Health Tips: ದೈನಂದಿನ ರೋಗನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿನ ಬಳಕೆ
ಕೊರೊನಾವೈರಸ್ ರೂಪಾಂತರ ಓಮಿಕ್ರಾನ್ ಸೋಂಕನ್ನು ತಡೆಗಟ್ಟುವುದು ಖಂಡಿತವಾಗಿಯೂ ಸುಲಭದ ಕೆಲಸವಲ್ಲ. ತಜ್ಞರು ತಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಲಹೆ ನೀಡುತ್ತಿದ್ದಾರೆ. ಲಸಿಕೆ ಎರಡು ಡೋಸ್, ಬೂಸ್ಟರ್ ನಡುವೆಯೂ ಸೋಂಕು ಹಬ್ಬುತ್ತಿದೆ. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ನಮ್ಮ ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಈಗ ಅತ್ಯಗತ್ಯ, ಅನಿವಾರ್ಯ.
ನಮ್ಮಲ್ಲಿ ಅನೇಕರು ಕೆಲಸದ ಒತ್ತಡ, ಸಮಯೋಚಿತ ಮತ್ತು ಪೌಷ್ಟಿಕಾಂಶದ ಊಟವನ್ನು ಸೇವಿಸದಿರುವುದು ಮತ್ತು ತಡವಾಗಿ ನಿದ್ದೆ ಮಾಡುವುದು, ದೀರ್ಘಕಾಲಿಕ ದೈಹಿಕ ಸಮಸ್ಯೆ ಮುಂತಾದ ಕಾರಣಗಳಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ.
ನಮ್ಮ ಜೀವನಶೈಲಿಯಲ್ಲಿ ಸರಿಯಾದ ಬದಲಾವಣೆ ಜೊತೆಗೆ, ಶಕ್ತಿಯುತವಾದ ಪ್ರತಿರೋಧಕಗಳನ್ನು ಹೊಂದಿರುವ ಆಹಾರಗಳನ್ನು ಸೂಕ್ತವಾಗಿ ಸೇವಿಸುವ ಮೂಲಕ ನಮ್ಮ ಉಸಿರಾಟದ ವ್ಯವಸ್ಥೆ ಮತ್ತು ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಶುಂಠಿ ಬಳಕೆ ನಂತರ ಸರ್ವರೋಗ ನಿವಾರಕ ಎನಿಸಿರುವ 'ಹರಿದ್ರಾ' ಅರಿಶಿನ ಬಳಕೆ ಬಗ್ಗೆ ತಿಳಿಯೋಣ...

ಸೌಂದರ್ಯವರ್ಧಕ, ರೋಗನಿರೋಧಕವಾಗಿ ಕೂಡಾ
ಸೌಂದರ್ಯವರ್ಧಕ, ರೋಗನಿರೋಧಕವಾಗಿ ಕೂಡಾ ಅರಿಶಿನ ಕಾರ್ಯನಿರ್ವಹಿಸಬಲ್ಲುದು, ಅರಿಶಿನ ಕೊಂಬು, ಬೇರು, ಪುಡಿ ವಿವಿಧ ಸಂದರ್ಭಗಳಲ್ಲಿ ಅಡುಗೆ, ಅಲಂಕಾರ, ಮನೆಮದ್ದಿಗೆ ಬಳಕೆಯಾಗುತ್ತಿದೆ. ಮಧುಮೇಹ, ವಾತ ಸಮಸ್ಯೆ, ಕ್ಯಾನ್ಸರ್, ಅಲ್ಸರ್, ವೈರಲ್ ಸೋಂಕು, ಲ್ಯೂಕೆಮಿಯಾ, ಅಲ್ ಜೈಮರ್ , ಟ್ಯೂಮರ್ ಹೀಗೆ ಅನೇಕ ಸಮಸ್ಯೆಗಳಿಗೆ ಅರಿಶಿನ ಪರಿಹಾರವಾಗಬಲ್ಲುದು ಎಂದು ಸಂಶೋಧನೆ ಮೂಲಕ ತಿಳಿದು ಬಂದಿದೆ.

ಕಾಂತಿ ವರ್ಧನೆ
ಕಾಂತಿ ವರ್ಧನೆ:
- ಅರಿಶಿನ ಪುಡಿಯನ್ನು ಎಳ್ಳೆಣ್ಣೆಯಲ್ಲಿ ಕಲೆಸಿ ಹೆಂಗಸರು ಮೈಗೆ ಹಚ್ಚಿ, ಅರ್ಧಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ದುರ್ಗಂಧ, ನವೆ, ಎಗ್ಜಿಮಾ, ಚರ್ಮರೋಗಗಳ ನಿವಾರಣೆಯಾಗಿ ಕಾಂತಿ ವರ್ಧನೆಯಾಗುತ್ತದೆ.
- ಹಾಲಿನ ಕೆನೆ/ಮೊಸರಿನೊಂದಿಗೆ ಅರಿಶಿನ ಪುಡಿಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
- ಅರ್ಧ ಟೀ ಚಮಚ ಅರಿಶಿನ ಪುಡಿ, 2 ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ ಜೊತೆ ಬೆರೆಸಿ ತಲೆ ಹಚ್ಚಿ, 20 ನಿಮಿಷ ಬಳಿಕ ಸ್ವಚ್ಛಗೊಳಿಸುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ. ವಾರಕ್ಕೊಮ್ಮೆ ಈ ವಿಧಾನ ಅನುಸರಿಸಿ.
- ಶ್ರೀಗಂಧ, ಅರಿಶಿನ ಹಾಗೂ ಪನ್ನೀರನ್ನು ಅರೆದು ಬರುವ ಮಿಶ್ರಣವನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ದೂರಾಗುತ್ತವೆ.

ಚರ್ಮದ ರಕ್ಷಣೆ
ಚರ್ಮದ ರಕ್ಷಣೆ: ಅರಿಶಿನ ಕೊಂಬು, ಬೇವಿನ ಎಲೆಯನ್ನು ಅರೆದು ಪುಡಿ ಮಾಡಿ ಚರ್ಮಕ್ಕೆ ಹಚ್ಚುವುದರಿಂದ ಫಂಗಸ್(fungus) ಸೋಂಕು ನಿವಾರಣೆಯಾಗುತ್ತದೆ.
* ಗಾಯಗಳನ್ನು ತೊಳೆಯಲು, ಬಿದ್ದಗಾಯದ ರಕ್ತ ತಡೆಗಟ್ಟಲು ಬಳಸಬಹುದು. Anti ಬ್ಯಾಕ್ಟೀರಿಯಲ್ ಅಂಶ ಇಲ್ಲಿ ಕೆಲಸ ಮಾಡುತ್ತದೆ.

ದಿನನಿತ್ಯ ಬಳಕೆ
ಆರೋಗ್ಯವರ್ಧನೆ: ಅರಿಶಿನ ಪುಡಿ ಹಾಗೂ ನೆಲ್ಲಿ ಕಾಯಿ ಪುಡಿಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸುವುದರಿಂದ ಮಧುಮೇಹ ಹತೋಟಿಗೆ ಬರುತ್ತದೆ.
ಕಾಮಾಲೆ ರೋಗದವರಿಗೆ, ಬೆಳಗ್ಗೆ ಒಂದು ಬಟ್ಟಲು ಗಟ್ಟಿ ಮೊಸರಿನಲ್ಲಿ 10 ಗ್ರಾಂನಷ್ಟು ಅರಿಶಿನ ಪುಡಿಯನ್ನು ಬೆರೆಸಿ ಕೊಡುತ್ತ ಬಂದರೆ ಗುಣಮುಖವಾಗುತ್ತಾರೆ(ವೈದ್ಯರ ಸಲಹೆ ಮೇರೆಗೆ ಇದನ್ನು ಪಾಲಿಸಿ)
ದಿನನಿತ್ಯ ಬಳಕೆ: ಅಡುಗೆಯಲ್ಲಿ ಚಿಟಿಕೆ ಅರಿಶಿನ ಹಾಕಿದರೆ ಸಾಕು, ಬಿಸಿ ಹಾಲಿಗೆ ಚಿಟಿಕೆ ಅರಿಶಿನಪುಡಿ ಬೆರೆಸಿ ದಿನಕ್ಕೊಮ್ಮೆ ಕುಡಿದರೆ ಕೆಮ್ಮು, ನೆಗಡಿ ವಾಸಿಯಾಗುತ್ತದೆ. ಊಟದ ಬಳಿಕ ಚಿಟಿಕೆ ಅರಿಶಿನ ಹಾಗೂ ಬಿಸಿನೀರು/ಕುದಿಸಿ ಆರಿಸಿದ ನೀರನ್ನು ಸೇವಿಸಿ.
* ಒಂದು ಲೋಟ ಬಿಸಿ ನೀರಿಗೆ ಅರ್ಧ ಟೀ ಸ್ಪೂನ್ ಅರಿಶಿನ ಪುಡಿ ಬೆರೆಸಿ, ಅರ್ಧ ಟೀ ಸ್ಪೂನ್ ಸೈಂಧನ ಲವಣ ಬೆರೆಸಿ.. ಬೆಳಗ್ಗೆ ರಾತ್ರಿ ಬಾಯಿ ಮುಕ್ಕಳಿಸಿ, ಗಂಟಲು ಬೇನೆಗೆ ಮುಕ್ತಿ ಹಾಡಿ.

ಕಷಾಯ/ಟೀ
* ಒಂದೂವರೆ ಲೋಟ ನೀರಿಗೆ 10-12 ಲವಂಗ ಹಾಕಿ ಒಂದೆರಡು ಕುದಿ ಬರೆಸಿ, ಒಂದು ಲೋಟಕ್ಕೆ ಇಳಿಸಿ. ಇದಕ್ಕೆ ಚಿಟಿಕೆ ಅರಿಶಿನ ಬೆರೆಸಿ ಕುಡಿಯುವ ಮೊದಲು ಒಂದು ಚಮಚ ಜೇನುತುಪ್ಪ ಬೆರೆಸಿ ಸೇವಿಸಬಹುದು.
* ಅರ್ಧ ಟೀ ಚಮಚ ಅರಿಶಿನ ಪುಡಿ, ಹೆಬ್ಬೆರಳು ಗಾತ್ರದ ಹಸಿ ಶುಂಠಿ -2, ಕಾಳು ಮೆಣಸು 10-12, ಚಕ್ಕೆ 2, ಬೆಲ್ಲದ ಪುಡಿ 2 ಚಮಚ (ಬೆಲ್ಲೆ/ ಕಲ್ಲು ಸಕ್ಕರೆ(ಕೆಂಪು) -ಸ್ವಲ್ಪ)
ವಿಧಾನ: ಎರಡು ಲೋಟ ನೀರನ್ನು ಪಾತ್ರೆಗೆ ಹಾಕಿ ಒಲೆ ಮೇಲಿಟ್ಟು ಕುದಿಯಲು ಬಿಡಿ, ಅರಿಶಿನವನ್ನು ಈಗಲೇ ಬೆರಸಬಹುದು.
* ಶುಂಠಿಯನ್ನು ಜಜ್ಜಿಕೊಳ್ಳಿ, ಕಾಳು ಮೆಣಸು ಪುಡಿ ಮಾಡಿಕೊಳ್ಳಿ. ಚಕ್ಕೆಯನ್ನು ಜಜ್ಜಿಕೊಳ್ಳಿ ಎಲ್ಲವನ್ನು ಕುದಿಯುವ ನೀರಿಗೆ ಬೆರೆಸಿ, ಕೈಯಾಡಿಸಿ.
* ಬೆಲ್ಲದ ಪುಡಿ ಹಾಕಿ ಚೆನ್ನಾಗಿ ಕಲಕಿ. ಒಂದೆರಡು ಕುದಿ ಬರುವ ತನಕ ಬಿಡಿ..
* ಒಲೆಯಿಂದ ಕೆಳಗಿಳಿಸಿದ ಕಷಾಯವನ್ನು ಸೋಸಿ ಲೋಟಕ್ಕೆ ಹಾಕಿಕೊಳ್ಳಿ, ಒಂದು ಅರ್ಧ ನಿಂಬೆ ಹಣ್ಣು ಹಿಂಡಿ.. ಕುಡಿಯುವ ಹದಕ್ಕೆ ಬಂದ ಬಳಿಕ ಸೇವಿಸಿ..












Click it and Unblock the Notifications