• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಶ್ಮೀರ ಫಸ್ಟ್, ಆರ್ಥಿಕತೆ ಲಾಸ್ಟ್: ಬಹುಸಂಖ್ಯಾತರ ಭಾವನೆಗಳೇ ಆಳುವವರ ಬಂಡವಾಳ!

By ಅನಿಲ್ ಆಚಾರ್
|

ಪ್ರಪಂಚ ಎಲ್ಲಾ ಆಳುವ ಸರಕಾರಗಳು ಬಹುಸಂಖ್ಯಾತರ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡಿದೆಯಾ? ಹೀಗೊಂದು ಸಹಜ ಅನುಮಾನ ಪ್ರಪಂಚ ನಾನಾ ದೇಶಗಳ ಚುನಾಯಿತ ಸರಕಾರಗಳು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಹುಟ್ಟುಹಾಕುತ್ತಿವೆ.

ಅದು ಕಮ್ಯುನಿಸ್ಟ್ ರಷ್ಯಾ ಇರಲಿ, ಟ್ರಂಪ್ ನೇತೃತ್ವದ ಸರಕಾರ ಇರಲಿ, ಇಸ್ರೇಲ್ ‌ನಲ್ಲಿ ಮರು ಆಯ್ಕೆ ಬಯಸುತ್ತಿರುವ ನೆತನ್ಯಾಹು ಆಡಳಿತ ಇರಲಿ, ಪಕ್ಕದ ಪಾಕಿಸ್ತಾನದ ಇಮ್ರಾನ್ ಖಾನ್ ಸರಕಾರ ಇರಲಿ, ಭಾರತದ ಮೋದಿ ನೇತೃತ್ವದ ಕೇಂದ್ರ ಸರಕಾರ ಇರಲಿ, ಪ್ರತಿಯೊಬ್ಬರು ಮೂಲಭೂತ ವಿಚಾರಗಳಾದ ಆರ್ಥಿಕತೆ, ಉದ್ಯೋಗ, ಬಡತನದಂತಹ ಸಂಗತಿಗಳಿಗಿಂತ ಬಹುಸಂಖ್ಯಾತರ ಭಾವನೆಗಳನ್ನು ಕೆಣಕುವ ಮತ್ತು ಆ ಮೂಲಕ ತಮ್ಮ ಆಡಳಿತ ಕೇಂದ್ರಗಳನ್ನು ಗಟ್ಟಿಗೊಳಿಸಿಕೊಳ್ಳುವ ಉಮೇದಿನಲ್ಲಿರುವಂತೆ ಕಾಣಿಸುತ್ತಿದೆ.

ರಾಜ್ಯಸಭೆಯಲ್ಲಿ ಕಾಶ್ಮೀರ ಪುನರ್ ರಚನೆ ವಿಧೇಯಕ ಅಂಗೀಕಾರರಾಜ್ಯಸಭೆಯಲ್ಲಿ ಕಾಶ್ಮೀರ ಪುನರ್ ರಚನೆ ವಿಧೇಯಕ ಅಂಗೀಕಾರ

ಇದಕ್ಕೆ ಪೂರಕ ಎಂಬಂತೆ 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಆಯ್ಕೆಯಾದ ಮೋದಿ ನೇತೃತ್ವದ ಬಿಜೆಪಿ ಸರಕಾರ ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಸೋಮವಾರ ಮಹತ್ವದ ತೀರ್ಮಾನ ಪ್ರಕಟಿಸಿದೆ. ಕಳೆದ ವಾರಾಂತ್ಯದಲ್ಲಿ ಸೇನಾ ಜಮಾವಣೆ ಹಾಗೂ ರಾಜ್ಯಪಾಲರ ಮೂಲಕ ಸ್ಥಳೀಯ ಆಡಳಿತವನ್ನು ಕೈಗೆತ್ತಿಕೊಳ್ಳುವ ಮೂಲಕ ಮುನ್ಸೂಚನೆಯೊಂದನ್ನು ಭಾರತ ಸರಕಾರ ಕಳುಹಿಸಿತ್ತು.

ನಿರೀಕ್ಷೆಯಂತೆಯೇ ವಾರದ ಆರಂಭದಲ್ಲಿಯೇ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿ ಆರ್ಟಿಕಲ್ 370 ರದ್ದುಗೊಳಿಸುವ ತೀರ್ಮಾನ ತೆಗೆದುಕೊಂಡರು. ಇದನ್ನು ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಪ್ರಕಟಿಸಿದರು. ಸಂಜೆ ಹೊತ್ತಿಗೆ ಈ ಸಂಬಂಧ ಬಹುಮತದೊಂದಿಗೆ ಕೇಂದ್ರ ಸರಕಾರ ಮಂಡಿಸಿದ್ದ 'ಜಮ್ಮು ಮತ್ತು ಕಾಶ್ಮೀರ ಪುನಾರಚನೆ ವಿಧೇಯಕ- 2019'ಕ್ಕೆ ಒಪ್ಪಿಗೆಯನ್ನೂ ಪಡೆದುಕೊಂಡರು.

500, 1000 ಮುಖಬೆಲೆಯ ನೋಟುಗಳ ರದ್ದು
ಭಾರತದ ಮುಕುಟ ಎಂದು ಕರೆಸಿಕೊಂಡು ಬಂದ, ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಸೇನಾ ಜಮಾವಣೆ ಕಂಡಿದ್ದ ರಾಜ್ಯವೊಂದು ಹೀಗೆ ಬಂದೂಕಿನ ನಳಿಕೆಯಲ್ಲಿಯೇ ತನ್ನ ಅಸ್ತಿತ್ವವನ್ನು ಪಡೆದುಕೊಂಡಿತು. ಅತ್ತ ಕಾಶ್ಮೀರದಲ್ಲಿ ಈ ಕುರಿತು ವಿರೋಧ ವ್ಯಕ್ತವಾದರೂ ಭಾರತದ ಇತರೆ ರಾಜ್ಯಗಳಲ್ಲಿಯೂ ಇದಕ್ಕೆ ವಿರೋಧ ಕಂಡುಬಂದರೂ ಅದರ ಧ್ವನಿ ಕ್ಷೀಣಿಸಿತ್ತು. ಬಹುಸಂಖ್ಯಾತ ಸರಕಾರವೊಂದು ತೆಗೆದುಕೊಂಡ ತೀರ್ಮಾನಕ್ಕೆ ವ್ಯಕ್ತವಾದ ಬೆಂಬಲದ ವಿಜೃಂಭಣೆ ಸಹಜವಾಗಿಯೇ ಜೋರಾಗಿತ್ತು.

ಯಾವುದೇ ಚುನಾಯಿತ ಸರಕಾರಕ್ಕೆ ಇಂತಹ ಸೂಕ್ಷ್ಮ ಹಾಗೂ ಭಾವನಾತ್ಮಕ ಸಂಗತಿಗಳು ಜನಾಭಿಪ್ರಾಯವನ್ನು ಉಳಿಸಿಕೊಳ್ಳಲು ನೆರವಾಗುತ್ತವೆ. ಭಾರತದಲ್ಲಿ ಮೋದಿ ನೇತೃತ್ವದ ಸರಕಾರ ಕೂಡ ಮರು ಆಯ್ಕೆಯ ನಂತರ ಉಳಿದೆಲ್ಲಾ ವಿಚಾರಗಳನ್ನು ಹಿಂದಿಕ್ಕಿ ಕಾಶ್ಮೀರದ ವಿಚಾರದಲ್ಲಿ ಇಂತಹದೊಂದು ತೀರ್ಮಾನ ತೆಗೆದುಕೊಳ್ಳಲು ಇದೂ ಒಂದು ಕಾರಣ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ.

ಕಲಂ 370 ರದ್ದು, ಕಣಿವೆ ರಾಜ್ಯದಲ್ಲಿ ಏನೇನು ಬದಲಾಗಲಿದೆ?ಕಲಂ 370 ರದ್ದು, ಕಣಿವೆ ರಾಜ್ಯದಲ್ಲಿ ಏನೇನು ಬದಲಾಗಲಿದೆ?

ಕಳೆದ ಬಾರಿ ಆರ್ಥಿಕತೆ ವಿಚಾರದಲ್ಲಿ ಮೋದಿ ಸರಕಾರ ಇಂತಹದ್ದೇ ಒಂದು ಜನಪ್ರಿಯ ಘೋಷಣೆ ಮಾಡಿತ್ತು. ನವೆಂಬರ್ 8, 2016ರಂದು ರಾತ್ರಿ 8 ಗಂಟೆಗೆ ಚಲಾವಣೆಯಲ್ಲಿದ್ದ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿತ್ತು. ಆರಂಭದಲ್ಲಿ ಇದಕ್ಕೆ ಭಾರಿ ಬೆಂಬಲ ವ್ಯಕ್ತವಾದರೂ ವ್ಯತಿರಿಕ್ತ ಪರಿಣಾಮದ ಹಿನ್ನೆಲೆಯಲ್ಲಿ ಜನ ಭ್ರಮನಿರಸನಕ್ಕೆ ಈಡಾಗಿದ್ದರು.

45 ವರ್ಷಗಳಲ್ಲೇ ನಿರುದ್ಯೋಗ ಪ್ರಮಾಣ ಗರಿಷ್ಠ ಮಟ್ಟ
ಅದಾದ ನಂತರ ಉದ್ಯೋಗ ಸೃಷ್ಟಿ ವಿಚಾರ ಚರ್ಚೆಗೆ ಬಂದಿತ್ತು. ದೇಶದ ಇತಿಹಾಸದಲ್ಲಿ 45 ವರ್ಷಗಳಲ್ಲೇ ನಿರುದ್ಯೋಗ ಪ್ರಮಾಣ ಗರಿಷ್ಠ ಮಟ್ಟ ತಲುಪಿತ್ತು. ಪೆಟ್ರೋಲ್ ಬೆಲೆ ಸೆಂಚುರಿ ಹತ್ತಿರ ಬಂದು ನಿಲ್ಲುವ ಮೂಲಕ ಬೆಲೆ ಏರಿಕೆಗೆ ಕಾರಣವಾಗಿತ್ತು. ಜಿಎಸ್ ಟಿ ಜಾರಿ ನಂತರ ಸಣ್ಣ ಉದ್ದಿಮೆಗಳು ನೆಲ ಕಚ್ಚಿದ್ದವು.

ಭಾರತದ ನಕ್ಷೆ ಬದಲು, ದೇಶದ ಕೇಂದ್ರಾಡಳಿತ ಪ್ರದೇಶಗಳೆಷ್ಟು?ಭಾರತದ ನಕ್ಷೆ ಬದಲು, ದೇಶದ ಕೇಂದ್ರಾಡಳಿತ ಪ್ರದೇಶಗಳೆಷ್ಟು?

ಬ್ಯಾಂಕಿಂಗ್ ವ್ಯವಸ್ಥೆ ಹಳ್ಳ ಹಿಡಿದಿದ್ದು ಜಾಹೀರಾಗಿತ್ತು. ಜನರ ಮೇಲೆ ಅನಗತ್ಯ ಸೇವಾ ಶುಲ್ಕಗಳನ್ನು ವಿಧಿಸುವ ಮೂಲಕ ಇದನ್ನು ಹತೋಟಿಗೆ ತರುವ ಪ್ರಯತ್ನ ಈಗಲೂ ಜಾರಿಯಲ್ಲಿದೆ. ಹೀಗೆ ಕೇಂದ್ರ ಸರಕಾರದ ಆರ್ಥಿಕ ನೀತಿಗಳು ಬರೆ ಎಳೆಯುತ್ತಿದ್ದಾಗಲೇ ಚುನಾವಣೆ ಹತ್ತಿರವಾಗಿತ್ತು.

ಐದು ವರ್ಷಗಳ ನಂತರ ಆಡಳಿತದ ನಂತರ ದೊಡ್ಡ ಮಟ್ಟದ ಬದಲಾವಣೆಗಳನ್ನು, 'ಅಚ್ಛೇ ದಿನ್‌' ಭರವಸೆಯನ್ನು ಮುಟ್ಟಲಾದ ಸರಕಾರದ ಮರುಆಯ್ಕೆಯ ಕನಸಿಗೆ ಹಾಲೆರೆದಿದ್ದು ಪುಲ್ವಾಮಾ ದಾಳಿ ಮತ್ತು ನಂತರ ನಡೆದ ಬಾಲಕೋಟ್ ದಾಳಿ. ನೆರೆಯ ಪಾಕಿಸ್ತಾನ, ಭಯೋತ್ಪಾದನೆಯಂತಹ ಭಾವನಾತ್ಮಕ ಸಂಗತಿಗಳೇ ಚುನಾವಣೆಯ ಪ್ರಚಾರ ಸರಕಾಯಿತು. ಜನ ಕೂಡ ಅಂತಿಮವಾಗಿ ಇಂತಹ ಸಂಗತಿಗಳಿಗೆ ಮಾರು ಹೋದವರಂತೆ ಮೋದಿ ನೇತೃತ್ವದ ಸರಕಾರವನ್ನು ಮರು ಆಯ್ಕೆ ಮಾಡಿ ಅಧಿಕಾರಕ್ಕೆ ತಂದಿದ್ದು ಈಗ ಇತಿಹಾಸ.

ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?

ಒಮ್ಮೆ ಮರು ಆಯ್ಕೆಯಾದ ನಂತರವಾದರೂ ಕೇಂದ್ರ ಸರಕಾರ ದೇಶದ ಆರ್ಥ ವ್ಯವಸ್ಥೆಯನ್ನು ಕಾಡುತ್ತಿರುವ ಸಂಗತಿಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡುತ್ತಿದೆಯಾ? ಇಂತಹದೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕಳೆದ ಮೂರು ತಿಂಗಳ ಆಡಳಿತವನ್ನು ಗಮನಿಸಿದರೆ ನಿರಾಸೆ ಮೂಡಿಸುವಂತಿದೆ.

ಜನಪ್ರಿಯ, ಭಾವನಾತ್ಮಕ ಸಂಗತಿಯೇ ಮುಂದಕ್ಕೆ
ಒಂದು ಕಡೆ ತ್ರಿವಳಿ ತಲಾಖ್ ನಂತಹ ಧಾರ್ಮಿಕ ಸಂಗತಿಯನ್ನು ಮುಂದಿಟ್ಟು, ಮುಸ್ಲಿಂ ಮಹಿಳೆಯರ ಸಬಲೀಕರಣದ ಮಾತುಗಳನ್ನು ಆಡಲಾಯಿತು. ಇದೇ ವೇಳೆ ಯು.ಪಿ.ಯಲ್ಲಿ ಹಿಂದೂ ಯುವತಿಯೊಬ್ಬಳನ್ನು ಬಿಜೆಪಿ ಶಾಸಕ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ಹತ್ಯೆಗೂ ಸಂಚು ರೂಪಿಸಿದ ಆರೋಪ ಕೇಳಿಬಂತು.

ಇದೀಗ ಕಾಶ್ಮಿರ ವಿಚಾರದಲ್ಲಿ ಆರ್ಟಿಕಲ್ 370 ರದ್ದುಗೊಳಿಸುವ ಮೂಲಕ ಇಂತಹ ಎಲ್ಲಾ ಚರ್ಚೆಗಳನ್ನು ಪಕ್ಕಕ್ಕಿಟ್ಟು ಮತ್ತೊಂದು ಜನಪ್ರಿಯ, ಭಾವನಾತ್ಮಕ ಸಂಗತಿಯನ್ನು ಮುಂದಿಟ್ಟು ಆಡಳಿತ ಕ್ಷಮತೆಯನ್ನು ತೋರಿಸಿಕೊಳ್ಳುವ ನಡೆಯನ್ನು ಕೇಂದ್ರ ಸರಕಾರ ಇಟ್ಟಿದೆ.

ಕಣಿವೆ ರಾಜ್ಯದಲ್ಲಿ 370 ಮತ್ತು 35ಎ ರದ್ದು : 10 ಪ್ರಮುಖ ಸಂಗತಿಗಳುಕಣಿವೆ ರಾಜ್ಯದಲ್ಲಿ 370 ಮತ್ತು 35ಎ ರದ್ದು : 10 ಪ್ರಮುಖ ಸಂಗತಿಗಳು

ಹಾಗೆ ನೋಡಿದರೆ, ಪ್ರಪಂಚದ ಬಹುತೇಕ ಚುನಾಯಿತ ಸರಕಾರಗಳು ಇಂತಹದ್ದೇ ಜನಪ್ರಿಯ, ಬಹುಸಂಖ್ಯಾತರ ಭಾವನೆಗಳನ್ನು ತೃಪ್ತಗೊಳಿಸುವ ಸಂಗತಿಗಳಿಗಷ್ಟೇ ಆದ್ಯತೆಯನ್ನು ನೀಡಿಕೊಂಡು ಬರುತ್ತಿವೆ. ಆ ಸಾಲಿನಲ್ಲಿ ಮೋದಿ ನೇತೃತ್ವದ ಸರಕಾರ ಕೂಡ ನಿಂತಿದೆ. ಆಳುವ ಸರಕಾರಗಳ ಈ ನೀತಿಗಳು ಆರ್ಥಿಕತೆ ವಿಚಾರಗಳ ಕಡೆ ಮುಖ ಮಾಡುವ ಲಕ್ಷಣಗಳು ಕಾಣಿಸುತ್ತಿಲ್ಲ ಮತ್ತು ಸರಕಾರಗಳ ಇಂತಹ ನಡೆಗಳು ಜನರಿಗೂ ಅರ್ಥವಾಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ.

English summary
Prime minister Narendra Modi led NDA 2.0 scrapped special status of Jammu and Kashmir. Here is an analysis of how majority people feelings become vote for ruler class.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X