Byrathi Basavaraj profile; ಕುರುಬ ಸಮುದಾಯದ ಪ್ರಭಾವಿ ನಾಯಕ
ಒಂದು ಕಾಲದಲ್ಲಿ ಸಿದ್ದರಾಮಯ್ಯ ಆಪ್ತರಾಗಿದ್ದ ಬೈರತಿ ಬಸರಾಜ ಈಗ ಬಿಜೆಪಿಯಲ್ಲಿದ್ದಾರೆ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬಿ. ಎ. ಬಸವರಾಜ ಅಥವ ಬೈರತಿ ಬಸರಾಜ ಬೆಂಗಳೂರಿನ ಕೆ. ಆರ್. ಪುರ ಕ್ಷೇತ್ರದ ಬಿಜೆಪಿ ಶಾಸಕ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನಗರಾಭಿವೃದ್ಧಿ ಮತ್ತು ದಾವಣಗೆರೆ, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು. ಕುರುಬ ಸಮುದಾಯದ ಪ್ರಭಾವಿ ನಾಯಕ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಬೀಳಿಸಿದವರಲ್ಲಿ ಇವರೂ ಒಬ್ಬರು.
59 ವರ್ಷದ ಬೈರತಿ ಬಸರಾಜ ಬಿಎ ಪದವೀಧರರು. ಒಂದು ಉಪ ಚುನಾವಣೆ ಸೇರಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿದ್ದ ನಾಯಕ. ಮೈತ್ರಿ ಸರ್ಕಾರ ಇದ್ದ ಸಂದರ್ಭದಲ್ಲಿ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. ಉಪ ಚುನಾವಣೆಯಲ್ಲಿ ಗೆದ್ದ ಬಳಿಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ಸೇರಿ, ಮೊದಲ ಬಾರಿಗೆ ಸಚಿವರಾದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿದ್ದ ಬೈರತಿ ಬಸರಾಜ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ವಿಧಾನಸಭೆ ಚುನಾವಣಾ ಕಣಕ್ಕಿಳಿದರು. ಎದುರಾಳಿ ಬಿಜೆಪಿಯ ಎನ್. ಎಸ್. ನಂದೀಶ್ ರೆಡ್ಡಿಯನ್ನು ಸೋಲಿಸಿದರು. ಬೈರತಿ ಬಸರಾಜ ಗೆಲುವಿನ ಹಿಂದೆ ಸಿದ್ದರಾಮಯ್ಯ ಪ್ರಭಾವ ಸಹ ಕೆಲಸ ಮಾಡಿತ್ತು ಎಂಬುದು ಗುಟ್ಟಾಗಿ ಏನೂ ಉಳಿದಿಲ್ಲ. ಆದರೆ ರಾಜಕೀಯದಲ್ಲಿ ಬದಲಾವಣೆ ಸಹಜ ಈಗ ಬೈರತಿ ಬಸರಾಜ ಬಿಜೆಪಿಯಲ್ಲಿದ್ದಾರೆ.
2018ರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಬೈರತಿ ಬಸರಾಜ 1,35,404 ಮತಗಳನ್ನು ಪಡೆದು ಜಯಗಳಿಸಿದರು. ಎದುರಾಳಿಯಾಗಿದ್ದ ಬಿಜೆಪಿಯ ನಂದೀಶ್ ರೆಡ್ಡಿ ಪಡೆದಿದ್ದು, 1,02.675 ಮತಗಳು. 2019ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ ಬೈರತಿ ಬಸರಾಜರನ್ನು ಅನಿವಾರ್ಯವಾಗಿ ನಂದೀಶ್ ರೆಡ್ಡಿ ಸ್ವಾಗತಿಸಬೇಕಾಯಿತು. ಉಪ ಚುನಾವಣೆಯಲ್ಲಿ ಕ್ಷೇತ್ರವನ್ನೂ ಬಿಟ್ಟುಕೊಡಬೇಕಾಯಿತು. ಉಪ ಚುನಾವಣೆಯಲ್ಲಿ ಗೆದ್ದ ಬೈರತಿ ಬಸರಾಜ ಸಚಿವರಾದರು. ಬಿಜೆಪಿ ನಂದೀಶ್ ರೆಡ್ಡಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧ್ಯಕ್ಷ ಸ್ಥಾನ ನೀಡಿತು.
ಯಡಿಯೂರಪ್ಪ ಸಂಪುಟದಲ್ಲಿ ನಗರಾಭಿವೃದ್ಧಿ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬೈರತಿ ಬಸರಾಜ ಕೆಲಸ ಮಾಡಿದರು. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಅವರು ಸಚಿವರಾಗಿ ಮುಂದುವರೆದರು. ಸಚಿವ ಕೆ. ಎಸ್. ಈಶ್ವರಪ್ಪ ರಾಜೀನಾಮೆ ನೀಡಿದ ನಂತರ ದಾವಣಗೆರೆ ಜೊತೆಗೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯೂ ಹೆಚ್ಚುವರಿಯಾಗಿ ಬೈರತಿ ಬಸರಾಜ ಅವರ ಕೈಗೆ ಬಂತು. ಈ ಬಾರಿಯ ಚುನಾವಣೆಯಲ್ಲಿಯೂ ಬೈರತಿ ಬಸರಾಜಗೆ ಟಿಕೆಟ್ ಖಚಿತ ಎಂಬ ಸುದ್ದಿ ಇದೆ. ಇದೇ ಸುದ್ದಿ ನಂದೀಶ್ ರೆಡ್ಡಿ ಅಸಮಾಧಾನಕ್ಕೆ ಕಾರಣವಾಗಿದೆ. ಅವರು ಕಾಂಗ್ರೆಸ್ ಪಾಳಕ್ಕೆ ಜಿಗಿಯಲಿದ್ದಾರೆ ಎಂಬ ಮಾತುಗಳಿವೆ.

2013ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಕೆ. ಆರ್. ಪುರದ ಅಭಿವೃದ್ಧಿಗೆ ಸಾವಿರಾರು ಕೋಟಿ ನೀಡಿ, ಉಳಿದ ಕ್ಷೇತ್ರ ಕಡೆಗಣಿಸಲಾಗಿದೆ ಎಂದು ಬಿಜೆಪಿ ಆರೋಪ ಮಾಡುತ್ತಿತ್ತು. ಆದರೆ ಈಗ ಕ್ಷೇತ್ರವೇ ಬಿಜೆಪಿಯ ವಶದಲ್ಲಿದೆ.












Click it and Unblock the Notifications