ಬಂಡೀಪುರದಲ್ಲಿ ನಿಸರ್ಗ ಬರೆದ ಸುಂದರ ದೃಶ್ಯ ಕಾವ್ಯ

ಹಸಿರು ಹಚ್ಚಡದ ನಿಸರ್ಗ... ಅದರೊಳಗೆ ಘೀಳಿಡುವ ಕಾಡಾನೆಗಳು, ಘರ್ಜಿಸುವ ಹುಲಿಗಳು... ಹಿಂಡು ಹಿಂಡಾಗಿ ಛಂಗನೆ ನೆಗೆದು ಓಡುವ ಜಿಂಕೆ, ಸಾರಂಗಗಳು... ಹಕ್ಕಿಗಳ ಕಲರವ... ಜೇನಿನ ಝೇಂಕಾರ... ಇದೆಲ್ಲವೂ ಇದೀಗ ಬಂಡೀಪುರದತ್ತ ತೆರಳುವ ಪ್ರವಾಸಿಗರ ಕಣ್ಮುಂದೆ ಹಾದು ಹೋಗುವ ಸುಂದರ ದೃಶ್ಯಗಳಾಗಿವೆ.

ಈ ಬಾರಿ ಸುರಿದ ಮುಂಗಾರು ಮತ್ತು ಹಿಂಗಾರು ಮಳೆ ಪ್ರಕೃತಿಯನ್ನು ಪುಳಕಗೊಳಿಸಿದೆ. ಜತೆಗೆ ಬಂಡೀಪುರದ ನಡುವೆಯಿರುವ ನೀರಿನ ಸೆಲೆಗಳಾದ ಕೆರೆಕಟ್ಟೆಗಳು ತುಂಬಿವೆ. ನಿನ್ನೆ ಮೊನ್ನೆಯ ತನಕವೂ ಮಳೆ ಸುರಿಯುತ್ತಲೇ ಇದ್ದುದರಿಂದ ಹುಲ್ಲು, ಕುರುಚಲು ಕಾಡು, ಗಿಡ ಮರಗಳು ಎಲ್ಲವೂ ಬಿಸಿಲಿಗೆ ಒಣಗದೆ ಹಸಿರಾಗಿರುವ ಕಾರಣದಿಂದಾಗಿ ನಿಸರ್ಗದ ಚೆಲುವು ತುಂಬಿದೆ. ಹೀಗಾಗಿ ಪ್ರಕೃತಿಯ ವಿಹಂಗಮ ನೋಟವನ್ನು ಸವಿಯುವ ಸಲುವಾಗಿಯೇ ಪ್ರವಾಸಿಗರು ದಂಡು ದಂಡಾಗಿ ಬಂಡೀಪುರದತ್ತ ದೌಡಾಯಿಸುತ್ತಿದ್ದಾರೆ.

 ಪ್ರಾಣಿ ಪಕ್ಷಿಗಳ ಸುಂದರ ಲೋಕ

ಪ್ರಾಣಿ ಪಕ್ಷಿಗಳ ಸುಂದರ ಲೋಕ

ಬಂಡೀಪುರ ಹುಲಿಗಳ ಆವಾಸ ಸ್ಥಾನ. ಇವುಗಳನ್ನು ಹೊರತುಪಡಿಸಿದರೆ ಕಾಡಾನೆ, ಕಾಡುಕೋಣ, ಜಿಂಕೆ, ಸಾರಂಗಗಳು, ಕರಡಿ ಸೇರಿದಂತೆ ಹಲವು ಪ್ರಾಣಿಗಳು, ಪಕ್ಷಿಗಳು ಇಲ್ಲಿ ಕಾಣಲು ಸಿಗುತ್ತವೆ. ಅಷ್ಟೇ ಅಲ್ಲದೆ ಅವು ಸ್ವಚ್ಛಂದವಾಗಿ ಓಡಾಡುತ್ತಾ ನೋಡುಗರನ್ನು ರೋಮಾಂಚನಗೊಳಿಸುತ್ತವೆ. ಸಾಮಾನ್ಯವಾಗಿ ಮಳೆಗಾಲದ ನಂತರ ಇಲ್ಲಿ ಹಲವು ಬಗೆಯ ಪ್ರಾಣಿಗಳು ಕಾಣಸಿಗುತ್ತವೆ. ಸಸ್ಯಾಹಾರಿಗಳಿಂದ ಹಿಡಿದು ಮಾಂಸಾಹಾರಿ ಪ್ರಾಣಿಗಳ ತನಕ ಎಲ್ಲ ರೀತಿಯ ಪ್ರಾಣಿ ಪಕ್ಷಿಗಳು ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುತ್ತವೆ.

 ಚುಮು ಚುಮು ಚಳಿಯಲ್ಲಿ ಸುಂದರ ಬೆಳಗು

ಚುಮು ಚುಮು ಚಳಿಯಲ್ಲಿ ಸುಂದರ ಬೆಳಗು

ಮುಂಜಾನೆಯ ಚುಮುಚುಮು ಚಳಿಯಲ್ಲಿ ಹಿಮದ ಹಾದಿಯಲ್ಲಿ ಸಾಗುವಾಗಿ ಗಿಡಮರಗಳ ನಡುವೆ ಹಾದು ಹೋಗುವ ಪ್ರಾಣಿಗಳನ್ನು ನೋಡುವುದೇ ಒಂದು ರೀತಿಯ ಮಜಾ. ಅದರಲ್ಲೂ ಪಕ್ಷಿಗಳ ಕಲರವ, ಜೇನಿನ ಝೇಂಕಾರ, ಮೂಗಿಗೆ ರಾಚುವ ಕಾನನ ಕುಸುಮಗಳ ಸುವಾಸನೆ ಹೊಸದಾದ ಲೋಕವೊಂದನ್ನು ತೆರೆದಿಡುತ್ತದೆ. ಇಷ್ಟೇ ಅಲ್ಲದೆ ಅರಣ್ಯದ ನಡುವೆ ಮತ್ತು ಅರಣ್ಯಕ್ಕೆ ಒತ್ತಿಕೊಂಡಂತೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಜಿನ ಪರದೆಯನ್ನು ಸರಿಸಿಕೊಂಡು ಸಾಗುವಾಗ ಆಗುವ ಆನಂದ ಹೇಳತೀರದ್ದು.

 ಮೂರು ರಾಜ್ಯಗಳ ಮೆಚ್ಚುಗೆಯ ತಾಣ

ಮೂರು ರಾಜ್ಯಗಳ ಮೆಚ್ಚುಗೆಯ ತಾಣ

ಹಾಗೆ ನೋಡಿದರೆ ಬಂಡೀಪುರ ರಾಷ್ಟ್ರೀಯ ಉದ್ಯಾನವು ದೇಶದ ಪ್ರತಿಷ್ಠಿತ ತಾಣಗಳಲ್ಲೊಂದಾಗಿದ್ದು, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ಮೂರು ರಾಜ್ಯಗಳಿಗೆ ಹೊಂದಿಕೊಂಡಂತಿದೆ. ಹುಲಿ ಸಂರಕ್ಷಿತ ಅಭಯಾರಣ್ಯವಾಗಿರುವುದರಿಂದ ಹುಲಿಗಳನ್ನು ನೋಡಲೆಂದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹಾಗೆ ಬರುವ ಪ್ರವಾಸಿಗರು ಸಫಾರಿಯಲ್ಲಿ ತೆರಳಿ ಹುಲಿಗಳನ್ನು ಹತ್ತಿರದಿಂದ ನೋಡಿ ಖುಷಿಪಡುತ್ತಾರೆ.

ಬಂಡೀಪುರವು ರಾಜ್ಯದ ಸಂಪರ್ಕ ಸೇತುವಾಗಿದ್ದು, ದಕ್ಷಿಣಕ್ಕೆ ತಮಿಳುನಾಡು ಮತ್ತು ಪಶ್ಚಿಮಕ್ಕೆ ಕೇರಳದ ಅರಣ್ಯ ಪ್ರದೇಶಗಳೊಂದಿಗೆ ವಿಲೀನಗೊಂಡಿದೆ. ಇಲ್ಲಿ ಎಲೆ ಉದುರುವ ಹಾಗೂ ಕುರುಚಲು ಸಸ್ಯ ಪ್ರಭೇದಗಳು ಹೆಚ್ಚಾಗಿರುವುದರಿಂದ ಎಲ್ಲ ಸಮಯದಲ್ಲಿಯೂ ಇಲ್ಲಿ ಹಸಿರನ್ನು ನಿರೀಕ್ಷೆ ಮಾಡುವಂತಿಲ್ಲ. ಆದರೆ ಇದೀಗ ಮಳೆಗಾಲ ಕಳೆದಿದ್ದರಿಂದಾಗಿ ಎಲ್ಲಿ ನೋಡಿದರಲ್ಲಿ ಹಸಿರ ರಾಶಿ ಕಂಗೊಳಿಸುತ್ತಿದೆ. ಹಾಗಾಗಿ ಈ ಸಮಯವನ್ನು ಕಳೆದುಕೊಂಡರೆ ಮತ್ತೆ ಸದ್ಯಕ್ಕೆ ಇಂತಹ ಸುಂದರ ವಾತಾವರಣ, ನಿಸರ್ಗದ ಚೆಲುವು, ವನ್ಯಪ್ರಾಣಿಗಳ ದರ್ಶನವನ್ನು ಇಷ್ಟು ಸುಲಭವಾಗಿ ಪಡೆಯುವುದು ಕಷ್ಟವೇ..

 ವರುಣನ ಕೃಪೆಯಿಂದ ಇಮ್ಮಡಿಸಿದ ನಿಸರ್ಗ ಚೆಲುವು

ವರುಣನ ಕೃಪೆಯಿಂದ ಇಮ್ಮಡಿಸಿದ ನಿಸರ್ಗ ಚೆಲುವು

ಈಗಿನ ಬಂಡೀಪುರದ ಚೆಲುವನ್ನು ನೋಡಿ ಬಹಳ ವರ್ಷಗಳೇ ಆಗಿವೆ. ಕಳೆದ ಎರಡು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಬಂಡೀಪುರ ಸಂಪನ್ನವಾಗಿದೆ. ಆದರೆ ಎರಡು ವರ್ಷಗಳ ಹಿಂದೆ ಹೀಗಿರಲಿಲ್ಲ. ಸಮರ್ಪಕವಾಗಿ ಮಳೆಯಾಗದ ಕಾರಣದಿಂದಾಗಿ ಕೆರೆಕಟ್ಟೆಗಳು ಭರ್ತಿಯಾಗಿರಲಿಲ್ಲ. ಪ್ರಾಣಿಗಳಿಗೆ ಹಸಿರು ಮೇವಿಗ ತೊಂದರೆಯಾಗಿತ್ತು. ಜತೆಗೆ ಬೇಸಿಗೆಯಲ್ಲಿ ಬಿದ್ದ ಕಾಡ್ಗಿಚ್ಚು ವನ್ಯ ಪ್ರಾಣಿಗಳನ್ನು ಇನ್ನಿಲ್ಲದಂತೆ ಕಾಡಿತ್ತು. ಆದರೆ ಕಳೆದ ವರ್ಷಂದೀಚೆಗೆ ವರುಣ ಕೃಪೆ ತೋರಿರುವುದರಿಂದ ಅರಣ್ಯ ಹಸಿರಾಗಿದೆ. ಕಳೆದ ಬೇಸಿಗೆಯಲ್ಲಿ ಸುಟ್ಟುಹೋದ ಹದಿನೈದು ಸಾವಿರ ಎಕರೆ ಅರಣ್ಯ ಪ್ರದೇಶದಲ್ಲಿಯೂ ಜೀವಕಳೆ ಬಂದಿದೆ.

ಬಂಡೀಪುರದ ಸುಂದರ ದೃಶ್ಯಗಳನ್ನು ನೋಡಿದವರು ಮತ್ತು ಅರಣ್ಯದಲ್ಲಿ ರಸಮಯ ಕ್ಷಣಗಳನ್ನು ಕಳೆದವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿರುವುದರಿಂದಾಗಿ ಜನ ಆಕರ್ಷಣೆಗೊಂಡು ಇತ್ತ ಬರುತ್ತಿದ್ದಾರೆ. ಇವರ ಪೈಕಿ ವಿದೇಶಿಗರೂ ಹೆಚ್ಚಿನ ಸಂಖ್ಯೆಯಲ್ಲಿರುವುದು ಖುಷಿಕೊಡುವ ವಿಚಾರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+