Makar Sankranti: ಗಾಂಧಿ ಬಜಾರ್‌ನಲ್ಲಿ ಸಕ್ರಾಂತಿ ಶಾಪಿಂಗ್ ಮಾಡಿದ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಮಕರ ಸಂಕ್ರಾಂತಿ ಸಂಭ್ರಮ ಮನೆಮಾಡಿದೆ. ಮನೆ ಮನೆಗಳಲ್ಲಿ ಎಳ್ಳು ಬೆಲ್ಲ ತಿನ್ನುವ ಮೂಲಕ ವರ್ಷದ ಮೊದಲ ಹಬ್ಬವನ್ನು ಬರಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಈ ಬಾರಿ ಬೆಂಗಳೂರಿನಲ್ಲಿ ಬ್ರಿಟಿಷ್ ಡೆಪ್ಯುಟಿ ಹೈಕಮಿಷನ್ ಕೂಡ ಸಂಕ್ರಾಂತಿಯನ್ನು ಕರುನಾಡಿನ ಶೈಲಿಯಲ್ಲಿ ಆಚರಿಸಿ ಗಮನಸೆಳೆದಿದೆ.
ಇನ್ನೂ ವಿಶೇಷವೆಂದರೆ ಕರ್ನಾಟಕದ ಶೈಲಿಯಲ್ಲೇ ಹಬ್ಬ ಆಚರಿಸುವ ನಿಟ್ಟಿನಲ್ಲಿ ಖುದ್ದು ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಅವರೇ ಮಾರ್ಕೆಟ್‌ಗೆ ತೆರಳಿ ಸಂಕ್ರಾಂತಿಗಾಗಿ ಭರ್ಜರಿ ಖರೀದಿ ಕೂಡ ಮಾಡಿದ್ದಾರೆ. ಬೆಂಗಳೂರಿನಲ್ಲಿ ವ್ಯಾಪಾರಕ್ಕೆ ಹೆಸರುವಾಸಿಯಾದ ಗಾಂಧಿಬಜಾರ್‌ಗೆ ತೆರಳಿ ಅಲ್ಲಿ ಸಂಕ್ರಾಂತಿಗೆ ಬೇಕಾದ ಎಲ್ಲ ವಸ್ತುಗಳನ್ನು ಖರೀದಿಸಿದ್ದಾರೆ.

ಕನ್ನಡಿಗರಂತೆ ಎಳ್ಳು-ಬೆಲ್ಲ ಸೇರಿದಂತೆ ಹಲವು ವಸ್ತುಗಳನ್ನು ಮಾರ್ಕೆಟ್‌ನಿಂದ ಖರೀದಿಸಿ, ಬಳಿಕ ಕಚೇರಿ ಸಿಬ್ಬಂದಿಯೊಡನೆ ಸಕ್ರಾಂತಿ ಆಚರಿಸಿದ್ದಾರೆ. ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಕನ್ನಡ ಬರದಿದ್ದರೂ ಸಹ ಗಾಂಧಿ ಬಜಾರ್‌ನಲ್ಲಿ ಸುತ್ತಾಡಿ ಅಲ್ಲಿನ ಸ್ಥಳೀಯರೊಂದಿಗೆ ಕನ್ನಡದ ಕಲಿತು ಕೊನೆಗೆ ಸಂಕ್ರಾಂತಿಗೆ ಕನ್ನಡದಲ್ಲೇ ಶುಭಾಶಯ ಕೂಡ ಕೋರಿದ್ದಾರೆ.
ಈ ವಿಡಿಯೋ ಅನ್ನು ಅವರು ತಮ್ಮ ಅಫೀಶಿಯಲ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ ಸಂಕ್ರಾಂತಿ ಶಾಪಿಂಗ್‌ಗೆ ಹೋಗಿದ್ದರು. ಮಾರ್ಕೆಟ್‌ನಿಂದ ಎಳ್ಳುಬೆಲ್ಲವನ್ನು ತಂದು ಖಾದ್ಯವನ್ನು ಕಚೇರಿಯಲ್ಲೇ ಸಿದ್ಧಪಡಿಸಿ ಹಂಚಿದ್ದಾರೆ. ಈ ಮೂಲಕ ಸಿಬ್ಬಂದಿ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಷಯಗಳು ಎಂದು ಕನ್ನಡದಲ್ಲೇ ಶುಭಕೋರಿದ್ದಾರೆ.

ಮೊದಲಿಗೆ ಗಾಂಧಿ ಬಜಾರ್‌ಗೆ ಹೋದ ಡೆಪ್ಯುಟಿ ಹೈಕಮಿಷನರ್, ಕನ್ನಡತಿಯನ್ನ ಪರಿಚಯ ಮಾಡಿಕೊಂಡಿದ್ದಾರೆ. ಅವರಿಂದ ಸಂಕ್ರಾಂತಿ ಶುಭಾಶಯದ ಸಾಲುಗಳನ್ನು ಹೇಳಿಸಿಕೊಂಡಿದ್ದಲ್ಲದೆ, ಎಳ್ಳು ಬೆಲ್ಲ ತಿಂದು ಒಳ್ಳೆದು ಮಾತನಾಡಿ ಎಂದು ಶುಭಕೋರಿದ್ದಾರೆ. ಬಳಿಕ ಸಾಂಪ್ರದಾಯಿಕವಾಗಿ ಸಂಕ್ರಾಂತಿಗೆ ಬೇಕಾದ ಹೂವು, ಎಲೆ ಸೇರಿದಂತೆ ಖರೀದಿ ಪಟ್ಟಿಯೊಂದಿಗೆ ಗಾಂಧಿ ಬಜಾರ್ ಸುತ್ತಾಡಿದ್ದಾರೆ.
ಬೆಲ್ಲದಚ್ಚು ಹಾಗೂ ಎಳ್ಳನ್ನು ಪ್ರತ್ಯೇಕವಾಗಿ ಖರೀದಿಸಿ, ಅವುಗಳ ಹೆಸರನ್ನು ವಿಡಿಯೋದಲ್ಲಿ ಉಚ್ಛರಿಸಿ ಕನ್ನಡಿಗರ ಮನಗೆದ್ದಿದ್ದಾರೆ. ಇದು ಸಂಕ್ರಾಂತಿಗೆ ಎಳ್ಳುಬೆಲ್ಲ ಬಹಳ ಪ್ರಮುಖವಾದುದು ಎಂದಿದ್ದಾರೆ. ಅಲ್ಲದೆ ಬೆಂಗಳೂರಿನ ಅವರೆಬೇಳೆ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿ ಪರಿಚಯ ಮಾಡಿಕೊಟ್ಟಿದ್ದಾರೆ. ಬೆಂಗಳೂರಿನ ಅವರೆಬೇಳೆ ಸಖತ್ ಫೇಮಸ್ ಎಂದಿದ್ದಾರೆ.

ಬಳಿಕ ಹಬ್ಬಕ್ಕೆ ಖರೀದಿಸಿದ ಎಲ್ಲ ವಸ್ತುಗಳೊಂದಿಗೆ ತಮ್ಮ ಕಚೇರಿಗೆ ಮರಳಿ ತಾವೇ ಖುದ್ದಾಗಿ ಎಳ್ಳು ಬೆಲ್ಲ, ಕಡಲೆಪಪ್ಪು ಸೇರಿದಂತೆ ಸಂಕ್ರಾಂತಿ ಸ್ಪೆಷಲ್ ಖಾದ್ಯವನ್ನು ಬೆರೆಸಿ ತಯಾರಿಸಿದ್ದಾರೆ. ಕಚೇರಿಯಲ್ಲೇ ಸಂಕ್ರಾಂತಿ ಪೂಜೆ ನೆರವೇರಿಸಿ, ಸಿಬ್ಬಂದಿಗೆಲ್ಲ ಎಳ್ಳು-ಬೆಲ್ಲ ಹಂಚಿ ಸಾಂಪ್ರದಾಯಿಕವಾಗಿ ಸಂಕ್ರಾಂತಿಗೆ ಶುಭಕೋರಿದ್ದಾರೆ. ಈ ವಿಡಿಯೋ ಕಂಡು ಕನ್ನಡಿಗರು ಫಿದಾ ಆಗಿಬಿಟ್ಟಿದ್ದಾರೆ.
ಬೆಂಗಳೂರಿನ ಬಗ್ಗೆ, ಇಲ್ಲಿನ ಸಂಪ್ರದಾಯಗಳ ಬಗ್ಗೆ ಬ್ರಿಟಿಷ್ ಹೈಕಮೀಷನ್ ತೋರಿರುವ ಗೌರವಕ್ಕೆ ಎಲ್ಲರೂ ತಲೆಬಾಗಿದ್ದಾರೆ. ಬೆಂಗಳೂರಿಗೆ ಬಂದ ಹೊರಗಿನವರು ಹಲವು ವರ್ಷಗಳಾದರೂ ಕನ್ನಡವೂ ಕಲಿಯಲ್ಲ, ಇಲ್ಲಿನ ಸಂಪ್ರದಾಯಗಳನ್ನೂ ಗೌರವಿಸಲ್ಲ, ಹೀಗಿರುವಾಗ ನೀವು ಸಂಕ್ರಾಂತಿ ಆಚರಿಸಿದ್ದಲ್ಲದೆ, ಕನ್ನಡವರೇ ಆಗಿಬಿಟ್ಟಿದ್ದೀರಿ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications