ಎಚ್‌ಡಿಕೆ ಸಮಯಾಧಾರಿತ ರಾಜಕಾರಣಕ್ಕೆ ಮತ್ತೊಂದು ವಿಕೆಟ್ ಪತನ?
ಸಮಯ, ಸಂದರ್ಭಕ್ಕೆ ಬೇಕಾದರೆ ಮಾತ್ರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ನಾಯಕರನ್ನು ತಮ್ಮ ಆಪ್ತವಲಯದಲ್ಲಿ ಸೇರಿಸಿಕೊಳ್ಳುತ್ತಾರೆ ಎನ್ನುವ ಪಕ್ಷದೊಳಗಿನ ಅಪವಾದಕ್ಕೆ ಈಗ ಮತ್ತೊಂದು ಹೆಸರು ಸೇರ್ಪಡೆಯಾಯಿತೇ? ಈ ಪ್ರಶ್ನೆ ಸದ್ಯ ಕಾಡುತ್ತಿರುವುದಕ್ಕೆ ಕಾರಣ ಇಲ್ಲದಿಲ್ಲ.
ಚೆಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ ಅವರು ಕುಮಾರಸ್ವಾಮಿ ಜೊತೆ ಗಳಸ್ಯ ಕಂಠಸ್ಯದಂತೆ ಇದ್ದರು. ಅದೇನು ಬೆಳವಣಿಗೆ ನಡೆಯಿತೋ, ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿ, ಚುನಾವಣೆಯಲ್ಲಿ ಸ್ಪರ್ಧಿಸಿ ಅವರಿಬ್ಬರು ಸೋತಿದ್ದಾಯಿತು. ಇದಾದ ನಂತರ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ಅವರು. ಜಮೀರ್ - ಎಚ್‌ಡಿಕೆ ಸ್ನೇಹ ಯಾವಮಟ್ಟಿಗೆ ಇತ್ತು ಎನ್ನುವುದಕ್ಕೆ ಕಾಲವೇ ಸಾಕ್ಷಿಯಾಗಿತ್ತು.
ಈಗ ಜಮೀರ್ ಕೂಡಾ ಕುಮಾರಸ್ವಾಮಿ ಸಖ್ಯದಿಂದ ದೂರವಾಗಿ ಕಾಂಗ್ರೆಸ್ ನಲ್ಲಿದ್ದಾರೆ. ಜಮೀರ್ ಪಕ್ಷ ಬಿಟ್ಟಿದ್ದು ಒಂದು ಕಡೆಯಾದರೆ, ಎಚ್‌ಡಿಕೆ ವಿರುದ್ದ ಗತ ಪುರಾಣವನ್ನು ಜಮೀರ್ ವರ್ಣರಂಜಿತವಾಗಿ ಜನರ ಮುಂದೆ ಒಂದೊಂದಾಗಿ ಎಳೆದು ತರುತ್ತಿದ್ದಾರೆ. ಈ ಪಟ್ಟಿಗೆ ಮೈಸೂರಿನ ಇನ್ನೋರ್ವ ಪ್ರಭಾವೀ ಶಾಸಕರೊಬ್ಬರ ಹೆಸರು ಸೇರ್ಪಡೆಯಾಯಿತೇ?
ಮೈಸೂರು ರಾಜಕೀಯ ಮತ್ತು ಸಹಕಾರ ರಂಗ ಕ್ಷೇತ್ರದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರದ್ದು ದೊಡ್ಡ ಹೆಸರು. ಆದರೆ, ಕುಮಾರಸ್ವಾಮಿಯವರ ಜೊತೆಗಿನ ಮನಸ್ತಾಪದಿಂದ ಅವರು ಪಕ್ಷದ ಚಟುವಟಿಕೆಯಿಂದ ದೂರವಿದ್ದು, ಕಾಂಗ್ರೆಸ್ ಸೇರುವುದಾಗಿ ಹೇಳಿದ್ದರು. ಆದರೆ, ಇವರನ್ನು ಬಿಟ್ಟುಕೊಡಲು ಜೆಡಿಎಸ್ ವರಿಷ್ಠ ದೇವೇಗೌಡ್ರು ಸಿದ್ದರಿಲ್ಲ. ಹಾಗಾಗಿ, ಇವರನ್ನು ಉಳಿಸಿಕೊಳ್ಳಲು ಶತಪ್ರಯತ್ನ ಗೌಡ್ರು ಮತ್ತವರ ಕುಟುಂಬದವರು ಮುಂದುವರಿಸಿದ್ದಾರೆ.

ಜಿ.ಟಿ.ದೇವೇಗೌಡ್ರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಜೋರಾಗಿ ನಡೆಯುತ್ತಿದೆ
ಜಿ.ಟಿ.ದೇವೇಗೌಡ್ರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ, ಕುಮಾರಸ್ವಾಮಿಯವರ ಜೊತೆ (ಇತ್ತೀಚಿನ ದಿನಗಳಲ್ಲಿ) ಆಪ್ತರಾಗಿರುವ ಶಾಸಕರೊಬ್ಬರಿಗೆ ಸಹ್ಯವಾಗುತ್ತಿಲ್ಲ ಎನ್ನುವ ಮಾತಿದೆ. ಮೈಸೂರು ರಾಜಕೀಯದಲ್ಲಿ ಹಿಡಿತ ಸಾಧಿಸಲು ಹಿನ್ನಡೆಯಾಗಬಹುದು ಎನ್ನುವ ಕಾರಣಕ್ಕಾಗಿ ಎಚ್‌ಡಿಕೆ ಆಪ್ತ ಕೆ.ಆರ್. ನಗರ ಶಾಸಕ ಸಾ.ರಾ.ಮಹೇಶ್ ಅವರು ಕುಮಾರಸ್ವಾಮಿಯವರ ಜೊತೆಗೆ ಅಂತರ ಕಾಯ್ದುಕೊಂಡು ಬರುತ್ತಿದ್ದಾರೆ ಎನ್ನುವ ಸುದ್ದಿ ಈ ಭಾಗದಲ್ಲಿ ಹರಿದಾಡುತ್ತಿದೆ.

ಬಿಜೆಪಿ ಕಾರ್ಯಕ್ರಮದಲ್ಲಿ ಸಾ.ರಾ.ಮಹೇಶ್ ಭಾಗವಹಿಸಿದ್ದು, ಕೇಸರಿ ಶಾಲನ್ನು ಹೊದ್ದುಕೊಂಡಿದ್ದು
ಕುಮಾರಸ್ವಾಮಿಯವರಿಗೆ ಬೆನ್ನಿಗೆ ಬೆನ್ನಾಗಿ ನಿಂತಿದ್ದ ಸಾ.ರಾ.ಮಹೇಶ್ ಅವರು ಮೈಸೂರು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಕ್ಷೇತ್ರದಲ್ಲಿ 20 ದಿನಗಳ ಮೋದಿ ಯುಗ್ ಉತ್ಸವ್ ಕಾರ್ಯಕ್ರಮವನ್ನು ರಾಮದಾಸ್ ಆಯೋಜನೆ ಮಾಡಿದ್ದರು. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಾ.ರಾ.ಮಹೇಶ್ ಭಾಗವಹಿಸಿದ್ದು, ಕೇಸರಿ ಶಾಲನ್ನು ಹೊದ್ದುಕೊಂಡಿದ್ದು, ಇದರಿಂದ ಇವರು ಬಿಜೆಪಿಗೆ ಹತ್ತಿರವಾಗುತ್ತಿದ್ದಾರಾ ಎನ್ನುವ ಗುಸುಗುಸು ಚರ್ಚೆ ಆರಂಭವಾಗಿತ್ತು. (ಚಿತ್ರದಲ್ಲಿ: ಸಚಿವ ಬೈರತಿ ಪಕ್ಕ ಸಾ.ರಾ.ಮಹೇಶ್)

ಸಾ.ರಾ.ಮಹೇಶ್ ಇತ್ತೀಚಿನ ದಿನಗಳಲ್ಲಿ ಬಹಿರಂಗವಾಗಿ ಎಲ್ಲೂ ಕಾಣಿಸುತ್ತಲೂ ಇಲ್ಲ
ಮೈಸೂರು ಭಾಗಕ್ಕೆ ಕುಮಾರಸ್ವಾಮಿ ಬಂದಾಗ, ಅವರ ಜೊತೆಗೆ ಇರುತ್ತಿದ್ದ ಸಾ.ರಾ.ಮಹೇಶ್ ಇತ್ತೀಚಿನ ದಿನಗಳಲ್ಲಿ ಬಹಿರಂಗವಾಗಿ ಎಲ್ಲೂ ಕಾಣಿಸುತ್ತಲೂ ಇಲ್ಲ, ಜೊತೆಗೆ, ಯಾವುದೇ ಹೇಳಿಕೆಯನ್ನು ನೀಡುತ್ತಿಲ್ಲ. ಕುಮಾರಸ್ವಾಮಿ ಜೊತೆಗೆ ಇವರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ. ಜೊತೆಗೆ, ಜಿ.ಟಿ.ದೇವೇಗೌಡ್ರ ವಿಚಾರದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸಾ.ರಾ.ಮಹೇಶ್ ಅಂತರ ಕಾಯ್ದುಕೊಳ್ಳುತ್ತಿರುವುದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ
ಕೆಲವು ದಿನಗಳ ಹಿಂದೆ ಚಾಮುಂಡೇಶ್ವರಿ ದೇವಾಲಯಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದ್ದಾಗ, ಅವರ ಜೊತೆ ಜಿಟಿಡಿ ಪುತ್ರ ಹರೀಶ್ ಗೌಡ ಅವರೂ ಕಾಣಿಸಿಕೊಂಡಿದ್ದರು. ಈ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡುತ್ತಾ, "ನನ್ನ ಮಗ ಮತ್ತು ಜಿಟಿಡಿ ಮಗ, ಸಮಕಾಲೀನರು ಮತ್ತು ಮೊದಲಿನಿಂದಲೂ ಆತ್ಮೀಯ ಸ್ನೇಹಿತರು. ಅವರ ಲೆವೆಲ್ ನಲ್ಲಿ ಏನಾದರೂ ಚರ್ಚೆಯಾಗಿದ್ದರೆ ನಾನು ಏನು ಮಾಡಲು ಸಾಧ್ಯ, ಕೆಲವೊಮ್ಮೆ ಮಕ್ಕಳ ಮಾತು ಕೇಳಬೇಕಾಗುತ್ತದೆ" ಎಂದು ಕುಮಾರಸ್ವಾಮಿ ನೀಡಿದ ಹೇಳಿಕೆ, ಜಿಟಿಡಿ ಪಕ್ಷದಲ್ಲೇ ಉಳಿಯಲಿದ್ದಾರೆ ಎನ್ನುವ ಸಂದೇಶ ರವಾನಿಸಿದಂತಿದೆ. ಸಾ.ರಾ.ಮಹೇಶ್ ಅವರು ಜೆಡಿಎಸ್ ನಿಂದ ದೂರವಾಗುತ್ತಿದ್ದಾರೆ ಎನ್ನುವ ಸುದ್ದಿ ಸತ್ಯವಾಗಿದ್ದರೆ, ತಮ್ಮ ಆಪ್ತವಲಯದಲ್ಲಿ ಸೇರಿಸಿಕೊಂಡು ನಂತರ ದೂರವಿಡುವ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಲಿದೆ.












Click it and Unblock the Notifications