• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿಗೆ ಕಾಫಿಯನ್ನು ಪರಿಚಯಿಸಿದ ಈ ಮಹಿಳೆ ಯಾರು ಗೊತ್ತೇ?

By Coovercolly Indresh
|

ಎಷ್ಟೋ ಮಂದಿಗೆ ದಿನ ಬೆಳಗಾಗುವುದೇ ಒಂದು ಕಪ್‌ ಕಾಫಿಯಿಂದ. ಎಷ್ಟೋ ಜನ ಈ ಪಾನೀಯಕ್ಕೆ ದಾಸರೂ ಆಗಿಬಿಟ್ಟಿದ್ದಾರೆ. ನಿತ್ಯ ಎರಡು ಅಥವಾ ನಾಲ್ಕು ಕಪ್‌ ಮತ್ತು ಅದಕ್ಕಿಂತಲೂ ಜಾಸ್ತಿ ಕಾಫಿ ಕುಡಿಯುವವರೂ ಇದ್ದಾರೆ. ವಾಣಿಜ್ಯ ಬೆಳೆ ಕಾಫಿ ತನ್ನ ಅಪೂರ್ವ ಸುವಾಸನೆ ಹಾಗೂ ರುಚಿಯಿಂದಾಗಿಯೇ ವಿಶ್ವಾದ್ಯಂತ ಜನಪ್ರಿಯತೆ ಪಡೆದಿದೆ.

ಇಂದು ದೇಶದ ಕಾಫಿ ಉತ್ಪಾದನೆಯಲ್ಲಿ ಗಣನೀಯ ಪಾಲು ಹೊಂದಿರುವುದು ಕರ್ನಾಟಕ ಮಾತ್ರ. ನಮ್ಮ ಮಲೆನಾಡಿನ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯಲಾಗುವ ಕಾಫಿ ಗುಣಮಟ್ಟ ಹಾಗೂ ರುಚಿಯಲ್ಲಿ ಉತ್ಕೃಷ್ಟ ದರ್ಜೆಯದ್ದಾಗಿದೆ. ದೇಶದ ಒಟ್ಟು ಕಾಫಿ ಉತ್ಪಾದನೆಯಾದ ಸುಮಾರು 3.6 ಲಕ್ಷ ಟನ್‌ ಗಳಲ್ಲಿ ಮಲೆನಾಡಿನ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲೇ ಶೇಕಡಾ 70ರಷ್ಟು ಪಾಲು ಇದ್ದರೆ, ಇದರಲ್ಲಿ ಪುಟ್ಟ ಜಿಲ್ಲೆ ಕೊಡಗು ದೇಶದ ಕಾಫಿ ಉತ್ಪಾದನೆಯಲ್ಲಿ ಶೇಕಡಾ 30ಕ್ಕೂ ಅಧಿಕ ಪಾಲು ಹೊಂದಿದೆ. ಇದು ಜಿಲ್ಲೆಯ ಹೆಗ್ಗಳಿಕೆ. ಅಷ್ಟಕ್ಕೂ ಈ ಕಾಫಿ ವಹಿವಾಟು ಹೆಚ್ಚಲು ಕಾರಣ ಒಬ್ಬರು ಮಹಿಳೆ. ಅದು ಯಾರೆಂದು ಮುಂದೆ ನೋಡಿ...

 ಬೆಂಗಳೂರಿಗೆ ಕಾಫಿ ಪರಿಚಯಿಸಿದ ದೊಡ್ಡಮನೆ ಸಾಕಮ್ಮ

ಬೆಂಗಳೂರಿಗೆ ಕಾಫಿ ಪರಿಚಯಿಸಿದ ದೊಡ್ಡಮನೆ ಸಾಕಮ್ಮ

ಕಾಫಿ ಬೀಜ ದೇಶಕ್ಕೆ ಪರಿಚಯಗೊಂಡಿದ್ದು ಅರಬ್‌ ವರ್ತಕರಿಂದ ಎನ್ನಲಾಗಿದೆ. 1670ನೇ ಇಸವಿಯಲ್ಲಿ ಚಿಕ್ಕಮಗಳೂರು ಸಮೀಪದ ಬಾಬಾ ಬುಡನ್ ಗಿರಿಯಲ್ಲಿ ದೇಶದಲ್ಲೇ ಮೊದಲ ಕಾಫಿ ಬೆಳೆ ಬೆಳೆಯಲಾಯಿತು. ಈ ಕಾಫಿಯ ಘಮ ಬೆಂಗಳೂರಿಗೆ ಪರಿಚಯಿಸಿದ ಖ್ಯಾತಿ ಓರ್ವ ಮಹಿಳೆಯದಾಗಿದ್ದು, ಇದರ ಹಿಂದೆ ರೋಚಕ ಯಶೋಗಾಥೆಯೊಂದು ಇದೆ. ಈ ವಿಷಯ ಬಹಳಷ್ಟು ಬೆಂಗಳೂರಿಗರಿಗೆ ಇನ್ನೂ ಗೊತ್ತಿಲ್ಲ.

ಮಲೆನಾಡಿನಿಂದ ವಿದೇಶಕ್ಕೆ ಕಾಫಿ ಕೊಂಡೊಯ್ದ ಸಿದ್ಧಾರ್ಥ ಅವರಿಗೇನಾಯಿತು?

ಕಾಫಿಯನ್ನು ಬೆಂಗಳೂರಿಗೆ ಪರಿಚಯಿಸಿ ಅಲ್ಲೇ ಹುರಿದು ಪುಡಿ ಮಾಡುವ ಮಿಲ್‌ ಅನ್ನು ಸ್ಥಾಪಿಸಿ ಮನೆ ಮನೆಗಳಿಗೂ ಕಾಫಿ ಮಾರಾಟ ಮಾಡಿದ ಮಹಿಳಾ ಉದ್ಯಮಿಯೇ ದೊಡ್ಡ ಮನೆ ಸಾಕಮ್ಮ. 1880ನೇ ಇಸವಿಯಲ್ಲಿ ತುಮಕೂರು ಜಿಲ್ಲೆಯ ಬಿದರೆ ಎಂಬ ಊರಿನಲ್ಲಿ ಜನಿಸಿದ ಸಾಕಮ್ಮ ಅವರ ಕುಟುಂಬ ಉತ್ತಮ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ವಲಸೆ ಬಂದಿತು. ಬಾಲಕಿಯಾಗಿದ್ದಾಗಲೇ ಕಲಿಕೆಯಲ್ಲಿ ಆಸಕ್ತಿ ಮತ್ತು ಕುತೂಹಲ ಹೊಂದಿದ್ದ ಸಾಕಮ್ಮ ಅವರ ಆಸೆಗೆ ಪೋಷಕರೂ ಸಕಾರಾತ್ಮಕವಾಗೇ ಸ್ಪಂದಿಸಿದರು. ಇದರಿಂದಾಗಿ ಸಾಕಮ್ಮ ಅಂದಿನ ಕಾಲದಲ್ಲೇ ಮಾಧ್ಯಮಿಕ ಶಿಕ್ಷಣ ಪಡೆದ ಕೆಲವೇ ಬಾಲಕಿಯರಲ್ಲಿ ಒಬ್ಬರಾಗಿದ್ದರು.

 ನೂರಾರು ಎಕರೆ ಕಾಫಿ ತೋಟ ನಿರ್ವಹಿಸುವ ಜವಾಬ್ದಾರಿ

ನೂರಾರು ಎಕರೆ ಕಾಫಿ ತೋಟ ನಿರ್ವಹಿಸುವ ಜವಾಬ್ದಾರಿ

ಕುಟುಂಬದ ಆರ್ಥಿಕ ಮುಗ್ಗಟ್ಟಿನ ಕಾರಣದಿಂದಾಗಿ ಸಾಕಮ್ಮ ಅವರು ತಮ್ಮ ಹದಿನಾರನೇ ವಯಸ್ಸಿನಲ್ಲೇ ಅನಿವಾರ್ಯವಾಗಿ ತಮಗಿಂತ ವಯಸ್ಸಿನಲ್ಲಿ ತುಂಬಾ ಹಿರಿಯರಾಗಿದ್ದ ಕೊಡಗಿನ ಸೋಮವಾರಪೇಟೆಯಲ್ಲಿ ಆಗರ್ಭ ಶ್ರೀಮಂತರಾಗಿದ್ದ ದೊಡ್ಡ ಮನೆ ಚಿಕ್ಕ ಬಸಪ್ಪ ಶೆಟ್ಟಿ ಅವರನ್ನು ವರಿಸಬೇಕಾಯಿತು. ಆ ಸಮಯದಲ್ಲೇ ಚಿಕ್ಕ ಬಸಪ್ಪ ಅವರಿಗೆ ಎರಡು ಮದುವೆ ಆಗಿದ್ದು, ಮಕ್ಕಳಿರಲಿಲ್ಲ. ಮದುವೆ ಆದ ಎರಡೇ ವರ್ಷಗಳಲ್ಲಿ ಚಿಕ್ಕ ಬಸಪ್ಪ ಅವರು ತೀರಿಕೊಂಡರು.

ಅಂದಿನ ಬ್ರಿಟಿಷ್‌ ಕಾಲದಲ್ಲೇ ಸಾಕಮ್ಮ ಕುಟುಂಬಕ್ಕೆ ನೂರಾರು ಎಕರೆ ಕಾಫಿ ತೋಟವಿತ್ತು. ಈ ಬೃಹತ್‌ ಕಾಫಿ ತೋಟದ ಜತೆಗೇ ನೂರಾರು ಆಳು ಕಾಳುಗಳ ನಿರ್ವಹಣೆ ಇವರ ಹೆಗಲಿಗೇ ಬಿತ್ತು. ಇವರ ಇಬ್ಬರು ಸವತಿಯರೂ ಹೆಚ್ಚಿಗೆ ಓದಿದವರಾಗಿರಲಿಲ್ಲ. ಆದ್ದರಿಂದ ಚತುರೆಯಾಗಿದ್ದ ಸಾಕಮ್ಮ ಬಹಳ ಬೇಗನೇ ಕಾಫಿ ತೋಟದ ನಿರ್ವಹಣೆಯನ್ನು ಕಲಿತಿದ್ದಲ್ಲದೆ ತೋಟಗಳು ಹೆಚ್ಚು ಫಸಲನ್ನು ನೀಡುವಂತೆ ಗಿಡಗಳ ಆರೈಕೆ ಮಾಡಿ ಅದರಲ್ಲೂ ಸೈ ಅನ್ನಿಸಿಕೊಂಡರು. ಅಷ್ಟರಲ್ಲಿ ಇಬ್ಬರು ಸವತಿಯರೂ ಕಾಲವಾಗಿದ್ದರು.

 1920ರಲ್ಲಿ ಬಸವನಗುಡಿಯಲ್ಲಿ ಕಾಫಿ ಕ್ಯೂರಿಂಗ್ ಘಟಕ

1920ರಲ್ಲಿ ಬಸವನಗುಡಿಯಲ್ಲಿ ಕಾಫಿ ಕ್ಯೂರಿಂಗ್ ಘಟಕ

ಮಹತ್ವಾಕಾಂಕ್ಷಿ ಆಗಿದ್ದ ಸಾಕಮ್ಮ ಅವರು ಬರೇ ಕಾಫಿಯ ಉತ್ಪಾದನೆ ಹೆಚ್ಚಿಸಿದ್ದೆ ಸಾಕೆಂದು ಸುಮ್ಮನೆ ಕೂರಲಿಲ್ಲ. ಬದಲಿಗೆ ಕಾಫಿಯ ಬಳಕೆ ಹೆಚ್ಚಿಸಿ ಕಾಫಿಗೆ ಉತ್ತಮ ಮಾರುಕಟ್ಟೆ ದೊರೆಯುವಂತೆ ಮಾಡಲೂ ಪ್ರಯತ್ನಿಸಿದರು. ಆ ಪ್ರಯತ್ನದ ಫಲವಾಗಿಯೇ ಬೆಂಗಳೂರಿನ ಬಸವನಗುಡಿಯ ಬುಲ್ ಟೆಂಪಲ್‌ ರಸ್ತೆಯಲ್ಲಿ 1920ನೇ ಇಸವಿಯಲ್ಲಿ ಮೊತ್ತ ಮೊದಲ ಕಾಫಿ ಕ್ಯೂರಿಂಗ್ ಹಾಗೂ ಪೌಡರಿಂಗ್ ಘಟಕವನ್ನು ಸ್ಥಾಪಿಸಿದರು. ಅಂದಿನ ಕಾಲದಲ್ಲಿ ಭಾರತದಲ್ಲಿ ಯಂತ್ರೋಪಕರಣಗಳು ತಯಾರಿಸದಿದ್ದ ಕಾರಣದಿಂದಾಗಿ ಇಂಗ್ಲೆಂಡ್‌ ನಿಂದ ಯಂತ್ರಗಳನ್ನು ತರಿಸಲಾಯಿತು.

ಸುರಿವ ಮಳೆ, ಬೆಚ್ಚನೆಯ ಕಾಫಿ ಮಲೆನಾಡಿಗರ ಜೀವಾಳ

ಸಾಕಮ್ಮ ಅವರ ಕಾಫಿ ಪುಡಿ ಬಹು ಬೇಗನೇ ಬೆಂಗಳೂರಿನಲ್ಲಿ ಜನಪ್ರಿಯವಾಯಿತಲ್ಲದೆ ಇದರಿಂದ ಕಾಫಿ ಪುಡಿ ಸಾಕಮ್ಮ ಎಂಬ ಹೆಸರೂ ಅವರಿಗೆ ಲಭಿಸಿತು. ಇವರ ಘಟಕದಿಂದ ಕಾಫಿ ಪುಡಿ ಖರೀದಿಸಿ ಅನೇಕರು ನಗರದ ವಿವಿಧೆಡೆಗಳಲ್ಲಿ ಕಾಫಿ ಮಾರಾಟ ಕೇಂದ್ರಗಳನ್ನು ತೆರೆದರು. ಕನ್ನಡದ ಜನಪ್ರಿಯ ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಮತ್ತು ಡಿ ವಿ ಗುಂಡಪ್ಪ ಅವರು ತಮ್ಮ ಸಾಹಿತ್ಯ ರಚನೆಗಳಲ್ಲಿ ಸಾಕಮ್ಮ ಅವರ ಕಾಫಿಯನ್ನೂ ಉಲ್ಲೇಖಿಸಿದ್ದರು ಎಂದರೆ ಕಾಫಿಯ ಜನಪ್ರಿಯತೆಯ ಮಟ್ಟ ನಮಗೆ ಅರಿವಾಗುತ್ತದೆ.

 ಬೆಂಗಳೂರಲ್ಲಿ ಮನೆ ಮಾತಾದ ಸಾಕಮ್ಮ ಕಾಫಿ ವರ್ಕ್ಸ್

ಬೆಂಗಳೂರಲ್ಲಿ ಮನೆ ಮಾತಾದ ಸಾಕಮ್ಮ ಕಾಫಿ ವರ್ಕ್ಸ್

ಅತಿ ಬೇಗನೇ ಸಾಕಮ್ಮ ಕಾಫಿ ವರ್ಕ್ಸ್ ಬೆಂಗಳೂರಿನಲ್ಲಿ ಮನೆ ಮಾತಾಯಿತು. ಓರ್ವ ಯಶಸ್ವಿ ಉದ್ಯಮಿಯಾಗಿ ಗುರ್ತಿಸಿಕೊಂಡ ಸಾಕಮ್ಮ ಅವರನ್ನು ಅಂದಿನ ಮೈಸೂರು ಸರ್ಕಾರ ಕೈಗಾರಿಕಾ ಅಭಿವೃದ್ಧಿ ಮಾಡಲು ಸಮಿತಿಯೊಂದನ್ನು ರಚಿಸಿ ಅದರಲ್ಲಿ ಅವರನ್ನು ಸೇರಿಸಿಕೊಂಡಿತು. ಇದೆಲ್ಲದರಿಂದ ಸಾಕಮ್ಮ ಬೆಂಗಳೂರಿನ ಗಣ್ಯ ವ್ಯಕ್ತಿಗಳಲ್ಲೊಬ್ಬರಾಗಿ ಹೊರಹೊಮ್ಮಿದರು. ಆ ಸಮಯದಲ್ಲೇ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ವಿಶ್ವೇಶ್ವರಪುರಂನಲ್ಲಿ ಸಾಕಮ್ಮ ಹಾಸ್ಟೆಲ್ ಒಂದನ್ನೂ ನಿರ್ಮಿಸಿದರು. ಇದು ಈಗ ಕುರುಹಿನಶೆಟ್ಟಿ ಸಂಘದ ಕೇಂದ್ರ ಕಚೇರಿಯಾಗಿದೆ. ಇಲ್ಲೇ ಕಲ್ಯಾಣ ಮಂಟಪವೂ ಇದೆ. ಇದರ ಜತೆಗೇ ಹಲವಾರು ದಾನ ಧರ್ಮ ಕಾರ್ಯಗಳಿಗೂ ಇವರು ಮುಂದಾಗಿದ್ದು, ಬಸವನಗುಡಿಯಲ್ಲಿ ಕಾಫಿ ಕ್ಯೂರಿಂಗ್ ಘಟಕವನ್ನು ನಡೆಸುತ್ತಿದ್ದ ಪ್ರದೇಶವನ್ನು ಈಗಲೂ ಸಾಕಮ್ಮ ಗಾರ್ಡನ್ ಎಂದು ಕರೆಯಲಾಗುತ್ತದೆ.

 ಮಹಿಳಾ ಉದ್ಯಮಿಗಳಿಗೆ ಸ್ಫೂರ್ತಿ ಸಾಕಮ್ಮ ಅವರ ಯಶೋಗಾಥೆ

ಮಹಿಳಾ ಉದ್ಯಮಿಗಳಿಗೆ ಸ್ಫೂರ್ತಿ ಸಾಕಮ್ಮ ಅವರ ಯಶೋಗಾಥೆ

ವ್ಯಾಪಾರ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಅವರು ಮಾಡಿದ ಸೇವೆಯನ್ನು ಗುರುತಿಸಿ, ಮೈಸೂರು ಮಹಾರಾಜರಾದ ಶ್ರೀ ಕೃಷ್ಣರಾಜ ಒಡೆಯರ್ ಸಾಕಮ್ಮ ಅವರಿಗೆ ‘ಲೋಕಸೇವಾ ಪಾರಾಯಣೆ' ಎಂಬ ಪ್ರತಿಷ್ಠಿತ ಬಿರುದನ್ನು ನೀಡಿ ಗೌರವಿಸಿದರು. ಮಹಿಳೆಯರು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಸೀಮಿತ ಅವಕಾಶಗಳನ್ನು ಹೊಂದಿದ್ದ ಆ ಕಾಲದಲ್ಲಿ ಬ್ರಿಟಿಷರು ಅವರಿಗೆ ‘ಕೈಸರ್-ಐ-ಹಿಂದ್' ಪದಕವನ್ನು ನೀಡಿದರು. ಅವರು 1928ರಲ್ಲಿ ಹಿಂದಿನ ಮೈಸೂರು ಪ್ರತಿನಿಧಿ ಸಭೆಗೆ ನಾಮ ನಿರ್ದೇಶನಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಕಾಫಿಗೆ ದೇಶೀ ಮಾರುಕಟ್ಟೆ ಕಡಿಮೆ. ಈಗಲೂ ನಾವು ಬೆಳೆದ ಶೇಕಡಾ 70ರಷ್ಟು ಕಾಫಿ ವಿದೇಶಕ್ಕೆ ರಫ್ತಾಗುತ್ತಿದೆ. ಅಂದಿನ ಕಾಲದಲ್ಲಿಯೂ ಸಾಕಮ್ಮ ಅವರು ಬ್ರಿಟಿಷರ ಜತೆ ಹಡಗಿನಲ್ಲಿ ಕಾಫಿಯನ್ನು ವಿದೇಶಗಳಿಗೆ ಮಾರಾಟ ಮಾಡುತ್ತಿದ್ದರು.

ಕಾಫಿಯ ಘಮ ಹುಡುಕಿ ಅಧ್ಯಯನಕ್ಕೆ ಕೊಡಗಿಗೆ ಬಂದ ವಿದೇಶಿಗರು

ಸಾಕಮ್ಮ ಅವರ ಯಶೋಗಾಥೆ ನಮ್ಮ ಮಹಿಳಾ ಉದ್ಯಮಿಗಳಿಗೊಂದು ಸ್ಫೂರ್ತಿದಾಯಕ ಉದಾಹರಣೆ ಆಗಬಲ್ಲುದು.

English summary
Today, Karnataka alone accounts for a significant share of the country's coffee production. One reason why the coffee industry has grown to such a level is one woman
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X