cloud cow APPನಲ್ಲಿ ಹೂಡಿಕೆ ಮಾಡಿ ಸೀಮೆ ಹಸು ದತ್ತು ತೆಗೆದುಕೊಂಡಿದ್ದರೆ ಹುಷಾರ್
ಬೆಂಗಳೂರು, ಡಿ. 27: ಬೋರ್ ವೆಲ್ ನೀರು, ಜಮೀನು ಇದ್ದು, ಹತ್ತು ಹಸು ಸಾಕಿದರೂ ತಿಂಗಳಿಗೆ ಹತ್ತು ಸಾವಿರ ಉಳಿಸೋದೇ ಕಷ್ಟ. ಆ ವಾಸ್ತವ ರೈತರಿಗೆ ಮಾತ್ರ ಗೊತ್ತು. ಆನ್‌ಲೈನ್‌ನಲ್ಲಿ 22,500 ರೂ. ಹೂಡಿಕೆ ಮಾಡಿ ಸೀಮೆ ಹಸು ದತ್ತು ತೆಗೆದುಕೊಂಡರೆ ದಿನಕ್ಕೆ 2475 ರೂಪಾಯಿನಂತೆ 45 ದಿನ ನೀವು 1,11,375 ರೂ. ಗಳಿಸಬಹುದಂತೆ! ಇನ್ನು 59 ಸಾವಿರ ಹೂಡಿಕೆ ಮಾಡಿ 150 ದಿನಕ್ಕೆ ಹಸು ದತ್ತು ತೆಗೆದುಕೊಂಡರೆ ಬರೋಬ್ಬರಿ ದಿನಕ್ಕೆ 6 ಸಾವಿರ ರೂ.ನಂತೆ 150 ದಿನಕ್ಕೆ 8.98 ಲಕ್ಷ ರೂ. ಗಳಿಸಬಹುದು. ಎಷ್ಟು ಹಸು ಬೇಕಾದರೂ ದತ್ತು ತೆಗೆದುಕೊಳ್ಳಬಹುದು.
ಜಮೀನು, ನೀರು ಸೌಕರ್ಯ ಇದ್ದು ಹತ್ತು ಹಸು ಸಾಕಿದರೂ ತಿಂಗಳಿಗೆ 50 ಸಾವಿರ ಉಳಿಸೋದು ರೈತರಿಗೆ ಕಷ್ಟ. ಇನ್ನು ಮೂರು ತಿಂಗಳು ಹಾಲು ಕರೆದರೆ ಅರು ತಿಂಗಳು ಅವನ್ನು ಸಾಕಬೇಕು. ಹೀಗಾಗಿ ಹಸು ಸಾಕಾಣಿಕೆಯಿಂದ ರೈತರೇ ದೂರ ಸರಿಯುತ್ತಿದ್ದಾರೆ. ಆದರೆ, ಆನ್‌ಲೈನ್‌ನಲ್ಲಿ ಹಸು ದತ್ತು ಪಡೆದು ಲಕ್ಷ ಲಕ್ಷ ಲಾಭ ಮಾಡುವ ಬೋಗಸ್ ಪ್ಲ್ಯಾನ್ ಪರಿಚಯಿಸಿ ಜನರಿಗೆ ಮೋಸ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ವಿವಿಧ ಸ್ಕೀಮ್‌ಗಳಲ್ಲಿ ಹಸು ದತ್ತು ಪಡೆಯುವ 9 ಕ್ಲೌಡ್ ಕೌ ಸ್ಕೀಮ್ ಸೈಬರ್ ವಂಚಕರು ಪರಿಚಯಿಸಿದ್ದಾರೆ.
ಇಂತಹ ಬೋಗಸ್ ಸ್ಕೀಮ್ ನಂಬಿ ಲಕ್ಷಾಂತರ ಜನರಿಂದ ಹೂಡಿಕೆ ಮಾಡಿದ್ದಾರೆ. ಕೂತಲ್ಲೇ ಹಣ ಮಾಡುವ ಆಸೆ ಇಟ್ಟುಕೊಂಡವರು ಕೈಯಲ್ಲಿದ್ದ ಹಣ ಹೂಡಿಕೆ ಮಾಡಿ ಮೊಬೈಲ್‌ನಲ್ಲೇ ಕೋಟ್ಯಾದಿಪತಿ ಕನಸು ಕಾಣುತ್ತಿದ್ದಾರೆ. ಮೂರ್ಖ ಜನರನ್ನು ಗುರಿಯಾಗಿಟ್ಟುಕೊಂಡು ಲಕ್ಷ ಲಕ್ಷ ಹೂಡಿಕೆ ಮಾಡಿಕೊಳ್ಳಲಾಗುತ್ತಿದೆ. ಇದು ಪಕ್ಕಾ ಸೈಬರ್ ವಂಚನೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ, ಮೂರು ದಿನ ಹಣ ವಾಪಸು ಬರುವುದನ್ನು ಖಚಿತ ಪಡಿಸಿಕೊಂಡು ಹೂಡಿಕೆ ಮಾಡಿರುವರು, ತಮ್ಮ ಸ್ನೇಹಿತರಿಂದಲೂ ಹೂಡಿಕೆ ಮಾಡಿಸುತ್ತಿದ್ದಾರೆ. ದೇಶವ್ಯಾಪ್ತಿ ಲಕ್ಷಾಂತರ ಮಂದಿ ಈ ಆಪ್ ಡೌನ್ ಲೋಡ್ ಮಾಡಿಕೊಂಡು ಹೂಡಿಕೆ ಮಾಡಿದ್ದಾರೆ.

100 ರೂ. ನಿಂದ 59 ಸಾವಿರ ಹೂಡಿಕೆ
ಇನ್ನು ಕನಿಷ್ಠ ನೂರು ರೂಪಾಯಿ ಹೂಡಿಕೆ ಮಾಡಿ ಕಡಿಮೆ ಹಾಲು ಕೊಡುವ ಹಸು ಮೂರು ದಿನದ ಮಟ್ಟಿಗೆ ದತ್ತು ತೆಗೆದುಕೊಳ್ಳಬಹುದು. ಮೂರು ದಿನಕ್ಕೆ 18 ರೂ. ಆದಾಯ ಜತೆಗೆ ನಿಮ್ಮ ಹೂಡಿಕೆ ಹಣ ವಾಪಸು ಬರಲಿದೆ. ಒಂದು ಸಾವಿರ ರೂ. ಹೂಡಿಕೆ ಮಾಡಿದರೆ, ಹತ್ತು ಹಸು ದತ್ತು ತೆಗೆದುಕೊಂಡು ಮೂರು ದಿನಕ್ಕೆ 540 ರೂ. ಆದಾಯ ಜತೆಗೆ ಹೂಡಿಕೆ ಹಣ 1000 ರೂ. ವಾಪಸು ಪಡೆಯಬಹುದು. ಅನ್‌ಲೈನ್‌ನಲ್ಲಿಯೇ ಹಸುಗಳ ಚಿತ್ರ ಕೊಟ್ಟಿದ್ದು, ಅವನ್ನು ಆಯ್ಕೆ ಮಾಡಿಕೊಂಡು ಡೆಪಾಸಿಟ್ ಮಾಡಿದರೆ ಸಾಕು ಮರು ದಿನದಿಂದಲೇ ಕೂತಲ್ಲಿ ಆದಾಯ ಬರಲಿದೆ ಎಂದು ವಿವರಿಸಲಾಗಿದೆ.

ಕ್ಲೌಡ್ ಕೌವ್ ಆಪ್ ವಿವರ
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪ್ರತಿ ನಿತ್ಯ ಅತಿ ಹೆಚ್ಚು ಡೌನ್‌ಲೋಡ್ ಆಗುತ್ತಿರುವ ಆಪ್ ಟ್ರೆಂಡಿಂಗ್ ಸಾಲಿನಲ್ಲಿದೆ. ಕ್ಲೌಡ್ ಕೌ ಹೆಸರಿನ ಈ ಆಪ್ ನಲ್ಲಿ ಹಸುಗಳನ್ನು ದತ್ತು ಪಡೆದು ಹಣ ಗಳಿಸುವ ನಾನಾ ಪ್ಲಾನ್ ಪರಿಚಯಿಸಿದ್ದಾರೆ. ಇನ್ನು ಈ ಆಫ್ ಡೌನ್ ಲೋಡ್ ಮಾಡಿಕೊಂಡು ಹೂಡಿಕೆ ಮಾಡಿ ಸ್ನೇಹಿತರಿಂದಲೂ ಹೂಡಿಕೆ ಮಾಡಿಸಿದರೆ ಹೆಚ್ಚುವರಿ ಆದಾಯ ಬರಲಿದೆ ಎಂದು ನಂಬಿಸಲಾಗಿದೆ.

ಮಹಾ ದೋಖಾ ಸ್ಕೀಮ್
ಕ್ಲೌಡ್ ಕೌವ್ ಆಪ್ - ಪಾಂಡಾ ಹೆಸರಿನ ಕಂಪನಿ ಡೆವಲಪ್ ಮಾಡಿರುವ ಈ ಕ್ಲೌಡ್ ಕೌವ್ ಬಗ್ಗೆ ಉಳಿದ ಯಾವ ಮಾಹಿತಿಯೂ ಸಿಗಲ್ಲ. ಹಸುಗಳಿಗೆ ಡಿಜಿಟಲ್ ಯೂನಿಕ್ ಐಡಿ ನೀಡುವ ಬಗ್ಗೆ ಬೆಳಗಾವಿ ಮೂಲದ ಇಬ್ಬರು ಇಂಜಿನಿಯರ್‌ಗಳು ತಂತ್ರಜ್ಞಾನ ರೂಪಿಸಿ ಅದಕ್ಕೆ 'cows on cloud' ಹೆಸರಿಟ್ಟಿದ್ದರು. 2020 ರಲ್ಲಿ ಗೋವಾದ ಗೋಶಾಲೆಯಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿತ್ತು. ಹಸು ಕಳ್ಳತನ ತಪ್ಪಿಸಲು ಪ್ರಧಾನಿ ಮೋದಿ ಕರೆ ಕೊಟ್ಟ ಬೆನ್ನಲ್ಲೇ ಬೆಳಗಾವಿ ಮೂಲದ ಸಾಹಸಿ ಇಂಜಿನಿಯರ್‌ಗಳು ಅಭಿವೃದ್ಧಿ ಪಡಿಸಿರುವ ದೇಶ ಹೆಮ್ಮೆ ಪಡುವ ತಂತ್ರಜ್ಞಾನಕ್ಕೆ ಇಟ್ಟಿರುವ ಹೆಸರನ್ನು ಉಲ್ಟಾ ಮಾಡಿ ಸೈಬರ್ ವಂಚಕರು 'cloud cow' ಹೆಸರಿಟ್ಟು ದೋಖಾ ಪ್ಲಾನ್ ಪರಿಚಯಿಸಿದ್ದಾರೆ. ಇನ್ನೂ ಈ ಬೋಗಸ್ ಕಂಪನಿ ಜತೆ ಅಮೆಜಾನ್, ಗ್ರೀನ್ ವುಡ್ ಮಾರ್ಕೆಟ್ ಮತ್ತು ಪೆಟಿಎಂ ವಹಿವಾಟು ಪಾರ್ಟ್ನರ್ ಆಗಿದ್ದಾರೆ ಎಂದು ಬಿಂಬಿಸಲಾಗಿದೆ.

ಟಾಪ್ ದೋಖಾ ಸ್ಕೀಮ್ ವಿವರ
cow9 ಎಂಬ ಟಾಪ್ ಬೋಗಸ್ ಸ್ಕೀಮ್ ಪರಿಚಯಿಸಿದ್ದು, 59, 900 ರೂ. ಹೂಡಿಕೆ ಮಾಡಿದರೆ, ದಿನಕ್ಕೆ 5990 ರೂ. ಆದಾಯ ಬರುತ್ತದಂತೆ. 150 ದಿನದಲ್ಲಿ8.98, 920 ರೂ. ಬರಲಿದೆ ಎಂದು ಹೇಳಲಾಗಿದೆ. ಈ ಪ್ಲಾನ್ ಪ್ರಕಾರ 60 ಸಾವಿರ ಹೂಡಿಕೆ ಮಾಡಿದರೆ ಅರ್ಧ ವರ್ಷಕ್ಕೆ 9 ಲಕ್ಷ ಗಳಿಸಬಹುದು ಎಂದ ಚೋಳು ಬಿಡಲಾಗಿದೆ. ಜಗತ್ತಿನ ಯಾವ ಹೂಡಿಕೆ ಸ್ಕೀಮ್‌ನಲ್ಲೂ ಈ ಪರಿಯ ಆದಾಯ ಸಾಧ್ಯವಿಲ್ಲ. ಇದನ್ನು ನಿಜ ಎಂದು ಭಾವಿಸಿ ಅನೇಕ ಮುಗ್ಧ ಜನರು ಕಷ್ಟ ಪಟ್ಟು ದುಡಿದ ಹಣವನ್ನು ಹೂಡಿಕೆ ಮಾಡಿದ್ದಾರೆ. ಇದು ಪಕ್ಕಾ ಸೈಬರ್ ವಂಚನೆ ಎಂದು ಅನೇಕರು ರಿವ್ಯೂ ಹಾಕಿದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಪ್ರತಿ ನಿತ್ಯ ಸಾವಿರಾರು ಜನ ಹೂಡಿಕೆ ಮಾಡುತ್ತಿದ್ದಾರೆ. ಆರಂಭಿಕ ಹಂತದಲ್ಲಿರುವ ಕಾರಣ ಸದ್ಯಕ್ಕೆ ಯಾರೂ ಪೊಲೀಸರಿಗೆ ದೂರು ನೀಡಿಲ್ಲ. ನೂರು, ಸಾವಿರ ಕಳೆದುಕೊಂಡವರು ಹೋಗಿದ್ದು ಇಷ್ಟೆ ತಾನೇ ಎಂದು ದೂರು ಕೊಡುವ ಸಾಹಸ ಮಾಡದೇ ಸುಮ್ಮನಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕ್ಲೌಡ್ ಕೌವ್ ಜನರಿಗೆ ರೆಫರಲ್ ಮೂಲಕ ಪರಿಚಯಿಸಿ ಹೂಡಿಕೆ ಮಾಡಿದವರ ಆಪ್ತರನ್ನ ಈ ಜಾಲದೊಳಗೆ ಬೀಳಿಸಲಾಗುತ್ತಿದೆ.

ಎಚ್ಚರಿಕೆ ಸಂದೇಶಗಳು
ಇನ್ನೂ ಕ್ಲೌಡ್ ಕೌ ಆಪ್‌ನಲ್ಲಿ ಹೂಡಿಕೆ ಮಾಡಬೇಡಿ. ಇದು ವಂಚನೆ, ಅಲ್ಲಿ ಕೊಟ್ಟಿರುವ ರೇಟಿಂಗ್ ಕೂಡ ಬೋಗಸ್ ಎಂದು ಅನೇಕರು ಆಪ್‌ನಲ್ಲಿ ರಿವ್ಯೂ ದಾಖಲಿಸಿ ಎಚ್ಚರಿಸಿದ್ದಾರೆ. ರವೀಂದ್ರ ಎಂಬ ವ್ಯಕ್ತಿ, ಇದೊಂದು ದೊಡ್ಡ ವಂಚನೆ. ಕಷ್ಟ ಪಟ್ಟು ದುಡಿದ ಹಣ ಹೂಡಿಕೆ ಮಾಡಿ ಕಳೆದುಕೊಳ್ಳಬೇಡಿ. ಇದಕ್ಕೆ ಐದು ಸ್ಟಾರ್ ಕೊಟ್ಟಿರುವುದು ಫೇಕ್. ಬಡ ಭಾರತೀಯರೇ ಎಚ್ಚರಗೊಳ್ಳಿ. ಈ ಆಪ್ ಹೂಡಿಕೆ ಮೂಲಕ ಜನರನ್ನು ಮೋಸ ಮಾಡಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ. ಇದೇ ರೀತಿ ಅಖಿಲ್ ಎಂಬಾತ ನೂರು ರೂಪಾಯಿ ಹೂಡಿಕೆ ಮಾಡಿ ವಾಪಸು 18 ರೂ. ಪಡೆದಿದ್ದಾರೆ. ಮೂಲ ಹಣ ವಾಪಸು ಕೊಟ್ಟಿಲ್ಲ. ಸಣ್ಣ ಹಣ ಪಾವತಿ ಮಾಡಿ ಆಸೆ ತೋರಿಸಿ ಜಾಸ್ತಿ ಹಣ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಲಾಗುತ್ತಿದೆ. ಇದನ್ನು ನಂಬಬೇಡಿ, ಈ ಆಪ್ ಅಗ್ರಗಣ್ಯ ಸ್ಥಾನದಲ್ಲಿದೆ ಎಂದು ನಂಬಿ ಹೂಡಿಕೆ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾನೆ. ಅರವಿಂದ ಸುಬ್ರಮಣಿಯಮ್ ಎಂಬಾತ ಕೂಡ ಇದನ್ನು ನಂಬಿ ಹೂಡಿಕೆ ಮಾಡಬೇಡಿ ಎಂದು ಇದರ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಎಚ್ಚರಿಸಿದ್ದಾರೆ. ಆದರೆ ಜನ ಮರಳೋ ಜಾತ್ರೆ ಮರಳು ಲಕ್ಷಾಂತರ ಮಂದಿ ಈ ಆಪ್ ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದು, ಟಾಪ್ ಟ್ರೆಂಡಿಂಗ್‌ನಲ್ಲಿದೆ. ಇಷ್ಟಾಗಿಯೂ ಹೂಡಿಕೆ ಮಾಡಿ ಹಣ ಕಳೆದುಕೊಂಡರೆ ಈ ಭೂಮಿ ಮೇಲೆ ಹೂಡಿಕೆ ಮಾಡಿದವರನ್ನು ಯಾರೂ ಕಾಪಾಡಲಾರ!

ದೂರು ಕೊಟ್ಟರೆ ಕ್ರಮ
ಕ್ಲೌಡ್ ಕೌವ್ ಆಪ್ ವಂಚನೆ ಸ್ಕೀಮ್ ಬಗ್ಗೆ ಬೆಂಗಳೂರು ಸೈಬರ್ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಇದೊಂದು ಬೋಗಸ್ ಸ್ಕೀಮ್ ಎಂದು ಅರಿತಿರುವ ಪೊಲೀಸರು ದೂರು ಕೊಟ್ಟರೆ ಕ್ರಮ ಜರುಗಿಸಲು ಸಜ್ಜಾಗಿದ್ದಾರೆ. ಸದ್ಯಕ್ಕೆ ಯಾರೂ ದೂರು ಕೊಡದ ಕಾರಣ ಪೊಲೀಸರು ಸುಮ್ಮನಾಗಿದ್ದಾರೆ. ಮೇಲ್ನೋಟಕ್ಕೆ ಇದೊಂದು ವಂಚನೆ ಪ್ಲಾನ್ ಎಂದು ತಿಳಿದು ಬಂದಿದೆ. ಆಪ್ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸಾಕ್ಷಾಧಾರಗಳ ಲಭ್ಯತೆ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಸೈಬರ್ ಪೊಲೀಸ್ ಅಧಿಕಾರಿಗಳು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.












Click it and Unblock the Notifications