CN Ashwath Narayan profile; ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕನ ಪರಿಚಯ
ಬೆಂಗಳೂರಿನ ಮಲ್ಲೇಶ್ವರ ಕ್ಷೇತ್ರದ ಶಾಸಕ, ಬಿಜೆಪಿ ನಾಯಕ ಡಾ. ಅಶ್ವಥ್ ನಾರಾಯಣ್ ಸಿ. ಎನ್. ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಮೂರು ಬಾರಿ ಶಾಸಕರಾಗಿರುವ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಅಶ್ವಥ್ ನಾರಾಯಣ್ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾದರು. ಎಂಬಿಬಿಎಸ್ ವ್ಯಾಸಂಗ ಮಾಡಿರುವ ಇವರು ಪಕ್ಷದ ಹೈಕಮಾಂಡ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ನಾಯಕ.
ಅಶ್ವಥ್ ನಾರಾಯಣ್ ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಖಾತೆ ಸಚಿವರು. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್ ಜೊತೆ ವೇದಿಕೆ ಮೇಲೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಜಟಾಪಟಿ ನಡೆಸಿ ಸುದ್ದಿಯಾಗಿದ್ದರು. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾದ ಅಶ್ವಥ್ ನಾರಾಯಣ್ ಬಳಿಕ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಸಚಿವರಾಗಿ ಮುಂದುವರೆದಿದ್ದಾರೆ.

ಫೆಬ್ರವರಿ 2, 1969ರಂದು ಜನಿಸಿದ ಅಶ್ವಥ್ ನಾರಾಯಣ್ ತಂದೆ ಟಿ. ಕೆ. ನಾರಾಯಣಪ್ಪ ಮತ್ತು ತಾಯಿ ವಿ. ಎಲ್. ಪದ್ಮಮ್ಮ. ತಂದೆ ಶಿಕ್ಷಕರಾಗಿದ್ದು, ದೈಹಿಕ ಶಿಕ್ಷಣದ ಉಪ ಅಧೀಕ್ಷಕರಾಗಿ ನಿವೃತ್ತಿ ಹೊಂದಿದ್ದಾರೆ. ಅಶ್ವಥ್ ನಾರಾಯಣ್ ಶೃತಿ ಎಂಬುವವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು.
ಅಶ್ವಥ್ ನಾಯಾಯಣ್ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದರು. ಕಾಲೇಜು ದಿನಗಳಲ್ಲಿಯೇ ಅವರು ವಿದ್ಯಾರ್ಥಿ ಸಂಘದ ಅಧ್ಯಕ್ಷರಾದರು ಮತ್ತು ಓದು ಮುಗಿದ ನಂತರ ಕಿರಿಯ ವೈದ್ಯರ ಸಂಘದ ಅಧ್ಯಕ್ಷರೂ ಆದರು. ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಆಯ್ಕೆಯಾದರು.

ಪದ್ಮಶ್ರೀ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಸುಶ್ರುತ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್‍ಗಳನ್ನು ಪ್ರಾರಂಭಿಸಿದರು. ಇವುಗಳು ವೈದ್ಯಕೀಯ ಸಹಾಯಕ (ಪ್ಯಾರಾಮೆಡಿಕ್), ಮ್ಯಾನೇಜ್ಮೆಂಟ್, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಆಯುರ್ವೇದ ವೈದ್ಯಕೀಯ ವಿಜ್ಞಾನಗಳಲ್ಲಿ ವಿವಿಧ ಕೋರ್ಸ್‍ಗಳನ್ನು ಒದಗಿಸುವ ಶಿಕ್ಷಣ ಸಂಸ್ಥೆಗಳ ಸಮೂಹವನ್ನು ನಡೆಸುತ್ತಿವೆ.
ರಾಜಕೀಯ ಜೀವನ; ಅಶ್ವಥ್ ನಾರಾಯಣ್ 2004ರಲ್ಲಿ ಬಿಜೆಪಿ ಸೇರುವ ಮೂಲಕ ರಾಜಕೀಯಕ್ಕೆ ಬಂದರು. ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ನಿಂತರು. ಕಾಂಗ್ರೆಸ್‌ನ ಎಂ. ಆರ್. ಸೀತಾರಾಮ್ ವಿರುದ್ಧ ಸೋತರು. 2008ರಲ್ಲಿ ಪುನಃ ಅದೇ ಕ್ಷೇತ್ರದಲ್ಲಿ ಕಣಕ್ಕಿಳಿದು ಎರಡು ಬಾರಿಯ ಶಾಸಕ ಎಂ. ಆರ್. ಸೀತಾರಾಮ್ ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. 2013, 2018ರ ಚುನಾವಣೆಯಲ್ಲಿಯೂ ಮಲ್ಲೇಶ್ವರದಿಂದ ಗೆಲುವು ಸಾಧಿಸಿದ್ದಾರೆ.
ಅಶ್ವಥ್ ನಾರಾಯಣ ಪಕ್ಷದ ವಿವಿಧ ಹುದ್ದೆಗಳಲ್ಲಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಬೆಂಗಳೂರು ಜಿಲ್ಲೆಯ ಬಿಜೆಪಿಯ ಉಪಾಧ್ಯಕ್ಷರಾಗಿದ್ದರು. ಆಗ ನಡೆದ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯು ದೊಡ್ಡ ಅಂತರದೊಂದಿಗೆ ಗೆಲ್ಲುವಲ್ಲಿ ಅಶ್ವಥ್ ನಾರಾಯಣಣ್ ಶ್ರಮವಿತ್ತು. 2010ರ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ 7ರಲ್ಲಿ 6 ವಾರ್ಡ್‍ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಇವರ ನೇತೃತ್ವದಲ್ಲಿ ಗೆದ್ದರು.
ಮಲ್ಲೇಶ್ವರದ ಧೋಬಿ ಘಾಟ್ ನಗರ ಮಾತ್ರವಲ್ಲ ರಾಜ್ಯದಲ್ಲಿಯೇ ಮೊದಲ ಆಧುನೀಕೃತ ಧೋಬಿ ಘಾಟ್ ಎಂಬ ಮಾನ್ಯತೆ ಗಳಿಸಿದೆ. 400ಕ್ಕೂ ಹೆಚ್ಚು ಕುಟುಂಬಗಳ ಜೀವನೋಪಾಯಕ್ಕೆ ಆಸರೆಯಾಗಿರುವ ಈ ಕಾರ್ಯದ ಹಿಂದೆ ಅಶ್ವಥ್ ನಾರಾಯಣ್ ದೂರದೃಷ್ಟಿ ಕೆಲಸ ಮಾಡಿದೆ. ಇದು ರಾಷ್ಟ್ರೀಯ ಮಾದರಿಯೂ ಆಗಿದೆ.
ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಮಾಂಟೆಸರಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು ಮಕ್ಕಳಿಗೆ ಉತ್ತಮ ಕಲಿಕೆ ಅನುಭವವನ್ನು ಒದಗಿಸುತ್ತವೆ. ನಾಗರೀಕರು ತಮ್ಮ ಸಮಸ್ಯೆಗಳ ಬಗ್ಗೆ ದೂರು ನೀಡಲು 'ಮಲ್ಲೇಶ್ವರಂ ಸಹಾಯ' ಎಂಬ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಅಶ್ವಥ್ ನಾರಾಯಣ್ ರಚನೆ ಮಾಡಿದ್ದಾರೆ.
ಡಾ. ಅಶ್ವಥ್ ನಾರಾಯಣ್ ಸಿ. ಎನ್. ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರು. ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಪ್ರಾಧಿಕಾರದಿಂದಲೇ ನಾಡಪ್ರಭು ಶ್ರೀ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ.
ಬೆಂಗಳೂರಿನ ಬೆಳವಣಿಗೆಗೆ ನಗರ ಸಂಸ್ಥಾಪಕರಾದ ನಾಡಪ್ರಭು ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಲು ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಏಕತಾ ಪ್ರತಿಮೆ ಖ್ಯಾತಿಯ ರಾಮ್ ವಿ ಸುತಾರ್ ಅವರ ಪರಿಕಲ್ಪನೆ ಮತ್ತು ಕೆತ್ತನೆಯಲ್ಲಿ 98 ಟನ್ ಕಂಚು ಮತ್ತು 120 ಟನ್ ಉಕ್ಕಿನಿಂದ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ 2022ರ ನವೆಂಬರ್‌ನಲ್ಲಿ ಪ್ರತಿಮೆ ಲೋಕಾರ್ಪಣೆ ಮಾಡಿದ್ದಾರೆ.












Click it and Unblock the Notifications