ಕೊವ್ಯಾಕ್ಸಿನ್ ಉತ್ಪಾದನೆಯಲ್ಲಿ ಕೊಟ್ಟ ಮಾತು ತಪ್ಪುತ್ತಿದೆಯಾ ಭಾರತ್ ಬಯೋಟೆಕ್?

ನವದೆಹಲಿ, ಸಪ್ಟೆಂಬರ್ 29: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಸ್ವದೇಶಿ ನಿರ್ಮಿತ ಲಸಿಕೆಗಳು ಬಹುಮುಖ್ಯ ಪಾತ್ರ ವಹಿಸುತ್ತಿವೆ. ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಆರಂಭವಾಗಿ 8 ತಿಂಗಳಿನಲ್ಲಿ 11 ಜನರ ಪೈಕಿ ಕೇವಲ ಒಬ್ಬರು ಮಾತ್ರ ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗಿದೆ. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಯಲ್ಲಿ ಹಿಂದೆ ಬಿದ್ದಿರುವುದು ಅಂಕಿ-ಅಂಶಗಳಿಂದ ಗೊತ್ತಾಗಿದೆ.

ಭಾರತ್ ಬಯೋಟೆಕ್ ಸಂಸ್ಥೆಯು ತನಗೆ ತಾನು ಹಾಕಿಕೊಂಡಿರುವ ನಿಗದಿತ ಪ್ರಮಾಣದ ಲಸಿಕೆ ಉತ್ಪಾದನೆಯ ಗುರಿಯನ್ನು ತಲುಪುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದರ ಮಧ್ಯೆ ಲಸಿಕೆ ಗುಣಮಟ್ಟದ ಕಾರಣಕ್ಕಾಗಿ ಒಂದು ಲಸಿಕೆಯ ಬ್ಯಾಚ್ ನಲ್ಲಿ ದೋಷ ಕಂಡು ಬಂದಿದೆ.

"ಭಾರತ್ ಬಯೋಟೆಕ್ ಕಂಪನಿಯು ಅಕ್ಟೋಬರ್‌ನಿಂದ ಕೊವ್ಯಾಕ್ಸಿನ್ ಲಸಿಕೆಯ 5.5 ಕೋಟಿ ಡೋಸ್‌ಗಳನ್ನು ಪೂರೈಸಲಿದ್ದು, ಪ್ರಸ್ತುತ 3.5 ಕೋಟಿ ಡೋಸ್ ಲಸಿಕೆ ಪೂರೈಸಲಾಗುತ್ತಿದೆ. ಆದರೆ ಆರಂಭಿಕ ಹಂತದಲ್ಲಿ ಅಂದುಕೊಂಡಂತೆ 10 ಕೋಟಿ ಡೋಸ್ ಲಸಿಕೆ ಪೂರೈಸುವುದುಕ್ಕೆ ಸಾಧ್ಯವಾಗಲಿಲ್ಲ," ಎಂದು ಸಿಎಂಡಿ ಕೃಷ್ಣಾ ಎಲ್ಲಾ ಹೇಳಿದ್ದಾರೆ.

ಪ್ರತಿ ತಿಂಗಳು 10 ಕೋಟಿ ಡೋಸ್ ಲಸಿಕೆಯ ಯೋಜನೆ

ಪ್ರತಿ ತಿಂಗಳು 10 ಕೋಟಿ ಡೋಸ್ ಲಸಿಕೆಯ ಯೋಜನೆ

ಕೊವ್ಯಾಕ್ಸಿನ್ ಲಸಿಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಕಳೆದ ಮೇ ತಿಂಗಳಿನಲ್ಲಿ ಸುಪ್ರೀಂಕೋರ್ಟಿಗೆ ಅಫಿಡವಿಟ್ ಅನ್ನು ಸಲ್ಲಿಸಿತ್ತು. ಈ ಅಫಿಡವಿಟ್ ನಲ್ಲಿ ಆಗಸ್ಟ್ ನಿಂದ ಡಿಸೆಂಬರ್ ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳು 10 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆಯಲು ಯೋಜಿಸಲಾಗಿದ್ದು, ಒಟ್ಟು 55 ಕೋಟಿ ಡೋಸ್ ಲಸಿಕೆ ಪಡೆಯುವ ಬಗ್ಗೆ ಉಲ್ಲೇಖಿಸಲಾಗಿತ್ತು. ಆದರೆ ಒಂದೇ ತಿಂಗಳ ಅಂತರದಲ್ಲಿ ಲಸಿಕೆ ಪೂರೈಕೆ ಪ್ರಮಾಣವು ಶೇ.20ರಷ್ಟು ಇಳಿಕೆಯಾಗಿದ್ದು, ತಿಂಗಳಿಗೆ 8 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆ ನೀಡುವ ಬಗ್ಗೆ ಕಂಪನಿ ಹೇಳಿತ್ತು. ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಲಸಿಕೆಯನ್ನು ಪೂರೈಸಲಾಗಿತ್ತು.

ಸರ್ಕಾರ ಹಾಗೂ ಕಂಪನಿ ನಡುವೆ ಮುಂದುವರಿದ ಗೊಂದಲ

ಸರ್ಕಾರ ಹಾಗೂ ಕಂಪನಿ ನಡುವೆ ಮುಂದುವರಿದ ಗೊಂದಲ

ಭಾರತ್ ಬಯೋಟೆಕ್ ಸಂಸ್ಥೆಯು ಕೊಟ್ಟ ಮಾತಿನಂತೆ ನಿಗದಿತ ಪ್ರಮಾಣದಲ್ಲಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸುವ ಮತ್ತು ಪೂರೈಸುವ ಸಾಮರ್ಥ್ಯವನ್ನು ಕಳೆದುಕೊಂಡಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಮಧ್ಯೆ ಇದುವರೆಗೂ ಪೂರೈಕೆ ಆಗಿರುವ ಲಸಿಕೆ ಪ್ರಮಾಣದ ಬಗ್ಗೆ ಕೇಂದ್ರ ಸರ್ಕಾರ ಮತ್ತು ಕಂಪನಿಯು ನೀಡುತ್ತಿರುವ ಅಂಕಿ-ಅಂಶಗಳಲ್ಲಿ ತೀವ್ರ ಗೊಂದಲ ಕಂಡು ಬಂದಿದೆ.

ಭಾರತದಲ್ಲಿ ಶೇ.90ರಷ್ಟು ಜನರಿಗೆ ಕೊವಿಶೀಲ್ಟ್ ಲಸಿಕೆ

ಭಾರತದಲ್ಲಿ ಶೇ.90ರಷ್ಟು ಜನರಿಗೆ ಕೊವಿಶೀಲ್ಟ್ ಲಸಿಕೆ

ಕಳೆದ ಕೆಲವು ತಿಂಗಳುಗಳಿಂದ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಮತ್ತು ಪೂರೈಕೆಯಲ್ಲಿ ತೀವ್ರ ಇಳಿಕೆ ಕಂಡು ಬಂದಿದೆ. ದೇಶದಲ್ಲಿ ಇದುವರೆಗೂ ಲಸಿಕೆ ಪಡೆದವರ ಪೈಕಿ ಶೇ.90ರಷ್ಟು ಫಲಾನುಭವಿಗಳು ಪುಣೆ ಮೂಲದ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಈ ಮಧ್ಯೆ ಡಿಸೆಂಬರ್ 31ರ ಅವಧಿಗೆ ಭಾರತದಲ್ಲಿ ಇರುವ 94 ಕೋಟಿ ಅರ್ಹ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ನೀಡುವ ಗುರಿಯನ್ನು ಹೊಂದಲಾಗಿದೆ.

ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಬಗ್ಗೆ ಸರ್ಕಾರದಲ್ಲೇ ಗೊಂದಲ

ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಬಗ್ಗೆ ಸರ್ಕಾರದಲ್ಲೇ ಗೊಂದಲ

ಕೇಂದ್ರ ಸರ್ಕಾರವು ಮೇ ತಿಂಗಳಿನಲ್ಲಿ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಪ್ರಮಾಣದ ಬಗ್ಗೆ ಉಲ್ಲೇಖಿಸಿತ್ತು. "ಭಾರತ್ ಬಯೋಟೆಕ್ ಸಂಸ್ಥೆಯು ಲಸಿಕೆ ಉತ್ಪಾದನೆ ಪ್ರಮಾಣವನ್ನು 90 ಲಕ್ಷದಿಂದ 2 ಕೋಟಿ ಡೋಸ್ ಗೆ ಹೆಚ್ಚಿಸಿಕೊಳ್ಳಲಿದ್ದು, 2021ರ ಜುಲೈ ವೇಳೆಗೆ ಅದು 5.5 ಕೋಟಿ ಡೋಸ್ ತಲುಪಲಿದೆ," ಎಂದು ಸರ್ಕಾರವು ಆರಂಭದಲ್ಲಿ ಹೇಳಿತ್ತು. ಆದರೆ ಅದೇ ಮೇ ತಿಂಗಳಿನಲ್ಲಿ ಜೈವಿಕ ತಂತ್ರಜ್ಞಾನ ವಿಭಾಗವು ಬೇರೆ ಅಂಕಿ-ಅಂಶಗಳನ್ನು ನೀಡಿತ್ತು. "ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಪ್ರಮಾಣವು ಮೇ ಮತ್ತು ಜೂನ್ ತಿಂಗಳಿನಲ್ಲಿ ಎರಡು ಪಟ್ಟು ಹೆಚ್ಚಾಗಲಿದ್ದು, ಆಗಸ್ಟ್ ವೇಳೆಗೆ ಅದು 6 ರಿಂದ 7 ಕೋಟಿ ಡೋಸ್ ಆಗಲಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಲಸಿಕೆ ಉತ್ಪಾದನೆ ಮತ್ತು ಪೂರೈಕೆ ಪ್ರಮಾಣವು 10 ಕೋಟಿ ಆಗಲಿದೆ," ಎಂದು ಹೇಳಿತ್ತು.

ಕೊವ್ಯಾಕ್ಸಿನ್ ಒಂದು ಬ್ಯಾಚ್ ಉತ್ಪಾದಿಸಲು ಎಷ್ಟು ದಿನ?

ಕೊವ್ಯಾಕ್ಸಿನ್ ಒಂದು ಬ್ಯಾಚ್ ಉತ್ಪಾದಿಸಲು ಎಷ್ಟು ದಿನ?

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ತತ್ತರಿಸಿದ ಭಾರತದಲ್ಲಿ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಕಳೆದ ಜನವರಿ 3ರಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯು ಅನುಮೋದನೆ ನೀಡಿತ್ತು. ಕೊವ್ಯಾಕ್ಸಿನ್ ಲಸಿಕೆಯ ಉತ್ಪಾದನೆ, ಪರಿಶೋಧನೆ ಹಾಗೂ ಪರೀಕ್ಷೆ ಸೇರಿದಂತೆ ಎಲ್ಲ ವೈದ್ಯಕೀಯ ಪರೀಕ್ಷೆಗಳು ಪೂರ್ಣಗೊಂಡ ಒಂದು ಬ್ಯಾಚ್ ಹೊರ ಬರುವುದಕ್ಕೆ ಕನಿಷ್ಠ 120 ದಿನಗಳೇ ಬೇಕಾಗುತ್ತವೆ ಎಂದು ಭಾರತ್ ಬಯೋಟೆಕ್ ಹೇಳಿದೆ. ಆದರೆ ಲಸಿಕೆ ಉತ್ಪಾದನೆ ಆರಂಭಿಸಿದ 9 ತಿಂಗಳ ನಂತರದಲ್ಲಿಯೂ ಕೊವ್ಯಾಕ್ಸಿನ್ ಉತ್ಪಾದನಾ ಹಂತದಲ್ಲಿ ಗುಣಮಟ್ಟದ ದೋಷ ಹೇಗೆ ಕಾಣಿಸಿಕೊಳ್ಳುವುದಕ್ಕೆ ಸಾಧ್ಯ ಎಂಬ ಪ್ರಶ್ನೆಗೆ ಭಾರತ್ ಬಯೋಟೆಕ್ ಸಂಸ್ಥೆಯು ಇದುವರೆಗೂ ಯಾವುದೇ ಉತ್ತರ ನೀಡಿಲ್ಲ.

ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ mRNA ಲಸಿಕೆ ಅಲ್ಲ

ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ mRNA ಲಸಿಕೆ ಅಲ್ಲ

ಭಾರತದಲ್ಲಿ ಅನುಮೋದನೆ ನೀಡಲಾಗಿರುವ ಕೊವ್ಯಾಕ್ಸಿನ್ ಲಸಿಕೆಯೊಂದರನ್ನು ಹೊರತುಪಡಿಸಿ ಉಳಿದ ಮೂರು ಲಸಿಕೆಗಳು mRNA ಮಾದರಿಯ ಲಸಿಕೆಗಳಾಗಿವೆ. ಕೊವಿಶೀಲ್ಡ್, ಸ್ಪುಟ್ನಿಕ್-ವಿ ಮತ್ತು ಮಾಡರ್ನಾ ಕಂಪನಿಯ ಲಸಿಕೆಗಳು mRNA ಮಾದರಿಯದ್ದಾಗಿವೆ. ಅಸಲಿಗೆ ಈ ಮಾದರಿಯ ಲಸಿಕೆಗಳು ದೇಹದಲ್ಲಿರುವ ವೈರಸ್ ಅನ್ನು ಗುರುತಿಸಿ ಅವುಗಳ ವಿರುದ್ಧ ರಕ್ಷಣೆ ನೀಡುವುದಕ್ಕಾಗಿ ಹೆಚ್ಚುವರಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇಂಥ ಲಸಿಕೆಯನ್ನೇ mRNA ಲಸಿಕೆ ಎಂದು ಕರೆಯಲಾಗುತ್ತದೆ.

ಭಾರತದಲ್ಲಿ ಒಟ್ಟು ನಾಲ್ಕು ಕಂಪನಿಗಳ ಕೊರೊನಾವೈರಸ್ ಲಸಿಕೆಯ ವಿತರಣೆಗೆ ಅನುಮೋದನೆ ನೀಡಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆ. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್, ರಷ್ಯಾದಲ್ಲಿ ಸಂಶೋಧಿಸಿ ಭಾರತದ ರೆಡ್ಡೀಸ್ ಕಂಪನಿ ಜೊತೆಗಿನ ಸಹಭಾಗಿತ್ವದಲ್ಲಿ ಉತ್ಪಾದನೆ ಆಗುತ್ತಿರುವ ಸ್ಪುಟ್ನಿಕ್-ವಿ ಹಾಗೂ ಮಾಡೆರ್ನಾ ಲಸಿಕೆಯನ್ನು ವಿತರಿಸುವುದಕ್ಕೆ ಕೇಂದ್ರ ವೈದ್ಯಕೀಯ ಔಷಧೀಯ ನಿಯಂತ್ರಣ ಪ್ರಾಧಿಕಾರವು ಅನುಮೋದನೆ ನೀಡಲಾಗಿದೆ.

ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಪ್ರಮಾಣ?

ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಪ್ರಮಾಣ?

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ವೇಗ ಕೊಂಚ ತಗ್ಗಿದಂತೆ ತೋರುತ್ತಿದೆ. ಕಳೆದ ಮಂಗಳವಾರ ರಾತ್ರಿ 7 ಗಂಟೆ ವೇಳೆಗೆ 49,45,169 ಮಂದಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 256 ದಿನಗಳಾಗಿದ್ದು, 87 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಭಾರತದಲ್ಲಿ ಈವರೆಗೂ 87,61,89,412 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದ್ದು, ದೇಶದಲ್ಲಿ ಇದುವರೆಗೂ 64,25,70,102 ಮಂದಿಗೆ ಮೊದಲ ಡೋಸ್ ಹಾಗೂ 23,36,19,310 ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೂ 84,70,41,325 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಇದುವರೆಗೂ ಪೂರೈಕೆ ಆಗಿರುವ ಲಸಿಕೆ ಪ್ರಮಾಣ?

ಭಾರತದಲ್ಲಿ ಇದುವರೆಗೂ ಪೂರೈಕೆ ಆಗಿರುವ ಲಸಿಕೆ ಪ್ರಮಾಣ?

2021ರ ಸಪ್ಟೆಂಬರ್ 28ರ ಅಂಕಿ-ಅಂಶಗಳ ಪ್ರಕಾರ, 84,70,41,325 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವ ಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.

* ಪೂರೈಕೆಯಾದ ಲಸಿಕೆ ಪ್ರಮಾಣ - 84,70,41,325

* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 42,83,200

* ಕೊವಿಡ್-19 ಲಸಿಕೆಯ ಲಭ್ಯತೆ - 4,75,43,650

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+