
ಚಿತ್ರದುರ್ಗ; ಹಾರನಕಣಿವೆ ರಂಗನಾಥನಿಗೆ ಹಾವು, ಚೇಳು, ಹಲ್ಲಿ ಹರಕೆ, ಏನಿದರ ವಿಶೇಷ?
ಚಿತ್ರದುರ್ಗ, ಅಕ್ಟೋಬರ್, 06: ಚಿತ್ರದುರ್ಗ ಜಿಲ್ಲೆಯ ಹಾರನಕಣಿವೆ ಶ್ರೀರಂಗನಾಥ ಸ್ವಾಮಿ ದೇವಸ್ಥಾನ ವಿಚಿತ್ರವಾದ ಹರಕೆ ಸಲ್ಲಿಸುವ ಪದ್ಧತಿ ಇಂದಿಗೂ ನಡೆದುಕೊಂಡು ಬಂದಿದೆ. ಆಯುಧ ಪೂಜೆ ಹಾಗೂ ವಿಜಯದಶಮಿ ನಂತರದ ದಿನವೇ ಇತಿಹಾಸ ಪ್ರಸಿದ್ಧ ಈ ದೇಗುಲದಲ್ಲಿ ಹಾವು, ಚೇಳು, ಜರಿಗಳ ಪ್ರತಿಕೃತಿಗಳನ್ನು ಹರಕೆ ಸಲ್ಲಿಸಿ ಭಕ್ತಿಭಾವವನ್ನು ಮೆರೆದಿದ್ದಾರೆ.
ಬಯಲು ಸೀಮೆಯ ಪ್ರಮುಖ ಧಾರ್ಮಿಕ ಕೇಂದ್ರ ಹಾಗೂ ಬುಡಕಟ್ಟು ಕಾಡುಗೊಲ್ಲರ ಆರಾಧ್ಯ ದೈವ ಹಾರನಕಣಿವೆ ಶ್ರೀರಂಗನಾಥ ಸ್ವಾಮಿ ಆಗಿದ್ದಾನೆ. ಹಿರಿಯೂರು ತಾಲೂಕು ಹಾಗೂ ಹೊಸದುರ್ಗ ತಾಲೂಕಿನ ವಾಣಿವಿಲಾಸ ಜಲಾಶಯದ ಹಿನ್ನೀರಿನ ದಡದಲ್ಲಿರುವ ಶ್ರೀರಂಗನಾಥ ಸ್ವಾಮಿಯ ಅಂಬಿನೋತ್ಸವ ವರ್ಷಕ್ಕೊಮ್ಮೆ ಅದ್ಧೂರಿಯಾಗಿ ನೆರವೇರುತ್ತದೆ. ವಿಜಯದಶಮಿ ನಂತರದ ದಿನ ಈ ಜಾತ್ರೆ ವಿಜೃಂಭಣೆಯಿಂದ ಜರುಗುತ್ತದೆ.
ಹೊಸದುರ್ಗ; ಪುಟ್ಟ ಕಂದಮ್ಮನಿಗೆ ಶ್ವಾಸಕೋಶ ತೊಂದರೆ; ಚಿಕಿತ್ಸೆಗೆ ಹಣವಿಲ್ಲದೆ ಪೋಷಕರು ಕಣ್ಣೀರು
ಹೊಸದುರ್ಗ ತಾಲೂಕಿನ ಅಂಚಿ ಬಾರಿಹಟ್ಟಿ ಗ್ರಾಮದ ದೇವರ ಉತ್ಸವ ಮೂರ್ತಿಗೆ ಮೊದಲು ವಾಣಿ ವಿಲಾಸ ಜಲಾಶಯದ ಹಿನ್ನೀರಿನಲ್ಲಿ ಗಂಗಾ ಪೂಜೆ ನೆರವರಿಸಲಾಗುತ್ತದೆ. ನಂತರ ಅಂಚಿಬಾರಿಹಟ್ಟಿಯಿಂದ ಉತ್ಸವ ಮೂರ್ತಿಯನ್ನು ಬಣ್ಣದ ಪಟ್ಟದ ಕುದುರೆ ಹಾಗೂ ಪಲ್ಲಕ್ಕಿ ಮೇಲೆ ಕೂರಿಸಿ ಭಕ್ತಿ ಭಾವದಿಂದ ಮೆರವಣಿಗೆ ಮಾಡಲಾಗುತ್ತದೆ. ಈ ಮೂಲಕ ಹಾರನಕಣಿವೆ ಶ್ರೀರಂಗನಾಥ ಶಿಲಾಮೂರ್ತಿ ಇರುವ ಜಾಗದಲ್ಲಿ ಸಂಪ್ರದಾಯದಂತೆ ಪೂಜಾರಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಬನ್ನಿ ಮರದ ಹತ್ತಿರ ಬಾಳೆ ಕಂದು ನೆಟ್ಟು ಪೂಜೆ ಸಲ್ಲಿಸಿ, ಬನ್ನಿ ಮರದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದ್ದು, ಬಾಳೆ ಕಂದಿಗೆ ಬಿಲ್ಲು ಬಾಣ ಹೊಡೆಯುವ ಮೂಲಕ ಅಂಬಿನೋತ್ಸವ ನೆರವೇರಿಸಿದರು.

ಹರಕೆ ತೀರಿಸಲು ನೆರೆದಿದ್ದ ಭಕ್ತಸಾಗರ
ಅಂಬಿನೋತ್ಸವ ಮುಗಿದ ದಿನವೇ ಉತ್ಸವ ಮೂರ್ತಿಯನ್ನು ಭಕ್ತಾದಿಗಳ ಸಮ್ಮುಖದೊಂದಿಗೆ ಹೊಸದುರ್ಗ ತಾಲೂಕಿನ ಅಂಚಿಬಾರಿ ಹಟ್ಟಿಗೆ ಹಿಂದಿರುಗಿಸಲಾಗುವುದು. ನಂತರ ಸಕ್ಕರೆ ಬಾಳೆ ಹಣ್ಣಿನ ನೈವೇದ್ಯದ ಹರಕೆ ಸಲ್ಲುತ್ತದೆ. ರೈತರು ತಾವು ಬೆಳೆದ ಬೆಳೆ ಫಲ ನೀಡಲಿ, ನಾಡಿನಲ್ಲಿ ಉತ್ತಮ ಮಳೆ ಆಗಲಿ ಹಾಗೂ ತಮ್ಮ ಆರೋಗ್ಯವನ್ನೂ ಸುಧಾರಿಸಲೆಂದು ಹರಕೆ ಹೊತ್ತಿರುತ್ತಾರೆ. ಈ ಮೂಲಕ ಭಕ್ತರು ತಾವು ತಂದಿರುವ ಸಕ್ಕರೆ, ಬಾಳೆ ಹಣ್ಣನ್ನು ಹಸಿರು ಗಿಡ ಅಥವಾ ಟಂಗಟೆ ಗಿಡದ ಬುಡದಲ್ಲಿ ಪೂಜೆ ಮಾಡುತ್ತಾರೆ. ಮೊದಲು ಅದನ್ನು ದಾಸಯ್ಯನಿಗೆ ನೀಡಿ ನಂತರ ಭಕ್ತಾದಿಗಳಿಗೆ ಹಂಚುತ್ತಾರೆ. ಅಲ್ಲದೆ ಸಂತಾನ ಫಲ ಇಲ್ಲದವರೂ ತಮಗೆ ಸಂತಾನ ಫಲಿಸಲಿ ಎಂದು ಹರಕೆ ಮಾಡಿಕೊಳ್ಳುತ್ತಾರೆ.

ರಂಗನಾಥ ಸ್ವಾಮಿಗೆ ಚೇಳು, ಹಾವು ಅರ್ಪಣೆ
ಯಾರಿಗಾದರೂ ಹಾವು, ಚೇಳು, ಜರಿ, ಹಲ್ಲಿ, ಇರುವೆ, ತಿಗಣೆ ಇತರೆ ವಿಷ ಜಂತುಗಳು ಕಡಿದಾಗ ಅಥವಾ ಕಣ್ಣಿಗೆ ಕಂಡಾಗ ಮೊದಲು ನೆನಪಿಸಿಕೊಳ್ಳುವುದೇ ಹಾರನಕಣಿವೆ ಶ್ರೀರಂಗನಾಥನನ್ನು. ಮನೆಗಳಲ್ಲಿ, ಹೊಲ- ಗದ್ದೆಗಳಲ್ಲಿ ಹಾವು, ಚೇಳು ಕಡಿದಾಗ ಅಥವಾ ಕಾಣಿಸಿಕೊಂಡಾಗ 'ಅಂಬಿನೋತ್ಸವದ ಜಾತ್ರೆಗೆ ಬಂದು ಹಾವು, ಚೇಳು, ಜರಿ ಕೊಟ್ಟು ಹರಕೆ ತೀರಿಸುತ್ತೇನೆ' ಎಂದು ಜನರು ಹರಕೆ ಕಟ್ಟಿಕೊಳ್ಳುವ ಪದ್ಧತಿ ಭಕ್ತ ಸಮೂಹದಲ್ಲಿದೆ. ಈ ಬಾರಿ ಸುಮಾರು ಗುರುವಾರ ಬೆಳಗ್ಗೆ 11.30ರ ಸಮಯದಲ್ಲಿ ಅಂಬಿನೋತ್ಸವ ಜರುಗಿತು.

ಹಾವು, ಚೇಳು ಪ್ರತಿಕೃತಿಗೆ ನಿಗದಿಯಾದ ಹಣ?
ತಾವು ಹರಕೆ ಕಟ್ಟಿಕೊಂಡತೆಯೇ ಜಾತ್ರೆಯಲ್ಲಿ ತಾಮ್ರ, ಬೆಳ್ಳಿಯ ಹಾವು, ಚೇಳು, ಹಲ್ಲಿ, ಜರಿ ಇತರೆ ವಿಷ ಜಂತುಗಳನ್ನು ಖರೀದಿಸಿ ದೇವರಿಗೆ ಅರ್ಪಿಸುತ್ತಾರೆ. ಒಂದು ಚೇಳು, ಹಾವಿನ ಪ್ರತಿಕೃತಿ 20 ರೂಪಾಯಿಯಂತೆ ಮಾರಾಟವಾಗುತ್ತದೆ. ದೇವಸ್ಥಾನದ ವತಿಯಿಂದ ಟೆಂಡರ್ ಕರೆದು ಮಾರಾಟ ಮಾಡಲು ಅನುಮತಿ ನೀಡಿರುತ್ತಾರೆ. ಅಂಗಡಿಗಳು ಅನುಮತಿ ಪಡೆದು ಈ ಹರಕೆ ಪ್ರತಿಕೃತಿಗಳಿಗೆಂದೇ ಜಾತ್ರೆ ಸಮಯದಲ್ಲಿ ತೆರೆದುಕೊಂಡಿರುತ್ತವೆ. ರಂಗಪ್ಪನ ಜಾತ್ರೆಗೆ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಜಾತ್ರೆಯಲ್ಲಿ ಚಿತ್ರದುರ್ಗ ಡಿಎಚ್ಒ ರಂಗನಾಥ್, ಹೊಸದುರ್ಗ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಹಾಗೂ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು.

ಜಲಾಶಯ ನೋಟಕ್ಕೆ ಮನಸೋತ ಪ್ರವಾಸಿಗರು
ಚಿತ್ರದುರ್ಗದಿಂದ ಬೆಂಗಳೂರು ರಾಷ್ಟ್ರಿಯ ಹೆದ್ದಾರಿಗೆ ಹೊಂದಿಕೊಂಡಂತೆ ಹಿರಿಯೂರಿನಿಂದ ಹೊಸದುರ್ಗ ಮಾರ್ಗವಾಗಿ 20 ಕಿಲೋ ಮೀಟರ್ ದೂರ ಹಾಗೂ ಹೊಸದುರ್ಗದಿಂದ ಹಿರಿಯೂರು ಮಾರ್ಗವಾಗಿ 35 ಕಿಲೋ ಮೀಟರ್ ದೂರದಲ್ಲಿ ಈ ದೇವಸ್ಥಾನ ಇದೆ. ರಂಗನಾಥ ಸ್ವಾಮಿಯ ದರ್ಶನ ಪಡೆದು ನಂತರ ಸಮೀಪದಲ್ಲಿರುವ ಮೈಸೂರು ಮಹಾರಾಜರು ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ವಾಣಿವಿಲಾಸ ಜಲಾಶಯವನ್ನು ವೀಕ್ಷಿಸಬಹುದಾಗಿದೆ. 89 ವರ್ಷಗಳ ಬಳಿಕ ವಾಣಿ ವಿಲಾಸ ಜಲಾಶಯದಲ್ಲಿ ದಾಖಲೆ ಮಟ್ಟದಲ್ಲಿ ನೀರು ಸಂಗ್ರಹವಾಗಿದೆ. ಕೋಡಿ ಬಿದ್ದ ಹಿನ್ನೆಲೆ ಜಲಾಶಯವನ್ನು ನೋಡಲು ಪ್ರವಾಸಿಗರ ದಂಡು ಹರಿದು ಬಂದಿತ್ತು. ಜಾತ್ರೆ ಮುಗಿದ ಬಳಿಕ ಭಕ್ತರು ಡ್ಯಾಂ ಬಳಿ ಸುತ್ತಾಟ ನಡೆಸಿದರು. ಪ್ರಸ್ತುತ ಜಲಾಶಯದ ನೀರಿನ ಮಟ್ಟ 131.45 ಅಡಿ ಇದ್ದು, ಡ್ಯಾಂ ಸುತ್ತ ಮುತ್ತಲಿನ ಹಸಿರು ಕಣಿವೆ ಪ್ರದೇಶದ ರಮಣಿಯವಾದ ಸೌಂದರ್ಯ ಸೋಬಗಿಗೆ ಪ್ರವಾಸಿಗರು ಮನಸೋತ್ತಿದ್ದಾರೆ.
ಅ.4ರಿಂದ 6ರ ವರೆಗೆ ಶರಣ ಸಂಸ್ಕೃತಿ ಉತ್ಸವ; ಚಿತ್ರದುರ್ಗ ಮುರುಘಾ ಮಠದಲ್ಲಿ ಹಬ್ಬದ ವಾತಾವರಣ