Fish Rain: ಆಕಾಶದಿಂದ ಧರೆಗಿಳಿವ ರಂಬೆ, ಊರ್ವಶಿ, ಮೇನಕೆಯಲ್ಲ ಈಕೆ ಮೀನಮ್ಮ....
ಆಲಿಕಲ್ಲು ಮಳೆ, ಹಿಮದ ಮಳೆ, ಮಂಜುಗಡ್ಡೆ ಮಳೆ ಹೀಗೆ ಹಲವು ಮಳೆಗಳನ್ನು ನಾವು ನೋಡಿದ್ದೇವೆ. ಜ್ವಾಲಾಮುಖಿಯ ಹತ್ತಿರ ನಿಂತರೆ ಅಲ್ಲೂ ಬೆಂಕಿಯ ಮಳೆಯನ್ನೂ ನೋಡಬಹುದು. ಆದರೆ ಮೀನಿನ ಮಳೆಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?
ಬಹುತೇಕ ಜನ ಈ ಬಗ್ಗೆ ಕೇಳಿರುತ್ತಾರೆ. ಈ ಘಟನೆಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತಾರೆ. ಹೀಗಾಗಿ ಇದೇನು ಗೊತ್ತಿರದ ವಿಷಯವಲ್ಲ. ಆದರೆ ಈ ಪ್ರಪಂಚದಲ್ಲಿ ಒಂದು ಜಾಗವಿದೆ. ಅಲ್ಲಿ ಒಂದು ಬಾರಿ ಅಲ್ಲ, ಪ್ರತೀ ವರ್ಷ ಮೀನಿನ ಮಳೆಯಾಗುತ್ತದೆ. ಹಾಗಾದರೆ ಆ ಸ್ಥಳ ಯಾವುದು? ಅಲ್ಲಿ ಪ್ರತೀ ಬಾರಿ ಮೀನಿನ ಮಳೆಯಾಗಲು ಕಾರಣವೇನು ಎಂದು ತಿಳಿಯೋಣ.

ಆಸ್ಟ್ರೇಲಿಯಾ, ಭಾರತ ಇನ್ನಿತರ ದೇಶಗಳಲ್ಲಿ ಆಗಾಗ ಮೀನಿನ ಮಳೆಯಾಗಿರುವುದನ್ನು ನೀವು ನೋಡಿರಬಹುದು ಅಥವಾ ಕೇಳಿರಬಹುದು. ಆದರೆ ಮೆಕ್ಸಿಕೋದಲ್ಲೂ ಇಂಥಹ ಮಳೆಯಾಗುತ್ತದೆ. ಆದರೆ ಇಲ್ಲಿ ಆಗಾಗ ಅಥವಾ ಒಂದು ಬಾರಿ ಮಾತ್ರ ಮೀನಿನ ಮಳೆಯಾಗುವುದಿಲ್ಲ ಪ್ರತೀ ವರ್ಷವೂ ಇಲ್ಲಿ ಮೀನಿನ ಮಳೆಯಾಗುತ್ತದೆ. ಇಲ್ಲಿನ ಜನ ಈ ಮೀನನ್ನು ಸಂಗ್ರಹಿಸುತ್ತಾರೆ. ಕಳೆದ ಹಲವು ವರ್ಷಗಳಿಂದ ಮೆಕ್ಸಿಕೋದ ಸ್ಥಳದಲ್ಲಿ ಪ್ರತೀ ವರ್ಷ ಮೀನಿನ ಮಳೆಯಾಗುತ್ತದೆ. ಇದಕ್ಕೆ ಕಾರಣವನ್ನೂ ಇಲ್ಲಿನ ಜನರೇ ಹೇಳುತ್ತಾರೆ.
ಇಲ್ಲಿನ ಜನರ ಪ್ರಕಾರ ಇಲ್ಲಿ ಮೀನಿನ ಮಳೆಯಾಗಲು ಕಾರಣವಿದೆ. ಅದೇನೆಂದರೆ ಒಂದು ಸಮಯದಲ್ಲಿ ಇಲ್ಲಿ ವಾಸಿಸುವ ಜನರು ಹಸಿವಿನಿಂದ ಸಾಯುತ್ತಿದ್ದರಂತೆ. ಆಗ ಅವರ ದೇವರು ಮೂರು ದಿನಗಳವರೆಗೆ ಮೀನುಗಳ ಮಳೆ ಸುರಿಸಿದನಂತೆ. ಹೀಗೆ ಅಂದಿನಿಂದ ಇಂದಿನವರೆಗೂ ಇಲ್ಲಿ ಮೀನಿ ಮಳೆಯಾಗುತ್ತಿದೆ ಎಂದು ಸ್ಥಳೀಯರು ಹೇಳಿಕೊಳ್ಳುತ್ತಾರೆ.
ಆದರೆ ಕೆಲವು ವಿಜ್ಞಾನಿಗಳ ಪ್ರಕಾರ ಇದು ವಾಟರ್ ಸ್ಪಾಟ್‌ನಿಂದ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ವಾಟರ್ ಸ್ಪಾಟ್ ಎಂಬುದು ಹೆಚ್ಚಾಗಿ ಸಮುದ್ರಗಳಲ್ಲಿ ಆಗುತ್ತದೆ. ಸಮುದ್ರಲ್ಲಿ ಮೀನುಗಳು ಇರುವುದರಿಂದ ಆ ವಾಟರ್ ಸ್ಪಾಟ್‌ನಿಂದಾಗಿ ಮೇಲೆ ಹೋಗಿ ಆ ಮೀನುಗಳು ಮೋಡ ಸೇರುತ್ತವೆ. ಆಗ ಕೆಲ ಬಾರಿ ಈ ಮೀನುಗಳ ಮಳೆಯಾಗುತ್ತದೆ ಎಂದು ಹೇಳುತ್ತಿದ್ದಾರೆ.
ಆದರೆ ಇಲ್ಲಿನ ಪ್ರಶ್ನೆ ಏನೆಂದರೆ ಸಮುದ್ರದಿಂದ 200ಕಿ ಮೀ ದೂರದಲ್ಲಿ ಇರುವ ಈ ಜಾಗದಲ್ಲೇ ಅದು ಕೂಡ ಪ್ರತಿಬಾರಿ ಯಾಕಾಗುತ್ತದೆ. ಒಂದು ವೇಳೆ ಆದರೂ ಕೂಡ ಸಮುದ್ರದಲ್ಲಿರುವ ಬೇರೆ ಜೀವಿಗಳಾದ ಕಪ್ಪೆಗಳು, ಏಡಿಗಳು ಯಾಕೆ ಬೀಳುತ್ತಿಲ್ಲ ಎಂಬ ಪ್ರಶ್ನೆ ಉದ್ಬವವಾಗಿದೆ. ಇದಕ್ಕೆ ಇನ್ನೂ ಕೂಡ ಸರಿಯಾದ ಉತ್ತರ ಸಿಕ್ಕಿಲ್ಲ. ಅದಕ್ಕಾಗಿ ಇದನ್ನು ಒಂದು ರಹಸ್ಯವಾದ ಪ್ರಕೃತಿ ನಿಯಮ ಎಂದು ಕರೆಯಲಾಗುತ್ತದೆ.
ಆಸ್ಟ್ರೇಲಿಯಾದಲ್ಲಿ ಮೀನಿನ ಮಳೆ
ಉತ್ತರ ಆಸ್ಟ್ರೇಲಿಯಾದ ಲಾಜಮಾನು ಪಟ್ಟಣದಲ್ಲಿ ಆಗಾಗ ಮೀನಿನ ಮಳೆ ಸುರಿಯುತ್ತದೆ. ಅಚ್ಚರಿಯ ಸಂಗತಿ ಎಂದರೆ ಈ ಪ್ರದೇಶದ ಸಮೀಪ ಸಾಗರವಿದ್ದರೂ ಆಕಾಶದಿಂದ ಸುರಿವ ಮೀನುಗಳೆಲ್ಲ ಸಿಹಿನೀರಿನ ಮೀನುಗಳು. ಇದೇ ಪ್ರದೇಶದಲ್ಲಿ ಕಳೆದ 2010, ಅದಕ್ಕೂ ಮುನ್ನ 2004 ಮತ್ತು 1974ರಲ್ಲಿ ಈ ರೀತಿ ಮಳೆಯಾಗಿದೆ.
ಇಲ್ಲಿನ ಜನ 'ಮೀನಿನ ಮಳೆಯನ್ನು ದೇವರ ಆಶೀರ್ವಾದ' ಎಂದು ಕರೆಯುತ್ತಾರೆ. ಈ ಬಗ್ಗೆ ಸಂಶೋಧಕರು 'ಸಮುದ್ರದ ನೀರು ಏಕಾಏಕಿ ಆಕಾಶಕ್ಕೆ ಹೋಗಲಿದೆ. ಇದರರ್ಥ ಚಂಡಮಾರುತದ ಸಮಯದಲ್ಲಿ ನೀರಿನ ಮೇಲ್ಮೈಯಲ್ಲಿನ ನೀರು ಮೇಲಕ್ಕೆ ಹೋಗುತ್ತದೆ. ಈ ಎಳೆದ ನೀರಿನಲ್ಲಿ ಮೀನುಗಳು ಸಹ ಆಕಾಶಕ್ಕೆ ಹೋಗುತ್ತವೆ. ಅದು ಮತ್ತೊಂದು ಸ್ಥಳದಲ್ಲಿ ಇದ್ದಕ್ಕಿದ್ದಂತೆ ಮಳೆಯಾಗಿ ಬೀಳುತ್ತದೆ' ಎಂದು ಹೇಳಿದ್ದಾರೆ.
ಭಾರತದ ತೆಲಂಗಾಣದಲ್ಲಿ ಮೀನಿನ ಮಳೆ
ಕಳೆದ ವರ್ಷ ಜೂನ್‌ನಲ್ಲಿ ತೆಲಂಗಾಣದಲ್ಲಿ ಮೀನಿನ ಮಳೆಯಾಗಿತ್ತು. ಜಗ್ತಿಯಾಲ್ ಪಟ್ಟಣದಲ್ಲಿ ಮೀನಿನ ಮಳೆ ಸುರಿದು ಜನರಲ್ಲಿ ಅಚ್ಚರಿಯನ್ನು ಮೂಡಿಸಿತ್ತು.












Click it and Unblock the Notifications