಖ್ಯಸ್ಥರಾದ ವೈ.ಜೆ.ರಾಜೇಂದ್ರ ಸುಜಾಯತ್ ಉಲ್ಲಾ ಹಾಗೂ ಕೆ.ವೆಂಕಟರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

English summary
Karnataka pucl demanded to investigate father Stan Swamy death
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X