ಬಿಜೆಪಿ ವರಿಷ್ಠರ ಕನಸನ್ನು ಮಕಾಡೆ ಮಲಗಿಸಿದ ಚುನಾವಣೆ ಫಲಿತಾಂಶ

ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಸಿಎಂ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರವನ್ನು ತಾತ್ಕಾಲಿಕವಾಗಿಯಾದರೂ ಗಟ್ಟಿಗೊಳಿಸಿದೆ.

ಅಷ್ಟೇ ಅಲ್ಲ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಬಿಜೆಪಿ ವರಿಷ್ಠರ ಕನಸು ಮಕಾಡೆ ಮಲಗುವ ಲಕ್ಷಣವೇ ಹೆಚ್ಚಾಗಿ ಕಾಣುತ್ತಿದೆ.

ಅಂದ ಹಾಗೆ, ಸರ್ಕಾರ ಬಂದ ಶುರುವಿನಲ್ಲಿ ನಡೆಯುವ ಚುನಾವಣೆಗಳು ರಾಜ್ಯದ ಜನರ ತೀರ್ಪಿನ ಸಂಕೇತ ಎಂದು ಬಾವಿಸಬೇಕಿಲ್ಲ. ಯಾಕೆಂದರೆ ಕುಮಾರಸ್ವಾಮಿ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಕಳೆಯುವ ಮುನ್ನವೇ ನಡೆದ ಚುನಾವಣೆ ಇದು. ಒಂದು ಸರ್ಕಾರ ಅಸ್ತಿತ್ವಕ್ಕೆ ಬಂದ ಶುರುವಿನಲ್ಲಿ ನಡೆಯುವ ಉಪ ಚುನಾವಣೆಗೂ, ಅದು ಅವಧಿ ಪೂರೈಸುವ ಸನ್ನಿವೇಶದಲ್ಲಿ ಎದುರಿಸುವ ಉಪಚುನಾವಣೆಗೂ ವ್ಯತ್ಯಾಸವಿರುತ್ತದೆ.

ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್, ಜನತಾ ದಳ, ಬಿಜೆಪಿ ಸರ್ಕಾರಗಳು ಇದ್ದಾಗ ನಡೆದ ಉಪಚುನಾವಣೆಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಹೀಗಾಗಿ ರಾಮನಗರ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಗೆಲುವನ್ನು ತೀರಾ ವಿಶೇಷವೆಂದೇನೂ ಪರಿಗಣಿಸಲು ಸಾಧ್ಯವಿಲ್ಲ.

ಆದರಲ್ಲೂ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಪಕ್ಷ. ಅದೇ ರೀತಿ ಇವತ್ತು ಸಿಎಂ ಆಗಿರುವ ಕುಮಾರಸ್ವಾಮಿ ಅವರೇ ಕಳೆದ ಬಾರಿ, ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಹೀಗಾಗಿ ಈ ಎರಡು ಕ್ಷೇತ್ರಗಳಲ್ಲಿನ ಗೆಲುವುಗಳ ಬಗ್ಗೆ ಮೈತ್ರಿಕೂಟವೇನೂ ಹೇಳಿಕೊಳ್ಳುವಷ್ಟು ಸಂಭ್ರಮ ಪಡುವ ಅಗತ್ಯವಿಲ್ಲ.

ಆದರೆ ಒಂದು ವೇಳೆ ಈ ಕ್ಷೇತ್ರಗಳಲ್ಲಿ ಮೈತ್ರಿಕೂಟ ಪರಾಭವಗೊಂಡಿದ್ದರೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ನಿಶ್ಚಿತವಾಗಿ ಗಂಡಾಂತರ ಎದುರಿಸುತ್ತಿತ್ತು. ಹೀಗೆ ಎದುರಾದ ಗಂಡಾಂತರದಿಂದ ತಾತ್ಕಾಲಿಕವಾಗಿ ಬಚಾವಾಗಿರುವುದು ಅದಕ್ಕೆ ಸಮಾಧಾನ ನೀಡಿದ್ದರೆ ಅದು ಸಹಜ.

ಕಳವಳಕ್ಕೀಡು ಮಾಡಿದ ಬಳ್ಳಾರಿ ಸೋಲು

ಕಳವಳಕ್ಕೀಡು ಮಾಡಿದ ಬಳ್ಳಾರಿ ಸೋಲು

ಆದರೆ ವಾಸ್ತವವಾಗಿ ಉಪಚುನಾವಣೆಗಳ ಫಲಿತಾಂಶದ ಪೈಕಿ ಬಿಜೆಪಿ ಆತಂಕಪಡಬೇಕಿರುವುದು ಲೋಕಸಭೆ ಚುನಾವಣೆಗಳ ವಿಷಯದಲ್ಲಿ. ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಅದು ಗೆದ್ದಿದ್ದು ಒಂದೇ ಒಂದು ಸ್ಥಾನ.

ಈ ಪೈಕಿ ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಕಳೆದ ಬಾರಿ ಬಿಜೆಪಿಯೇ ಗೆದ್ದಿತ್ತು. ಆದರೆ ಈ ಬಾರಿ ಬಳ್ಳಾರಿಯಲ್ಲಿ ಜೆಡಿಎಸ್ ಬೆಂಬಲಿತ ಕ್ಯಾಂಡಿಡೇಟ್ ಉಗ್ರಪ್ಪ ಜಯಗಳಿಸಿದರು. ಮಂಡ್ಯದಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಕ್ಯಾಂಡಿಡೇಟ್ ಶಿವರಾಮೇಗೌಡ ಗೆಲುವು ಸಾಧಿಸಿದರು.

ಬಿಜೆಪಿ ಕ್ಯಾಂಡಿಡೇಟ್ ರಾಘವೇಂದ್ರ ಶಿವಮೊಗ್ಗದಲ್ಲಿ ಗೆಲುವು ಸಾಧಿಸಿದರೂ ಕಳೆದ ಚುನಾವಣೆಗೆ ಹೋಲಿಸಿದರೆ ಗೆಲುವಿನ ಅಂತರ ಬಹಳ ಕಡಿಮೆ. ಇದರ ನೇರ ಅರ್ಥವೆಂದರೆ ಸರ್ಕಾರದ ಪಾಲಿಗೆ ಪದೇ ಪದೇ ಆತಂಕ ತಂದೊಡ್ಡುತ್ತಿದ್ದ ಯಡಿಯೂರಪ್ಪ ಅವರನ್ನು ಅವರ ಜಿಲ್ಲೆಯಲ್ಲಿಯೇ ಕಟ್ಟಿ ಹಾಕುವಲ್ಲಿ ಮೈತ್ರಿಕೂಟ ಯಶಸ್ಸು ಕಂಡಿದೆ.

ಯಡಿಯೂರಪ್ಪ ನಿದ್ರೆ ಕಳೆದುಕೊಳ್ಳುವ ಸ್ಥಿತಿ

ಯಡಿಯೂರಪ್ಪ ನಿದ್ರೆ ಕಳೆದುಕೊಳ್ಳುವ ಸ್ಥಿತಿ

ಒಂದು ವೇಳೆ ಶಿವಮೊಗ್ಗದ ಜತೆ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮತ್ತು ಜಮಖಂಡಿಯಲ್ಲಿ ಬಿಜೆಪಿ ಕ್ಯಾಂಡಿಡೇಟುಗಳು ಗೆದ್ದಿದ್ದರೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ನಿದ್ರೆ ಕಳೆದುಕೊಳ್ಳಬೇಕಾಗುತ್ತಿತ್ತು.

ಆದರೆ ಈಗ ಯಡಿಯೂರಪ್ಪ ನಿದ್ರೆ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಅಷ್ಟೇ ಮುಖ್ಯವಾಗಿ ಬಿಜೆಪಿ ವರಿಷ್ಠರು ಚಡಪಡಿಸುವ ಸನ್ನಿವೇಶ ನಿರ್ಮಾಣವಾಗಿದೆ. ಇದಕ್ಕೆ ಮೊದಲ ಕಾರಣ ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ಬಿಜೆಪಿಯ ಸೋಲು. ಮೇಲ್ನೋಟಕ್ಕೆ ಇದು ಗಣಿರೆಡ್ಡಿಗಳ ಸೋಲು ಅನ್ನಿಸಬಹುದು. ಆದರೆ ಆಳದಲ್ಲಿ ಇದು ನಿಜವಾದ ಆತಂಕವನ್ನು ಹುಟ್ಟು ಹಾಕಿರುವುದು ಯಡಿಯೂರಪ್ಪ ಅವರಿಗೆ, ಆ ಮೂಲಕ ಬಿಜೆಪಿ ವರಿಷ್ಠರಿಗೆ.

ಯಾಕೆಂದರೆ ಯಡಿಯೂರಪ್ಪ ಅವರು ರಾಜ್ಯದ ನಂಬರ್ ಒನ್ ಲಿಂಗಾಯತ ನಾಯಕ ಎಂದು ಪ್ರತಿಬಿಂಬಿತರಾಗಿದ್ದರೂ, ಬಳ್ಳಾರಿ ಕ್ಷೇತ್ರದಲ್ಲಿ ಲಿಂಗಾಯತ ಮತದಾರರೇ ಬಿಜೆಪಿಯ ವಿರುದ್ಧ ದೊಡ್ಡ ಮಟ್ಟದಲ್ಲಿ ತಿರುಗಿ ಬಿದ್ದರು. ಒಂದು ಮತ ಕ್ಷೇತ್ರದಲ್ಲಿ ಬಲಿಷ್ಠ ಜಾತಿಯನ್ನು ಬೆಂಬಲಿಸುವ ಹಲ ಜಾತಿಗಳಿರುತ್ತವೆ.

ಬಳ್ಳಾರಿಯಲ್ಲಿ ಕಮಲಕ್ಕೆ ಹೊಡೆತ ಕೊಟ್ಟ ಲಿಂಗಾಯತರು

ಬಳ್ಳಾರಿಯಲ್ಲಿ ಕಮಲಕ್ಕೆ ಹೊಡೆತ ಕೊಟ್ಟ ಲಿಂಗಾಯತರು

ಭವಿಷ್ಯದಲ್ಲಿ ತಮ್ಮ ಹಿತ ರಕ್ಷಣೆಯಾಗಲು ಬಲಿಷ್ಠ ಜಾತಿಯೊಂದರ ಜತೆ ಇಂತಹ ಅವಲಂಬನೆ ಅನಿವಾರ್ಯ ಅನ್ನುವುದು ಈ ಜಾತಿಗಳಿಗೆ ಗೊತ್ತಿರುತ್ತದೆ. ದೇಶದ ಚುನಾವಣೆಗಳ ಇತಿಹಾಸವನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಅರ್ಥಾತ್, ಬಳ್ಳಾರಿ ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಜತೆ ಇನ್ನೂ ಕೆಲ ಜಾತಿಗಳ ಮತಗಳು ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಉಲ್ಟಾ ಹೊಡೆದವು.

ಕಾರಣ? ಗಣಿಧಣಿಗಳಾದ ರೆಡ್ಡಿ ಸಹೋದರರು ಇವತ್ತಲ್ಲ ನಾಳೆ ಯಡಿಯೂರಪ್ಪ ಅವರ ಹಿತಕ್ಕೆ ಮಾರಕಪ್ರಾಯರು ಎಂಬ ಬಾವನೆ ಲಿಂಗಾಯತ ಸಮುದಾಯದಲ್ಲಿ ಮೊಳೆತಿರುವುದು. ಅದಕ್ಕಿಂತ ಮುಖ್ಯವಾಗಿ ಬಿಜೆಪಿ ವರಿಷ್ಠರು ಶತಾಯಗತಾಯ ಯಡಿಯೂರಪ್ಪ ಅವರನ್ನು ಸಿಎಂ ಮಾಡುವುದಿಲ್ಲ ಎಂಬ ಭಾವನೆ ವ್ಯಾಪಕವಾಗಿ ಹಬ್ಬಿರುವುದು.

ಬಿಎಸ್ವೈ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿರುವ ಲಿಂಗಾಯತ

ಬಿಎಸ್ವೈ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿರುವ ಲಿಂಗಾಯತ

ಕಳೆದ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ವರಿಷ್ಠರು ಮನಸ್ಸು ಮಾಡಿದ್ದರೆ ಯಡಿಯೂರಪ್ಪ ಅವರು ಸಿಎಂ ಹುದ್ದೆಯಲ್ಲಿ ಮುಂದುವರಿಯುವಂತೆ ಮಾಡಬಹುದಿತ್ತು. ಅಥವಾ ಕೆಲ ಕಾಲ ಕಳೆದ ನಂತರವಾದರೂ ಯಡಿಯೂರಪ್ಪ ಅವರು ಸಿಎಂ ಆಗಲು ಬೇಕಾದ ವಾತಾವರಣವನ್ನು ನಿರ್ಮಿಸಬಹುದಿತ್ತು. ಆದರೆ ಬಿಜೆಪಿ ವರಿಷ್ಠರು ಉದ್ದೇಶಪೂರ್ವಕವಾಗಿ ಯಡಿಯೂರಪ್ಪ ಅವರನ್ನು ತುಳಿಯಲು ಹೊರಟಿದ್ದಾರೆ ಎಂಬ ಭಾವನೆ ಲಿಂಗಾಯತ ಮತದಾರರಲ್ಲಿ ಮೊಳಕೆಯೊಡೆದು ಹಲ ಕಾಲವೇ ಕಳೆದು ಹೋಗಿದೆ.

ಸದ್ಯದ ಸ್ಥಿತಿಯಲ್ಲಿ ಯಡಿಯೂರಪ್ಪ ಬಿಜೆಪಿಯ ಅಗ್ರಗಣ್ಯ ನಾಯಕರಿರಬಹುದು. ಆದರೆ ಮುಂಬರುವ ಲೋಕಸಭಾ ಚುನಾವಣೆಯ ನಂತರ ಇದೇ ಜಾಗದಲ್ಲಿ ಅವರು ಮುಂದುವರಿಯುತ್ತಾರೆ ಎಂದಾಗಲೀ, ಸಿಎಂ ಆಗುತ್ತಾರೆ ಎಂಬ ಕುರಿತಾಗಲೀ ಲಿಂಗಾಯತ ಸಮುದಾಯದಲ್ಲಿ ನಂಬಿಕೆ ಇಲ್ಲ.

ಅದರ ಜಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಗ್ಯಾಂಗು ಮುಂದಿನ ಲೋಕಸಭಾ ಚುನಾವಣೆಯ ನಂತರ ತನಗೆ ಬೇಕಾದ ಡೆಮ್ಮಿ ಕ್ಯಾಂಡಿಡೇಟ್ ಒಬ್ಬರನ್ನು ಪಕ್ಷದ ಮುಂಚೂಣಿಗೆ ತಂದು ಕೂರಿಸಿ ಆಟ ಆಡುತ್ತದೆ ಎಂಬ ಅನುಮಾನ ಹಬ್ಬುತ್ತಿದೆ.

ಹಾವೂ ಸಾಯಬಾರದು ಕೋಲೂ ಮುರಿಯಬಾರದು

ಹಾವೂ ಸಾಯಬಾರದು ಕೋಲೂ ಮುರಿಯಬಾರದು

ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಇರಬಹುದು, ಹರಿಯಾಣದಲ್ಲಿ ಖಟ್ಟರ್ ಇರಬಹುದು, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಇರಬಹುದು. ಹೀಗೆ ದೇಶದ ವಿವಿಧ ರಾಜ್ಯಗಳಲ್ಲಿ ಮೋದಿ ಗ್ಯಾಂಗು ಜನ ನಾಯಕರ ಬದಲು, ತಮ್ಮ ಮನಕ್ಕೆ ಒಗ್ಗುವ ನಾಯಕರನ್ನಾಗಿ ತಂದು ಕೂರಿಸಿದೆ ಅನ್ನುವುದು ಈ ಅನುಮಾನದ ಭಾಗ.

ಹೀಗಾಗಿ ಬಳ್ಳಾರಿ ಲೋಕಸಭೆಗೆ ನಡೆದ ಉಪ ಚುನಾವಣೆ ಫಲಿತಾಂಶವೇ ಬಿಜೆಪಿ ವರಿಷ್ಠರಿಗೆ ಹೆಚ್ಚಿನ ಆಘಾತ ಉಂಟು ಮಾಡುವಂತದ್ದು. ಆದರೆ ಈಗಿನ ಸ್ಥಿತಿಯಲ್ಲಿ ಅವರು ಯಡಿಯೂರಪ್ಪ ಅವರನ್ನು ಬಿಟ್ಟು ಬೇರೆ ನಾಯಕರನ್ನು ಮುಂಚೂಣಿಯಲ್ಲಿ ನಿಲ್ಲಿಸಿಕೊಳ್ಳುವಂತಿಲ್ಲ. ನಿಲ್ಲಿಸಿದರೂ ಲಿಂಗಾಯತ ಸಮುದಾಯ ಮತ್ತು ಆ ಸಮುದಾಯಕ್ಕೆ ಅಂಟಿಕೊಂಡೇ ರಾಜಕೀಯ ಮಾಡುವ ಜಾತಿಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತವೆ ಎನ್ನಲು ಸಾಧ್ಯವಿಲ್ಲ. ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ ಬಿಜೆಪಿಯಲ್ಲಿ.

ಮತ್ತೆ ಸಿಎಂ ಸ್ಥಾನದಲ್ಲಿ ಕೂರುವರೆ ಬಿಎಸ್ವೈ?

ಮತ್ತೆ ಸಿಎಂ ಸ್ಥಾನದಲ್ಲಿ ಕೂರುವರೆ ಬಿಎಸ್ವೈ?

ಹೀಗಾಗಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಮತ್ತಷ್ಟು ಗಟ್ಟಿಯಾಗಿದ್ದರೂ, ಬಿಜೆಪಿ ವರಿಷ್ಠರು ತಾವೇ ಮುಂದಾಗಿ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಲ್ಲಿ ಕೂರಿಸುವ ಸನ್ನಿವೇಶವನ್ನು ಲೋಕಸಭಾ ಚುನಾವಣೆಗೂ ಮುನ್ನ ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಒಂದು ವೇಳೆ ಅದು ಈ ಕೆಲಸ ಮಾಡದಿದ್ದರೆ ಮುಂದಿನ ಲೋಕಸಭಾ ಚುನಾವಣೆಯ ತನಕ ಲಿಂಗಾಯತ ಸಮುದಾಯ ಬಿಜೆಪಿಯನ್ನು ನಂಬಿಕೊಂಡು ಕೂರುತ್ತದೆ ಅನ್ನುವುದು ಕಷ್ಟ. ಮತ್ತು ಸದ್ಯದ ಸನ್ನಿವೇಶವನ್ನು ಗಮನಿಸುತ್ತಿರುವ, ಲಿಂಗಾಯತ ನಾಯಕತ್ವ ಎಂಬ ಕಿರೀಟ ಸೆಳೆಯಲು ಪರದಾಡುತ್ತಿದ್ದ ಎಂ.ಬಿ. ಪಾಟೀಲ ಮರಳಿ ಸಕ್ರಿಯರಾಗುವುದಿಲ್ಲ ಎಂದು ಹೇಳುವುದೂ ಕಷ್ಟ.

ಹೀಗಾಗಿ ಸದ್ಯದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದರೂ, ಮತ್ತು ಯಡಿಯೂರಪ್ಪ ಅವರು ಸ್ವಂತ ಜಿಲ್ಲೆಗೆ ಅಂಟಿಕೊಂಡು ಕೂರುವ ಅಸಹಾಯಕ ಸ್ಥಿತಿ ಸೃಷ್ಟಿಯಾಗಿದೆ ಎನ್ನುವಂತೆ ಭಾಸವಾಗುತ್ತಿದೆಯಾದರೂ ಗತ್ಯಂತರವಿಲ್ಲದೆ ಬಿಜೆಪಿ ಹೈಕಮಾಂಡ್ ತಾನೇ ಮುಂದಾಗಿ ಯಡಿಯೂರಪ್ಪ ಅವರನ್ನು ಸಿಎಂ ಮಾಡುವ ಯತ್ನಕ್ಕೆ ಕೈ ಹಾಕಬೇಕಿದೆ.

ಆದರೆ, ಮುಂದಿನ ಚುನಾವಣೆಯಲ್ಲಿ ಏನಾಗಲಿದೆ?

ಆದರೆ, ಮುಂದಿನ ಚುನಾವಣೆಯಲ್ಲಿ ಏನಾಗಲಿದೆ?

ಸದ್ಯದ ಫಲಿತಾಂಶದಿಂದ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ತಾತ್ಕಾಲಿಕವಾಗಿ ಭದ್ರವಾದಂತೆ ಕಂಡರೂ, ಈ ಭದ್ರತೆ ಯಡಿಯೂರಪ್ಪ ಅವರಿಗಿಂತ ಹೆಚ್ಚಾಗಿ ಕಮಲ ಪಾಳೆಯದ ವರಿಷ್ಠರಿಗೆ ಕಾಡುತ್ತಿದೆ.

ಅದರ ಲೆಕ್ಕಾಚಾರದ ಪ್ರಕಾರವೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅದು ಉತ್ತರ ಭಾರತದಲ್ಲಿ ಹೆಚ್ಚು ಸೀಟು ಗೆಲ್ಲುವುದು ಕಷ್ಟ. ಹೀಗಾಗಿ ದಕ್ಷಿಣ ಭಾರತದಿಂದ ಹೆಚ್ಚು ಸೀಟು ಗೆಲ್ಲುವುದು ಅನಿವಾರ್ಯ. ಹೀಗಾಗಿಯೇ ಅದು ಕರ್ನಾಟಕ, ತೆಲಂಗಾಣ, ತಮಿಳ್ನಾಡು ರಾಜ್ಯಗಳ ರಾಜಕಾರಣದಲ್ಲಿ ಕೈ ಆಡಿಸುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದಿಂದ ಹೊರಟ ಸಂದೇಶ ಅದಕ್ಕೆ ಎಚ್ಚರಿಕೆಯ ಘಂಟೆಯಂತೆ ಕೇಳುತ್ತಿದ್ದರೆ ಅದು ಸಹಜವೂ ಹೌದು.
ಹೀಗಾಗಿ ಉಪಚುನಾವಣೆಯಲ್ಲಿನ ಗೆಲುವು ಕುಮಾರಸ್ವಾಮಿ ಅವರ ಸರ್ಕಾರವನ್ನು ತಾತ್ಕಾಲಿಕವಾಗಿ ಭದ್ರ ಮಾಡಿದಂತೆ ಭಾಸವಾಗುತ್ತಿದ್ದರೆ, ಮತ್ತೊಂದೆಡೆ ಶತಾಯಗತಾಯ ಯಡಿಯೂರಪ್ಪ ಅವರನ್ನು ಸಿಎಂ ಪಟ್ಟದಲ್ಲಿ ಕೂರಿಸುವ ವಾತಾವರಣ ನಿರ್ಮಿಸಬೇಕು ಎಂಬ ಅನಿವಾರ್ಯತೆಗೆ ಬಿಜೆಪಿ ಹೈಕಮಾಂಡ್ ಒಳಗಾಗುವಂತೆ ಮಾಡಿದೆ.

ಒಂದು ವೇಳೆ ಅದು ಈ ಎಚ್ಚರಿಕೆಯನ್ನು ಗ್ರಹಿಸಿ ಸಕಾಲಕ್ಕೆ ಮೇಲೇಳದಿದ್ದರೆ ಯಡಿಯೂರಪ್ಪ ಅವರ ಭವಿಷ್ಯ ಮಾತ್ರವಲ್ಲ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಅದರ ಕನಸೂ ಮಣ್ಣು ಪಾಲಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+