ಹಿಂದಿ ದಿವಸ್ 2022: ವಿಶ್ವದ 4ನೇ ಅತಿದೊಡ್ಡ ಭಾಷೆ ಹಿಂದಿಯ ಇತಿಹಾಸ, ಮಹತ್ವ ತಿಳಿಯಿರಿ
ಹಿಂದಿ ಭಾರತದಲ್ಲಿ ಅತಿಹೆಚ್ಚು ಜನಬಳಕೆಯಾಗುವ ಭಾಷೆ. ಇಂಗ್ಲೀಷ್‌ನಂತೆ ಹಿಂದಿಯನ್ನೂ ಸಂಪರ್ಕ ಭಾಷೆಯಾಗಿ ಮಾಡುವ ಪ್ರಮುಖ ಉದ್ದೇಶದಿಂದ ಆ ಭಾಷೆಯ ಪ್ರಚಾರಕ್ಕೆ ಕೇಂದ್ರ ಸರಕಾರ ಒತ್ತುಕೊಡುತ್ತದೆ. ಈ ಹಿನ್ನೆಲೆಯಲ್ಲಿ ಪ್ರತೀ ವರ್ಷ ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಆಚರಿಸಲಾಗುತ್ತದೆ.
ಒಂದು ಅಂದಾಜು ಪ್ರಕಾರ 42 ಕೋಟಿ ಜನರಿಗೆ ಹಿಂದಿ ಮಾತೃಭಾಷೆಯಾಗಿದೆ. ಇನ್ನೂ 12 ಕೋಟಿ ಜನರು ಹಿಂದಿಯನ್ನು ಎರಡನೇ ಭಾಷೆಯಾಗಿ ಮಾತನಾಡುತ್ತಾರೆ. ಹಿಂದಿಯನ್ನು ಹೆಚ್ಚೆಚ್ಚು ಜನರು ಮಾತನಾಡಲು ಸಾಧ್ಯವಾಗುವ ರೀತಿಯಲ್ಲಿ ಸರಕಾರ ಉತ್ತೇಜನ ನೀಡುತ್ತದೆ. ಹೆಚ್ಚು ಯುವಜನರು ಈ ಭಾಷೆಯನ್ನು ಕಲಿಯುವಂತೆ ಸರಕಾರ ಪ್ರೇರೇಪಿಸುತ್ತದೆ.
ಈ ಪ್ರಯತ್ನದಲ್ಲಿ ಕರ್ನಾಟಕದಂಥ ಕೆಲ ರಾಜ್ಯಗಳಲ್ಲಿ ಹಿಂದಿ ಹೇರಿಕೆಯೂ ಆಗುತ್ತಿರುವುದು ದುರದೃಷ್ಟಕರ ಸಂಗತಿ. ರಾಜ್ಯದ ಬಹುತೇಕ ಬ್ಯಾಂಕುಗಳಲ್ಲಿ ಈಗ ಕನ್ನಡವೇ ಮಾಯವಾಗಿದೆ. ಬ್ಯಾಂಕುಗಳ ಉದ್ಯೋಗಗಳಿಗೆ ಆಗುವ ನೇಮಕಾತಿಯಲ್ಲೂ ಹಿಂದೆ ಭಾಷೆ ಬಲ್ಲವರಿಗೆ ಪ್ರಾಶಸ್ತ್ಯ ನೀಡುವ ಮಟ್ಟಕ್ಕೆ ಹಿಂದಿ ಹೇರಿಕೆ ಆಗುತ್ತಿದೆ. ಅದೇನೇ ಇರಲಿ, ಹಿಂದಿ ಪ್ರಚಾರ ಇರಲಿ, ಹಿಂದೆ ಏರಿಕೆ ಆಗದಿರಲಿ ಎಂಬುದು ಕನ್ನಡಿಗರ ಕೂಗು.

ಹಿಂದಿ ದಿವಸ್ ಯಾವಾಗಿಂದ?
ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದಾಗ ಮೊದಲ ಬಾರಿಗೆ ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಆಚರಣೆ ಜಾರಿಗೆ ತಂದಿದ್ದು. ಹಿಂದಿ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಹಿಂದಿ ದಿವಸ್ ಆಚರಣೆ ಜೊತೆಗೆ ಹಿಂದಿ ಸಾಹಿತ್ಯವನ್ನೂ ಸಂದರ್ಭದಲ್ಲಿ ಪ್ರಚುರಪಡಿಸಲಾಗುತ್ತದೆ. ದೇಶಾಧ್ಯಂತ ಸಾಂಸ್ಕೃತಿ ಉತ್ಸವಗಳನ್ನು ನಡೆಸಲಾಗುತ್ತದೆ.
ಹಿಂದಿ ದಿವಸ್ ಒಂದೆಡೆಯಾದರೆ, ಜನವರಿ 10ರಂದು ವಿಶ್ವ ಹಿಂದಿ ದಿನವನ್ನೂ ಆಚರಿಸಲಾಗುತ್ತದೆ. 2006ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮೊದಲ ಬಾರಿಗೆ ಹಿಂದಿ ದಿನ ಆಚರಣೆಗೆ ಚಾಲನೆ ಕೊಟ್ಟರು. 1975 ಜನವರಿ 10ರಂದು ನಾಗಪುರದಲ್ಲಿ ವಿಶ್ವದ ಮೊದಲ ಹಿಂದಿ ಸಮ್ಮೇಳನ ನಡೆದಿತ್ತು. ಅದರಲ್ಲಿ 30 ದೇಶಗಳಿಂದ 122 ಮಂದಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದ ಕುರುಹಾಗಿ ಪ್ರತೀ ವರ್ಷ ಜನವರಿ 10ರಂದು ವಿಶ್ವ ಹಿಂದಿನ ದಿನವನ್ನು ಆಚರಿಸಲಾಗುತ್ತದೆ.
ಹಿಂದಿ ಇತಿಹಾಸ:
ಹಿಂದಿ ಭಾಷೆ ಏಳೆಂಟನೇ ಶತಮಾನದಲ್ಲಿ ಉಗಮವಾಗಿರಬಹುದು ಎಂಬುದು ತಜ್ಞರ ಅನಿಸಿಕೆ. ಇಂಡೋ - ಆರ್ಯನ್ ಭಾಷಾ ಗುಂಪಿಗೆ ಸೇರಿದ್ದು ಇದು. ವೈದಿಕ ಸಂಸ್ಕೃತ ಇದರ ಮೂಲ. ವೈದಿಕ ಸಂಸ್ಕೃತದಿಂದ ಶೌರಸೇನಿ ಪ್ರಾಕೃತ ಮತ್ತು ಅದರ ಅಪಭ್ರಂಶದಿಂದ ಹಿಂದಿಯ ಹುಟ್ಟು ಆಗಿರಬಹುದು ಎಂದು ಭಾವಿಸಲಾಗಿದೆ.

ಅತಿ ಹೆಚ್ಚು ಜನರು ಮಾತನಾಡುವ ಭಾಷೆಗಳ ಪಟ್ಟಿಯಲ್ಲಿ ಹಿಂದಿ ನಾಲ್ಕನೇ ಸ್ಥಾನದಲ್ಲಿದೆ. ಚೀನಾದ ಮಂದಾರಿನ್, ಇಂಗ್ಲೀಷ್ ಮತ್ತು ಸ್ಪ್ಯಾನಿಷ್ ಬಳಿಕ ಹಿಂದಿ ಬಳಕೆಯೇ ಹೆಚ್ಚು. ಉರ್ದು ಮತ್ತು ಹಿಂದಿಯನ್ನು ಅವಳಿ ಜವಳಿ ಎಂದೂ ಕೆಲವರು ಬಗೆಯುತ್ತಾರೆ. ಉರ್ದುವಿನಲ್ಲಿ ಪರ್ಷಿನ್ ಪ್ರಭಾವ ಹೆಚ್ಚಿದೆ. ಹಿಂದಿಯಲ್ಲಿ ಸಂಸ್ಕೃತ ಗಾಢವಾಗಿದೆ.
1949ರಲ್ಲಿ ಹಿಂದಿಯನ್ನು ಭಾರತದ ಅಧಿಕೃತ ಭಾಷೆ ಎಂದು ಘೋಷಿಸಲಾಯಿತು. ಭಾರತದಲ್ಲಿ ಹಿಂದಿ, ಕನ್ನಡ, ತಮಿಳು, ತೆಲುಗು ಸೇರಿ 22 ಭಾಷೆಗಳಿಗೆ ಅಧಿಕೃತ ಮಾನ್ಯತೆ ಕೊಡಲಾಗಿದೆ.
ಹಿಂದಿ ದಿವಸ್ ಆಚರಣೆ ಹೇಗೆ?
ಹಿಂದಿ ದಿವಸ್ ದಿನದಂದು ದೇಶಾದ್ಯಂತ ಹಲವಾರು ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ದಿನ ರಾಜಭಾಷಾ ಕೀರ್ತಿ ಪುರಸ್ಕಾರ್, ರಾಜಭಾಷಾ ಗೌರವ್ ಪುರಸ್ಕಾರ್ ಇತ್ಯಾದಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಹಿಂದಿ ಭಾಷೆಗೆ ಕೊಡುಗೆ ನೀಡಿದ ನಾಗರಿಕರು, ಸಚಿವರು, ಇಲಾಖೆಗಳು, ಪಿಎಸ್‌ಯುಗಳು, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಈ ಪ್ರಶಸ್ತಿ ಕೊಡಲಾಗುತ್ತದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications