Pepper Rasam: ಚಳಿಗಾಲದಲ್ಲಿ ಕಾಡುವ ಕೆಮ್ಮು..ಶೀತ ಶಮನಕ್ಕಾಗಿ ಈ ರಸಂ ಮಾಡಿ ಕುಡಿಯಿರಿ
ನಮ್ಮ ಸುತ್ತಲಿನ ಹವಾಮಾನ ಬದಲಾಗುತ್ತಿದೆ. ಈವರೆಗೂ ಅಬ್ಬರಿಸುತ್ತಿದ್ದ ಹಿಂಗಾರು ಮಳೆ ಕೊಂಚ ಕಮ್ಮಿ ಆಗಿದ್ದು, ಇದೀಗ ಚಳಿಗಾಲವು ನಿಧಾನವಾಗಿ ಆರಂಭವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಚಳಿ ಹೆಚ್ಚಾಗಿದೆ. ಈ ಚಳಿಗಾಲ ಆರಂಭವಾಗುತ್ತಿದ್ದಂತೆ ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗುತ್ತದೆ. ರೋಗನಿರೋಧಕ ಶಕ್ತಿ ಕಮ್ಮಿಯಾಗುತ್ತದೆ.
ಚಳಿಗಾಲ ಆರಂಭವಾಗುತ್ತಿದ್ದಂತೆ ಕೆಮ್ಮು..ಶೀತದಂತಹ ರೋಗಗಳು ಬೆನ್ನು ಬಿಡದೇ ಕಾಡಲು ಶುರು ಮಾಡುತ್ತವೆ. ಏನೇ ಚಿಕಿತ್ಸೆ ಪಡೆದರೂ ಕಮ್ಮಿ ಎಂದರೂ ಒಂದು ತಿಂಗಳು ಇದ್ದೇ ಇರುತ್ತದೆ. ಜೊತೆಗೆ ಬಾಯಿ ರುಚಿ ಕೂಡ ಕಮ್ಮಿಯಾಗುತ್ತದೆ. ಇಂತಹ ಸಮಯದಲ್ಲಿ ಬಾಯಿ ರುಚಿ ಹೆಚ್ಚಲು ಹಾಗೂ ಕೆಮ್ಮು ಕಡಿಮೆಯಾಗಲು ಆರೋಗ್ಯಕರವಾದ ರಸಂವೊಂದನ್ನು ಮನೆಯಲ್ಲೇ ಮಾಡಿ ಸವಿಯಿರಿ. ಚಳಿಗಾಲದಲ್ಲಿ ಕಾಡುವ ಕೆಮ್ಮು ಶೀತ ಶಮನಕ್ಕೆ ಪೆಪ್ಪರ್ ರಸಂ ಅಥವಾ ಕಾಳುಮೆಣಿಸಿನ ರಸಂ ರಾಮಬಾಣ. ಹೀಗಾಗಿ ಮಾಡಿ ಕುಡಿಯಿರಿ. ಕಾಳುಮೆಣಿಸಿನ ರಸಂ ಮಾಡುವ ವಿಧಾನ ಹಾಗೂ ಬೇಕಾಗುವ ಸಾಮಾಗ್ರಿ ಈ ಕೆಳಗಿನಂತಿದೆ.

ಮೆಣಸಿನಕಾಳು ರಸಂಗೆ ಬೇಕಾಗುವ ಸಾಮಾಗ್ರಿಗಳು
ಹುಣಸೆ ಹಣ್ಣು- ಒಂದು ಚಿಕ್ಕ ನಿಂಬೆ ಹಣ್ಣಿನ ಗಾತ್ರ( ನೀರಿನಲ್ಲಿ ನೆನಸಿಡಬೇಕು)
ಮೆಣಸಿನಕಾಳು- ಒಂದು ಚಮಚ( ಪುಡಿ ಮಾಡಿಕೊಳ್ಳಬೇಕು)
ಜೀರಿಗೆ ಪುಡಿ- ಅರ್ಧ ಚಮಚ
ಹಸಿ ಮೆಣಸಿನಕಾಯಿ- ಮೂರರಿಂದ ನಾಲ್ಕು
ಒಣ ಮೆಣಸಿನಕಾಯಿ- ಮೂರು
ಟೋಮೆಟೋ- ಎರಡು
ಸಾಸಿವೆ
ಜೀರಿಗೆ
ಅರಶಿನ ಪುಡಿ-ಅರ್ಧ ಚಮಚ
ಕರಿಬೇವಿನ ಸೊಪ್ಪು
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಉಪ್ಪು ಎಣ್ಣೆ

ಮೆಣಸಿನಕಾಳು ರಸಂ ಮಾಡುವ ವಿಧಾನ
ಮೊದಲಿಗೆ ಒಲೆಯ ಮೇಲೆ ಒಂದು ಬಾಣಲಿಯನ್ನು ಇಟ್ಟು ನೀರು ಹಾಕಿಕೊಂಡು ಅದಕ್ಕೆ ಮೊದಲೇ ಕತ್ತರಿಸಿ ಇಟ್ಟುಕೊಂಡ ಹಸಿ ಮೆಣಸಿನಕಾಯಿ, ಟೋಮೆಟೋ, ಅರಶಿನ ಪುಡಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು ಜೊತೆಗೆ ಪುಡಿ ಮಾಡಿದ ಜೀರಿಗೆ ಪುಡಿ, ಮೆಣಸಿನಕಾಳು ಪುಡಿ, ಹುಣಸೆ ಹಣ್ಣಿನ ರಸ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಈ ಮಿಶ್ರಣವನ್ನು ಹತ್ತು ನಿಮಿಷ ಕುದಿಯಲು ಬಿಡಿ. ಚೆನ್ನಾಗಿ ನೊರೆ ಬರುವ ತನಕ ಈ ಮಿಶ್ರಣವನ್ನು ಕುದಿಸಿ ಇಟ್ಟುಕೊಳ್ಳಿ.
ಬಳಿಕ ಮತ್ತೊಂದು ಬಾಣಲಿ ತೆಗೆದುಕೊಂಡು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ, ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸಿವೆ ಹಾಗೂ ಜೀರಿಗೆಯನ್ನು ಹಾಕಿ. ಸಾಸಿವೆ ಸಿಡಿಯಲು ಶುರುವಾಗುತ್ತಿದ್ದಂತೆ ಮೊದಲೇ ಜಜ್ಜಿ ಇಟ್ಟುಕೊಂಡಿದ್ದ ಬೆಳ್ಳುಳ್ಳಿ ಹಾಗೂ ಒಣ ಮೆಣಸಿನಕಾಯಿ ಹಾಕಿ. ಬಳಿಕ ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಸಿದ್ಧ ಮಾಡಿಕೊಳ್ಳಿ. ಕೊನೆಯಲ್ಲಿ ಒಗ್ಗರಣೆಯನ್ನು ಮೊದಲೇ ಕುದಿಸಿಟ್ಟುಕೊಂಡ ರಸಂಗೆ ಹಾಕಿ ಕೇವಲ ಎರಡು ನಿಮಿಷಗಳ ಕಾಲ ಕುದಿಸಿ ಕೆಳಗಿಳಿಸಿದೆ, ರುಚಿ ರುಚಿಯಾದ ಆರೋಗ್ಯಕರವಾದ ಪೆಪ್ಪರ್ ರಸಂ ಸವಿಯಲು ಸಿದ್ಧವಾಗುತ್ತದೆ.












Click it and Unblock the Notifications