ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿ ಜಯಂತಿ ವಿಶೇಷ: ಗಾಂಧಿಯ ಖಾದಿ ಕರೆಗೆ ಓಗೊಟ್ಟ ಬದನವಾಳು ಗ್ರಾಮ!

|
Google Oneindia Kannada News

ಮೈಸೂರು, ಅಕ್ಟೋಬರ್ 1: ನಮ್ಮ ಅಗತ್ಯದ ಬಟ್ಟೆಯನ್ನು ನಾವೇ ಉತ್ಪಾದಿಸಿಕೊಳ್ಳೋಣ ಎಂದು ಜನತೆಗೆ ಕರೆ ನೀಡಿದ್ದಲ್ಲದೆ, ತಾವೇ ಚರಕ ಹಿಡಿದು ನೂಲು ನೇಯ್ದದ್ದು ಇತಿಹಾಸ. ಅವತ್ತು ಗಾಂಧಿಯವರ ಪ್ರೇರಣೆಯಿಂದ ದೇಶದಲ್ಲಿ ಹಲವು ಖಾದಿ ಗ್ರಾಮೋದ್ಯೋಗ ಮಂಡಳಿಗಳು ಹುಟ್ಟಿಕೊಂಡವು. ಈ ಪೈಕಿ ನಂಜನಗೂಡು ತಾಲೂಕಿನ (ಮೈಸೂರಿನಿಂದ 34 ಕಿ.ಮೀ. ದೂರ) ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಮಂಡಳಿಯೂ ಒಂದಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧಿ ನೀಡಿದ ಕರೆಗೆ ಓಗೊಟ್ಟು ಸ್ಥಾಪನೆಗೊಂಡ ಬದನವಾಳು ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ತರಬೇತಿ ಕೇಂದ್ರ ಸುಮಾರು ಒಂಬತ್ತು ದಶಕಗಳನ್ನು ಸವೆಸಿ ಆಧುನಿಕ ಪೈಪೋಟಿಗಳ ನಡುವೆಯೂ ಮುನ್ನಡೆಯುತ್ತಾ ಗಾಂಧೀಜಿಯವರ ನೆನಪನ್ನು ಗ್ರಾಮದಲ್ಲಿ ಹಸಿರಾಗಿಸಿದೆ.

ಕಡಿಮೆಯಾಗದ ಖಾದಿ ಮೇಲಿನ ಪ್ರೀತಿ

ಕಡಿಮೆಯಾಗದ ಖಾದಿ ಮೇಲಿನ ಪ್ರೀತಿ

ಗಾಂಧಿಯವರ ಕರೆಗೆ ಓಗೊಟ್ಟ ಹಿರಿಯರು ಅವತ್ತು ಖಾದಿ ಬಟ್ಟೆಯನ್ನೇ ಧರಿಸಲು ಆರಂಭಿಸಿದ್ದರು. ಹೀಗಾಗಿ ಬದನವಾಳು ಖಾದಿಗೆ ಎಲ್ಲಿಲ್ಲದ ಬೇಡಿಕೆಯಿತ್ತು. ಕಾಲಾಂತರದಲ್ಲಿ ಜೀನ್ಸ್, ಪಾಲಿಸ್ಟಾರ್, ಸಿಲ್ಕ್ ಹೀಗೆ ವಿವಿಧ ಬಗೆಯ ಬಟ್ಟೆಗಳು ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿ ಗ್ರಾಹಕರನ್ನು ಸೆಳೆಯುತ್ತಿದ್ದರೂ ಬದನವಾಳು ಖಾದಿ ಬಟ್ಟೆಯ ಮೇಲಿನ ಪ್ರೀತಿಗೆ ಕುತ್ತು ಬಂದಿಲ್ಲ. ಇವತ್ತಿಗೂ ಹಿರಿಯರು ಖಾದಿ ಬಟ್ಟೆಯನ್ನೇ ಇಷ್ಟಪಟ್ಟು ಧರಿಸುತ್ತಿದ್ದಾರೆ. ಜತೆಗೆ ಯುವ ಜನತೆ ಇತರೆ ಉಡುಪುಗಳೊಂದಿಗೆ ಖಾದಿಯೂ ಇರಲಿ ಎಂದು ಬಯಸುವುದರಿಂದ ಮತ್ತು ಅದು ದೇಹಕ್ಕೆ ಆರೋಗ್ಯಕಾರಿ ಎಂಬ ಸತ್ಯ ಗೊತ್ತಿರುವುದರಿಂದ ಹೆಚ್ಚಿನವರು ಇಷ್ಟಪಟ್ಟು ಖಾದಿ ಬಟ್ಟೆ ಖರೀದಿಸುತ್ತಿರುವುದರಿಂದ ಇಂದಿಗೂ ಖಾದಿ ಮಂಡಳಿಗಳು ಉಸಿರಾಡುವಂತಾಗಿದೆ.

ಶತಮಾನದ ಕಡೆಗೆ ಖಾದಿ ಮಂಡಳಿ

ಶತಮಾನದ ಕಡೆಗೆ ಖಾದಿ ಮಂಡಳಿ

ಇನ್ನೊಂದೆಡೆ ಬದಲಾದ ಕಾಲಮಾನದಲ್ಲಿ ಬಗೆಬಗೆಯ ಬಟ್ಟೆಗಳು ಬಂದಿದ್ದರೂ, ಖಾದಿ ಬಟ್ಟೆಯನ್ನು ಇಷ್ಟಪಟ್ಟು ಧರಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಶತಮಾನದತ್ತ ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಮಂಡಳಿ ಮುನ್ನುಗ್ಗುತ್ತಿದೆ. ಇವತ್ತು ಬದನವಾಳು ಗ್ರಾಮಕ್ಕೆ ತೆರಳಿದರೆ ಖಾದಿ ಬಟ್ಟೆ ಮತ್ತು ಅದರ ಹಿಂದೆ ರಾಟೆಗಳಲ್ಲಿ ನೂಲು ಹೆಣೆಯುವ ನೇಕಾರರು ಕಂಡು ಬರುತ್ತಿದ್ದು, ಅವರೆಲ್ಲರೂ ಗಾಂಧಿ ಸ್ಮರಣೆಯಲ್ಲಿರುವಂತೆ ಗೋಚರಿಸುತ್ತಿದೆ.

ಗಾಂಧೀಜಿಯವರನ್ನೇ ತನ್ನತ್ತ ಸೆಳೆದ ಬದನವಾಳು

ಗಾಂಧೀಜಿಯವರನ್ನೇ ತನ್ನತ್ತ ಸೆಳೆದ ಬದನವಾಳು

ರಾಷ್ಟ್ರೀಕರಣ, ಹೆಚ್ಚಿದ ತಂತ್ರಜ್ಞಾನಗಳು, ಬದಲಾಗುವ ಫ್ಯಾಷನ್‌ಗಳು ಹೀಗೆ ಹತ್ತು ಹಲವು ಕಾರಣಗಳಿಂದ ಖಾದಿ ಬಟ್ಟೆ ನೇಪಥ್ಯಕ್ಕೆ ಸರಿಯುತ್ತದೆ ಎಂದು ಹೇಳುತ್ತಾ ಬರಲಾಗುತ್ತಿದ್ದರೂ, ಬದನವಾಳು ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ತರಬೇತಿ ಕೇಂದ್ರ 90 ವರ್ಷ ಪೂರೈಸುವುದರೊಂದಿಗೆ ಅಸ್ತಿತ್ವ ಉಳಿಸಿಕೊಂಡು ಮುನ್ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ನಾವೆಲ್ಲರೂ ಹೆಮ್ಮೆ ಪಡುವ ವಿಷಯವೇನೆಂದರೆ, ಸ್ವಾತಂತ್ರ್ಯ ಪೂರ್ವದಲ್ಲೇ ಪುಟ್ಟ ಗ್ರಾಮ ಬದನವಾಳು ಖಾದಿ ಬಟ್ಟೆ ತಯಾರಿಸುವ ಮೂಲಕ ಗಾಂಧಿಯವರನ್ನೇ ತನ್ನತ್ತ ಸೆಳೆದಿತ್ತು ಮತ್ತು ಅವರು ಇಲ್ಲಿಗೆ ಭೇಟಿ ನೀಡಿದ್ದರು ಎಂಬುದಾಗಿದೆ.

ಹೊರ ರಾಜ್ಯಗಳಿಗೂ ಬಟ್ಟೆ ರವಾನೆ

ಹೊರ ರಾಜ್ಯಗಳಿಗೂ ಬಟ್ಟೆ ರವಾನೆ

ತೊಂಬತ್ತು ವರ್ಷಗಳ ಹಿಂದೆ ಬದನವಾಳು ಗ್ರಾಮದ ಜನರ ಅಗತ್ಯತೆ, ಸ್ವದೇಶಿ ವಸ್ತುಗಳ ಅಸ್ತಿತ್ವ ಉಳಿಸುವ ಮತ್ತು ಉದ್ಯೋಗ ನೀಡುವ ಸಲುವಾಗಿ ಸ್ಥಾಪಿತಗೊಂಡ ಖಾದಿ ಗ್ರಾಮೋದ್ಯೋಗ ಕೇಂದ್ರ ಸುತ್ತಮುತ್ತಲಿನ ನೂರಾರು ಮಂದಿಗೆ ಉದ್ಯೋಗ ನೀಡಿದೆ. ಬದನವಾಳಿನ ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ತರಬೇತಿ ಕೇಂದ್ರದಲ್ಲಿ ಉತ್ಪನ್ನಗೊಂಡ ಸ್ವದೇಶಿ ಬಟ್ಟೆಗಳು ರಾಜ್ಯದ ಮೈಸೂರು, ಚಾಮರಾಜನಗರ, ಬೆಂಗಳೂರು, ರಾಮನಗರ ಮಾತ್ರವಲ್ಲದ ಹೊರ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶಗಳಿಗೂ ರವಾನೆಯಾಗುತ್ತಿದೆ.

 ಗಾಂಧಿ ಸ್ಮರಣೆಯಲ್ಲಿರುವ ಬದನವಾಳು ಜನ

ಗಾಂಧಿ ಸ್ಮರಣೆಯಲ್ಲಿರುವ ಬದನವಾಳು ಜನ

ಬದನವಾಳಿನ ಖಾದಿ ಬಟ್ಟೆಗೆ ಇನ್ನಷ್ಟು ಪ್ರಚಾರ ದೊರೆತು, ಜನಪ್ರಿಯತೆ ಉಳಿಸಿಕೊಳ್ಳಲು ರಂಗಕರ್ಮಿ ಪ್ರಸನ್ನ ಅವರು 2015ರ ಏಪ್ರಿಲ್ ಮಾಹೆಯಲ್ಲಿ ಬದನವಾಳು ಸತ್ಯಾಗ್ರಹ ಹಾಗೂ ಸುಸ್ಥಿರ ಅಭಿವೃದ್ಧಿ ರಾಷ್ಟ್ರೀಯ ಸಮಾವೇಶ ಎಂಬ ಕಾರ್ಯಕ್ರಮ ನಡೆಸಿ, ದೇಶದ ವಿವಿಧ ಗಣ್ಯರನ್ನು ಕರೆಸಿದ್ದರು. ಕಾರ್ಯಕ್ರಮ ಜನಪ್ರಿಯವಾಗುವುದರೊಂದಿಗೆ ಎಲ್ಲರ ಗಮನ ಸೆಳೆದಿತ್ತು. ಒಟ್ಟಾರೆಯಾಗಿ ಹೇಳಬೇಕೆಂದರೆ ಬದನವಾಳು ಗ್ರಾಮ ಗಾಂಧಿ ಕನಸಿನ ಕೂಸಾಗಿದ್ದು, ಇವತ್ತಿಗೂ ಅವರ ಸ್ಮರಣೆಯಲ್ಲಿಯೇ ಇಲ್ಲಿನ ಜನ ದಿನ ಕಳೆಯುತ್ತಿರುವುದು ಖುಷಿ ಪಡುವ ಸಂಗತಿಯಾಗಿದೆ.

English summary
The Karnataka State Khadi Gramodyoga Board of Training center in Badanavalu of Nanjangud taluk established for nine decades ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X