ಕಾಂಗ್ರೆಸ್ ಮುಕ್ತ ಭಾರತದತ್ತ ಬಿಜೆಪಿ ಹೆಜ್ಜೆ, 'ಕೈ' ತಪ್ಪಿತು ಹಿಮಾಚಲ
ಪಂಜಾಬ್ ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಉತ್ತರ ಭಾರತದಲ್ಲಿ ಒಬ್ಬಂಟಿಯಂತೆ ಕಾಣುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಈ ರಾಜ್ಯದ ಸುತ್ತ ಕೇಸರಿ ಬಾವುಟ ಹಾರಾಡುತ್ತಿದೆ. ಇದೇ ಸ್ಥಿತಿಯಲ್ಲೇ ಅರವಿಂದ್ ಕೇಜ್ರಿವಾಲ್ ಕೂಡ ಇದ್ದಾರೆ. ಡಿಸೆಂಬರ್ ಹದಿನೆಂಟರಂದು ಹಿಮಾಚಲ ಪ್ರದೇಶದಲ್ಲೂ ಕಾಂಗ್ರೆಸ್ ಮನೆ ಖಾಲಿ ಮಾಡಲಿದೆ.
ಅಲ್ಲಿಗೆ ಅಮರಿಂದರ್ ಸಿಂಗ್ ಜತೆಗೆ ಕರ್ನಾಟಕ ಹಾಗೂ ಮೇಘಾಲಯದಲ್ಲಿ ಕೈ ಪಕ್ಷ ಸದ್ಯಕ್ಕೆ ಕಾಲೂರಿ ನಿಂತಿದೆ. ಮುಂದಿನ ವರ್ಷ ಆ ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆ ಇದೆ. ಬಿಜೆಪಿಯ ಗೆಲುವಿನ ಓಟ ಮುಂದುವರಿದಿದೆ. ಗುಜರಾತ್ ನಲ್ಲಿ ಬಿಜೆಪಿ ಅಧಿಕಾರ ಮುಂದುವರಿಸಲಿದೆ. ಹಿಮಾಚಲ ಪ್ರದೇಶದಲ್ಲಿ ಹೊಸ ಇನ್ನಿಂಗ್ಸ್.

ಈ ವರ್ಷದಲ್ಲಿ ಬಿಜೆಪಿಗೆ ಅತಿ ದೊಡ್ಡ ಗೆಲುವಿನ ಉಡುಗೊರೆ ನೀಡಿದ್ದು ಉತ್ತರ ಪ್ರದೇಶ. ಮುನ್ನೂರಕ್ಕೂ ಹೆಚ್ಚು ಶಾಸಕರನ್ನು ಜತೆಯಲ್ಲಿಟ್ಟುಕೊಂಡು ಅಲ್ಲಿ ರಾಜ್ಯಭಾರ ನಡೆಸುತ್ತಿದ್ದಾರೆ ಯೋಗಿ ಆದಿತ್ಯನಾಥ್. ಆ ನಂತರ ಉತ್ತರಾಖಂಡದಲ್ಲಿ ಕೇಸರಿ ಪಕ್ಷ ಗೆಲುವು ಸಾಧಿಸಿತು. ಮಣಿಪುರ ಮತ್ತು ಗೋವಾದ ಸರಕಾರ ರಚಿಸಿತು. ಪಂಜಾಬ್ ನಲ್ಲಿ ಅಮರಿಂದರ್ ಸಿಂಗ್ ತಂದ ಗೆಲುವು ಕಾಂಗ್ರೆಸ್ ಪಾಳಿನ ಸಮಾಧಾನಕರ ಬಹುಮಾನ.
ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆ ನಂತರ ಭಾರತದ ಹತ್ತು ರಾಜ್ಯಗಳು ಮಾತ್ರ ಬಿಜೆಪಿ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳ ಅಧಿಕಾರದಿಂದ ಹೊರಗುಳಿದಂತೆ ಆಗಿದೆ. ತಮಿಳುನಾಡು (ಎಐಎಡಿಎಂಕೆ), ಕೇರಳ (ಸಿಪಿಐ-ಎಂ), ಪಶ್ಚಿಮ ಬಂಗಾಲ (ತೃಣಮೂಲ ಕಾಂಗ್ರೆಸ್), ಒಡಿಶಾ (ಬಿಜು ಜನತಾದಳ), ಮೇಘಾಲಯ (ಕಾಂಗ್ರೆಸ್), ತೆಲಂಗಾಣ (ತೆಲಂಗಾಣ ರಾಷ್ಟ್ರ ಸಮಿತಿ, ಮಿಜೋರಾಂ (ಕಾಂಗ್ರೆಸ್), ನಾಗಾಲ್ಯಾಂಡ್ (ನಾಗಾ ಪೀಪಲ್ಸ್ ಫ್ರಂಟ್), ದೆಹಲಿ (ಆಮ್ ಆದ್ಮಿ ಪಾರ್ಟಿ) ಮತ್ತು ತ್ರಿಪುರ (ಸಿಪಿಐ-ಎಂ)ದಲ್ಲಿ ಇತರ ರಾಜಕೀಯ ಪಕ್ಷಗಳು ಅಧಿಕಾರದಲ್ಲಿವೆ.
ಇನ್ನು ಆಂಧ್ರದಲ್ಲಿ ಅಧಿಕಾರದಲ್ಲಿರುವ ಟಿಡಿಪಿ, ಬಿಹಾರದಲ್ಲಿ ಜೆಡಿಯು ಮತ್ತು ಜಮ್ಮು- ಕಾಶ್ಮೀರದಲ್ಲಿ ಪಿಡಿಪಿ ಹಾಗೂ ಮಹಾರಾಷ್ಟ್ರದಲ್ಲಿ ಶಿವಸೇನೆಯ ಜತೆಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಅಧಿಕಾರ ನಡೆಸುತ್ತಿದೆ ಮತ್ತು ಆಡಳಿತದ ಭಾಗವಾಗಿದೆ.












Click it and Unblock the Notifications