K.Gopalaiah profile; ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ ನಾಯಕ
ಒಕ್ಕಲಿಗ ಸಮುದಾಯದ ನಾಯಕ ಕೆ. ಗೋಪಾಲಯ್ಯ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಬಿಜೆಪಿ ಶಾಸಕ, ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಅಬಕಾರಿ ಸಚಿವ
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಬಿಜೆಪಿ ಶಾಸಕ ಕೆ. ಗೋಪಾಲಯ್ಯ. ಒಂದು ಉಪ ಚುನಾವಣೆ ಸೇರಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2019ರ ಉಪ ಚುನಾವಣೆಯಲ್ಲಿ ಗೆದ್ದ ಬಳಿಕ ಗೋಪಾಲಯ್ಯ ಬಿ. ಎಸ್. ಯಡಿಯೂರಪ್ಪ ಸಂಪುಟ ಸೇರುವ ಮೂಲಕ ಮೊದಲ ಬಾರಿಗೆ ಸಚಿವರಾದರು. ಬಳಿಕ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಸಚಿವರಾಗಿ ಮುಂದುವರೆದಿದ್ದಾರೆ.
ಒಕ್ಕಲಿಗ ಸಮುದಾಯದ ನಾಯಕ ಕೆ. ಗೋಪಾಲಯ್ಯ ಜನಿಸಿದ್ದು 23/6/1960ರಲ್ಲಿ. ಬಿಎಸ್‌ಸಿ ಪದವೀಧರರು, ಮೊದಲು ವ್ಯಾಪಾರಿಯಾಗಿದ್ದರು. ಸಮಾಜ ಸೇವೆ ಮೂಲಕ ರಾಜಕೀಯಕ್ಕೆ ಬಂದರು. ಪತ್ನಿ ಎಸ್. ಪಿ. ಹೇಮಲತಾ ಸಹ ಜೆಡಿಎಸ್ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಪ ಮೇಯರ್ ಆಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಮೊದಲು ಜೆಡಿಎಸ್ ಪಕ್ಷದಲ್ಲಿದ್ದ ಕೆ. ಗೋಪಾಲಯ್ಯ ಈಗ ಬಿಜೆಪಿಯಲ್ಲಿದ್ದಾರೆ.

ಕೆ. ಗೋಪಾಲಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಅಬಕಾರಿ ಸಚಿವರು. ಮಂಡ್ಯ ಜಿಲ್ಲಾ ಉಸ್ತುವಾರಿ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರ ಖಾತೆ ಸಚಿವರಾಗಿದ್ದರು. ಬಸವರಾಜ ಬೊಮ್ಮಾಯಿ ಸಂಪುಟಕ್ಕೂ ಸೇರಿದ್ದು, ಖಾತೆ ಬದಲಾವಣೆಯಾಗಿದೆ.
2013ರ ಚುನಾವಣೆಯಲ್ಲಿ ಕೆ. ಗೋಪಾಲಯ್ಯ ಜೆಡಿಎಸ್ ಅಭ್ಯರ್ಥಿಯಾಗಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಶಾಸಕರಾದರು. 2018ರ ಚುನಾವಣೆಯಲ್ಲಿಯೂ ಜೆಡಿಎಸ್‌ನಿಂದ ಕಣಕ್ಕಿಳಿದು 88,218 ಮತಗಳನ್ನು ಪಡೆದು ಜಯಗಳಿಸಿದರು. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸರ್ಕಾರ ಬೀಳಿಸಿದ ಶಾಸಕರಲ್ಲಿ ಕೆ. ಗೋಪಾಲಯ್ಯ ಸಹ ಒಬ್ಬರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕೆ. ಗೋಪಾಲಯ್ಯ ಜೆಡಿಎಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಬಿಜೆಪಿ ಸೇರಿದರು. 2019ರ ಡಿಸೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದರು. ಉಪ ಚುನಾವಣೆ ಗೆಲುವಿನ ಬಳಿಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ಸೇರಿದರು.

ಜೆಡಿಎಸ್‌ನಿಂದ ಅಮಾನತು ಆಗಿದ್ದರು; 2013ರ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. 2016ರಲ್ಲಿ ರಾಜ್ಯಸಭೆ ಚುನಾವಣೆ ನಡೆಯಿತು. ಜೆಡಿಎಸ್ ಪಕ್ಷದ ವಿಪ್ ಉಲ್ಲಂಘನೆ ಮಾಡಿ 7 ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದರು. ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ಇದರಲ್ಲಿ ಕೆ. ಗೋಪಾಲಯ್ಯ ಸಹ ಒಬ್ಬರು. ಆದರೆ ಬಳಿಕ ಗೋಪಾಲಯ್ಯ ಅಮಾನತು ವಾಪಸ್ ಪಡೆಯಲಾಯಿತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಗೋಪಾಲಯ್ಯ ಕ್ಷೇತ್ರಕ್ಕೆ 450 ಕೋಟಿ ಅನುದಾನ ನೀಡಲಾಯಿತು. ಆದರೆ ಅವರು ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದರು.
2013ರ ಚುನಾವಣೆಯಲ್ಲಿ ಜೆಡಿಎಸ್‌ನ ಗೋಪಾಲಯ್ಯ ಗೆಲ್ಲಲು ಕಾಂಗ್ರೆಸ್ ನಾಯಕರ ಸಹಕಾರವಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಕಾಂಗ್ರೆಸ್‌ನ ಎಂ. ನಾಗರಾಜ್, ಕೇಶವಮೂರ್ತಿ ನೆ. ಲ. ನರೇಂದ್ರಬಾಬು ಮೇಲಿನ ಸಿಟ್ಟಿಗೆ ಗೋಪಾಲಯಯ್ಯ ಗೆಲುವಿಗೆ ಕೈ ಜೋಡಿಸಿದರು. 2015ರ ಬಿಬಿಎಂಪಿ ಚುನಾವಣೆಯಲ್ಲಿ ಎಂ. ನಾಗರಾಜ್ ಸೋತರು, ಬಳಿಕ ಅವರು ಬಿಜೆಪಿ ಪಾಳಯಕ್ಕೆ ಜಿಗಿದರು. ದಿನೇಶ್ ಗುಂಡೂರಾವ್ ಮೇಲಿನ ಸಿಟ್ಟಿಗೆ ನರೇಂದ್ರ ಬಾಬು 2018ರ ಚುನಾವಣೆ ಸಂದರ್ಭ ಬಿಜೆಪಿ ಸೇರ್ಪಡೆಯಾದರು. ಬಳಿಕ ನಡೆದ ಚುನಾವಣೆಯಲ್ಲಿ 41 ಸಾವಿರ ಮತಗಳ ಅಂತದಲ್ಲಿ ಗೋಪಾಲಯ್ಯ ಗೆದ್ದರು.
2019ರಲ್ಲಿ ಕೆ. ಗೋಪಾಲಯ್ಯ ಬಿಜೆಪಿ ಸೇರ್ಪಡೆಗೆ ವಿರೋಧವೂ ಇತ್ತು. ಆದರೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಧಾನದ ಬಳಿಕ ಎಲ್ಲರೂ ತಣ್ಣಗಾದರು. ಕೆ. ಗೋಪಾಲಯ್ಯ ಬಿಜೆಪಿ ಸೇರಿ, ಉಪಚುನಾವಣೆ ಗೆದ್ದು ಸಚಿವರೂ ಆದರು. ಈ ಬಾರಿಯ ಚುನಾವಣೆಯಲ್ಲಿಯೂ ಅವರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ.
ರಾಜಕೀಯ ಸ್ಥಾನಮಾನಗಳ ಮಾಹಿತಿ
* 2013-2018 ವಿಧಾನಸಭಾ ಸದಸ್ಯರು (ಜೆಡಿಎಸ್)
* 2018ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆ. 28/7/2019ರಲ್ಲಿ ಶಾಸಕ ಸ್ಥಾನದಿಂದ ಅನರ್ಹ
* 5/12/2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು
* 11/2/2020ರಿಂದ ಯಡಿಯೂರಪ್ಪ ಸಂಪುಟದಲ್ಲಿ ಸಚಿವರು
* 22/1/2021 ರಿಂದ 26/7/2021ರ ತನಕ ಅಬಕಾರಿ ಸಚಿವರು
* 4/8/2021ರಿಂದ ಅಬಕಾರಿ ಸಚಿವರು.












Click it and Unblock the Notifications