Karnataka 7th Pay Commission; ನಿವೃತ್ತಿ ವೇತನ ನಿಯಮ, ನಿಬಂಧನೆಗಳು
ಬೆಂಗಳೂರು, ಜುಲೈ 24; ಸರ್ಕಾರ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಿದೆ. ರಾಜ್ಯ 7ನೇ ವೇತನ ಆಯೋಗ ತನ್ನ ಪರಿಶೀಲನಾ ಅಂಶಗಳ ಹಿನ್ನಲೆಯಲ್ಲಿ ಸರ್ಕಾರಿ ನೌಕರರಿಗೆ ಪ್ರಶ್ನಾವಳಿಯನ್ನು ಬಿಡುಗಡೆ ಮಾಡಿತ್ತು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆಯೋಗಕ್ಕೆ ನಿಗದಿಪಡಿಸಿರುವ ಕಾಲಾವಧಿಯನ್ನು ದಿನಾಂಕ 19/5/2023ರಿಂದ 6 ತಿಂಗಳು ವಿಸ್ತರಿಸಿದೆ. ಆಯೋಗದ ಪ್ರಶ್ನಾವಳಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈಗಾಗಲೇ ಉತ್ತರಗಳನ್ನು ಸಲ್ಲಿಕೆ ಮಾಡಿದೆ.

ಈ ಪ್ರಶ್ನಾವಳಿಗಳಲ್ಲಿ ವೇತನ, ಭತ್ಯೆ, ಪಿಂಚಣಿ, ರಜೆ ಸೌಲಭ್ಯ, ನಿವೃತ್ತಿ ಪಿಂಚಣಿ, ನಿವೃತ್ತಿ ವೇತನ ಸೇರಿದಂತೆ ವಿವಿಧ ವಿಚಾರಗಳಿವೆ. 7ನೇ ರಾಜ್ಯ ವೇತನ ಆಯೋಗದ ವರದಿ ನವೆಂಬರ್‌ನಲ್ಲಿ ಸರ್ಕಾರದ ಕೈ ಸೇರುವ ನಿರೀಕ್ಷೆ ಇದ್ದು, ಸುಮಾರು 6 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರು ವರದಿಗಾಗಿ ಕಾಯುತ್ತಿದ್ದಾರೆ.
ನಿವೃತ್ತಿ ವೇತನ ನಿಯಮ, ನಿಬಂಧನೆ; 7ನೇ ರಾಜ್ಯ ವೇತನ ಆಯೋಗ ಈಗ ಚಾಲ್ತಿಯಲ್ಲಿರುವ ನಿವೃತ್ತಿ ವೇತನದ ನಿಯಮ ಮತ್ತು ನಿಬಂಧನೆಗಳಿಂದ ಪಿಂಚಣಿದಾರರಿಗೆ ಅದರಲ್ಲೂ ತೀರಾ ವಯಸ್ಸಾದ ಪಿಂಚಣಿದಾರರಿಗೆ ನಿವೃತ್ತಿ ವೇತನವನ್ನು ಸಕಾಲದಲ್ಲಿ ಪಡೆದುಕೊಳ್ಳುವಲ್ಲಿ ಏನಾದರೂ ತೊಂದರೆಗಳಿವೆಯೇ? ಹಾಗಿದ್ದಲ್ಲಿ, ಇವುಗಳನ್ನು ಸರಳೀಕರಣಗೊಳಿಸಲು ನೀವು ಸಲಹೆ ನೀಡಲು ಬಯಸುವಿರಾ? ಎಂದು ಪ್ರಶ್ನಾವಳಿಯಲ್ಲಿ ಕೇಳಿತ್ತು.
ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯಲ್ಲಿ, ಸೇವೆಗೆ ಸೇರುವ, ವರ್ಗಾವಣೆ ಹೀಗೆ ಸೇವೆಗೆ ಸಂಬಂಧಿಸಿದ ಎಲ್ಲಾ ಘಟನೆಗಳ ಬಗ್ಗೆ ಸಂಬಂಧಿತ ದಾಖಲೆಗಳ ಸಹಿತ ಉದಾಹರಣೆಗೆ ಕುಟುಂಬ ಸದಸ್ಯರು ಮತ್ತು ನಾಮನಿರ್ದೇಶಗಳ ಮಾಹಿತಿಯನ್ನು ಕಲೆ ಹಾಕುವುದು, ನಿವೃತ್ತಿಯಾಗುವ ಸಮಯದಲ್ಲಿ ಪಿಂಚಣಿಗೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸುವುದರಿಂದ ನಿವೃತ್ತಿಯಾದ ಒಂದು ತಿಂಗಳೊಳಗಾಗಿ ಯಾವುದೇ ಸಮಸ್ಯೆ ಇಲ್ಲದೆ ನಿವೃತ್ತಿ ಸೌಲಭ್ಯಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸಬೇಕು ಎಂದು ಉತ್ತರ ನೀಡಲಾಗಿದೆ.
ಪ್ರಸ್ತುತ ಜಾರಿಯಲ್ಲಿರುವ ಹೆಚ್. ಆರ್. ಎಂ. ಎಸ್. ತಂತ್ರಾಂಶವನ್ನು ಬಲಪಡಿಸಿ ನಿವೃತ್ತಿ ಹೊಂದುವ ನೌಕರರಿಗೆ ಪಿಂಚಣಿ ಸವಲತ್ತುಗಳನ್ನು ಹೆಚ್. ಆರ್. ಎಂ. ಎಸ್. ತಂತ್ರಾಂಶದ ಮೂಲಕವೇ ಪಡೆಯುವ ಅವಕಾಶ ಕಲ್ಪಿಸುವುದು ಎಂದು ಸಲಹೆ ಕೊಡಲಾಗಿದೆ.
ನಿವೃತ್ತಿದಾರರಿಗೆ ಕೊಡಲಾಗುವ ತುಟ್ಟಿಭತ್ಯೆಯು ಏರುತ್ತಿರುವ ಜೀವನ ನಿರ್ವಹಣಾ ವೆಚ್ಚದ ಹೆಚ್ಚಳವನ್ನು ಸರಿದೂಗಿಸಲು ಸಮರ್ಪಕವಾಗಿದೆಯೇ? ಈ ಬಗ್ಗೆ ನಿಮ್ಮ ನಿರ್ದಿಷ್ಟ ಸಲಹೆಗಳೇನು? ಎಂದು ಪ್ರಶ್ನಿಸಲಾಗಿದೆ.
ಸೇವಾನಿರತ ನೌಕರರಿಗೆ ನೀಡುವ ವಾರ್ಷಿಕ ವೇತನ ಬಡ್ತಿ ದರದಲ್ಲಿಯೇ ನಿವೃತ್ತ ನೌಕರರಿಗೂ ಸಹ ಸಮನಾಂತರ ತುಟ್ಟಿಭತ್ಯೆಯನ್ನು ನೀಡಲು ಶಿಫಾರಸ್ಸು ಮಾಡುವುದು ಎಂದು ಉತ್ತರದಲ್ಲಿ ತಿಳಿಸಲಾಗಿದೆ.
ಸ್ವ-ಇಚ್ಛಾ ನಿವೃತ್ತಿ ಕುರಿತು; 7ನೇ ವೇತನ ಆಯೋಗ ಸ್ವಚ್ಛಾ ನಿವೃತ್ತಿಗೆ ಸಂಬಂಧಪಟ್ಟ ನಿಯಮಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಪ್ರಶ್ನಾವಳಿಯಲ್ಲಿ ಕೇಳಿದೆ.
ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 280ರ ಉಪ-ನಿಯಮ (2) ರಂತೆ ರಾಜ್ಯ ಸರ್ಕಾರಿ ನೌಕರರು ಸ್ವಇಚ್ಛಾ ನಿವೃತ್ತಿ ಪಡೆಯಲು ಅವಕಾಶವಿರುತ್ತದೆ.
ಅಧಿಕಾರಿ/ ನೌಕರರು 15 ವರ್ಷಗಳ ಸೇವಾವಧಿ ಕಡಿಮೆ ಇಲ್ಲದಂತೆ ಅಥವಾ 50 ವರ್ಷ ವಯೋಮಾನ ಪೂರೈಸಿದ ನಂತರ ಸ್ವಇಚ್ಛಾ ನಿವೃತ್ತಿಯನ್ನು ಪಡೆಯುವ ನಿಯಮಗಳಿಗೆ ತಿದ್ದುಪಡಿ ಮಾಡಿ ಈ ಅವಧಿಯನ್ನು 12 ವರ್ಷಗಳ ಸೇವಾವಧಿ ಅಥವಾ 45 ವರ್ಷಗಳ ವಯೋಮಾನ ಪೂರೈಸಿದ ನಂತರ ಸ್ವಇಚ್ಛಾ ನಿವೃತ್ತಿ ಹೊಂದುವ ಅವಕಾಶಕ್ಕೆ ಶಿಫಾರಸ್ಸು ಮಾಡುವುದು ಎಂದು ಉತ್ತರದಲ್ಲಿ ತಿಳಿಸಲಾಗಿದೆ.












Click it and Unblock the Notifications