ಇಂದಿನ ರಾಜಕಾರಣಿಗಳಿಗೆ ಪ್ರಸ್ತುತವಾದ ಬುದ್ಧನ ಉಪದೇಶ!
ಇಂದಿನ ರಾಜಕಾರಣದಲ್ಲಿ ರಾಜಕೀಯ ನಾಯಕರ ಪ್ರಾಮಾಣಿಕತೆ ಅಡ್ಡಡ್ಡ ಮಲಗಿದ್ದು, ಭ್ರಷ್ಟತೆ ಎದ್ದು ನಿಂತಿದೆ. ನಮ್ಮದು, ನಮಗಾಗಿ ಎನ್ನುವ ಮನೋಭಾವ ಬದಲಾಗಿ ನನ್ನದು, ನನಗಾಗಿ ಎಂಬ ಸ್ವಾರ್ಥ ಮೆರೆಯುತ್ತಿದೆ. ಇದರ ನಡುವೆ ಚುನಾವಣೆ ಸಂದರ್ಭಕ್ಕಷ್ಟೆ ಪ್ರಭುವಾಗುವ ಮತದಾರ ಅರ್ಹರನ್ನು ಆಯ್ಕೆ ಮಾಡುವಲ್ಲಿ ವಿಫಲನಾಗಿ ಸಂಕಷ್ಟ ಅನುಭವಿಸುತ್ತಿದ್ದಾನೆ.
ಭ್ರಷ್ಟತೆ, ಅಧಿಕಾರ ಲಾಲಸೆ, ಅಧಿಕಾರದ ದುರುಪಯೋಗದಿಂದಾಗಿ ಅಭಿವೃದ್ಧಿ ವಂಚಿತರಾಗುತ್ತಿರುವ ಪ್ರಜೆಗಳು ಬಡವರಾಗಿಯೇ ಕಾಲ ಕಳೆಯುವಂತಾಗಿದೆ. ಮತ ನೀಡಿದ ಮತದಾರರ ಜೀವನಪೂರ್ತಿ ಬಡವನಾಗಿ ಉಳಿಯುತ್ತಿದ್ದು, ರಾಜಕಾರಣಿಗಳು ಶ್ರೀಮಂತರಾಗುತ್ತಿದ್ದಾರೆ. ನಮ್ಮನ್ನಾಳುವ ನಾಯಕರು, ಪ್ರಾಮಾಣಿಕರು, ಉತ್ತಮ ಆಡಳಿತಗಾರರು, ನಿಸ್ವಾರ್ಥಿಗಳು ಆಗಿದ್ದಿದ್ದರೆ ದೇಶ ಇನ್ನಷ್ಟು ಅಭಿವೃದ್ಧಿ ಕಾಣುತ್ತಿತ್ತೇನೋ?

ಚುನಾವಣೆ ಭರಾಟೆಯ ಈ ಸಮಯದಲ್ಲಿ ಗೌತಮ ಬುದ್ಧ ಅಂದಿನ ರಾಜ ಮಹಾರಾಜರಿಗೆ ನೀಡಿದ ಉಪದೇಶಗಳು ನೆನಪಾಗುತ್ತಿದ್ದು, ಅವು ಇಂದಿನ ನಮ್ಮ ರಾಜಕಾರಣಿಗಳಿಗೂ ಅನ್ವಯಿಸುತ್ತವೆ. ಅಷ್ಟೇ ಅಲ್ಲ ಬುದ್ಧನ ಈ ಉಪದೇಶಗಳನ್ನು ನಮ್ಮನ್ನು ಆಳುವ ನಾಯಕರು ಜೀವನದಲ್ಲಿ ಅಳವಡಿಸಿಕೊಂಡರೆ ದೇಶ ಯಾವತ್ತೋ ಗಾಂಧಿ ಕನಸಿನ ರಾಮ ರಾಜ್ಯವಾಗುತ್ತಿತ್ತು.
ಗೌತಮ ಬುದ್ಧ ನೀಡಿದ ಉಪದೇಶ ಏನು?
ಹಾಗಾದರೆ ಗೌತಮ ಬುದ್ಧ ನೀಡಿದ ಉಪದೇಶ ಏನು ಎಂಬುದನ್ನು ನೋಡಿದ್ದೇ ಆದರೆ ಹಲವು ವಿಚಾರಗಳು ಇಂದಿಗೂ ಪ್ರಸ್ತುತ ಎನ್ನುವುದರಲ್ಲಿ ಎರಡು ಮಾತಿಲ್ಲ. ಬುದ್ಧ ಹೇಳುತ್ತಾನೆ ದಾನದಿಂದ, ಧರ್ಮದಿಂದ ಸಾಮ್ರಾಜ್ಯ ನೆಲೆಗೊಳ್ಳಬೇಕು. ಪ್ರಾಪಂಚಿಕ ವೈಭವಗಳೆಲ್ಲವೂ ನಶ್ವರ. ಪಾರಮಾರ್ಥಿಕ ಆನಂದ ಮಾತ್ರ ಶಾಶ್ವತ. ಲೋಭ ಇಂದ್ರಿಯ ಭೋಗಗಳ ಪರಿಣಾಮವಾಗಿ ಜೀವ ಸೋತಾಗ, ಸೊರಗಿದಾಗ ಮನುಷ್ಯನ ಮನಸ್ಸು ವಿನಮ್ರವಾಗುತ್ತದೆ. ಇಂತಹ ಸಂದರ್ಭವೇ ಬೋಧನೆಗೆ ಸಕಾಲವಾಗಿದೆ.

ತಾನು ಮಾಡುವ ಒಳ್ಳೆಯ ಅಥವಾ ಕೆಟ್ಟ ಕರ್ಮಗಳು ನೆರಳಿನಂತೆ ಹಿಂಬಾಲಿಸಿ ಬರುತ್ತವೆ. ರಾಜನು ತನ್ನ ಮಕ್ಕಳನ್ನು ಹೇಗೆ ಕಾಳಜಿಯಿಂದ ನೋಡಿಕೊಳ್ಳುತ್ತಾನೋ, ಅದೇ ಕಾಳಜಿಯನ್ನು ಪ್ರಜೆಗಳಿಗೂ ತೋರಿಸಬೇಕು. ಪ್ರಜೆಗಳನ್ನು ಯಾವುದೇ ಕಾರಣಕ್ಕೂ ತುಳಿಯಬಾರದು. ಆಡಳಿತಗಾರನ ಹೃದಯದಲ್ಲಿ ಪ್ರೇಮವಿರಬೇಕು. ನಿಸ್ವಾರ್ಥ ಪ್ರೇಮವಿಲ್ಲದಿದ್ದರೆ ಯಾವ ಸೇವಾ ಕಾರ್ಯವೂ, ಆಡಳಿತವೂ ಯಶಸ್ವಿಯಾಗುವುದಿಲ್ಲ.
ಹೊಗಳು ಭಟ್ಟರ ಮಾತಿಗೆ ಕಿವಿಗೊಡಬೇಡ
ನಿನ್ನ ಇಂದ್ರಿಯಗಳನ್ನು ಹತೋಟಿಗೆ ತಂದುಕೋ, ನಿನ್ನ ದೊರೆತನದ ಹಿರಿಮೆಯನ್ನೇ ಮನಸ್ಸಿನಲ್ಲಿ ಮೆಲುಕಾಡುತ್ತಿರಬೇಕು, ನಿನ್ನನ್ನು ಸ್ತುತಿಸುವ ಹೊಗಳುಭಟ್ಟರ ಮಾತಿಗೆ ಕಿವಿಗೊಡಬೇಡ ಎನ್ನುತ್ತಾನೆ ಬುದ್ಧ. ಆಧ್ಯಾತ್ಮಿಕ ಸಾಧಕರು ಇಂದ್ರಿಯ ನಿಗ್ರಹ ಮಾಡಬೇಕೆಂಬುವುದು ಸರ್ವರಿಗೂ ತಿಳಿದ ಸಂಗತಿ. ಆದರೆ, ಬುದ್ಧನು ಇಂದ್ರಿಯ ನಿಗ್ರಹವನ್ನು ರಾಜನಿಗೂ ಆಗ್ರಹಿಸುತ್ತಾನೆ.

ಅಧಿಕಾರದಲ್ಲಿರುವವನಲ್ಲಿ, ತಾನು ಏನು ಮಾಡಿದರೂ ನಡೆಯುತ್ತದೆ ಎಂಬ ಮನೋಭಾವ ಹೆಚ್ಚಾಗಿರುತ್ತದೆ. ಅಂತಹವನಲ್ಲಿ ಇಂದ್ರಿಯ ಸಂಯಮವೂ ಇಲ್ಲದೇ ಹೋದರೆ, ಅಂಕುಶವಿಲ್ಲದ ಕಾಡಾನೆಯಾದರೆ ಕತೆ ಮುಗಿದಂತೆಯೇ ಎಂಬ ಎಚ್ಚರಿಕೆ ನೀಡುತ್ತಾನೆ.
ನಿನ್ನ ದೊರೆತನದ ಹಿರಿಮೆಯನ್ನೇ ಮನಸ್ಸಿನಲ್ಲಿ ಮೆಲುಕಾಡುತ್ತಿರಬೇಡ. ಯಶಸ್ವಿಯಾಗಿ ಆಡಳಿತವನ್ನು ನಿಭಾಯಿಸಬೇಕಾದರೆ ಸಾಕಷ್ಟು ಗಮನಹರಿಸ ಬೇಕಾಗುತ್ತದೆ. ರಾಜರ ಸಮಯವೆಲ್ಲಾ ತನ್ನ ದರ್ಪ ದೌಲತ್ತುಗಳ ಪ್ರದರ್ಶನದಲ್ಲೇ ಕಳೆದು ಹೋಗಿಬಿಟ್ಟರೆ ಕರ್ತವ್ಯ ಪಾಲನೆಗೆ ವ್ಯವಧಾನವೆಲ್ಲಿ? ಹೊಗಳುಭಟ್ಟರು ಸ್ವಾರ್ಥಿಗಳು, ಸ್ವಾರ್ಥಪರರಾದ ಹೊಗಳು ಭಟ್ಟಂಗಿಗಳ ಮಾತಿನ ಮೋಡಿಗೆ ಒಳಗಾದರೆ ಕೇಳುಗನ ಕರ್ತವ್ಯ ಪ್ರಜ್ಞೆ ನಾಶವಾಗುವದು ನಿಶ್ಚಿತ.
ವಿಷಯ ಸುಖದ ಚಾಪಲ್ಯ ಅಪಾಯಕಾರಿ
ನಮ್ಮ ಸುತ್ತಮುತ್ತ ಜನನ-ಮರಣ, ರೋಗ, ಮುಪ್ಪು ಎಂಬ ಬೆಟ್ಟಗಳು ನಿಂತಿವೆ. ಯಾರೂ ಧರ್ಮ ಮಾರ್ಗದಲ್ಲಿ ನಡೆಯುತ್ತಾರೋ ಅವರು ಮಾತ್ರ ಈ ದುಃಖಗಳ ಬೆಟ್ಟಗಳನ್ನು ದಾಟಿ ಪಾರಾಗುತ್ತಾರೆ ಎನ್ನುತ್ತಾನೆ ಬುದ್ಧ. ವಿವೇಕಿಗಳಾದವರು ಶರೀರ ಸುಖದ ಚೌಪಲ್ಯವನ್ನು ತಿರಸ್ಕರಿಸುತ್ತಾರೆ. ಅವರು ಕಾಮವನ್ನು ತ್ಯಜಿಸಿ ಆಧ್ಯಾತ್ಮಿಕ ಸಾಧನೆಯಲ್ಲಿ ಮುಂದುವರಿಯಲು ಪ್ರಯತ್ನಿಸುತ್ತಾರೆ. ಹೊತ್ತಿಕೊಂಡು ಉರಿಯುವ ಮರದ ಮೇಲೆ ಹೇಗೆ ಹಕ್ಕಿಗಳು ಕುಳಿತು ಚಿಪಿಲಿಪಿಗುಟ್ಟುವುದಿಲ್ಲವೋ ಹಾಗೆ ಕಾಮ ತುಂಬಿಕೊಂಡವರಲ್ಲಿ ಸದ್ಗುಣಗಳು ಸೇರಿಕೊಳ್ಳಲಾರವು.
ವಿಷಯ ಸುಖದ ಚಾಪಲ್ಯ ಸರ್ವರಿಗೂ ಅಪಾಯಕಾರಿ. ಅದು ಇಡೀ ಜಗತ್ತನ್ನೇ ಕೊಚ್ಚಿಕೊಂಡು ಹೋಗುತ್ತದೆ. ವಿಷಯ ಸುಖದ ಸುಳಿಯಲ್ಲಿ ಸಿಕ್ಕಿಕೊಂಡವನು ಅದರಿಂದ ಪಾರಾಗುವ ಸಂಭವವಿಲ್ಲ. ವಿವೇಕನೆಂಬ ದೋಣಿ ಆತ್ಮ ಶೋಧನೆಯೆಂಬ ಚುಕ್ಕಾಣಿ ಇದ್ದರೆ ಪಾರಾಗಬಹುದು. ನಮ್ಮ ಕರ್ಮದ -ಫಲಗಳಿಂದ ಬಿಡಿಸಿಕೊಳ್ಳುವುದು ಅಸಾಧ್ಯವಾದುರಿಂದ ನಾವು ಯಾವಾಗಲೂ ಸತ್ಕಾರ್ಯಗಳನ್ನೇ ಮಾಡುತ್ತಿರಬೇಕು.
ರಾಜಕೀಯ ನಾಯಕರು ಅಳವಡಿಸಿಕೊಳ್ಳುತ್ತಾರಾ?
ನಮ್ಮಿಂದ ಎಂದಿಗೂ ಕೆಟ್ಟ ಕೆಲಸ ನಡೆಯದಂತೆ ನಮ್ಮ ಆಲೋಚನೆಗಳ ಮೇಲೆ ಸದಾ ಎಚ್ಚರಿಕೆಯ ಕಣ್ಣಿಟ್ಟಿರಬೇಕು. ಕತ್ತಲೆಯಿಂದ ಬೆಳಕಿಗೂ ದಾರಿಗಳಿವೆ. ಬೆಳಕಿನಿಂದ ಕತ್ತಲೆಗೂ ದಾರಿಗಳಿವೆ. ಹಾಗಾಗಿ ಬುದ್ಧಿವಂತರು ಬೆಳಕಿನೆಡೆಗೆ ಹೆಜ್ಜೆಯಿಡುತ್ತಾನೆ. ಪರಮ ಸತ್ಯದೆಡೆಗೆ ಮುನ್ನಡೆಯುತ್ತಾನೆ. ಶ್ರದ್ಧೆಯಿಂದ ಕರ್ತವ್ಯ ಪಾಲನೆ ಮಾಡಿದರೆ ಹೆಸರು ಚಿರಕಾಲ ಉಳಿಯುತ್ತದೆ ಎಂದು ಧರ್ಮ ಭೋಧನೆಯ ಮಾತುಗಳನ್ನು ಹೇಳಿದ್ದಾನೆ.
ಬುದ್ಧನ ಉಪದೇಶಗಳನ್ನು ನೋಡಿದ ಬಳಿಕ ಈ ಉಪದೇಶಗಳ ಪೈಕಿ ಎಷ್ಟನ್ನು ನಮ್ಮನ್ನು ಆಳುತ್ತಿರುವ ರಾಜಕೀಯ ನಾಯಕರು ಅಳವಡಿಸಿಕೊಂಡಿದ್ದಾರೆ? ಎಂಬ ಪ್ರಶ್ನೆಗಳು ಮೂಡದಿರದು. ಈ ಉಪದೇಶಗಳ ಪೈಕಿ ಕೆಲವನ್ನಾದರೂ ನಮ್ಮ ನಾಯಕರು ಅಳವಡಿಸಿಕೊಳ್ಳುವಂತಾಗಲಿ ಎನ್ನುವುದೇ ನಮ್ಮ ಪ್ರಾರ್ಥನೆಯಾಗಿದೆ.












Click it and Unblock the Notifications