ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4.81 ಕೋಟಿ ರೂ ವೆಚ್ಚ ,124 ಕಿಮೀ ದೀಪಾಲಂಕಾರ, ಇಂದ್ರನ ಅಮರಾವತಿಯಂತೆ ಕಂಗೊಳಿಸಲಿದೆ ಮೈಸೂರು

By ಬಿಎಂ ಲವಕುಮಾರ್
|
Google Oneindia Kannada News

ಮೈಸೂರು, ಆಗಸ್ಟ್‌ 27: ದಸರಾ ಸಂದರ್ಭದಲ್ಲಿ ಇಡೀ ಮೈಸೂರು ಇಂದ್ರನ ಅಮರಾವತಿಯಂತೆ ಕಂಗೊಳಿಸುತ್ತದೆ. ಇದಕ್ಕೆ ಕಾರಣವಾಗುವುದು ಜಗಮಗಿಸುವ ವಿದ್ಯುದ್ದೀಪಗಳು. ಈ ವಿದ್ಯುದ್ದೀಪದ ಬೆಳಕಿನಲ್ಲಿ ಮಿಂದೇಳುವ ಮೈಸೂರನ್ನು ನೋಡುವುದೇ ಕಣ್ಣಿಗೊಂದು ಹಬ್ಬ.

ಕಳೆದ ಎರಡು ವರ್ಷಗಳ ಕಾಲ ಕೊರೊನಾ ಕಾರಣದಿಂದಾಗಿ ದಸರಾ ಸಂಭ್ರಮವಿರಲಿಲ್ಲ. ಆದರೆ ವಿದ್ಯುದ್ದೀಪದ ಅಲಂಕಾರವನ್ನು ಎಲ್ಲೆಡೆ ಅದ್ಧೂರಿಯಾಗಿಯೇ ಮಾಡಲಾಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ರೀತಿಯಲ್ಲಿ ವಿದ್ಯುದ್ದೀಪದ ಅಲಂಕಾರಕ್ಕೆ ತೀರ್ಮಾನ ಮಾಡಲಾಗುತ್ತಿದೆ.

ಹಾಗೆ ನೋಡಿದರೆ ಮೈಸೂರು ದಸರಾಕ್ಕೆ ಮೆರುಗು ನೀಡುವುದೇ ವಿದ್ಯುದ್ದೀಪಗಳು. ಗಲ್ಲಿಯಿಂದ ಹಿಡಿದು ರಾಜಮಾರ್ಗದ ತನಕ, ಮನೆ, ಕಟ್ಟಡಗಳಿಂದ ಆರಂಭವಾಗಿ ವೃತ್ತಗಳವರೆಗೆ ಹೀಗೆ ಎಲ್ಲೆಂದರಲ್ಲಿ ಕಂಗೊಳಿಸುವ ವಿದ್ಯುದ್ದೀಪಗಳ ಅಲಂಕಾರ ಮೈಸೂರು ನಗರಕ್ಕೆ ಕಳೆ ಕಟ್ಟುತ್ತದೆ. ನವರಾತ್ರಿಯ ಕತ್ತಲನ್ನು ದೂಡಿ ಬೆಳಕು ಹರಿಸುವ ಈ ವಿದ್ಯುದ್ದೀಪಗಳ ಅಲಂಕಾರ ಮೈಸೂರು ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

Mysuru Dasara Exhibition 2022 : ಮೈಸೂರು ದಸರಾಕ್ಕೆ ಮೆರುಗು ತರಲಿದೆ ವಸ್ತುಪ್ರದರ್ಶನMysuru Dasara Exhibition 2022 : ಮೈಸೂರು ದಸರಾಕ್ಕೆ ಮೆರುಗು ತರಲಿದೆ ವಸ್ತುಪ್ರದರ್ಶನ

ದಸರಾ ಬರುತ್ತಿದ್ದಂತೆಯೇ ಇಡೀ ಮೈಸೂರು ದಸರಾ ಸಂಭ್ರಮಕ್ಕೆ ತೆರೆದುಕೊಳ್ಳುತ್ತದೆ. ಪ್ರತಿ ಮನೆ ಬೀದಿಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡುತ್ತದೆ. ಇದಕ್ಕೆಲ್ಲ ಹೊಸತನ ನೀಡುವಂತೆ ವಿದ್ಯುದ್ದೀಪದ ಅಲಂಕಾರಗಳು, ವಿವಿಧ ಕಲಾಕೃತಿಗಳು, ಜನಮಗಿಸುವ ವೃತ್ತಗಳು ಇಡೀ ಮೈಸೂರು ನಗರ ವಿದ್ಯುದ್ದೀಪದ ಬೆಳಕಿನಲ್ಲಿ ತೋಯ್ದಾಡುತ್ತಿದ್ದರೆ ಅದನ್ನು ನೋಡಲು ಎರಡು ಕಣ್ಣುಗಳೇ ಸಾಲದಾಗುತ್ತದೆ.

 ಝಗಮಗಿಸುವ ದೀಪದ ಬೆಳಕಲ್ಲಿ ಸ್ವರ್ಗದ ಹಾದಿ

ಝಗಮಗಿಸುವ ದೀಪದ ಬೆಳಕಲ್ಲಿ ಸ್ವರ್ಗದ ಹಾದಿ

ದಸರಾ ಸಮಯದಲ್ಲಿ ವಿದ್ಯುದ್ದೀಪದ ಬೆಳಕಿನಲ್ಲಿ ನಗರಕ್ಕೊಂದು ಸುತ್ತು ಬಂದರೆ ಪ್ರಮುಖ ರಸ್ತೆಗಳು, ಝಗಮಗಿಸುವ ದೀಪದ ಬೆಳಕಲ್ಲಿ ಸ್ವರ್ಗದ ಹಾದಿಯನ್ನೇ ನಮ್ಮ ಮುಂದೆ ತೆರೆದಿಡುತ್ತವೆ. ಇದರ ಜತೆಗೆ ಅರಮನೆ ಸೇರಿದಂತೆ ಪಾರಂಪರಿಕ ಕಟ್ಟಡಗಳು, ಮಹಲುಗಳು, ಗುರುಮನೆಗಳು. ಹಸಿರು ದೀಪಾಲಂಕಾರ ಹೊತ್ತ ಉದ್ಯಾನವನಗಳು ಕಂಗೊಳಿಸುತ್ತವೆ. ದೇವತೆ, ದೇವರುಗಳು, ಮಹಾನ್ ನಾಯಕರು, ರಾಜಮಹಾರಾಜರ ಕಲಾಕೃತಿಗಳು ಧರೆಗೆ ಇಳಿದು ಬಂದಂತೆ ಭಾಸವಾಗುತ್ತವೆ.

ಇನ್ನು ರಾಜಮಾರ್ಗವಾಗಿರುವ ಜಂಬೂಸವಾರಿ ಸಾಗುವ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಹೈವೇ ವೃತ್ತ ಮತ್ತು ಬನ್ನಿಮಂಟಪದ ರಸ್ತೆಗಳು ಸುರಸುಂದರ ವಿದ್ಯುತ್ ದೀಪಾಲಂಕಾರದಿಂದ ಕಣ್ಮನ ಸೆಳೆಯುತ್ತಿವೆ. ಅಂಬಾವಿಲಾಸ ಅರಮನೆ, ಲಲಿತ ಮಹಲ್ ಅರಮನೆ, ದೇವರಾಜು ಅರಸು ರಸ್ತೆ, ರೈಲ್ವೆ ಸ್ಟೇಷನ್ ವೃತ್ತ, ಪಾರಂಪರಿಕ ಕಟ್ಟಡಗಳಾದ ಪುರಭವನ, ನಗರ ಪಾಲಿಕೆ ಕಟ್ಟಡ, ಮೂಡಾ, ನ್ಯಾಯಾಲಯ ಕಟ್ಟಡ, ಜಿಲ್ಲಾಧಿಕಾರಿ ಕಚೇರಿ, ಮೈಸೂರು ವಿವಿ, ಸೇರಿದಂತೆ ಪ್ರಮುಖ ಪಾರಂಪರಿಕ ಕಟ್ಟಡಗಳಂತು ವಿದ್ಯುತ್ ಬೆಳಕಿನಲ್ಲಿ ಕಂಗೊಳಿಸುತ್ತಾ ಎಲ್ಲರನ್ನು ತಮ್ಮಡೆಗೆ ಸೆಳೆಯುತ್ತವೆ.

 ಮೈಸೂರಿನ ಗರಡಿಮನೆಗಳಲ್ಲೀಗ ದಸರಾ ಕುಸ್ತಿಗೆ ತಾಲೀಮು! ಮೈಸೂರಿನ ಗರಡಿಮನೆಗಳಲ್ಲೀಗ ದಸರಾ ಕುಸ್ತಿಗೆ ತಾಲೀಮು!

 ದೀಪಾಲಂಕಾರಕ್ಕೆ ಲೇಸರ್ ಬೆಳಕಿನ ಸ್ಪರ್ಶ

ದೀಪಾಲಂಕಾರಕ್ಕೆ ಲೇಸರ್ ಬೆಳಕಿನ ಸ್ಪರ್ಶ

ಈ ಬಾರಿ ಮೈಸೂರು ದಸರಾ ವಿದ್ಯುದ್ದೀಪದ ಅಲಂಕಾರವನ್ನು ಇನ್ನಷ್ಟು ಹೆಚ್ಚಿಸಿದಲ್ಲದೆ, ವಿನೂತನ ಪ್ರಯೋಗಗಳನ್ನು ಮಾಡಲು ಮತ್ತು ವಿದ್ಯುತ್ ಉಳಿತಾಯ ಮಾಡಲು ಎಲ್ ಇಡಿ ಬಲ್ಬ್ ಗಳ ಅಳವಡಿಕೆಯನ್ನು ಗಣನೀಯವಾಗಿ ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ಈಗಾಗಲೇ ಸಿದ್ಧತೆಯನ್ನು ಆರಂಭಿಸಿದೆ. ವಿದ್ಯುತ್ ಮಿತ ಬಳಕೆ, ಪರಿಸರ ಸ್ನೇಹಿ ಎಲ್‌ಇಡಿ ಬಲ್ಬ್ ಬಳಸಿ ಆಕರ್ಷಕ ದೀಪಾಲಂಕಾರ ಮಾಡುವುದಲ್ಲದೆ, ದೀಪಾಲಂಕಾರಕ್ಕೆ ಲೇಸರ್ ಬೆಳಕಿನ ಸ್ಪರ್ಶದ ಮೂಲಕ ಈ ಬಾರಿಯ ದೀಪಾಲಂಕಾರಕ್ಕೆ ಹೊಸ ಮೆರಗು ನೀಡಲು ಮುಂದಾಗಿದೆ.

ಈ ಬಾರಿ ಮೈಸೂರು ದಸರಾ ಸಮಯದಲ್ಲಿ ವಿದ್ಯುದ್ದೀಪದ ಅಲಂಕಾರ ಹೇಗಿರಲಿದೆ ಎನ್ನುವುದನ್ನು ನೋಡುವುದಾದರೆ, 124 ಕಿ.ಮೀ ರಸ್ತೆ ಹಾಗೂ 96 ವೃತ್ತ ಹಾಗೂ ನಗರದಾದ್ಯಂತ ಸುಮಾರು 30 ಬೃಹತ್ ಕಲಾಕೃತಿಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ದೇವಾನು ದೇವತೆಗಳು ಸೇರಿದಂತೆ ಮೈಸೂರು ಮಹಾರಾಜರು ಸೇರಿದಂತೆ ಹಲವು ಮಹನೀಯರನ್ನು ವಿದ್ಯುದ್ದೀಪದಲ್ಲಿಯೇ ಸೃಷ್ಟಿಸಿ ಜನರ ಮುಂದೆ ವಿರಾಜಿಸುವಂತೆ ಮಾಡಲಾಗುತ್ತಿದೆ.

 124 ಕಿ.ಮೀ. ರಸ್ತೆಯಲ್ಲಿ ವಿದ್ಯುದ್ದೀಪ ಜಗಮಗ

124 ಕಿ.ಮೀ. ರಸ್ತೆಯಲ್ಲಿ ವಿದ್ಯುದ್ದೀಪ ಜಗಮಗ

ರಸ್ತೆಯ ದೀಪಾಲಂಕಾರವು ಹೇಗಿರಲಿದೆ ಎಂದರೆ ಅರಮನೆಯ ಸುತ್ತಲಿನ ಪ್ರಮುಖ ರಸ್ತೆಗಳು, ರಾಜಮಾರ್ಗ, ಚಾಮರಾಜ ಜೋಡಿ ರಸ್ತೆ, ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ ಅಲ್ಲದೇ, ಹೆಚ್ಚುವರಿಯಾಗಿ ನಗರದ ಪ್ರಮುಖ ಪ್ರದೇಶಗಳ ರಸ್ತೆಗಳು ಸೇರಿ 127 ರಸ್ತೆಗಳಿಗೆ ದೀಪಾಲಂಕಾರ ಮಾಡುವುದರೊಂದಿಗೆ ಒಟ್ಟು 124 ಕಿ.ಮೀ. ರಸ್ತೆಯಲ್ಲಿ ವಿದ್ಯುದ್ದೀಪ ಜಗಮಗಿಸಲಿದೆ.

ಇನ್ನು ನಗರದ ರಸ್ತೆಗಳನ್ನು ಒಂದುಗೂಡಿಸುವ ವೃತ್ತಗಳಿಗೂ ವಿಶೇಷ ರೀತಿಯ ವಿದ್ಯುತ್ ಅಲಂಕಾರ ಮಾಡಲಾಗುತ್ತಿದ್ದು, ಕೆಲವು ಪ್ರಮುಖ ವೃತ್ತಗಳಲ್ಲಿ ಕಲಾಕೃತಿಯ ನಿರ್ಮಾಣವೂ ಇರಲಿದೆ. ನಗರದ ಹೃದಯ ಭಾಗದಲ್ಲಿರುವ ಕೆ.ಆರ್.ವೃತ್ತ, ಚಾಮರಾಜ ಒಡೆಯರ್ ವೃತ್ತ, ರಾಮಸ್ವಾಮಿ ವೃತ್ತ, ಮಿಲೇನಿಯಂ ವೃತ್ತ, ಡಾ.ಅಂಬೇಡ್ಕರ್ ವೃತ್ತ, ರೈಲ್ವೆ ನಿಲ್ದಾಣದ ಎದುರಿನ ಬಾಬು ಜಗಜೀವನರಾಂ ವೃತ್ತ, ಅಗ್ರಹಾರ, ಚಾಮುಂಡಿಪುರಂ ವೃತ್ತ ಹೀಗೆ ನಗರದಲ್ಲಿರುವ ಸುಮಾರು 96 ವೃತ್ತಗಳನ್ನು ವಿದ್ಯುದ್ದೀಪದ ಅಲಂಕಾರ ಮಾಡಲು ತೀರ್ಮಾನಿಸಲಾಗಿದೆ.

 4.81 ಕೋಟಿ ರೂ. ಖರ್ಚು ಅಂದಾಜು

4.81 ಕೋಟಿ ರೂ. ಖರ್ಚು ಅಂದಾಜು

ವಿದ್ಯುದ್ದೀಪದ ಅಲಂಕಾರಕ್ಕೆ ವೆಚ್ಚವಾಗುವ ವಿದ್ಯುತ್ ಉಳಿತಾಯದತ್ತ ಗಮನಹರಿಸಲಾಗಿದ್ದು, ಎಲ್ ಇಡಿ ಬಲ್ಬ್ ಬಳಕೆಗೆ ಆದ್ಯತೆ ನೀಡಲಾಗಿದೆ. ಹಿಂದೆ ಉಪಯೋಗಿಸುತ್ತಿದ್ದ ಬುರುಡೆ ಬಲ್ಬ್‌ಗೆ ಬದಲಾಗಿ ಈ ಬಾರಿ ಎಲ್‌ಇಡಿ ಬಲ್ಬ್ ಬಳಕೆಯನ್ನು ಹೆಚ್ಚಿಸಲಾಗಿದೆ. ದಸರಾ ಸಮಯದಲ್ಲಿ ಆಗುವ ವಿದ್ಯುತ್ ನ ವೆಚ್ಚವನ್ನು ನೋಡುವುದಾದರೆ 2019ರಲ್ಲಿ 1,07,550 ಯೂನಿಟ್ ಬಳಕೆಯಾಗಿದ್ದರೆ, ಎಲ್‌ಇಡಿ ಬಳಕೆ ಶುರು ಮಾಡಿದ ಬಳಿಕ 2020ರಲ್ಲಿ 88,605 ಯೂನಿಟ್ ಗೆ ಇಳಿದಿತ್ತು. ಆದರೆ ಕಳೆದ ವರ್ಷ ಅಂದರೆ 2021ರಲ್ಲಿ ವಿದ್ಯುತ್ ಅಲಂಕಾರಕ್ಕೆ ಹೆಚ್ಚಿನ ಅದ್ಯತೆ ಮತ್ತು ಅಲಂಕಾರ ವಿಸ್ತಾರಗೊಳಿಸಿದ ಕಾರಣ 1,35,000 ಯೂನಿಟ್ ಬಳಕೆಯಾಗಿತ್ತು. ಈ ಬಾರಿ 1,31,805 ಯೂನಿಟ್ ಬಳಕೆಯಾಗುವ ಅಂದಾಜು ಮಾಡಲಾಗಿದೆ.

ದಸರಾ ದೀಪಾಲಂಕಾರಕ್ಕಾಗಿ ಆಗುವ ಖರ್ಚುಗಳನ್ನು ನೋಡುವುದಾದರೆ 2019ರಲ್ಲಿ 4.35 ಕೋಟಿ, 2020 ಮತ್ತು 2021ರಲ್ಲಿ ಸರಳ ದಸರಾವಾದ ಹಿನ್ನಲೆಯಲ್ಲಿ 3.36 ಮತ್ತು 4.37 ಕೋಟಿ ರೂ. ಖರ್ಚಾಗಿತ್ತು. ಈ ಬಾರಿಯ ದಸರಾಕ್ಕೆ ಸುಮಾರು 4.81 ಕೋಟಿ ರೂ. ಖರ್ಚಾಗಬಹುದೆಂದು ಅಂದಾಜು ಮಾಡಲಾಗಿದೆ.

 ಮರಗಳಿಗೆ ದೀಪಾಲಂಕಾರ ಬೇಡ ಎಂದು ಮನವಿ

ಮರಗಳಿಗೆ ದೀಪಾಲಂಕಾರ ಬೇಡ ಎಂದು ಮನವಿ

ಇದೆಲ್ಲದರ ನಡುವೆ ದಸರಾ ಮಹೋತ್ಸವದ ವೇಳೆ ಮರಗಳಿಗೆ ದೀಪಾಲಂಕಾರ ಮಾಡಿ ಹೈಮಾಸ್ ದೀಪ ಅಳವಡಿಸುವುದರಿಂದ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಮರಗಳಿಗೆ ವಿದ್ಯುದ್ದೀಪ ಅಲಂಕಾರ ಮಾಡಬೇಡಿ ಎಂಬ ಮನವಿಯನ್ನು ಪರಿಸರ ಹೋರಾಟಗಾರ್ತಿ ಭಾನು ಮೋಹನ್ ಜಿಲ್ಲಾಧಿಕಾರಿಗಳಿಗೆ ಮಾಡಿದ್ದಾರೆ. ಇದರ ಬಗ್ಗೆ ಜಿಲ್ಲಾಡಳಿತ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಒಟ್ಟಾರೆ ಈ ಬಾರಿಯ ವಿದ್ಯುದ್ದೀಪದ ಅಲಂಕಾರ ಅದ್ದೂರಿಯಾಗಿರಲಿದ್ದು, ದಸರಾಕ್ಕೆ ವಿದ್ಯುದ್ದೀಪದ ಅಲಂಕಾರ ಇನ್ನಷ್ಟು ಮೆರಗು ನೀಡಲಿದೆ. ಇದಕ್ಕಾಗಿ ಬೇಕಾದ ಸಿದ್ಧತೆಗಳನ್ನು ಈಗಿನಿಂದಲೇ ಆರಂಭ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದೀಪಾಲಂಕಾರದ ಕಾರ್ಯಕ್ಕೆ ಚಾಲನೆ ಸಿಗಲಿದೆ.

English summary
As Dasara festivities in Mysuru are set to regain their glory with the celebrations going to be a grand affair this year, 124 km of roads and streets and 96 junctions will be specially illuminated with LED bulbs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X