ಭಾವನಾತ್ಮಕ ವಿಚಾರಗಳು ಜನರಿಗೆ ಬೇಕಿಲ್ಲ: ಬಿಜೆಪಿಗೆ ಬೇಕಿದೆ ವಾಗ್ಮಿ, ಜ್ಞಾನವಂತ ವಿರೋಧ ಪಕ್ಷದ ನಾಯಕ
ಮುಖ್ಯಮಂತ್ರಿ, ಸಚಿವ ಸ್ಥಾನ, ಇದಾದ ನಂತರ ಖಾತೆ ಹಂಚಿಕೆಯಲ್ಲಿನ ಗೊಂದಲವನ್ನು ಸೂಕ್ತವಾಗಿ ಕಾಂಗ್ರೆಸ್ ನಿಭಾಯಿಸಿದ ನಂತರ ಸಿದ್ದರಾಮಯ್ಯನವರ ಸರ್ಕಾರ ಟೇಕ್ ಆಫ್ ಆಗಿದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿವಿಧ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸುತ್ತಿದ್ದಾರೆ.
ಜೆಡಿಎಸ್ ತನ್ನ ಸಭಾ ನಾಯಕನನ್ನಾಗಿ ಅವಿರೋಧವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಆಯ್ಕೆ ಮಾಡಿದೆ. ಆದರೆ, ವಿರೋಧ ಪಕ್ಷದ ನಾಯಕನ ಆಯ್ಕೆಯ ವಿಚಾರದಲ್ಲಿ ಬಿಜೆಪಿಯ ವರಿಷ್ಠರು ಇನ್ನೂ ಮನಸ್ಸು ಮಾಡುತ್ತಿಲ್ಲ. ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ದಿನಂಪ್ರತಿ ಈ ವಿಷಯವನ್ನು ಕೆದಕಿ, ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ.

ಬೊಮ್ಮಾಯಿ ಸರ್ಕಾರದಲ್ಲಿನ ಹಲವು ಸಚಿವರುಗಳು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ, ಸಿ.ಟಿ.ರವಿ, ಜೆ.ಸಿ.ಮಾಧುಸ್ವಾಮಿ, ಡಾ.ಸುಧಾಕರ್, ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ ಪ್ರಮುಖರು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಯಾವಾಗ ಬಜರಂಗದಳವನ್ನು ನಿಷೇಧಿಸುವ ವಿಚಾರವನ್ನು ತಂದಿತೋ, ಅಲ್ಲಿಂದ ಬಿಜೆಪಿ ತನ್ನ ಗೇಂ ಪ್ಲ್ಯಾನ್ ಅನ್ನು ಚೇಂಜ್ ಮಾಡಿತ್ತು.
ಬೋಲೋ ಭಾರತ್ ಮಾತಾಕೀ ಜೈ
ಬೋಲೋ ಭಾರತ್ ಮಾತಾಕೀ ಜೈ ಎನ್ನುವ ಮೊದಲು ಪ್ರಧಾನಿ ಮೋದಿ, ಜೈ ಬಜರಂಗಬಲಿ ಎನ್ನಲು ಆರಂಭಿಸಿದರು. ರಾಜ್ಯ ಬಿಜೆಪಿ ನಾಯಕರು ಬಜರಂಗಿಯ ಹಿಂದೆ ಸುತ್ತುಕೊಂಡರು. ಆ ಮೂಲಕ, ಬಿಜೆಪಿಯು ಚುನಾವಣೆಯಲ್ಲಿ ಭಾವನಾತ್ಮಕ ವಿಚಾರವನ್ನು ಮುನ್ನಲೆಗೆ ತಂದಿತು. ಆದರೆ, ಪ್ರಬುದ್ದ ಮತದಾರ ಬಿಜೆಪಿಗೆ ಸೋಲುಣಿಸಿದ, ಬಜರಂಗಬಲಿ ನಿಷೇಧಿಸುವ ಪ್ರಸ್ತಾವನೆ ಮಾಡಿದ್ದ ಕಾಂಗ್ರೆಸ್ಸಿಗೆ ಭರ್ಜರಿ ಇಳುವರಿಯನ್ನು ಕೊಟ್ಟ.
ರೋಟಿ ಕಪ್ಡಾ ಮಕಾನ್, ಅಭಿವೃದ್ದಿಯೇ ಮೊದಲು
ಆ ಮೂಲಕ, ರೋಟಿ ಕಪ್ಡಾ ಮಕಾನ್, ಅಭಿವೃದ್ದಿಯೇ ಮೊದಲು ಎನ್ನುವ ಸ್ಪಷ್ಟವಾದ ಮ್ಯಾನ್ಡೇಟ್ ಎನ್ನುವುದನ್ನು ಮತದಾರ ನೀಡಿದ. ಲೋಕಸಭಾ ಚುನಾವಣೆಗೆ ಸುಮಾರು ಒಂದು ವರ್ಷ ಬಾಕಿಯಿದೆ. ಕರ್ನಾಟಕದಿಂದ ಇಪ್ಪತ್ತು ಸ್ಥಾನವನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದ್ದೇವೆ ಎನ್ನುವ ಮಾತನ್ನು ಕೆಪಿಸಿಸಿ ಅಧ್ಯಕ್ಷರು ಈಗಾಗಲೇ ಸಾರಿಸಾರಿ ಹೇಳಿದ್ದಾಗಿದೆ. ಹಾಗಾಗಿ, ವಿರೋಧ ಪಕ್ಷದ ನಾಯಕನ ಆಯ್ಕೆಯ ವಿಚಾರದಲ್ಲಿ ಜಾಗರೂಕತೆಯ ಹೆಜ್ಜೆಯನ್ನು ಬಿಜೆಪಿ ಇಡಬೇಕಿದೆ.

ದೇವರು, ದಿಂಡ್ರು, ಟಿಪ್ಪು ಸುಲ್ತಾನ್
ದೇವರು, ದಿಂಡ್ರು, ಟಿಪ್ಪು ಸುಲ್ತಾನ್, ಗೋವು ಎಲ್ಲವೂ ಒಂದು ಹಂತಕ್ಕೆ ಓಕೆ, ಅದು ಹೆಚ್ಚಾದರೆ ಆ ವಿಚಾರವೇ ಬಿಜೆಪಿಯನ್ನು ಹಾಯುವುದಂತೂ ಸ್ಪಷ್ಟ. ಹಾಗಾಗಿ, ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುವ, ಹಿಂದುತ್ವ ಮುಂತಾದ ಭಾವನಾತ್ಮಕ ವಿಚಾರದ ಬೆನ್ನಿಗೆ ಅತಿಯಾಗಿ ಬೀಳದೇ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ತುಂಬ ಬಲ್ಲ ನಾಯಕ ಕಮಲದ ಪಕ್ಷದಲ್ಲಿ ಯಾರು?
ಬಸನಗೌಡ ಪಾಟೀಲ್ ಯತ್ನಾಳ್
ಹಿರಿತನ, ಅನುಭವವನ್ನು ಮೆರಿಟ್ ಆಗಿ ತೆಗೆದುಕೊಳ್ಳುವುದಾದರೆ, ರಮೇಶ್ ಜಾರಕಿಹೊಳಿ, ಅರವಿಂದ್ ಬೆಲ್ಲದ್, ಶಿವರಾಂ ಹೆಬ್ಬಾರ್, ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ, ವಿ.ಸುನೀಲ್ ಕುಮಾರ್, ಎಸ್.ಆರ್.ವಿಶ್ವನಾಥ್, ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಮುನಿರತ್ನ, ಡಾ.ಅಶ್ವಥ್ ನಾರಾಯಣ, ಸುರೇಶ್ ಕುಮಾರ್, ಆರ್.ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್ ಇದಿಷ್ಟು ಹೆಸರುಗಳಿವೆ.
ಸಂಘಟನಾತ್ಮಕವಾಗಿ ಪಕ್ಷದಲ್ಲಿ ಸುದ್ದಿಯಲ್ಲಿರುವ ವಿಜಯೇಂದ್ರ
ಈ ಎಲ್ಲಾ ಹೆಸರಿನ ಜೊತೆಗೆ, ಇತ್ತೀಚಿನ ದಿನಗಳಲ್ಲಿ ಸಂಘಟನಾತ್ಮಕವಾಗಿ ಪಕ್ಷದಲ್ಲಿ ಸುದ್ದಿಯಲ್ಲಿರುವ ಬಿ.ವೈ.ವಿಜಯೇಂದ್ರ ಕೂಡಾ. ಮೊದಲ ಬಾರಿಗೆ ಇವರು ಶಾಸಕರಾದರೂ, ಒಟ್ಟಾರೆಯಾಗಿ ತಮ್ಮ ಮಾತಿನ ಮೇಲೆ ಇವರು ನಿಯಂತ್ರಣವನ್ನು ಹೊಂದಿದ್ದಾರೆ. ಆದರೂ, ಇವರನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಕಮ್ಮಿ ಎಂದು ವಿಶ್ಲೇಷಿಸಲಾಗುತ್ತದೆ.

ಬೊಮ್ಮಾಯಿ, ಸುನೀಲ್ ಕುಮಾರ್, ಅಶ್ವಥ್ ನಾರಾಯಣ
ಬೊಮ್ಮಾಯಿ, ಸುನೀಲ್ ಕುಮಾರ್, ಅಶ್ವಥ್ ನಾರಾಯಣ, ಅಶೋಕ್, ಯತ್ನಾಳ್ ಹೆಸರುಗಳು ಮುನ್ನಲೆಯಲ್ಲಿವೆ. ಇಲ್ಲಿ ಯತ್ನಾಳ್ ಮತ್ತು ಸುನೀಲ್ ಕುಮಾರ್ ಕಟ್ಟರ್ ಹಿಂದುತ್ವದ ವಿಚಾರವನ್ನು ಹೆಚ್ಚಾಗಿ ಪ್ರಸ್ತಾವಿಸುತ್ತಿರುವುದು ಒಂದು ಕಡೆ. ಇನ್ನೊಂದು ಕಡೆ, ಅಶೋಕ್ ಅವರ ಮೇಲೆ ಹೊಂದಾಣಿಕೆ ರಾಜಕೀಯದ ಅಪಸ್ವರ ಈ ಹಿಂದೆ ಕೇಳಿ ಬಂದಿತ್ತು. ಇದರಿಂದಾಗಿ, ಭಾವನಾತ್ಮಕ ವಿಚಾರದ ಹೊರತಾಗಿ ಪ್ರಬಲ ವಿರೋಧ ಪಕ್ಷವಾಗಿ ಬಿಜೆಪಿಯನ್ನು ಮೈನ್ ಸ್ಟ್ರೀಂಗೆ ತರಬೇಕಂದರೆ, ಬೊಮ್ಮಾಯಿ ಅಥವಾ ಅಶ್ವಥ್ ನಾರಾಯಣ್ ಪಕ್ಷದ ಆಯ್ಕೆ ಆದರೂ ಆಗಬಹುದು.












Click it and Unblock the Notifications