ಜೀವನದ ಸಂಧ್ಯಾ ಕಾಲದಲ್ಲಿ ಆರೋಗ್ಯವಾಗಿರಲು ಆಹಾರ ಸೇವನೆ ಹೇಗಿರಬೇಕು?
ಪ್ರತಿಯೊಬ್ಬರಿಗೂ ಆರೋಗ್ಯ ಎಷ್ಟು ಮುಖ್ಯ ಎಂಬುದು ಗೊತ್ತೇ ಇದೆ. ಹೀಗಿರುವಾಗ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ನಮ್ಮ ಬದುಕಿನಲ್ಲಿ ಪ್ರತಿ ಹಂತದಲ್ಲಿಯೂ ಸ್ವಚ್ಛತೆಗೆ ಆದ್ಯತೆ ನೀಡಬೇಕು, ದುಶ್ಚಟಗಳಿಂದ ದೂರವಿರಬೇಕು. ಮತ್ತು ಆಹಾರ ಸೇವನೆಯಲ್ಲಿ ಶಿಸ್ತು ಇರಬೇಕು. ವ್ಯಾಯಾಮಕ್ಕೆ ಆದ್ಯತೆ ನೀಡಬೇಕು. ಇದಿಷ್ಟು ಗಮನದಲ್ಲಿದ್ದರೆ ಆರೋಗ್ಯಕರ ಜೀವನ ಸಾಗಿಸಲು ಸಾಧ್ಯವಾಗುತ್ತದೆ.
ಅನಾರೋಗ್ಯಕ್ಕೀಡಾಗಿ ಸಂಕಷ್ಟ ಅನುಭವಿಸುವ ತನಕ ನಮಗೆ ಆರೋಗ್ಯದ ಮೌಲ್ಯ ಗೊತ್ತಾಗುವುದಿಲ್ಲ. ಅದರಲ್ಲೂ ವಯಸ್ಸಾದವರು ಆಹಾರದ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಬಲು ಅಗತ್ಯವಾಗಿದೆ ಸಂಧ್ಯಾಕಾಲದಲ್ಲಿ ಆರೋಗ್ಯಕರ ದಿನಗಳನ್ನು ಕಳೆಯುವುದು ಬಹುಮುಖ್ಯವಾಗಿರುವುದರಿಂದ ಮೊದಲಿಗೆ ತಾವು ಸೇವಿಸುವ ಆಹಾರದಲ್ಲಿ ಶಿಸ್ತು ಅಳವಡಿಸಿಕೊಳ್ಳುವುದು ಬಹು ಮುಖ್ಯವಾಗುತ್ತದೆ.

ವಯಸ್ಸಾದಂತೆ ನಮ್ಮ ವಯಸ್ಸಿಗೆ ತಕ್ಕಂತೆ ನಮ್ಮ ಆಹಾರ ಸೇವನೆಯಲ್ಲಿ ಒಂದಷ್ಟು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಂದು ಆಹಾರ ನಮಗೆ ಇಷ್ಟವಾದರೂ ಅದು ಆರೋಗ್ಯಕ್ಕೆ ಹೊಂದಿಕೆಯಾಗುವುದಿಲ್ಲ ಎಂಬುದು ಗೊತ್ತಾದ ಮೇಲೆ ಅದರಿಂದ ದೂರ ಇರುವುದು ಒಳಿತು. ಕೇವಲ ಬಾಯಿ ಚಪಲಕ್ಕೆ ಸಿಕ್ಕಿದನೆಲ್ಲ ತಿಂದು ಸಮಸ್ಯೆ ಸೃಷ್ಠಿಸಿಕೊಳ್ಳುವುದಕ್ಕಿಂತ ನಮ್ಮ ದೇಹಕ್ಕೆ ಸರಿ ಹೊಂದುವ ಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಜಾಣತನವಾಗಿದೆ.
ರುಚಿಕರ ಆಹಾರಗಳೆಲ್ಲ ಆರೋಗ್ಯಕಾರಿ ಅಲ್ಲ
ಇತ್ತೀಚಿಗಿನ ದಿನಗಳಲ್ಲಿ ನಾವು ತಿನ್ನುವ ಆಹಾರಗಳು ನಾಲಿಗೆ ಚಪ್ಪರಿಸಿ ತಿನ್ನುವಂತಹ ರುಚಿಯನ್ನು ಹೊಂದಿರುತ್ತವೆಯಾದರೂ ಅವು ಆರೋಗ್ಯಕ್ಕೆ ಹೊಂದುವುದಿಲ್ಲ. ಹೀಗಾಗಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ವಯಸ್ಸಾದವರಂತು ತಮ್ಮ ವಯಸ್ಸಿಗೆ ತಕ್ಕಂತೆ ಜೀರ್ಣ ಶಕ್ತಿಯಿರುವಂತಹ ಆಹಾರವನ್ನು ಸೇವಿಸುವುದು ಒಳಿತು. ಕಾರಣ ವಯಸ್ಸಾದಂತೆಲ್ಲ ಹಸಿವು ಮತ್ತು ಜೀರ್ಣಶಕ್ತಿ ಕಡಿಮೆಯಾಗುವುದರಿಂದ ಪ್ರೊಟೀನ್, ಕೊಬ್ಬು, ಖನಿಜಾಂಶ ಹಾಗೂ ಜೀವಸತ್ವಗಳುಳ್ಳ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಈ ಆಹಾರದ ಪ್ರಮಾಣವು ದಿನಕ್ಕೆ 300 ರಿಂದ 330 ಗ್ರಾಂ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ.

ಹಿರಿಯರು ತಮ್ಮ ಜೀವಿತದ ಕೊನೆಯ ಕಾಲವನ್ನು ಆರೋಗ್ಯವಾಗಿ ಕಳೆಯಬೇಕಾದರೆ ನಿತ್ಯದ ಆಹಾರ ಕ್ರಮದಲ್ಲಿ ಏನೇನು ಅಳವಡಿಸಿಕೊಳ್ಳಬೇಕು ಮತ್ತು ಎಂತಹ ಆಹಾರವನ್ನು ಸೇವಿಸಬೇಕು ಎಂಬುದರ ಬಗ್ಗೆ ವೈದ್ಯರು ಒಂದಷ್ಟು ಸಲಹೆಗಳನ್ನು ನೀಡುತ್ತಾರೆ. ಅದರಂತೆ ನಡೆದುಕೊಂಡದ್ದೇ ಆದರೆ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಾಗುವುದರಲ್ಲಿ ಎರಡು ಮಾತಿಲ್ಲ. ಸಾಮಾನ್ಯವಾಗಿ ದಿನಕ್ಕೆ ಮೂರು ಬಾರಿ ಊಟ ಮಾಡುತ್ತೇವೆ. ಆದರೆ ವಯಸ್ಸಾದವರು ಕಡಿಮೆ ಪ್ರಮಾಣದಲ್ಲಿ ಹಲವು ಬಾರಿ ಊಟ ಮಾಡುವುದು ಒಳ್ಳೆಯದು. ಆಹಾರದಲ್ಲಿ ಅಕ್ಕಿ, ರಾಗಿ, ಗೋಧಿ, ಜೋಳ ಮೊದಲಾದ ಧಾನ್ಯಗಳ ಬಳಕೆ ಒಳ್ಳೆಯದು.
ಪ್ರೊಟೀನ್‌ಯುಕ್ತ ಆಹಾರಗಳಿಗೆ ಆದ್ಯತೆ ನೀಡಬೇಕು
ನಿತ್ಯ ಉಪಯೋಗಿಸುವ ಆಹಾರದಲ್ಲಿ ಪ್ರೊಟೀನ್‌ಯುಕ್ತ ಬೇಳೆಕಾಳುಗಳು ಇರುವಂತೆ ನೋಡಿಕೊಳ್ಳಬೇಕು. ಇವುಗಳನ್ನು ಕನಿಷ್ಟ ೬೦ಗ್ರಾಂನಷ್ಟಾದರೂ ಸೇವಿಸಬೇಕು. ಇದರೊಂದಿಗೆ ದಿನಕ್ಕೆ ಕನಿಷ್ಟ 2 ರಿಂದ 3 ಲೋಟದಷ್ಟು ಹಾಲು ಅಥವಾ ಮೊಸರು ಸೇವಿಸಬೇಕು. ಮೊಳಕೆ ಕಾಳುಗಳು, ಮೊಟ್ಟೆಯ ಬಿಳಿಭಾಗ, ಮೀನು, ಜೊತೆಗೆ ಸೊಪ್ಪು ಸೇರಿದಂತೆ ಗೆಡ್ಡೆಗೆಣಸು ತರಕಾರಿ ಸೇವಿಸುವುದು ಅಗತ್ಯ.
ಮಲವಿಸರ್ಜನೆ ಸಲೀಸಾಗಿ ನಡೆಯಲು ಅನುಕೂಲವಾಗುವಂತೆ ನಾರಿನ ಅಂಶವಿರುವ ಹಣ್ಣು, ತರಕಾರಿ, ಉಂಡೆಕಾಳುಗಳನ್ನು ಆಹಾರದಲ್ಲಿ ಸೇರಿಸಬೇಕು. ನಾರಿನ ಅಂಶವು ರಕ್ತದ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತದೆ. ಜತೆಗೆ ದೊಡ್ಡ ಕರುಳಿನ ಕ್ಯಾನ್ಸರನ್ನು ತಡೆಗಟ್ಟುವ ಗುಣವನ್ನು ಹೊಂದಿದೆ.
ಇನ್ನು ಹಲ್ಲುಗಳು ಇಲ್ಲದಿದ್ದಲ್ಲಿ ಮೆದುವಾದ ಮತ್ತು ಚೆನ್ನಾಗಿ ಬೆಂದಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಜತೆಗೆ ಸುಲಭವಾಗಿ ಜೀರ್ಣವಾಗುವಂತಹ ಆಹಾರಪದಾರ್ಥಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ವಯಸ್ಸಾದಂತೆ ಮೂಳೆಗಳ ಸವೆತ ಮತ್ತು ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ಇದು ಕ್ಯಾಲ್ಸಿಯಂನಿಂದ ಆಗುವ ತೊಂದರೆಯಾಗಿದ್ದು, ಕ್ಯಾಲ್ಸಿಯಂ ಅಂಶ ಹೆಚ್ಚಾಗಲು ಹಾಲಿನ ಉತ್ಪನ್ನ, ರಾಗಿ, ಮೀನು, ಸೊಪ್ಪುಗಳನ್ನು ಸೇವಿಸುವುದು ಉತ್ತಮ. ನಿಯಮಿತ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ರವ ಆಹಾರಗಳನ್ನು ಸೇವಿಸಬೇಕು.
ಅತಿಯಾದ ಕಾಫಿ, ಟೀ ಸೇವನೆ ಒಳ್ಳೆಯದಲ್ಲ
ಇನ್ನು ಆರೋಗ್ಯದ ದೃಷ್ಠಿಯಿಂದ ಕೆಲವೊಂದು ಆಹಾರ ಪದಾರ್ಥದ ಸೇವನೆ ಕಡಿಮೆ ಮಾಡುವುದು, ಇನ್ನು ಕೆಲವೊಂದನ್ನು ವರ್ಜಿಸುವುದು ಕೂಡ ಅನಿವಾರ್ಯ. ಕೊಬ್ಬು, ಎಣ್ಣೆ ಮತ್ತು ಸಕ್ಕರೆ ಸೇವನೆ ಕಡಿಮೆ ಮಾಡಬೇಕು ಕಾರಣ ಇವುಗಳಿಂದ ಅಜೀರ್ಣ ಸಮಸ್ಯೆ ಉದ್ಭವಿಸುವ ಸಾಧ್ಯತೆ ಹೆಚ್ಚರುತ್ತದೆ.
ನಾರಿನ ಅಂಶವಿಲ್ಲದ ಸಂಸ್ಕರಿಸಿದ ಆಹಾರ ಪದಾರ್ಥ, ಮೈದಾದಿಂದ ತಯಾರಿಸಿದ ಬ್ರೆಡ್, ಬನ್, ನೂಡಲ್ಸ್, ನಾನ್ ಮುಂತಾದ ಆಹಾರಗಳನ್ನು ಸೇವಿಸಬೇಡಿ. ಮಸಾಲೆ ಪದಾರ್ಥಗಳನ್ನು ಕಡಿಮೆ ಮಾಡಿ, ಮದ್ಯಪಾನ, ಧೂಮಪಾನವನ್ನು ತ್ಯಜಿಸಿ, ಕೊಲೆಸ್ಟ್ರಾಲ್ ಹೆಚ್ಚಿಸುವ ಬೆಣ್ಣೆ, ತುಪ್ಪ, ವನಸ್ಪತಿ, ಬಜ್ಜಿ, ಬೋಂಡ, ಪೂರಿ, ಹಪ್ಪಳ ಮೊದಲಾದ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ. ಅತಿಯಾದ ಕಾಫಿ, ಟೀ ಸೇವನೆ ಒಳ್ಳೆಯದಲ್ಲ. ಆಹಾರ ಸೇವನೆಯಲ್ಲಿ ಉಪ್ಪಿನ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡಿ.
ಅನಗತ್ಯ ಉಪವಾಸ ಮಾಡುವುದನ್ನು ಬಿಟ್ಟು ಬಿಡಿ. ಜೀರ್ಣಶಕ್ತಿ ಉಂಟಾಗಲು ಕಡಿಮೆ ಆಹಾರವನ್ನು ಹೆಚ್ಚು ಬಾರಿ ತಿನ್ನುವುದನ್ನು ರೂಢಿಸಿಕೊಳ್ಳಿ ಇವುಗಳನ್ನೆಲ್ಲ ತಮ್ಮ ನಿತ್ಯದ ಜೀವನದಲ್ಲಿ ರೂಢಿಸಿಕೊಂಡರೆ ವಯಸ್ಸಾದವರು ಆಹಾರದಿಂದ ಉಂಟಾಗುವ ಸಮಸ್ಯೆಯಿಂದ ದೂರವಾಗಿ ನೆಮ್ಮದಿ ಮತ್ತು ಆರೋಗ್ಯಯುತ ಸಂಧ್ಯಾಕಾಲವನ್ನು ಕಳೆಯಲು ಸಾಧ್ಯವಾಗುತ್ತದೆ.












Click it and Unblock the Notifications