ಕಾಂಕ್ರೀಟ್ ಮನೆ ಮಹಡಿಗಳ ಮೇಲೆ ಭತ್ತ ಬಿತ್ತಿ, ಸಸಿ ಬೆಳೆದರು!
ಕದ್ರಾ ಆಣೆಕಟ್ಟು ಕೆಳಭಾಗದಲ್ಲಿ ಸತತ ಮೂರು ವರ್ಷ ಎದುರಾದ ಪ್ರವಾಹಕ್ಕೆ ಜನ ಕಂಗಾಲಾಗಿದ್ದಾರೆ. ವರ್ಷವೂ ನಷ್ಟ ಅನುಭವಿಸುವ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಆದರೆ ಕಾರವಾರ ತಾಲ್ಲೂಕಿನ ಖಾರ್ಗಾ, ವೈಲವಾಡ ಸೇರದಿದಂತೆ ಸುತ್ತಮುತ್ತಲಿನ ಇದೇ ಭಾಗದ ಒಂದಿಷ್ಟು ಕೃಷಿಕರು ವಿಭಿನ್ನ ಕೃಷಿಗಾರಿಕೆಯೊಂದಿಗೆ ಮಹಡಿಗಳ ಮೇಲೆ ಮಡಿ ಸಸಿಗಳನ್ನು ಬೆಳೆದು ಕೃಷಿ ಚಟುವಟಿಕೆ ನಡೆಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು, ಜಿಲ್ಲೆಯಲ್ಲಿ ಕಳೆದ ಮೂರು ವರ್ಷವೂ ಸತತವಾಗಿ ಎದುರಾದ ಪ್ರವಾಹದಿಂದಾಗಿ ನದಿ ತೀರದ ಮಂದಿ ಸರ್ವಸ್ವವನ್ನು ಕಳೆದುಕೊಂಡಿದ್ದರು. ಕದ್ರಾ ಜಲಾಶಯ ಕೆಳಭಾಗದ ಕಾಳಿ ನದಿ ತೀರದ ಜನ ಕೂಡ ಒಮ್ಮೇಲೆ ಬಂದ ಪ್ರವಾಹದಿಂದಾಗಿ ಎಲ್ಲವನ್ನು ಕಳೆದುಕೊಂಡಿದ್ದರು. ಉಟ್ಟ ಬಟ್ಟೆ ಬಿಟ್ಟು ಬೇರೆನೂ ಇಲ್ಲದೆ ಬೀದಿಗೆ ಬಂದಿದ್ದ ಜನ ಬದುಕು ಕಟ್ಟಿಕೊಳ್ಳುವ ಹೊತ್ತಿಗೆ ಮತ್ತೆ ಬಂದ ಪ್ರವಾಹವು ಗಾಯದ ಮೇಲೆ ಬರೆ ಎಳೆದಂತಾಗಿತ್ತು.
ಇದಲ್ಲದೆ ಸತತ ಮೂರು ವರ್ಷವೂ ನೆರೆ ಬಂದು ನೂರಾರು ಎಕರೆ ಕೃಷಿ ಭೂಮಿಗಳು ಮುಳುಗಡೆಯಾಗಿದ್ದವು. ಬಿತ್ತಿದ ಭತ್ತ ಸಂಪೂರ್ಣ ತೇಲಿ ಹೋಗಿತ್ತು. ನಾಟಿ ಮಾಡಿದ ಗದ್ದೆಗಳಲ್ಲಿ ಕೆಸರು ಕಸ ಕಡ್ಡಿ ಬಂದು ಬಿದ್ದಿದ್ದರಿಂದ ಅದೆಷ್ಟೊ ರೈತರು ಕೃಷಿ ಚಟುವಟಿಕೆಯಿಂದ ಹಿಂದೆ ಸರಿಯತೊಡಗಿದ್ದರು. ಅದರಲ್ಲಿಯೂ ಬೇಸಿಗೆಯಲ್ಲಿ ಉಪ್ಪು ನೀರಿನ ಸಮಸ್ಯೆ ಇರುವ ಕಾರಣ ನೀರು ಇದ್ದರು ಬೆಳೆ ಬೆಳೆಯಲಾಗದೆ ಅದೆಷ್ಟೋ ಭೂಮಿಗಳನ್ನು ಪಾಳು ಬಿಡತೊಡಗಿದ್ದಾರೆ. ಮೊದಲೇ ಕಾರವಾರದಲ್ಲಿ ಕೃಷಿ ಮಾಡುವ ಕೃಷಿಕರ ಸಂಖ್ಯೆ ಕಡಿಮೆಯಾಗಿದೆ. ಇಂತಹ ಸ್ಥಿತಿಯಲ್ಲಿ ಪದೆ ಪದೇ ನೆರೆಯಿಂದಾಗಿ ಮತ್ತಷ್ಟು ಜನರು ಕೃಷಿಯಿಂದ ದೂರ ಸರಿಯತೊಡಗಿದ್ದಾರು.

ವಿಭಿನ್ನವಾಗಿ ಕೃಷಿ ಚಟುವಟಿಕೆಗೆ ರೈತರು
ಕಾರವಾರ ತಾಲ್ಲೂಕಿನ ಖಾರ್ಗಾ, ವೈಲವಾಡ ಸೇರದಿದಂತೆ ಸುತ್ತಮುತ್ತಲಿನ ರೈತರು ವಿಭಿನ್ನವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕಾಂಕ್ರೀಟ್ ಮನೆಯ ಮಹಡಿಗಳ ಮೇಲೆ ಭತ್ತದ ಸಸಿಗಳನ್ನು ಬೆಳೆಯುತ್ತಿದ್ದಾರೆ. ಅಲ್ಲದೆ ಈ ಹೊಸ ಆಲೋಚನೆಯೊಂದಿಗೆ ಪಾಳು ಬಿಟ್ಟ ಭೂಮಿ ಸೇರಿದಂತೆ ಸಾಗುವಳಿ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಲು ಮುಂದಾಗಿದ್ದು ಒಬ್ಬರನ್ನು ನೋಡಿ ಇನ್ನೊಬ್ಬರು ಈ ಕೃಷಿ ಚಟುವಟಿಕೆ ಅನುಸರಿಸುತ್ತಿರುವುದು ವಿಶೇಷವಾಗಿದೆ.

ಈ ಉಪಾಯದಿಂದ ದನಕರುಗಳ ಕಾಟ ಇಲ್ಲದಂತಾಗಿದೆ
ಇನ್ನು ಹಿಂದೆ ಭತ್ತದ ಹಾಕಿದಾಗ ಭಾರಿ ಮಳೆ ಜೊತೆಗೆ ನೆರೆ ಬಂದಾಗ ಸಂಪೂರ್ಣ ತೇಲಿ ಹೋಗುತಿತ್ತು. ಅಲ್ಲದೆ ಮತ್ತೆ ಭತ್ತ ಮೊಳಕೆಯೊಡೆಸಿ ಸಸಿ ಮಾಡುವುದು ಕಷ್ಟಸಾಧ್ಯವಾಗಿದ್ದರಿಂದ ಕೃಷಿ ಭೂಮಿಯನ್ನು ಹಾಗೆಯೇ ಬಿಟ್ಟು ಬಿಡಲಾಗುತಿತ್ತು. ಆದರೆ ಇದೀಗ ಟ್ರೇಯ್‌ಗಳ ಮೂಲಕ ಬೀಜ ಬಿತ್ತನೆ ಮಾಡಿರುವುದರಿಂದ ನೆರೆ, ದನಕರುಗಳ ಕಾಟ ಯಾವುದು ಇಲ್ಲದಂತಾಗಿದೆ. ಅಲ್ಲದೆ ಇದರಿಂದ ಯಂತ್ರಗಳ ಮೂಲಕ ನಾಟಿ ಮಾಡಲು ಸಾಕಷ್ಟು ಅನುಕೂಲಕರವಾಗಿದ್ದು ಆಳುಗಳ ಸಮಸ್ಯೆಯೂ ನೀಗಿದಂತಾಗಿದೆ ಎನ್ನುತ್ತಾರೆ ಖಾರ್ಗಾದ ರೈತ ರವಿಕಾಂತ ಸಾವಂತ.

15ರಿಂದ 25 ದಿನದಲ್ಲಿ ಸಸಿ
ಇನ್ನು ಮಾರುಕಟ್ಟೆಯಲ್ಲಿ 12 ರೂಗೆ ಸಿಗುವ ಈ ರಬ್ಬರ್ ಟ್ರೇಯ್‌ಗಳಲ್ಲಿ ಮಣ್ಣು ಗೊಬ್ಬರ ಮಿಶ್ರಣ ಮಾಡಿ ತುಂಬಿ ಬಳಿಕ ಬೀಜ ಬಿತ್ತಿದರೇ ಕೇವಲ 15 ರಿಂದ 25 ದಿನದಲ್ಲಿ ಸಸಿ ನೆಡಲು ಸಿದ್ದವಾಗುತ್ತದೆ. ನಂತರ ಸಸಿಗಳನ್ನು ಕಿತ್ತು ಯಂತ್ರಗಳ ಮೂಲಕ ನಾಟಿ ಮಾಡಲಾಗುತ್ತದೆ. ಇದರಿಂದ ಕಡಿಮೆ ಅವಧಿಯಲ್ಲಿ ಕೆಲಸಗಾರರು ಇಲ್ಲದೆಯೂ ನಾಟಿ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ ಇದರಿಂದ ಉತ್ತಮ ಇಳುವರಿ ಕೂಡ ಸಿಗಲಿದೆ ಎನ್ನುತ್ತಾರೆ ಈ ಭಾಗದ ರೈತರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದಲೂ ಸಹಾಯ
ಕೃಷಿ ಇಲಾಖೆಯಿಂದ ಯಂತ್ರಧಾರೆ ಯೋಜನೆಯಡಿ ಅವಶ್ಯವಿಡುವ ಕೃಷಿಕರು ಯಂತ್ರೋಪಕರಣಗಳನ್ನು ಪಡೆಯಲು ಅವಕಾಶವಿದೆ. ಭತ್ತದ ಮಡಿ ಮಾಡಲು ಟ್ರೇಯ್‌ಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದಲೂ ನೀಡಲಾಗುತ್ತಿದೆ. ಅಲ್ಲದೆ ನಾಟಿ ಬಳಿಕ ಕಳೆ ತೆಗೆಯಲು ವೀಡರ್ ಯಂತ್ರಗಳನ್ನು ಇಲಾಖೆಯಿಂದ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.












Click it and Unblock the Notifications