ಚಿತ್ರದುರ್ಗದಲ್ಲಿ ಬ್ರಿಟಿಷರ ಕಾಲದ ಈ ಶಾಲೆಗೆ ಮರುಜೀವ ಬಂತು
ಚಿತ್ರದುರ್ಗ,
ಫೆಬ್ರವರಿ 07: ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳು ಗೋಡೆಗಳಿಗೆ ಸುಣ್ಣಬಣ್ಣ ಕಾಣದೇ ಅಳಿವಿನ ಅಂಚಿನಲ್ಲಿವೆ. ಅದೇ ಹಾದಿಯನ್ನು ಈ ಶಾಲೆಯೂ ಹಿಡಿದಿತ್ತು. ಆದರೆ ಅಭಿಯಾನವೊಂದರ ನೆರವಿನಿಂದ ಇಂದು ಇಡೀ ಊರಲ್ಲೇ ಮಾತಾಗಿದೆ ಈ ಶಾಲೆ. id="toptextpromo"> id='are-slot-1' class='oiad oi-axt oiadv'>ಚಿತ್ರದುರ್ಗ
ಜಿಲ್ಲೆಯ ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದಲ್ಲಿ 1928ರಲ್ಲಿ ಸ್ಥಾಪಿತವಾಗಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವನತಿಯತ್ತ ಸಾಗಿತ್ತು. ಆದರೆ ಕನ್ನಡ ಶಾಲೆ ಉಳಿಸಿ ಅಭಿಯಾನ -2 ಎಂಬ ವಿನೂತನ ಕಾರ್ಯಕ್ಕೆ ಜಂಟಿಯಾಗಿ ಕೈ ಜೋಡಿಸಿದ ಹೂವಿನಹೊಳೆ ಪ್ರತಿಷ್ಠಾನ ಮತ್ತು ಕನ್ನಡ ಮನಸುಗಳು ತಂಡದ ಸದಸ್ಯರು ಈ ಶಾಲೆಯ ಇಡೀ ಚಿತ್ರಣವನ್ನೇ ಬದಲಿಸಿದ್ದಾರೆ. id='are-slot-2' class='oiad oi-axt oiadv'>
10 ವರ್ಷಗಳಿಂದ ಬಣ್ಣ ಕಂಡಿರದ ಶಾಲೆ
ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಒಟ್ಟು 96 ಮಕ್ಕಳಿದ್ದಾರೆ. 9 ಕೊಠಡಿಗಳನ್ನೊಳಗೊಂಡ ಈ ಶಾಲೆ ಕಳೆದ ಹತ್ತು ವರ್ಷಗಳಿಂದ ಗೋಡೆಗೆ ಬಣ್ಣವನ್ನೇ ಕಂಡಿರಲಿಲ್ಲ. ಇದನ್ನು ಕಂಡ ಹೂವಿನಹೊಳೆ ಪ್ರತಿಷ್ಠಾನ ಅಧ್ಯಕ್ಷ ನಂದಿ ಜೆ. ಶಾಲೆಯ ಉಳಿವಿಗಾಗಿ ಗ್ರಾಮಸ್ಥರು ಹಾಗೂ ಸ್ನೇಹಿತರ ಸಹಾಯದಿಂದ ಶಾಲೆಗೆ ಹೊಸ ಬಣ್ಣ ನೀಡಲು ಮುಂದಾದರು.

ಶಾಲೆಗೆ ಸಿಕ್ಕಿದ ಹೊಸ ರೂಪ
ಶಾಲೆಯ ಗೋಡೆ ಮೇಲೆ ಸ್ಫೂರ್ತಿದಾಯಕ ಬರಹ, ವಿವಿಧ ಚಿತ್ರಗಳನ್ನು ಬರೆಸಿದರು. ಈ ಮೂಲಕ ಶಾಲೆಯು ಆಕರ್ಷಣೀಯ ಎನ್ನಿಸುವಂತೆ ಮಾಡಿದರು. ಶಾಲೆಗೆ ಹೊಸ ರೂಪ ಕೊಟ್ಟರು. "ನಾನು ಓದಿದ ಈ ಶಾಲೆ ಅವನತಿಯ ಕಡೆ ಮುಖ ಮಾಡಿತ್ತು. ಕಳೆದ ಹತ್ತು ವರ್ಷಗಳಿಂದ ಈ ಶಾಲೆ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇನೆ. ಈಗಾಗಲೇ ಶಾಲೆಗೆ ಲೈಟ್ ವ್ಯವಸ್ಥೆ, ಮಕ್ಕಳಿಗೆ ಪೆನ್ನು, ಪುಸ್ತಕ, ಬ್ಯಾಗ್ ಸೇರಿದಂತೆ ಇನ್ನಿತರ ಕಲಿಕಾ ಸಾಮಗ್ರಿಗಳನ್ನು ಪೂರೈಸಲಾಗಿದೆ" ಎನ್ನುತ್ತಾರೆ ನಂದಿ.

ಸ್ವಂತ ಹಣದಿಂದ ಶಾಲೆಯ ಅಭಿವೃದ್ಧಿ
ಶಾಲೆಯನ್ನು ಸ್ಮಾರ್ಟ್ ಮಾಡುವ ಉದ್ದೇಶದಿಂದ, ಶಾಲೆಗೆ ಕಂಪ್ಯೂಟರ್ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. "ನಮ್ಮೂರಿನ ಶಾಲೆಯನ್ನು ಅಭಿವೃದ್ಧಿಪಡಿಸಬೇಕು ಎನ್ನುವುದು ನನ್ನ ಗುರಿಯಾಗಿದೆ. ಸರ್ಕಾರದಿಂದ ಅಭಿವೃದ್ಧಿಗೆ ಬರುವ ಅನುದಾನದ ಹಣ ಸಾಕಾಗುವುದಿಲ್ಲ. ಆದ್ದರಿಂದ ನಮ್ಮ ಸ್ವಂತ ಹಣದಲ್ಲಿ, ಸ್ನೇಹಿತರ ಸಹಾಯದಿಂದ ಶಾಲೆಯ ಅಭಿವೃದ್ಧಿಗೆ ಮುಂದಾದೆವು" ಎಂದರು ಅವರು.

35 ವಿದ್ಯಾರ್ಥಿಗಳಿಂದ ಚಿತ್ರಕಲೆ
35 ಚಿತ್ರಕಲಾ ವಿದ್ಯಾರ್ಥಿಗಳು ಸೇರಿಕೊಂಡು ಶಾಲಾ ಗೋಡೆಯ ಮೇಲೆ, ಕಟ್ಟಡ, ಕಂಬಗಳ ಮೇಲೆ ಮಕ್ಕಳ ಕಲಿಕೆಗೆ ಅನ್ವಯವಾಗುವಂತಹ ಮರ ಬೆಟ್ಟಗುಡ್ಡ, ಸರೋವರ, ದುರ್ಗದ ಕೋಟೆ, ಪ್ರಾಣಿ ಪಕ್ಷಿಗಳು, ನಲಿಕಲಿ ಚಿತ್ರಗಳು, ಮಕ್ಕಳ ವಿಭಿನ್ನ ಶೈಲಿಯ ಕಲಿಕಾ ಚಿತ್ರಗಳನ್ನು ಬಿಡಿಸಿದ್ದಾರೆ. ಪವನ್ ಕನ್ನಡಿಗ, ಯಲ್ಲಪ್ಪ ಕುಂಬಾರ್, ಮೇಘ, ನವೀನ್ ಸಂಗ್ ಅನು ಕನ್ನಡತಿ ಮತ್ತಿತರರು ಸೇರಿ ಚಿತ್ರಗಳನ್ನು ಬಿಡಿಸಿದ್ದಾರೆ. ಸರ್ಕಾರಿ ಶಾಲೆ ಉಳಿದರೆ ಊರಿನ ಅಸ್ತಿತ್ವ ಉಳಿಯುತ್ತದೆ ಎನ್ನುತ್ತಲೇ ಹೂವಿನಹೊಳೆ ಪ್ರತಿಷ್ಠಾನ ಬ್ರಿಟಿಷರ ಕಾಲದ ಈ ಶಾಲೆಯ ಅಭಿವೃದ್ಧಿಗೆ ಪಣತೊಟ್ಟಿದೆ.












Click it and Unblock the Notifications