ಮಹಾ ಕುಂಭಮೇಳದಿಂದ ಭಕ್ತರ ಸಂಖ್ಯೆ ಏರಿಕೆ: ಅಯೋಧ್ಯೆಯಲ್ಲಿ ದರ್ಶನ ಸಮಯ ಬದಲಾವಣೆ
ಹಿಂದೂ ಧರ್ಮದಲ್ಲಿ ಅತ್ಯಂತ ದೊಡ್ಡ ಮತ್ತು ಅತ್ಯಂತ ಪವಿತ್ರವಾದ ಉತ್ಸವಗಳಲ್ಲಿ ಪ್ರಮುಖವಾದ, ಜಾಗತೀಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಮಹಾ ಕುಂಭಮೇಳ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಮಹಾ ಶಿವರಾತ್ರಿಯ ದಿನ ಅಂದರೆ ಫೆಬ್ರವರಿ 26ರವರೆಗೆ ನಡೆಯಲಿರುವ ಈ ಮಹಾ ಕುಂಭಮೇಳಕ್ಕೆ ಕೋಟ್ಯಾಂತರ ಭಕ್ತರು ಹಾಗೂ ಗಣ್ಯರು ಭೇಟಿ ನೀಡುತ್ತಿದ್ದು, ಇಂದು( ಫೆಬ್ರವರಿ 10) ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿ ಪವಿತ್ರ ಸ್ನಾನ ಕೈಗೊಂಡಿದ್ದಾರೆ.
ಈ ಮಹಾ ಕುಂಭಮೇಳದಲ್ಲಿ ರಾಜಕೀಯ ಗಣ್ಯರು ಸೇರಿದಂತೆ ದೇಶ-ವಿದೇಶದಿಂದ ಕೋಟ್ಯಾಂತರ ಭಕ್ತರು ಭಾಗಿಯಾಗುತ್ತಿದ್ದು, ಮಹಾ ಕುಂಭಮೇಳದಲ್ಲಿ ಪ್ರವಿತ್ರ ಸ್ನಾನ ಮಾಡಿದವರು ಸಮೀಪದ ಅಯೋಧ್ಯೆ ರಾಮಮಂದಿರಕ್ಕೂ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಅಯೋಧ್ಯೆ ರಾಮಮಂದಿರ ಆಡಳಿತ ಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರದ ಸ್ಥಾಪನೆಗೆ ಪ್ರಯಾಜ್‌ರಾಜ್‌ನ ಕುಂಭಮೇಳ ಕಾರ್ಯಕ್ರಮ ಅತ್ಯಂತ ಮಹತ್ವ ಹಾಗೂ ಪ್ರಮುಖ ಪಾತ್ರವಹಿಸಿದೆ. ಹೀಗಾಗಿ ಮಹಾ ಕುಂಭಮೇಳಕ್ಕೆ ಆಗಮಿಸಿದ ಬಹುತೇಕರು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಜನವರಿ 26ರಿಂದ ಕಳೆದ ವಾರ ಅಂದರೆ ಫೆಬ್ರವರಿ 3ರವರೆಗೆ ಅಯೋಧ್ಯೆ ಶ್ರೀರಾಮಮಂದಿರಕ್ಕೆ ಬರೋಬ್ಬರಿ 1 ಕೋಟಿ ಜನ ಭಕ್ತರು ಭೇಟಿ ನೀಡಿದ್ದಾರೆ.
ದಿನದಿಂದ ದಿನಕ್ಕೆ ಅಯೋಧ್ಯೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ದೇವಸ್ಥಾನ ಮಂಡಳಿ ಶ್ರೀರಾಮಮಂದಿರ ತೆರೆಯುವ ಸಮಯ ಅಂದರೆ ಭಕ್ತರ ದರ್ಶನ ಸಮಯವನ್ನು ಹೆಚ್ಚಿಸಿದೆ. ಈ ಮೊದಲು ಬೆಳಗ್ಗೆ 7 ಗಂಟೆಗೆ ತೆರೆಯುತ್ತಿದ್ದ ರಾಮ ಮಂದಿರದ ಬಾಗಿಲನ್ನು ಇನ್ನು ಮುಂದೆ ಮುಂಜಾನೆ 6 ಗಂಟೆಗೆ ತೆರೆಯಲು ದೇವಸ್ಥಾನ ಮಂಡಳಿ ನಿರ್ಧಾರ ಮಾಡಿದ್ದು, ಈಗಾಗಲೇ ಪರಿಷ್ಕೃತ ಸಮಯವನ್ನು ಭಕ್ತಾಧಿಗಳಿಗೆ ತಿಳಿಸಿದ್ದಾರೆ. ಇನ್ನು ಮುಂದೆ ಅಯೋಧ್ಯೆ ರಾಮಮಂದಿರ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ತೆರೆಯಲಿದ್ದು, ಭಕ್ತಾಧಿಗಳು ಈ ಸಮಯದಲ್ಲಿ ಶ್ರೀರಾಮಲಲ್ಲಾನ ದರ್ಶನ ಪಡೆಯಬಹುದಾಗಿದೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸ್ಥಾಪನೆಗಾಗಿ ಪ್ರಯಾಗ್‌ರಾಜ್‌ದಲ್ಲಿ ನಡೆದ ಎಲ್ಲಾ ಕುಂಭಮೇಳದ ಭಕ್ತಾದಿಗಳು ಹಾಗೂ ಸ್ಥಳೀಯರು ಅನೇಕ ರೀತಿಯ ಹೋರಾಟ ಒತ್ತಾಯ ಮಾಡಿದ್ದರು. ಒಂದು ಹಂತದಲ್ಲಿ ಅಯೋಧ್ಯೆಯ ರಾಮಮಂದಿರ ಸ್ಥಾಪನೆಗೆ ಹೋರಾಟದ ಕಿಚ್ಚು ಹಚ್ಚಿದವರು ಕುಂಭಮೇಳದ ಭಕ್ತರು ಎನ್ನಬಹುದು. ಪ್ರಯಾಗರಾಜ್‌ನಲ್ಲಿ ಲಕ್ಷಾಂತರ ಜನರು ಕುಂಭಮೇಳಕ್ಕೆ ಸೇರುವಾಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸ್ಥಾಪನೆಯನ್ನು ಹೇರಳವಾಗಿ ಒತ್ತಾಯ ಮಾಡಿದ್ದು ಈಗ ಇತಿಹಾಸವಾಗಿದೆ.












Click it and Unblock the Notifications