ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Karnataka Assembly Election 2023: ಮಂಡ್ಯ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು

By ಮಂಡ್ಯ ಪ್ರತಿನಿಧಿ
|
Google Oneindia Kannada News

2023ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಾಗೆಯೇ ಅಭ್ಯರ್ಥಿಗಳು ಒಂದಲ್ಲ ಒಂದು ನೆಪವೊಡ್ಡಿ ತಾ ಮುಂದು, ನಾ ಮುಂದು ಎಂದು ಜನರ ಬಳಿಯತ್ತ ತೆರಳುತ್ತಿರುವುದು ಸಾಮಾನ್ಯವಾಗಿದೆ.

ಜೆಡಿಎಸ್ ಭದ್ರಕೋಟೆಯಂತಿರುವ ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಶತಾಯ ಗತಾಯ ಗೆಲ್ಲಲೇಬೇಕೆಂದು "ಕೈ" ಪಡೆ ಟೊಂಕ ಕಟ್ಟಿ ನಿಂತಿದ್ದರೆ, ಇತ್ತ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಜೆಡಿಎಸ್ ಹೆಣಗಾಡುತ್ತಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಖಾತೆ ತೆರೆದಿರುವ ಬಿಜೆಪಿ ಕೂಡ ಮೂರ್ನಾಲ್ಕು ಸ್ಥಾನ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಂತೆ ಕಾಣುತ್ತಿದೆ.

Karnataka Assembly Elections 2023: ಬಾಗಲಕೋಟೆ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳುKarnataka Assembly Elections 2023: ಬಾಗಲಕೋಟೆ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು

ಹಾಗೆಯೇ ಜಿಲ್ಲೆಯಲ್ಲಿ ಈ ಬಾರಿಯಾದರೂ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಹಠದಲ್ಲಿ ಬಿಜೆಪಿ ನಾಯಕರಿದ್ದಾರೆ. ಅದಕ್ಕಾಗಿಯೇ ಚುನವಾಣಾ ಚಾಣಕ್ಯ ಅಂತಲೇ ಹೆಸರುವಾಸಿಯಾದ ಅಮಿತ್‌ ಶಾ ಅವರು ಮಂಡ್ಯ ಜಿಲ್ಲೆಗೆ ಇತ್ತೀಚೆಗಷ್ಟೇ ಆಗಮಿಸಿ ಪ್ರಚಾರದ ಅಲೆಯನ್ನೇ ಎಬ್ಬಿಸಿದ್ದರು. ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಗೆಲುವಿನ ಸೂತ್ರಗಳನ್ನು ಕೂಡ ಹೇಳಿಕೊಟ್ಟಿದ್ದಾರೆ.

ಆ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್‌ ಅನ್ನು ಉರುಳಿಸಲು ಬಿಜೆಪಿ ಸರ್ಕಾರ ಪಣ ತೊಟ್ಟಿದೆ. ಹಾಗೆಯೇ ಜೆಡಿಎಸ್‌ ಕೂಡ ತಾವೇನೂ ಕಡಿಮೆಯಿಲ್ಲ ಎನ್ನವಂತೆ ಪಂಚರತ್ನ ರಥಯಾತ್ರೆ ಮೂಲಕ ಜನರನ್ನು ತನ್ನತ್ತ ಸೆಳೆಯುವಲ್ಲಿ ಮುಂದಾಗಿದೆ. ಕ್ಷೇತ್ರದಲ್ಲಿ ಪಕ್ಷವನ್ನು ಭದ್ರಪಡಿಸಿಕೊಳ್ಳಲು ಜೆಡಿಎಸ್‌ ನಾಯಕರು ಭರ್ಜರಿ ಪ್ರಚಾರವನ್ನು ಸಹ ಆರಂಭಿಸಿದ್ದಾರೆ. ಹಾಗಾದರೆ ಕ್ಷೇತ್ರವಾರು ಮೂರು ಪಕ್ಷಗಳ ಆಕಾಂಕ್ಷಿಗಳ ವಿವರವನ್ನು ನೋಡೋಣ ಬನ್ನಿ.

 ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಪೈಪೋಟಿ

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಪೈಪೋಟಿ

2018ರ ಚುನಾವಣೆಯಲ್ಲಿ ಸಂಪೂರ್ಣ ನೆಲಕಚ್ಚಿದ್ದ ಕಾಂಗ್ರೆಸ್ ಪಕ್ಷಕ್ಕೆ ಚಲುವರಾಯಸ್ವಾಮಿ ಹಾಗೂ ಪಿ.ಎಂ. ನರೇಂದ್ರಸ್ವಾಮಿ ನೇತೃತ್ವದಲ್ಲಿ ಹೊಸ ಹುರುಪು ತುಂಬಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ 16 ಮಂದಿ ಅಭ್ಯರ್ಥಿಗಳು ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಮಾಜಿ ಶಾಸಕ ಎಚ್.ಬಿ. ರಾಮು, ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಕುಮಾರ್ (ಶಿವಪ್ಪ), ಕಾಂಗ್ರೆಸ್ ಮುಖಂಡರಾದ ಕೆ.ಕೆ.ರಾಧಾಕೃಷ್ಣ, ಗಣಿಗ ರವಿಕುಮಾರ್, ಕಾವೇರಿ ನಸಿರ್ಂಗ್ ಹೋಂನ ಡಾ.ಕೃಷ್ಣ, ಸಿದ್ದಾರೂಢ ಸತೀಶ್‌ ಗೌಡ, ಎಂ.ಎಸ್ ಚಿದಂಬರ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ಮೈಶುಗರ್ ಮಾಜಿ ಅಧ್ಯಕ್ಷ ಹಾಲಹಳ್ಳಿ ರಾಮಲಿಂಗಯ್ಯ, ಅಮರಾವತಿ ಚಂದ್ರಶೇಖರ್, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಬಿ.ಸಿ. ಶಿವಾನಂದ, ಬೆಂಗಳೂರು ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷ ಹನಕೆರೆ ಶಿವರಾಮ್, ಹಾಲಹಳ್ಳಿ ಅಶೋಕ್, ಅಸಾದುಲ್ಲಾ ಖಾನ್, ಹೊಸಹಳ್ಳಿ ಶಿವಲಿಂಗೇಗೌಡ ಅರ್ಜಿ ಸಲ್ಲಿಸಿರುವ ಪ್ರಮುಖರಾಗಿದ್ದಾರೆ.

ಜೆಡಿಎಸ್‌ನಿಂದ ಹಾಲಿ ಶಾಸಕರಾಗಿವ ಎಂ. ಶ್ರೀನಿವಾಸ್‌ರವರಿಗೆ ಟಿಕೆಟ್ ಘೋಷಣೆಯಾಗಿದೆ. ಆದರೂ, ಮನ್‌ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರ, ಮುದ್ದನಘಟ್ಟ ಮಹಾಲಿಂಗೇಗೌಡ, ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯಾನಂದ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಯೋಗೇಶ್ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇನ್ನು ಬಿಜೆಪಿಯಲ್ಲಿ ಪರಾಜಿತ ಅಭ್ಯರ್ಥಿ ಚಂದಗಾಲು ಶಿವಣ್ಣ, ಅಶೋಕ್ ಜಯರಾಂ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ಎಚ್.ಆರ್. ಅರವಿಂದ್ ಅವರು ಸಹ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

 ಮದ್ದೂರು ಕ್ಷೇತ್ರದಲ್ಲಿ

ಮದ್ದೂರು ಕ್ಷೇತ್ರದಲ್ಲಿ "ಟಿಕೆಟ್‌" ಪೈಪೋಟಿ

ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಎಸ್. ಗುರುಚರಣ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟಿಕೆಟ್ ಘೋಷಣೆ ಮಾಡಿದ್ದಾರೆ. ಉಳಿದಂತೆ ವಿಧಾನ ಪರಿಷತ್ ಸದಸ್ಯ ಮಾಜಿ ಶಾಸಕ ಬಿ.ರಾಮಕೃಷ್ಣ ಹಾಗೂ ಕಾಂಗ್ರೆಸ್ ಮುಖಂಡ ಶಂಕರೇಗೌಡ ಅರ್ಜಿ ಹಾಕಿದ್ದು, ಕುತೂಹಲ ಮೂಡಿಸಿದೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಹೋದರ ಎಸ್.ಎಂ.ಶಂಕರ್ ಅವರ ಪುತ್ರ ಗುರುಚರಣ್, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ ಹಾಗೂ ವಿ.ಸಿ.ಶಂಕರೇಗೌಡ ಈ ಮೂವರ ಪೈಕಿ ಮದ್ದೂರು ಕ್ಷೇತ್ರದ ಟಿಕೆಟ್ ಯಾರಿಗೆ ದಕ್ಕಲಿದೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಜೆಡಿಎಸ್‌ನಿಂದ ಹಾಲಿ ಶಾಸಕ ಡಿ.ಸಿ. ತಮ್ಮಣ್ಣ ಅವರಿಗೆ ಟಿಕೆಟ್ ಸಿಗಲಿದೆ. ಮತ್ತು ಬಿಜೆಪಿಯಿಂದ ಎಸ್.ಪಿ. ಸ್ವಾಮಿ ಅವರು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದರೆ, ಕದಲೂರು ಉದಯ್ ಅವರು ತಮ್ಮದೇ ಆದ ತಂಡ ಕಟ್ಟಿಕೊಂಡು ಕಾಂಗ್ರೆಸ್ ಅಥವಾ ಬಿಜೆಪಿಯಿಂದ ಸ್ಪರ್ಧಿಸುವ ನಿರೀಕ್ಷೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

 ನಾಗಮಂಗಲ ಕ್ಷೇತ್ರದಲ್ಲಿ

ನಾಗಮಂಗಲ ಕ್ಷೇತ್ರದಲ್ಲಿ "ಟಿಕೆಟ್‌" ಸಮರ

ನಾಗಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಯಸಿ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹೊರತುಪಡಿಸಿ ಬೇರೆ ಯಾರು ಕೂಡ ಅರ್ಜಿ ಸಲ್ಲಿಸಿಲ್ಲ. ಹಾಗಾಗಿ ಅವರೇ ನಾಗಮಂಗಲ ಕ್ಷೇತ್ರದಿಂದ 2023 ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಉಳಿದುಕೊಳ್ಳಲಿದ್ದಾರೆ.

ಇನ್ನು ರಾಜ್ಯ ರಾಜಕೀಯದಲ್ಲಿ ಪ್ರಭಾವಿ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಚಲುವರಾಯಸ್ವಾಮಿ ಜಿಲ್ಲೆಯಲ್ಲಿ ಎಲ್ಲ ಕಾಂಗ್ರೆಸ್ಸಿಗರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ನಾಯಕರಾಗಿದ್ದಾರೆ. ಜಾತ್ಯಾತೀತ ದಳದಿಂದ ಹೊರಬಂದ ನಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಹೊಣೆ ಹೊತ್ತುಕೊಂಡಿದ್ದಾರೆ.

ಹಾಗೆಯೇ ಜೆಡಿಎಸ್‌ನಿಂದ ಹಾಲಿ ಶಾಸಕ ಕೆ. ಸುರೇಶ್‌ಗೌಡ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆಗಳಿವೆ. ಬಿಜೆಪಿಯಿಂದ ಯಾರೂ ಅಭ್ಯರ್ಥಿಗಳು ಇಲ್ಲ ಎನ್ನಲಾಗುತ್ತಿತ್ತು. ಇದರಿಂದಾಗಿ ಇತ್ತೀಚೆಗೆ ಜೆಡಿಎಸ್ ಸೇರ್ಪಡೆಗೊಂಡಿದ್ದ ಡಾ. ಲಕ್ಷ್ಮಿ ಅಶ್ವಿನ್‌ಗೌಡ ಅವರಿಗೆ ಟಿಕೆಟ್ ನೀಡಬಹುದೆಂಬ ಲೆಕ್ಕಾಚಾರ ಹಾಕಲಾಗಿತ್ತು.

ಇದೀಗ ಫೈಟರ್ ರವಿ ಅವರು ತಾಲೂಕಿನಾದ್ಯಂತ ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಗೊಂಡಿರುವ ಕಾರಣ ಬಹುತೇಕ ಅವರಿಗೇ ಟಿಕೆಟ್ ದೊರೆಯಬಹುದು ಎಂದು ಹೇಳಲಾಗುತ್ತಿದೆ.

 ಮೇಲುಕೋಟೆ ಕ್ಷೇತ್ರದಲ್ಲಿ ಫೈಟ್‌

ಮೇಲುಕೋಟೆ ಕ್ಷೇತ್ರದಲ್ಲಿ ಫೈಟ್‌

ಇನ್ನು ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಲಾರಿ ರೇವಣ್ಣ ಎಂದೇ ಪ್ರಸಿದ್ಧರಾಗಿದ್ದ ಬಿ.ರೇವಣ್ಣ ಅವರು ಬಹಳ ಉತ್ಸುಕರಾಗಿದ್ದಾರೆ. ಇದಕ್ಕಾಗಿ ಕೊರೊನಾ ಸಮಯದಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು. ಆದರೆ, ಅರ್ಜಿ ಹಾಕಿಲ್ಲವಾಗಿದ್ದು, ಕೆಪಿಸಿಸಿ ಅಧ್ಯಕ್ಷರಿಗೆ ತಿಳಿಸಿದ್ದೇನೆ. ನನಗೇ ಟಿಕೆಟ್ ಗ್ಯಾರಂಟಿ ಎನ್ನುತ್ತಿದ್ದಾರೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್ ಟಿಕೆಟ್‌ಗಾಗಿ ಡಾ. ಎಚ್.ಎನ್. ರವೀಂದ್ರ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಎನ್.ತ್ಯಾಗರಾಜು, ಕಾಗೇಪುರ ಆನಂದ್‌ ಕುಮಾರ್, ನಾಗಭೂಷಣ್, ಸಚಿನ್ ಮಿಗ ಅರ್ಜಿ ಸಲ್ಲಿಸಿದ್ದಾರೆ.

ಕಳೆದೆರಡು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರೈತ ಸಂಘದ ಅಭ್ಯರ್ಥಿಗಳನ್ನು ಬೆಂಬಲಿಸಿತ್ತು. ಈ ಬಾರಿಯೂ ರೈತ ಸಂಘದ ಅಭ್ಯರ್ಥಿಗೆ ಬೆಂಬಲ ನೀಡುವುದೋ ಇಲ್ಲವೋ? ಅಥವಾ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವುದೇ? ಎಂಬುದು ಯಕ್ಷ ಪ್ರಶ್ನೆಯಾಗಿದೆ. ಮತ್ತು ಜೆಡಿಎಸ್‌ನಿಂದ ಹಾಲಿ ಶಾಸಕ ಸಿ.ಎಸ್. ಪುಟ್ಟರಾಜು ಅವರೇ ಅಭ್ಯರ್ಥಿಯಾಗಲಿದ್ದಾರೆ.

ರೈತ ಸಂಘದಿಂದ ದಿ. ಕೆ.ಎಸ್. ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಕಣಕ್ಕಿಳಿಯಲಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಡಾ. ಇಂದ್ರೇಶ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳಿದ್ದು, ಇಂದ್ರೇಶ್ ಅವರು ಪ್ರಬಲ ಪೈಪೋಟಿ ನೀಡಲಿದ್ದಾರೆ ಎನ್ನಲಾಗಿದೆ.

 ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳು

ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳು

ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿ ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಬಿ. ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ನಾಗೇಂದ್ರ ಕುಮಾರ್, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಎಂ.ಡಿ.ಕೃಷ್ಣಮೂರ್ತಿ, ಮುಖಂಡ ವಿಜಯ್ ರಾಮೇಗೌಡ ಸೇರಿ ಒಟ್ಟು ಆರು ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಎರಡು ಬಾರಿ ಶಾಸಕರಾಗಿರುವ ಕೆ.ಬಿ. ಚಂದ್ರಶೇಖರ್ ಮತ್ತೊಮ್ಮೆ ಕಾಂಗ್ರೆಸ್ ಟಿಕೆಟಿಗಾಗಿ ಅರ್ಜಿ ಸಲ್ಲಿಸಿದ್ದು, ಕಳೆದ ಮೂರು ಚುನಾವಣೆಗಳಲ್ಲೂ ಸತತ ಸೋಲು ಕಂಡಿರುವ ಇವರಿಗೆ ಸಾಕಷ್ಟು ಅವಕಾಶ ನೀಡಲಾಗಿದೆ. ಈಗ ಇತರರಿಗೆ ಅವಕಾಶ ಮಾಡಿಕೊಡಿ ಎಂದು ಮುಖಂಡ ವಿಜಯ ರಾಮೇಗೌಡ, ಮಾಜಿ ಶಾಸಕ ಬಿ.ಪ್ರಕಾಶ್, ಕಿಕ್ಕೇರಿ ಸುರೇಶ್ ಅವರು ನಾಯಕರನ್ನು ಒತ್ತಾಯಿಸಿದ್ದಾರೆ.

ಇನ್ನು ಬೂಕನಕೆರೆಯ ಉದ್ಯಮಿ ವಿಜಯ್ ರಾಮೇಗೌಡ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದು, ಈಗಾಗಲೇ ಕ್ಷೇತ್ರದಾದ್ಯಂತ ಸಂಚಲನ ಸೃಷ್ಟಿಸಿದ್ದಾರೆ. ಜೆಡಿಎಸ್‌ನಿಂದ ಎಚ್.ಟಿ. ಮಂಜು ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಕಳೆದ ಉಪ ಚುನಾವಣೆಯಲ್ಲಿ ನಾರಾಯಣಗೌಡರಿಗೆ ಪ್ರಬಲ ಪೈಪೋಟಿ ನೀಡಿದ್ದ ಬಿ.ಎಲ್.ದೇವರಾಜು, ಬಸ್ ಸಂತೋಷ್ ಇವರು ಸಹ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಬಿಜೆಪಿಯಿಂದ ಕೆ.ಸಿ. ನಾರಾಯಣಗೌಡ ಅವರಿಗೆ ಟಿಕೆಟ್‌ ನಿಶ್ಚಿತ ಎನ್ನಲಾಗಿದೆ.

 ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಟಿಕೆಟ್‌ ಪೈಪೋಟಿ

ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಟಿಕೆಟ್‌ ಪೈಪೋಟಿ

ಶ್ರೀರಂಗಪಟ್ಟಣದಿಂದ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಹಿರಿಯ ವಕೀಲ ಪುಟ್ಟೇಗೌಡ, ಪಾಲಹಳ್ಳಿ ಚಂದ್ರಶೇಖರ್ ಕಾಂಗ್ರೆಸ್ ಟಿಕೆಟಿಗಾಗಿ ಅರ್ಜಿ ಸಲ್ಲಿಸಿರುವ ಪ್ರಮುಖರಾಗಿದ್ದಾರೆ. ಮಾಜಿ ಸಚಿವ ಚೆಲುವರಾಯಸ್ವಾಮಿ ಅವರ ಆಪ್ತರಾದ ರಮೇಶ್ ಬಂಡಿಸಿದ್ದೇಗೌಡ ಈಗಾಗಲೇ ಎರಡು ಬಾರಿ ಶಾಸಕರಾಗಿ ಟಿಕೆಗಾಗಿ ಪ್ರಬಲ ಪೈಪೋಟಿ ಒಡ್ಡಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡ ಪುಟ್ಟೇಗೌಡ ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಉತ್ತಮ ಹೆಸರು ಗಳಿಸಿದ್ದಾರೆ. ಇನ್ನು ಪಾಲಹಳ್ಳಿ ಚಂದ್ರಶೇಖರ್ ಅವರು ಉದ್ಯಮಿಯಾಗಿದ್ದು, ಅವರು ಕೂಡ ಈ ಬಾರಿಯಾದರೂ ತಮಗೊಂದು ಅವಕಾಶ ಕೊಡುವಂತೆ ನಾಯಕರಲ್ಲಿ ಕೋರಿದ್ದಾರೆ.

ಜೆಡಿಎಸ್‌ನಿಂದ ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಅಭ್ಯರ್ಥಿಯಾಗಲಿದ್ದು, ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಸಹ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇನ್ನು ಬಿಜೆಪಿಯಲ್ಲಿ ಯುವ ಮುಖಂಡ ಎಸ್. ಸಚ್ಚಿದಾನಂದ ಪಕ್ಷಕ್ಷೆ ಸೇರ್ಪಡೆಗೊಂಡು ಟಿಕೆಟ್‌ಗಾಗಿ ಲಾಭಿ ನಡೆಸುತ್ತಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಸಿದ್ದರಾಮಯ್ಯ ಅವರಿಗೂ ಟಿಕೆಟ್ ಸಿಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಮಧ್ಯೆ ಹೊಂಬಾಳೆ ಕ್ರಿಯೇಷನ್ಸ್‌ನ ವಿಜಯ್ ಕಿರಗಂದೂರು ಅವರನ್ನೂ ಕರೆತಂದು ಕಣಕ್ಕಿಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.

 ಮಳವಳ್ಳಿ ಕ್ಷೇತ್ರದಲ್ಲಿ ಟಿಕೆಟ್‌ ಜಟಾಪಟಿ

ಮಳವಳ್ಳಿ ಕ್ಷೇತ್ರದಲ್ಲಿ ಟಿಕೆಟ್‌ ಜಟಾಪಟಿ

ಮಳವಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಮಾಜಿ ಸಚಿವ ಪಿ.ಎಂ. ನರೇಂದ್ರಸ್ವಾಮಿ, ಮಾಜಿ ಶಾಸಕಿ ಮಲ್ಲಾಜಮ್ಮ, ಉದ್ಯಮಿ ಡಾ. ಮೂರ್ತಿ ಅರ್ಜಿ ಸಲ್ಲಿಸಿದ್ದಾರೆ. ಪ್ರಬಲ ನಾಯಕರಾಗಿ ಜೋಡೆತ್ತುಗಳಂತೆ ದುಡಿಯುತ್ತಿರುವ ಚೆಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳಲ್ಲೂ ಸೋತು ಮಂಕಾಗಿದ್ದ ಕಾಂಗ್ರೆಸ್ ಪಕ್ಷವನ್ನು ಮೇಲೆತ್ತಿ ಹೊಸ ಚೈತನ್ಯ ತುಂಬಿದ್ದರು.

ಈ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ, ಸಚಿವರಾಗಿ ಕಾರ್ಯನಿರ್ವಹಿಸಿರುವ ಪಿ.ಎಂ.ನರೇಂದ್ರಸ್ವಾಮಿ ತಮ್ಮ ಎರಡು ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಮಾಜಿ ಶಾಸಕಿ ಮಲ್ಲಾಜಮ್ಮ ಕೂಡ ಹಲವು ಚುನಾವಣೆಗಳ ನಂತರ ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮತ್ತೋರ್ವ ಮುಖಂಡ, ಉದ್ಯಮಿ ಡಾ. ಮೂರ್ತಿ ತಮಗೊಂದು ಬಾರಿ ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಹಾಗೆಯೇ ಜೆಡಿಎಸ್‌ನಿಂದ ಹಾಲಿ ಶಾಸಕ ಡಾ. ಕೆ. ಅನ್ನದಾನಿ ಅವರೇ ಅಭ್ಯರ್ಥಿಯಾಗಲಿದ್ದಾರೆ.

ಬಿಜೆಪಿಯಲ್ಲಿ ಮುನಿರಾಜು, ಯಮದೂರು ಸಿದ್ದರಾಜು, ಬಿ. ಸೋಮಶೇಖರ್, ಮಧು ಗಂಗಾಧರ್, ದೋರನಹಳ್ಳಿ ಕುಮಾರಸ್ವಾಮಿ ಅವರು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.

English summary
Karnataka Assembly Elections 2023 : Here are the list of probables will get Mandya District constituencies ticket from BJP, Congress, JDS and Other Parties. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X