ವರ್ಷದ ವ್ಯಕ್ತಿ; ಮುಖ್ಯಮಂತ್ರಿ ಸ್ಥಾನ ತೊರೆದ ಯಡಿಯೂರಪ್ಪ!
2021ನೇ ವರ್ಷಕ್ಕೆ ವಿದಾಯ ಹೇಳುವ ಕಾಲ ಹತ್ತಿರವಾಗುತ್ತಿದೆ. ಕೋವಿಡ್ ಭೀತಿಯ ನಡುವೆಯೂ ಕರ್ನಾಟಕದ ರಾಜಕೀಯದಲ್ಲಿ ಹಲವಾರು ಬದಲಾವಣೆಗಳು ಆಗಿವೆ. ಈ ವರ್ಷದ ಹಿನ್ನೋಟವನ್ನು ಗಮನಿಸಿದರೆ ರಾಜ್ಯದ ಮಟ್ಟಿಗೆ ಮುಖ್ಯಮಂತ್ರಿಗಳ ಬದಲಾವಣೆ ಬಹುದೊಡ್ಡ ವಿಚಾರವಾಗಿದೆ. 2023ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬದಲಾವಣೆಯಂತಹ ಪ್ರಮುಖವಾದ ತೀರ್ಮಾನವನ್ನು ಕೈಗೊಂಡಿತು.
ಕರ್ನಾಟಕದ ಬಿಜೆಪಿಯ ಪ್ರಶ್ನಾತೀತ ನಾಯಕ ಬಿ. ಎಸ್. ಯಡಿಯೂರಪ್ಪ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರು. ಶಿಕಾರಿಪುರ ಕ್ಷೇತ್ರದ ಶಾಸಕರು ಮತ್ತು ಮಾಜಿ ಮುಖ್ಯಮಂತ್ರಿಗಳು. 2021 ಯಡಿಯೂರಪ್ಪ ಪಾಲಿಗೆ ಅಷ್ಟೇನೂ ಶುಭವಲ್ಲ. ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ಹಗಲಿರುಳು ಶ್ರಮಿಸಿದರೂ ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ಇದೇ ವರ್ಷ ರಾಜೀನಾಮೆ ನೀಡಿದರು.
2019ರ ಜುಲೈ 26ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಯಡಿಯೂರಪ್ಪ 2021ರ ಜುಲೈ 26ರಂದು ಸರ್ಕಾರ ಎರಡು ಸಂಭ್ರಮದಲ್ಲಿದ್ದಾಗಲೇ ರಾಜೀನಾಮೆ ಘೋಷಣೆ ಮಾಡಿದರು. ವಿಧಾನಸೌಧದಲ್ಲಿ ಭಾಷಣ ಮುಗಿಸಿ ನೇರವಾಗಿ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು. ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿಯೇ ರಾಜೀನಾಮೆ ನೀಡುತ್ತಾರೆ ಎಂದು ಯಾರೂ ಸಹ ನಿರೀಕ್ಷೆ ಮಾಡಿರಲಿಲ್ಲ.
75 ವರ್ಷದ ದಾಟಿದವರಿಗೆ ಯಾವುದೇ ಅಧಿಕಾರ ನೀಡುವುದಿಲ್ಲ ಎಂಬ ಅಲಿಖಿತ ನಿಯಮ ಬಿಜೆಪಿಯಲ್ಲಿದೆ. ಬೇರೆ-ಬೇರೆ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದವರ ರಾಜೀನಾಮೆ ಪಡೆಯಲಾಗಿತ್ತು. ಪಕ್ಷದ ಈ ನಿಯಮ ಕರ್ನಾಟಕದಲ್ಲಿಯೂ ಜಾರಿಗೆ ಬಂದಿತು. ವರಿಷ್ಠರ ಸೂಚನೆಯಂತೆ 78 ವರ್ಷದ ಬಿ. ಎಸ್. ಯಡಿಯೂರಪ್ಪ ಜುಲೈ 26ರಂದು ರಾಜೀನಾಮೆ ನೀಡಿದರು. ಈ ಮೂಲಕ ಕರ್ನಾಟಕದಲ್ಲಿ ಹೋರಾಟದಿಂದಲೇ ಪಕ್ಷ ಕಟ್ಟಿ ದಕ್ಷಿಣ ಭಾರತದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದ ನಾಯಕ ಖುರ್ಚಿ ಬಿಟ್ಟು ಕೆಳಗಿಳಿದರು.

ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಯಡಿಯೂರಪ್ಪ, "ದೇಶದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರಿಗೆ ಕೃತಜ್ಞತೆಗಳು. 75 ವರ್ಷ ದಾಟಿದ ನನ್ನ ಮೇಲೆ ಅಭಿಮಾನ ಇಟ್ಟು ನನಗೆ ಎರಡು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವಕಾಶ ನೀಡಿದ್ದಾರೆ. ಅವರಿಗೆ ಮತ್ತೊಮ್ಮೆ ಕೃತಜ್ಞತೆಗಳು" ಎಂದು ಹೇಳಿದರು.
"ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡಲು ತೀರ್ಮಾನಿಸಿದ್ದೆ. ಆದರೆ ಎರಡು ವರ್ಷ ತುಂಬಿದ ದಿನ ರಾಜೀನಾಮೆ ನೀಡುವುದು ಒಳ್ಳೆಯದು ಎಂದು ರಾಜೀನಾಮೆ ಕೊಟ್ಟಿದ್ದೇನೆ. ನನ್ನ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. 4 ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ರಾಜ್ಯದ ಜನ ಅವಕಾಶ ನೀಡಿದ್ದಾರೆ. ಅದಕ್ಕೆ ಋಣಿ" ಎಂದರು.
"ನನ್ನ ಮೇಲೆ ದೆಹಲಿಯಿಂದ ಯಾವುದೇ ಒತ್ತಡ ಇಲ್ಲ. ಬೇರೆಯವರಿಗೆ ಅವಕಾಶ ಸಿಗಬೇಕೆಂದು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದೇನೆ. ವಿಶೇಷವಾಗಿ ಶಿಕಾರಿಪುರದ ಜನರಿಗೆ ನನ್ನ ಕೃತಜ್ಞತೆಗಳು. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು" ಎಂದು ಯಡಿಯೂರಪ್ಪ ತಿಳಿಸಿದರು.
ಪೂರ್ಣಾವಧಿ ಪೂರೈಸಲಿಲ್ಲ; ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆಯೇ ಹಲವಾರು ವಿಶ್ಲೇಷಣೆಗಳು ಆರಂಭವಾದವು. ಅದರಲ್ಲೂ ರಾಜ್ಯ ರಾಜಕೀಯದಲ್ಲಿ ರಾಜಹುಲಿ ಎಂದು ಕರೆಸಿಕೊಳ್ಳುವ ಯಡಿಯೂರಪ್ಪ ರಾಜೀನಾಮೆ ಅವರ ಅಭಿಮಾನಿಗಳು, ಬೆಂಬಲಿಗರು, ಪಕ್ಷದ ಕಾರ್ಯಕರ್ತರಿಗೆ ನೋವುಂಟು ಮಾಡಿತು. ಯಡಿಯೂರಪ್ಪ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾದರೂ ಪೂರ್ಣಾವಧಿ ಪೂರೈಸಲಿಲ್ಲ ಎಂಬ ನೋವು ಹಾಗೆಯೇ ಉಳಿಯಿತು.
ಮುಖ್ಯಮಂತ್ರಿಯಾಗಿ ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ ಯಡಿಯೂರಪ್ಪ ಕೋವಿಡ್ ಪರಿಸ್ಥಿತಿ ಹತೋಟಿಗೆ ಬರುತ್ತಲೇ ರಾಜೀನಾಮೆ ನೀಡಿದರು. ಅಧಿಕಾರ ಬಿಟ್ಟು ಕೆಳಗಿಳಿದರೂ ಸುಮ್ಮನೆ ಕೂರುವ ನಾಯಕ ಯಡಿಯೂರಪ್ಪ ಅಲ್ಲ.
ಅಧಿಕಾರ ಇರದಿದ್ದರೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಅವರು ಘೋಷಣೆ ಮಾಡಿದರು. ಹಾನಗಲ್, ಮಸ್ಕಿ ಉಪ ಚುನಾವಣೆ ಪ್ರಚಾರದಲ್ಲಿ ಅವರು ಸಕ್ರಿಯವಾಗಿ ತೊಡಗಿಕೊಂಡರು. ಡಿಸೆಂಬರ್ 10ರಂದು ನಡೆದ ವಿಧಾನ ಪರಿಷತ್ ಉಪ ಚುನಾವಣೆಯ ಪ್ರಚಾರದಲ್ಲಿಯೂ ತೊಡಗಿದರು. ವಿವಿಧ ಕ್ಷೇತ್ರಗಳಲ್ಲಿ ಸಂಚಾರ ನಡೆಸಿ ಪ್ರಚಾರವನ್ನು ನಡೆಸಿದರು.
ಬಹುಮತ ಬರಬೇಕು; ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದು ಯಡಿಯೂರಪ್ಪ ಅವರ ಕನಸು. ಅದನ್ನು ಹಲವು ಬಾರಿ ಅವರು ಹೇಳಿಕೊಂಡಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ 120ಕ್ಕೂ ಅಧಿಕ ಸ್ಥಾನಗಳಲ್ಲಿ ಪಕ್ಷ ಗೆದ್ದು ಅಧಿಕಾರ ಹಿಡಿಯಬೇಕು ಎಂಬುದು ಅವರ ಗುರಿ. 78ನೇ ವಯಸ್ಸಿನಲ್ಲಿಯೂ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಮಾಡುವುದಾಗಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಶಿಕಾರಿಪುರದಿಂದ ಬೆಂಗಳೂರು; ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಬೂಕನಕೆರೆಯಲ್ಲಿ 1943ರ ಫೆಬ್ರವರಿ 27ರಂದು ಜನಿಸಿದ ಯಡಿಯೂರಪ್ಪ ರಾಜಕೀಯ ಜೀವನ ಆರಂಭಿಸಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ. 1972ರಲ್ಲಿ ಶಿಕಾರಿಪುರ ತಾಲೂಕಿನ ಜನ ಸಂಘದ ಅಧ್ಯಕ್ಷರಾಗಿ ಸಕ್ರಿಯ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಯಡಿಯೂರಪ್ಪ 1975ರಲ್ಲಿ ಶಿಕಾರಿಪುರ ಪುರಸಭೆ ಸದಸ್ಯರಾದರು, ಬಳಿಕ ಅಧ್ಯಕ್ಷರಾದರು.
ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಶಿಕಾರಿಪುರ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ, ಒಂದು ಬಾರಿ ಶಿವಮೊಗ್ಗ ಸಂಸದರಾದರು. ಶಿಕಾರಿಪುರದಲ್ಲಿ ರಾಜಕೀಯ ಆರಂಭಿಸಿದ ಯಡಿಯೂರಪ್ಪ ಬೆಂಗಳೂರಿನ ವಿಧಾನಸೌಧದ 3ನೇ ಮಹಡಿಗೆ ಏರಿ ಮುಖ್ಯಮಂತ್ರಿ ಪದವಿ ಪಡೆದರು. ಇದಕ್ಕೂ ಮೊದಲು ವಿರೋಧ ಪಕ್ಷದ ನಾಯಕ, ಹಣಕಾಸು ಸಚಿವ, ಉಪಮುಖ್ಯಮಂತ್ರಿಯಾಗಿ ಸಮರ್ಥವಾಗಿಕಾರ್ಯ ನಿರ್ವಹಣೆ ಮಾಡಿದರು.
ಯಡಿಯೂರಪ್ಪಗೆ ರೈತ ಬಗ್ಗೆ ಅಪಾರವಾದ ಕಾಳಜಿ. ರೈತರ ಸಾಲ ಮನ್ನಾ, ಲಾಟರಿ ನಿಷೇಧ, ರೈತರಿಗೆ ಶೇ .4 ಬಡ್ಡಿದರದಲ್ಲಿ ಸಾಲ, ಬಿಪಿಎಲ್ ಕುಟುಂಬಗಳ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಭಾಗ್ಯಲಕ್ಷ್ಮಿ ಯೋಜನೆ, ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ ಯೋಜನೆ ಮುಂತಾದವುಗಳನ್ನು ಜಾರಿಗೆ ತಂದರು.
ಮುಖ್ಯಮಂತ್ರಿಯಾಗಿದ್ದಾಗ ನಿರುದ್ಯೋಗ ನಿವಾರಣೆಗೆ ಸುವರ್ಣ ಕಾಯಕ ಉದ್ಯೋಗ ತರಬೇತಿ ಯೋಜನೆ, ಹಿರಿಯ ನಾಗರಿಕರ ಸಾಮಾಜಿಕ ಭದ್ರೆತೆಗೆ ಸಂಧ್ಯಾ ಸುರಕ್ಷಾ ಯೋಜನೆ, ಮೊದಲಾದ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿ, ಅನುಷ್ಠಾನಗೊಳಿಸಿದ ಹೆಗ್ಗಳಿಕೆ ಯಡಿಯೂರಪ್ಪ ಅವರದ್ದಾಗಿದೆ.
ರಾಜ್ಯಪಾಲರಾಗಲಿದ್ದಾರೆ; ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಅವರು ರಾಜ್ಯಪಾಲರಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ ರಾಜ್ಯಪಾಲರ ಪಟ್ಟ ಬೇಡ ರಾಜ್ಯದಲ್ಲಿಯೇ ಇದ್ದು ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಪುತ್ರರಾದ ಬಿ. ವೈ. ವಿಜಯೇಂದ್ರ ಕರ್ನಾಟಕ ಬಿಜೆಪಿಯ ಉಪಾಧ್ಯಕ್ಷರು. ಮತ್ತೊಬ್ಬ ಪುತ್ರ ಬಿ. ವೈ. ರಾಘವೇಂದ್ರ ಶಿವಮೊಗ್ಗದ ಸಂಸದರು. ಯಡಿಯೂರಪ್ಪ ರಾಜೀನಾಮೆ ಬಳಿಕ ಬಿ. ವೈ. ವಿಜಯೇಂದ್ರ ಸಚಿವರಾಗಲಿದ್ದಾರೆ ಎಂಬ ಸುದ್ದಿ ಬಗ್ಗೆ ಬಿಸಿ-ಬಿಸಿ ಚರ್ಚೆಗಳು ನಡೆದರೂ ಅವುಗಳು ಅಲ್ಲೇ ತಣ್ಣಗಾದವು.
ಯಡಿಯೂರಪ್ಪ ಅವರ ಮುಂದಿನ ಗುರಿ 2023ರ ವಿಧಾನಸಭೆ ಚುನಾವಣೆ. ಚುನಾವಣೆಗಾಗಿ ಪಕ್ಷವನ್ನು ಸಂಘಟಿಸಿ ಪೂರ್ಣ ಬಹುಮತದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರಲು ಅವರು ಶ್ರಮಿಸಲಿದ್ದಾರೆ.
ಯಡಿಯೂರಪ್ಪ ರಾಜೀನಾಮೆ ಬಳಿಕ ಜುಲೈ 27ರಂದು ಪಕ್ಷದ ವರಿಷ್ಠ ನಾಯಕರ ಸಮ್ಮುಖದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಬಸವರಾಜ ಬೊಮ್ಮಾಯಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಜುಲೈ 28ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications