ಆಜಾನ್ ಸದ್ದಿಗೆ ವಿರೋಧ; ಶಬ್ದ ಮಿತಿ ಎಷ್ಟಿರಬೇಕು? ಇಲ್ಲಿದೆ ವಿವರ
ನಗರಗಳಲ್ಲಿ ಶಬ್ದ ಮಾಲಿನ್ಯದ (Noise Pollution) ಬಗ್ಗೆ ಬಹಳ ವರ್ಷಗಳಿಂದ ಕೇಳುತ್ತಲೇ ಬಂದಿದ್ದೇವೆ. ವಾಹನಗಳ ಹಾರ್ನ್ ಸದ್ದು, ಕೈಗಾರಿಕೆಗಳ ಯಂತ್ರಗಳ ಸದ್ದು ಮೊದಲಾದವು ನಗರವಾಸಿಗಳ ನಿದ್ದೆಗೆಡಿಸುತ್ತಿದ್ದವು. ಇತ್ತೀಚೆಗೆ ಈ ಶಬ್ದಮಾಲಿನ್ಯ ವಿಚಾರ ಮುನ್ನೆಲೆಗೆ ಬಂದಿದೆ. ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಕೂಗಲಾಗುವ ಬೆಳಗಿನ ಪ್ರಾರ್ಥನೆಯ ಆಜಾನ್ (Azaan) ಸದ್ದಿಗೆ ಹಲವರು ಕೆಂಗಣ್ಣು ಬೀರಿದ್ದಾರೆ. ಬಲಪಂಥೀಯ ಪಕ್ಷಗಳು ಆಜಾನ್ ವಿರುದ್ಧ ದೊಡ್ಡಮಟ್ಟದ ಪ್ರಚಾರವನ್ನೇ ಮಾಡುತ್ತಿವೆ.
ಆಜಾನ್ ಸದ್ದಿನ ಬಗ್ಗೆ ಬಿಜೆಪಿ ಮತ್ತು ಬಲಪಂಥೀಯ ಸಂಘಟನೆವರಷ್ಟೇ ಅಲ್ಲ ಸಮಾಜದ ಇತರ ರಾಜಕೀಯೇತರ ವ್ಯಕ್ತಿಗಳೂ ಆಕ್ಷೇಪ ವ್ಯಕ್ತಪಡಿಸಿರುವುದುಂಟು. ಹಾಗಾದರೆ ಆಜಾನ್ ಸದ್ದಿನಿಂದ ಅಷ್ಟು ಶಬ್ದಮಾಲಿನ್ಯ ಆಗುತ್ತದಾ?
ಕಾನೂನು ಪ್ರಕಾರ ಶಬ್ದ ಮಾಲಿನ್ಯ ಎಂದರೇನು?: ವಾಯು ಮಾಲಿನ್ಯದ ರೀತಿಯಲ್ಲಿ ಶಬ್ದ ಮಾಲಿನ್ಯ ವಿಚಾರವೂ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ವ್ಯಾಪ್ತಿಗೆ ಬರುತ್ತದೆ. ಕರ್ಕಶ ಎನಿಸುವ ಶಬ್ದವನ್ನು ಮಾಲಿನ್ಯ ಎಂದು ಪರಿಗಣಿಸಲಾಗುತ್ತದೆ. ಕೇಳುಗರಿಗೆ ಕಿರಿಕಿರಿ ಉಂಟು ಮಾಡುವ, ಕಿವಿಗೆ ನೋವು ಮಾಡುವ ಯಾವುದೇ ಶಬ್ದವನ್ನು ನಾಯ್ಸ್ (Noise) ಅಥವಾ ಕರ್ಕಶ ಸದ್ದು ಎಂದು ಹೇಳಲಾಗುತ್ತದೆ.

ಶಬ್ದ ಮಿತಿ ಎಷ್ಟಿರಬೇಕು?
ವಸತಿ ಪ್ರದೇಶ, ಕೈಗಾರಿಕೆ ಪ್ರದೇಶ, ವಾಣಿಜ್ಯ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯಕ್ಕೆ ಕಾನೂನುಗಳ ಮೂಲಕ ಮಿತಿ ಹಾಕಲಾಗಿದೆ. ಕರ್ನಾಟಕದಲ್ಲಿ ರೂಪಿಸಲಾಗಿರುವ ಮಾಲಿನ್ಯ ಕಾಯ್ದೆಯಲ್ಲಿ ಇರುವ ಅಂಶಗಳು ಈ ಕೆಳಕಂಡಂತಿವೆ:
ವಸತಿ ಪ್ರದೇಶಗಳಲ್ಲಿ ಬೆಳಗಿನ ಹೊತ್ತು ಶಬ್ದ ಮಿತಿ: 55dB
ವಸತಿ ಪ್ರದೇಶಗಳಲ್ಲಿ ರಾತ್ರಿ ಹೊತ್ತು ಶಬ್ದ ಮಿತಿ: 45 ಡಿಬಿ
ಕೈಗಾರಿಕಾ ಪ್ರದೇಶಗಳಲ್ಲಿ ಬೆಳಗಿನ ಹೊತ್ತು ಶಬ್ದ ಮಿತಿ: 75ಡಿಬಿ
ಕೈಗಾರಿಕಾ ಪ್ರದೇಶಗಳಲ್ಲಿ ರಾತ್ರಿ ಹೊತ್ತು ಶಬ್ದ ಮಿತಿ: 70 ಡಿಬಿ
ವಾಣಿಜ್ಯ ಪ್ರದೇಶಗಳಲ್ಲಿ ಬೆಳಗಿನ ಹೊತ್ತು ಶಬ್ದ ಮಿತಿ: 55 ಡಿಬಿ
ವಾಣಿಜ್ಯ ಪ್ರದೇಶಗಳಲ್ಲಿ ರಾತ್ರಿ ಹೊತ್ತು ಶಬ್ದ ಮಿತಿ: 45 ಡಿಬಿ
ನಿಶಬ್ದ ವಲಯಗಳಲ್ಲಿ ಬೆಳಗಿನ ಹೊತ್ತು ಶಬ್ದ ಮಿತಿ: 50 ಡಿಬಿ
ನಿಶಬ್ದ ವಲಯಗಳಲ್ಲಿ ರಾತ್ರಿ ಹೊತ್ತು ಶಬ್ದ ಮಿತಿ: 40 ಡಿಬಿ

ಲೌಡ್ ಸ್ಪೀಕರ್ ಅಥವಾ ಧ್ವನಿವರ್ಧಕಗಳ ಬಳಕೆಗೆ ಇರುವ ಕಾನೂನು:
ಧ್ವನಿ ವರ್ಧಕಗಳನ್ನು ಬಳಸಲು ಸ್ಥಳೀಯ ಪ್ರಾಧಿಕಾರದಿಂದ ಲಿಖಿತ ಅನುಮತಿ ಪಡೆಯಲೇಬೇಕು ಎಂದಿದೆ ನಿಯಮ. ಅನುಮತಿ ಪಡೆದು ಧ್ವನಿವರ್ಧಕ ಬಳಕೆ ಮಾಡಿದರೂ ಅದು ಹೊರಹಾಕುವ ಸದ್ದಿಗೆ ಮಿತಿ ಇರಬೇಕು. ಇಲ್ಲದಿದ್ದರೆ 10 ಸಾವಿರ ರೂ ದಂಡ ಕಟ್ಟಬೇಕಾಗುತ್ತದೆ. ಅಧಿಕಾರಿಗಳು ಧ್ವನಿವರ್ಧಕ ಅಥವಾ ಮೈಕ್ ಮತ್ತಿತರ ಉಪಕರಣಗಳನ್ನ ಜಫ್ತಿ ಮಾಡಲು ಅವಕಾಶ ಇದೆ.

ಲೌಡ್ ಸ್ಪೀಕರ್ ಶಬ್ದದ ಮಿತಿ ಎಷ್ಟು?
ಯಾವುದೇ ಪ್ರದೇಶವಾದರೂ ಲೌಡ್ ಸ್ಪೀಕರ್‌ನಿಂದ 74dB ಗಿಂತ ಹೆಚ್ಚು ಸದ್ದು ಹೊರಡುವಂತಿಲ್ಲ. ಅಥವಾ, ಆಯಾ ಪ್ರದೇಶಗಳಲ್ಲಿ ಇರುವ ಶಬ್ದ ಮಿತಿಗಿಂತ 10 ಡಿಬಿ ಹೆಚ್ಚು ಶಬ್ದವನ್ನು ಮಾತ್ರ ಹೊರಡಿಸಲು ಅನುಮತಿ ಇದೆ. ಉದಾಹರಣೆಗೆ, ವಸತಿ ಪ್ರದೇಶಗಳಲ್ಲಿ 55 ಡಿಬಿ ಶಬ್ದಮಿತಿ ಇದೆ. ಇಲ್ಲಿ ಧ್ವನಿವರ್ಧಕಗಳನ್ನು ಬಳಸಿದರೆ 65 ಡಿಬಿಗಿಂತ ಹೆಚ್ಚು ಸದ್ದು ಬರುವಂತಿಲ್ಲ.

ಡಿಬಿ ಯೂನಿಟ್ (dB Unit) ಏನು?
ಡಿಬಿ ಎಂದರೆ ಡೆಸಿಬೆಲ್ಸ್. ಒಂದು ಡೆಸಿಬಲ್ ಅಥವಾ 1 dB ಎಂದರೆ ಬೆಲ್ ಅಥವಾ ಗಂಟೆ ಶಬ್ದದ ಹತ್ತನೇ ಒಂದು ಭಾಗವಾಗಿದೆ.
ಶಬ್ದ ಮಾಲಿನ್ಯದಿಂದ ಆರೋಗ್ಯಕ್ಕೆ ಹಾನಿ:
ವಾಯು ಮಾಲಿನ್ಯಕ್ಕೆ ಕೊಡುವ ಗಮನ ಶಬ್ದ ಮಾಲಿನ್ಯಕ್ಕೆ ಹೆಚ್ಚಾಗಿ ಸಿಗುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ ವಿಶ್ವಾದ್ಯಂತ 12 ರಿಂದ 15 ವರ್ಷ ವಯೋಮಾನದ ನೂರು ಕೋಟಿಗೂ ಹೆಚ್ಚು ಯುವ ಜನರು ಶಬ್ದ ಮಾಲಿನ್ಯದಿಂದ ಕಿವಿಗೆ ಹಾನಿಯಾಗುವ ಅಪಾಯ ಹೊಂದಿದ್ದಾರೆ. ಶಬ್ದ ಮಾಲಿನ್ಯದಿಂದ ತಾತ್ಕಾಲಿಕ ಕಿವುಡುತನ, ತಲೆನೋವು, ರಕ್ತದೊತ್ತಡ ಇತ್ಯಾದಿ ಹಾನಿ ಆಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications