Karnataka 7th Pay Commission; ಮನೆ ಬಾಡಿಗೆ ಭತ್ಯೆ ದರಗಳು ಏರಿಕೆ?
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕರ್ನಾಟಕ ರಾಜ್ಯ 7ನೇ ವೇತನ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಉತ್ತರದಲ್ಲಿ ಮನೆ ಬಾಡಿಗೆ ಭತ್ಯೆ ಹೇಗೆ ಏರಿಕೆಯಾಗಬೇಕು? ಎಂದು ವಿವರಗಳನ್ನು ನೀಡಲಾಗಿದೆ.
ಕರ್ನಾಟಕ ಸರ್ಕಾರ ಸುಧಾಕರ್ ರಾವ್ ಅಧ್ಯಕ್ಷತೆಯ ಕರ್ನಾಟಕ ರಾಜ್ಯ 7ನೇ ವೇತನ ಆಯೋಗ ರಚನೆ ಮಾಡಿದೆ. ರಾಜ್ಯ ಸರ್ಕಾರಿ ನೌಕರರು ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವುದರಿಂದ 7ನೇ ವೇತನ ಆಯೋಗ ಸರ್ಕಾರಕ್ಕೆ ಯಾವಾಗ ಮಧ್ಯಂತರ ವರದಿ ಸಲ್ಲಿಸಲಿದೆ? ಎಂದು ಕಾದು ಕುಳಿತಿದ್ದಾರೆ. ಮಂಗಳವಾರ ವಿಧಾನಸಭೆ ಕಲಾಪದಲ್ಲಿಯೂ ಆಯೋಗದ ಕುರಿತು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಷಯ ಪ್ರಸ್ತಾವನೆ ಮಾಡಿದ್ದಾರೆ.
ಸರ್ಕಾರದ ಆದೇಶದಂತೆ 7ನೇ ರಾಜ್ಯ ವೇತನ ಆಯೋಗ ತನ್ನ ಪರಿಶೀಲನಾ ಅಂಶಗಳ ಹಿನ್ನಲೆಯಲ್ಲಿ ಪ್ರಶ್ನಾವಳಿಯನ್ನು ಬಿಡುಗಡೆ ಮಾಡಿದೆ. ಸರ್ಕಾರಿ ನೌಕರರು, ಜನರು ಈ ಪ್ರಶ್ನಾವಳಿಗಳಿಗೆ ಫೆಬ್ರವರಿ 28ರ ತನಕ ಉತ್ತರಗಳನ್ನು ನೀಡಬಹುದಾಗಿದೆ ಎಂದು ಆಯೋಗ ಹೇಳಿದೆ. ಎಲ್ಲಾ ಉತ್ತರಗಳನ್ನು ಸಂಗ್ರಹ ಮಾಡಿದ ಬಳಿಕ ಆಯೋಗ ಸರ್ಕಾರಕ್ಕೆ ತನ್ನ ಮಧ್ಯಂತರ ವರದಿಯನ್ನು ಸಲ್ಲಿಕೆ ಮಾಡಲಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈಗಾಗಲೇ ಆಯೋಗದ ಪ್ರಶ್ನಾವಳಿಗೆ ಉತ್ತರವನ್ನು ಸಲ್ಲಿಕೆ ಮಾಡಿದೆ. ಈ ಉತ್ತರದಲ್ಲಿ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ದರಗಳು, ಕೇಂದ್ರ ಸರ್ಕಾರದ ಮಾದರಿಯಲ್ಲಿ ಮನೆ ಬಾಡಿಗೆ ಭತ್ಯೆ ಸೇರಿದಂತೆ ಹಲವಾರು ಅಂಶಗಳನ್ನು ಪ್ರಸ್ತಾಪ ಮಾಡಲಾಗಿದೆ. ಅಂಕಿ ಸಂಖ್ಯೆಯೊಂದಿಗೆ ವಿವರಣೆ ನೀಡಿ ಸರ್ಕಾರಕ್ಕೆ ಈ ಕುರಿತು ಶಿಫಾರಸು ಮಾಡಿ ಎಂದು ನೌಕರರ ಸಂಘ ಹೇಳಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ 7ನೇ ರಾಜ್ಯ ವೇತನ ಆಯೋಗಕ್ಕೆ ಸರ್ಕಾರಿ ನೌಕರರು ನೀಡಿರುವ ಉತ್ತರದ ಪ್ರತಿಯನ್ನು ಪ್ರಕಟಣೆ ಮೂಲಕ ಬಿಡುಗಡೆ ಮಾಡಿದ್ದಾರೆ. ಈ ಉತ್ತರದಲ್ಲಿ ಮನೆ ಬಾಡಿಗೆ ಭತ್ಯೆ ಏರಿಕೆ, ನಗರ ಪರಿಹಾರ ಭತ್ಯೆ ದರಗಳು ಹೆಚ್ಚಳ ಸೇರಿದಂತೆ ಪ್ರಸ್ತಾಪಿಸಿರುವ ಅಂಶಗಳ ಮಾಹಿತಿ ಇಲ್ಲಿದೆ...

ಆಯೋಗದ ಪ್ರಶ್ನಾವಳಿ ಹೀಗಿದೆ
7ನೇ ರಾಜ್ಯ ವೇತನ ಆಯೋಗ ತನ್ನ ಪ್ರಶ್ನಾವಳಿಯಲ್ಲಿ ಹಾಲಿ ಜಾರಿಯಲ್ಲಿರುವ ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆ ದರಗಳು ವಾಸ್ತವಿಕ ಮತ್ತು ಸಮಂಜಸವೆಂದು ನೀವು ಅಭಿಪ್ರಾಯಪಡುವಿರಾ?. ಇಲ್ಲದಿದ್ದಲ್ಲಿ, ಕಾರಣಗಳ ಸಹಿತ ನೀವು ಪರಿಗಣಿಸುವ ಸಮಂಜಸ ದರವೇನು ಮತ್ತು ಏಕೆ? ಎಂದು ದಯವಿಟ್ಟು ಸೂಚಿಸಿರಿ ಎಂದು ಕೇಳಿತ್ತು.
ಸರ್ಕಾರಿ ನೌಕರರು ತಮ್ಮ ಉತ್ತರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಪರಿಹಾರವಾಗಿ ಪ್ರಸ್ತುತ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವ ಮನೆ ಬಾಡಿಗೆ ಭತ್ಯೆಯು ಅತ್ಯಂತ ಮುಖ್ಯವಾದ ಅಂಶವಾಗಿದೆ ಎಂದು ಹೇಳಿದೆ. ಸರ್ಕಾರವು ತನ್ನ ನೌಕರರಿಗೆ ಕಾರ್ಯಸ್ಥಾನಗಳಲ್ಲಿ ವಸತಿ ಸೌಲಭ್ಯಗಳನ್ನು ಕಲ್ಪಿಸಿರುವುದಿಲ್ಲ. ಮಾಲೀಕರು ಮನೆಗಳನ್ನು ಬಾಡಿಗೆಗೆ ಕೊಡುವಾಗ ನೌಕರರ ಮೇಲೆ ಕಟ್ಟುನಿಟ್ಟಾದ ಷರತ್ತಿನ ಕರಾರುಗಳನ್ನು ವಿಧಿಸಿ ಹೆಚ್ಚಿನ ಮುಂಗಡಗಳನ್ನು ಪಡೆಯುತ್ತಾರೆ ಎಂದೂ ಸಹ ವಿವರಣೆ ನೀಡಿದೆ.

ಪ್ರತಿ ವರ್ಷ ಮನೆ ಬಾಡಿಗೆ ಹೆಚ್ಚಳ
ಸರ್ಕಾರಿ ನೌಕರರು ತಮ್ಮ ಉತ್ತರದಲ್ಲಿ ಮನೆಯ ಮಾಲೀಕರು ಮನೆ ಬಾಡಿಗೆಯನ್ನು ಪ್ರತಿ ವರ್ಷ ಶೇ 5 ರಿಂದ 10 ರಷ್ಟು ಹೆಚ್ಚಳ ಮಾಡುತ್ತಾರೆ. ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲೂ ಅವಶ್ಯ ಮೂಲಭೂತ ಸೌಲಭ್ಯಗಳು ಲಭ್ಯವಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿಯೂ ಹೆಚ್ಚಿನ ಬಾಡಿಗೆಯನ್ನು ವಿಧಿಸಲಾಗುತ್ತಿದೆ. ರಾಜ್ಯ ಸರ್ಕಾರಿ ನೌಕರರಿಗೆ ಕಡಿಮೆ ದರದ ಮನೆಬಾಡಿಗೆ ಭತ್ಯೆಯನ್ನು ನಿಗದಿಪಡಿಸುವ ಕ್ರಮವು ಅವೈಜ್ಞಾನಿಕವಾಗಿರುತ್ತದೆ ಎಂದು ಹೇಳಿದೆ.
ರಾಜ್ಯ ಸರ್ಕಾರವು 6ನೇ ವೇತನ ಆಯೋಗದ ಶಿಫಾರಸ್ಸು ಹಾಗೂ ಕೇಂದ್ರ ಸರ್ಕಾರದ ಮಾದರಿಯಲ್ಲಿ ಮನೆ ಬಾಡಿಗೆ ಭತ್ಯೆಯನ್ನು ಅನುಷ್ಠಾನಗೊಳಿಸಿದೆ. 2011 ಜನಗಣತಿಯ ಜನಸಂಖ್ಯೆಯನ್ನು ಆಧಾರವಾಗಿ ಇಟ್ಟುಕೊಂಡಿರುವುದು ಅವೈಜ್ಞಾನಿಕವಾಗಿರುತ್ತದೆ. ಸರ್ಕಾರವು ಇದುವರೆವಿಗೂ 2021ರ ಜನಗಣತಿ ಕಾರ್ಯವನ್ನು ಪೂರ್ಣಗೊಳಿಸದಿರುವುದರಿಂದ ಕಳೆದ 2 ವರ್ಷಗಳಿಂದ ನೌಕರರಿಗೆ ಅರ್ಹರಿದ್ದರೂ ಹೆಚ್ಚಿನ ಮನೆ ಬಾಡಿಗೆ ಭತ್ಯೆ ಸಿಗುತ್ತಿಲ್ಲ ಎಂದು ನೌಕರರ ಸಂಘ ಉತ್ತರದಲ್ಲಿ ವಿವರಣೆ ನೀಡಿದೆ.

ಹಾಲಿ ಇರುವ ಮನೆ ಬಾಡಿಗೆ ಭತ್ಯೆ ದರಗಳು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯದಲ್ಲಿ ಯಾವ ಮಾದರಿಯಲ್ಲಿ ಹಾಲಿ ಮನೆ ಬಾಡಿಗೆ ಭತ್ಯ ಇದೆ ಎಂದು ವಿವರಣೆ ನೀಡಿದೆ. 25 ಲಕ್ಷಕ್ಕೂ ಮೇಲ್ಪಟ್ಟು ಜನಸಂಖ್ಯೆ ಇದ್ದರೆ 'ಎ' ಎಂದು ವರ್ಗೀಕರಣ ಮಾಡಲಾಗಿದೆ. ಮೂಲವೇತನ ಶೇಕಡಾವಾರು ಮನೆ ಬಾಡಿಗೆ ಭತ್ಯೆ ದರ 24% ಇದೆ. 5 ಲಕ್ಷ ಮತ್ತು ಅದಕ್ಕೂ ಮೇಲ್ಪಟ್ಟು ಆದರೆ 25 ಲಕ್ಷಕ್ಕೂ ಕಡಿಮೆ ಇದ್ದರೆ 'ಬಿ' ವರ್ಗಕ್ಕೆ ಸೇರಿದ್ದು, 16% ಇದೆ, 5 ಲಕ್ಷಕ್ಕಿಂತ ಕಡಿಮೆ ಜಸಸಂಖ್ಯೆ ಇದ್ದರೆ 'ಸಿ' ವರ್ಗಕ್ಕೆ ಸೇರಲಿದ್ದು, 8% ಭತ್ಯೆ ದರವಿದೆ ಎಂದು ವಿವರಣೆ ನೀಡಿದೆ.
ಹಾಲಿ ಮನೆ ಬಾಡಿಗೆ ಭತ್ಯೆಯ ನಗರಗಳ ವರ್ಗೀಕರಣ (2011ರ ಜನಗಣತಿ) ಪ್ರಕಾರ 'ಎ' ವರ್ಗದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೆ. 'ಬಿ' ವರ್ಗದಲ್ಲಿ ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೆಳಗಾವಿ ಮತ್ತು ಮಂಗಳೂರು ಮಹಾನಗರ ಪಾಲಿಕೆಗಳು. 'ಸಿ' ವರ್ಗದ ನಗರಗಳಲ್ಲಿ ಜನಸಂಖ್ಯೆಯಲ್ಲಿ 5 ಲಕ್ಷಕ್ಕೂ ಕಡಿಮೆ ಇರುವ ಇತರ ಎಲ್ಲಾ ಪ್ರದೇಶಗಳು ಸೇರ್ಪಡೆಗೊಂಡಿವೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹೇಳಿದೆ.

ಮನೆ ಬಾಡಿಗೆ ಭತ್ಯೆ ಹೇಗೆ ಪರಿಷ್ಕರಣೆಯಾಗಬೇಕು?
ಕೇಂದ್ರ ಸರ್ಕಾರ X, Y, Z ಎಂದು ನಗರ/ ಪಟ್ಟಣಗಳ ವರ್ಗೀಕರಣ ಮಾಡಿದೆ. X ನಗರ/ ಪಟ್ಟಣಗಳಿಗೆ ಮೂಲ ವೇತನದ ಶೇಕಡಾವಾರು ಮನೆ ಬಾಡಿಗೆ ಭತ್ಯೆ ದರಗಳು 27% ಇದೆ. Y ವರ್ಗಕ್ಕೆ 18% ಇದೆ ಮತ್ತು Z ವರ್ಗಕ್ಕೆ 9% ಇದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಉತ್ತರದಲ್ಲಿ ವಿವರಣೆಯನ್ನು ನೀಡಿದೆ.
ರಾಜ್ಯದಲ್ಲಿರುವ ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಪರಿಷ್ಕರಿಸಬೇಕು ಎಂದು ಹೇಳಿದೆ. ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಲಭ್ಯವಿರುವ ಇತ್ತೀಚಿನ ಜನಸಂಖ್ಯೆಯ ಅಂಕಿ- ಅಂಶಗಳ ಮಾಹಿತಿಯನ್ವಯ ರಾಜ್ಯದ ಬೃಹತ್ ಮಹಾನಗರ ಪಾಲಿಕೆ, ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮಾಂತರ ಪ್ರದೇಶಗಳನ್ನು ವರ್ಗೀಕರಣ ಮಾಡಬೇಕು.
2021ರ ಜನಸಂಖ್ಯೆಯನ್ನು ಪರಿಗಣಿಸಿದಲ್ಲಿ ಶಿವಮೊಗ್ಗ, ದಾವಣಗೆರೆ, ತುಮಕೂರು, ವಿಜಯಪುರ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲಾ ಕೇಂದ್ರಗಳು ಮಹಾನಗರ ಪಾಲಿಕೆಗಳಾಗಿ ವರ್ಗಿಕರಣಗೊಂಡಿದ್ದು, ಜನಸಂಖ್ಯೆ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಇವುಗಳನ್ನೂ ಸಹ 'ಬಿ' ವರ್ಗಕ್ಕೆ ವರ್ಗೀಕರಿಸುವುದು. ಈಗಾಗಲೇ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ದರವು 25% ಹಾಗೂ 50% ಕ್ಕೆ ತಲುಪಿದಾಗ 3% ರಷ್ಟು ಮನೆ ಬಾಡಿಗೆ ಭತ್ಯೆ ಹೆಚ್ಚಳವಾಗುತ್ತಿದ್ದು, ರಾಜ್ಯ ಸರ್ಕಾರಿ ನೌಕರರಿಗೂ ಇದನ್ನು ವಿಸ್ತರಿಸಬೇಕು ಎಂದು ಸಂಘ ತಿಳಿಸಿದೆ.

ಬೆಂಗಳೂರು ನಗರದಲ್ಲಿ ಎಷ್ಟು ಪರಿಷ್ಕರಣೆ
ಕರ್ನಾಟಕ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ಗಳ ಸಂಖ್ಯೆಯನ್ನು 100 ರಿಂದ 198ಕ್ಕೆ ಹೆಚ್ಚಳ ಮಾಡಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿನ ಹಲವು ಗ್ರಾಮಾಂತರ ಪ್ರದೇಶಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಿರುವ ಹಿನ್ನೆಲೆಯಲ್ಲಿ ಈ ಕೆಳಕಂಡ ಅಂಶಗಳನ್ನು ಪರಿಗಣಿಸಿ ಬೆಂಗಳೂರು ನಗರ ಜಿಲ್ಲೆಯ ಕಂದಾಯ ಗಡಿಯವರೆಗಿನ ಎಲ್ಲಾ ಪ್ರದೇಶಗಳನ್ನೂ 'ಎ' ವರ್ಗದಲ್ಲಿ ವರ್ಗೀಕರಿಸುವುದು.
ಬೆಂಗಳೂರು ನಗರ ಜಿಲ್ಲೆಯ ಗಡಿಭಾಗದ ಪ್ರದೇಶಗಳಲ್ಲಿ ಐಟಿ/ ಬಿಟಿ. ಮತ್ತು ಬೃಹತ್ ಕೈಗಾರಿಕೆಗಳು ಸ್ಥಾಪನೆಗೊಂಡಿರುತ್ತವೆ. ಬೆಂಗಳೂರು ನಗರ ಜಿಲ್ಲೆಯ ಗಡಿ ಭಾಗದಲ್ಲಿ ಕಂದಾಯ, ಆರೋಗ್ಯ, ಜಿಲ್ಲಾ ಪಂಚಾಯಿತಿ, ಪೊಲೀಸ್, ಶಿಕ್ಷಣ ಇಲಾಖೆಗಳ ಆಡಳಿತ ಕಛೇರಿಗಳನ್ನು ಹೊಂದಿವೆ. 3 ಮತ್ತು 4ನೇ ಹಂತದಲ್ಲಿ ಮೆಟ್ರೋ ಸೌಲಭ್ಯಗಳು ಬೆಂಗಳೂರು ನಗರ ಜಿಲ್ಲೆಯ ಗಡಿ ಭಾಗದವರೆಗೂ ವಿಸ್ತಾರಗೊಂಡಿರುವುದು. ಬೆಂಗಳೂರು ನಗರ ಜಿಲ್ಲೆಯ ಗಡಿ ಭಾಗದವರೆಗೂ ಬಿಎಂಟಿಸಿ ಬಸ್ ಸೌಲಭ್ಯ ಕಲ್ಪಿಸಿರುವುದು. ಬೆಂಗಳೂರು ನಗರ ಜಿಲ್ಲೆಯ ಗಡಿ ಭಾಗದವರೆಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಸ್ವಚ್ಛತೆ, ಆರೋಗ್ಯ ಸೇರಿದಂತೆ ಇತರೆ ಸೇವೆಗಳನ್ನು ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದೆ.
ಬಿಬಿಎಂಪಿ ಗಡಿಯಿಂದ 500 ಮೀ. ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಸರ್ಕಾರಿ ಕಚೇರಿಗಳು, ಆರೋಗ್ಯ ಕೇಂದ್ರಗಳು, ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳಿದ್ದು, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರು ಬೃಹತ್ ಬೆಂಗಳೂರು ನಗರ ಪ್ರದೇಶದ ವ್ಯಾಪ್ತಿಯ ದರದಲ್ಲೇ ಮನೆ ಮನೆ ಬಾಡಿಗೆಯನ್ನು ನೀಡಲಾಗುತ್ತಿದೆ. ಬೆಂಗಳೂರು ಮಹಾನಗರದಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳು ಬೆಂಗಳೂರು ಜಿಲ್ಲೆಯ ಕಂದಾಯ ಗಡಿ ಪ್ರದೇಶಗಳಲ್ಲೂ ಲಭ್ಯವಾಗುತ್ತಿರುವುದರಿಂದ ಆ ಪ್ರದೇಶದ ಆರ್ಥಿಕ ತೆರಿಗೆ ಸಂಗ್ರಹವೂ ಸಹ ಹೆಚ್ಚಳವಾಗಿವೆ. ಸಹಜವಾಗಿಯೇ ಮನೆ ಬಾಡಿಗೆ ದರಗಳೂ ದುಬಾರಿಯಾಗಿವೆ. ಆದ್ದರಿಂದ ಬೆಂಗಳೂರು ನಗರ ಜಿಲ್ಲೆಯನ್ನು ಸಂಪೂರ್ಣವಾಗಿ 'ಎ' ವರ್ಗಕ್ಕೆ ವರ್ಗಿಕರಿಸಿ ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕರಿಸುವುದು ಎಂದು ಸಂಘ ಹೇಳಿದೆ.












Click it and Unblock the Notifications