ದೇಶದಲ್ಲಿ ಕೋವಿಡ್ ಮಾತ್ರೆ ಮೊಲ್ನುಪಿರವಿರ್ ಬಿಡುಗಡೆ: ಈ ಬಗ್ಗೆ ಇಲ್ಲಿದೆ ಮಾಹಿತಿ
ಹೈದರಾಬಾದ್, ಜನವರಿ 06: ಅರಬಿಂದೋ ಫಾರ್ಮಾ ಲಿಮಿಟೆಡ್ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ವಿರುದ್ಧ ಚಿಕಿತ್ಸೆಗೆ ಬಳಸಲಾಗುವ ಮೊಲ್ನುಪಿರವಿರ್ ಮಾತ್ರೆಯನ್ನು "ಮೊಲ್ನಾಫ್ಲು" ಬ್ರಾಂಡ್ ಹೆಸರಿನಲ್ಲಿ ಬಿಡುಗಡೆ ಮಾಡಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಔಷಧ ತಯಾರಕರ ಸಂಸ್ಥೆಯು ಕೆಲವು ಸಂದರ್ಭದಲ್ಲಿ ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾದ ವಯಸ್ಕ ರೋಗಿಗಳ ಚಿಕಿತ್ಸೆಗಾಗಿ ಮೊಲ್ನುಪಿರವಿರ್ ಬಳಕೆ ಮಾಡಬಹುದು ಎಂದು ತಿಳಿಸಿದೆ.
ಮೊಲ್ನುಪಿರವಿರ್ ಅನ್ನು ಈ ಹಿಂದೆ ತುರ್ತು ಬಳಕೆಯ ಅಧಿಕಾರದ ಅಡಿಯಲ್ಲಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಅನುಮೋದನೆ ಮಾಡಿತ್ತು. ಕಳೆದ ವರ್ಷದ ಆರಂಭದಲ್ಲಿ, ಅರಬಿಂದೋ ಫಾರ್ಮಾವು Merck & Co ನ ಅಂಗಸಂಸ್ಥೆಯಾದ ಮೆರ್ಕ್ ಶಾರ್ಪೆ ಡೊಹ್ಮೆ (ಸಿಂಗಾಪುರ) ಜೊತೆ ಈ ಮಾತ್ರೆ ತಯಾರಿಕೆ ವಿಚಾರದಲ್ಲಿ ಪರವಾನಗಿ ಒಪ್ಪಂದಕ್ಕೆ ಸಹಿ ಹಾಕಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಅರಬಿಂದೋ ಸಂಸ್ಥೆಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ ನಿತ್ಯಾನಂದ ರೆಡ್ಡಿ, "ಕೊರೊನಾ ವೈರಸ್ ರೋಗಿಗಳಿಗೆ ಕೈಗೆಟಕುವ ದರದ ಚಿಕಿತ್ಸೆ ಪಡೆಯುವ ಅವಕಾಶವನ್ನು ಈ ಮೊಲ್ನುಪಿರವಿರ್ (ಮೊಲ್ನಾಫ್ಲು) ಮಾತ್ರ ನೀಡಲಿದ್ದು, ಅದಕ್ಕಾಗಿ ಸಂತಸ ಪಡುತ್ತೇನೆ. ಈ ಮಾತ್ರೆಯು ಪರಿಣಾಮಕಾರಿ ಮತ್ತು ಉತ್ತಮ ಗುಣಮಟ್ಟದೊಂದಿಗೆ ಕೋವಿಡ್ ವಿರುದ್ಧ ಹೋರಾಡಲು ಸಹಕಾರಿಯಾಗಿದೆ," ಎಂದು ತಿಳಿಸಿದ್ದಾರೆ.

ಮೊಲ್ನಾಫ್ಲು ಯಾವಾಗ ಲಭ್ಯ?
ಈ ಮೊಲ್ನಾಫ್ಲು ಕೋವಿಡ್ ಮಾತ್ರೆ ಮುಂಬರುವ ವಾರದಲ್ಲಿ ಭಾರತದಾದ್ಯಂತ ಲಭ್ಯವಾಗುವ ಸಾಧ್ಯತೆ ಇದೆ. ಆರಂಭಿಕ ಹಂತದಲ್ಲಿ, ಹೆಚ್ಚಿನ ಮತ್ತು ವೇಗವಾಗಿ ಹೆಚ್ಚುತ್ತಿರುವ ಪ್ರಕರಣಗಳಿರುವ ರಾಜ್ಯಗಳಿಗೆ ಈ ಮಾತ್ರೆಯನ್ನು ಹೆಚ್ಚಾಗಿ ಸರಬರಾಜು ಮಾಡುವ ಸಾಧ್ಯತೆ ಇದೆ. ಈ ಮಾತ್ರೆಯು ಹೆಚ್ಚು ಸುರಕ್ಷಿತವಲ್ಲ ಎಂದು ಹೇಳಿರುವ ಐಸಿಎಂಆರ್ ಮಾತ್ರೆಯನ್ನು ರಾಷ್ಟ್ರೀಯ ಕೋವಿಡ್ -19 ಕ್ಲಿನಿಕಲ್ ಮಾರ್ಗಸೂಚಿಗೆ ಸೇರ್ಪಡೆ ಮಾಡಿಲ್ಲ ಎಂದು ತಿಳಿಸಿದೆ.

ಡೋಸೇಜ್ ಎಷ್ಟು, ಬೆಲೆ ಎಷ್ಟು?
ಮೊಲ್ನಾಫ್ಲು ಕೋವಿಡ್ ಚಿಕಿತ್ಸೆಗಾಗಿ ನೀಡುವ ಮೌಖಿಕ ಆಂಟಿ-ವೈರಲ್ ಕ್ಯಾಪ್ಸುಲ್ ಆಗಿದೆ. ಪ್ರತಿ ಕ್ಯಾಪ್ಸುಲ್‌ಗೆ 35 ರೂಪಾಯಿ ವೆಚ್ಚವಾಗಲಿದೆ ಎಂದು ಡಾ ರೆಡ್ಡೀಸ್ ಲ್ಯಾಬೊರೇಟರೀಸ್ ಘೋಷಣೆ ಮಾಡಿದೆ. ಈ ಮಾತ್ರೆಯು 10 ಕ್ಯಾಪುಲ್ಸ್‌ಗಳ ಸ್ಟ್ರೀಪ್ ಆಗಿದೆ. ಐದು ದಿನಗಳಲ್ಲಿ 40 ಕ್ಯಾಪ್ಸುಲ್ ಸೇವನೆ ಮಾಡುವುದು ಆಗಿದೆ. ಅಂದರೆ ಜನರು ತಲಾ 350 ರೂಪಾಯಿ ಮೌಲ್ಯದ ನಾಲ್ಕು ಸ್ಟ್ರಿಪ್‌ಗಳನ್ನು ಖರೀದಿಸಬೇಕಾಗುತ್ತದೆ. ಒಟ್ಟು ವೆಚ್ಚ 1,400 ರೂಪಾಯಿ ಆಗಲಿದೆ ಎಂದು ವರದಿಯು ಹೇಳಿದೆ.

ಗಂಭೀರವಾದ ಸುರಕ್ಷತಾ ಕಾಳಜಿ ಇದೆ ಎಂದ ಐಸಿಎಂಆರ್
ಭಾರತದಲ್ಲಿ "ಮೊಲ್ನಾಫ್ಲು" ಬ್ರಾಂಡ್ ಹೆಸರಿನಲ್ಲಿ ಬಿಡುಗಡೆ ಆಗಿರುವ ಮೊಲ್ನುಪಿರವಿರ್ ಮಾತ್ರೆಯು ಗಂಭೀರವಾದ ಸುರಕ್ಷತಾ ಕಾಳಜಿ ಹೊಂದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ಬಲರಾಮ್ ಭಾರ್ಗವ ಹೇಳಿದ್ದಾರೆ. ಈ ಮಾತ್ರೆ ಗಂಭೀರ ಸುರಕ್ಷತಾ ಕಾಳಜಿಯನ್ನು ಹೊಂದಿದೆ. ಆದ್ದರಿಂದ ಆರೋಗ್ಯ ಸಚಿವಾಲಯ ಶಿಫಾರಸು ಮಾಡಿದ ರಾಷ್ಟ್ರೀಯ ಕೋವಿಡ್ -19 ಕ್ಲಿನಿಕಲ್ ಮಾರ್ಗಸೂಚಿಯಲ್ಲಿ ಇದನ್ನು ಸೇರ್ಪಡೆ ಮಾಡಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಈ ಮಾರ್ಗಸೂಚಿಗೆ ಸೇರ್ಪಡೆ ಮಾಡುವ ವಿಚಾರದ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೆ ಗಂಭೀರವಾದ ಸುರಕ್ಷತಾ ಕಾಳಜಿ ಹಿನ್ನೆಲೆ ಕೈಬಿಡಲಾಗಿದೆ ಎಂದು ಕೂಡಾ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಸ್ನಾಯುಗಳಿಗೆ ಹಾನಿ ಉಂಟಾಗಬಹುದು ಎಂದು ಕೂಡಾ ತಿಳಿಸಿದ್ದಾರೆ.

ಭ್ರೂಣಕ್ಕೆ ಹಾನಿ ಉಂಟಾಗುವ ಸಾಧ್ಯತೆ!
ಇನ್ನು "ಈ ಮಾತ್ರೆಯನ್ನು ಹೆಚ್ಚು ಮುಖ್ಯವಾಗಿ, ಸಂಭೋಗದಲ್ಲಿ ಇರುವ ಪುರುಷ ಅಥವಾ ಮಹಿಳೆಗೆ ನೀಡಿದರೆ ಅಪಾಯವಿದೆ. ಈ ಮಾತ್ರೆಯನ್ನು ಸೇವನೆ ಮಾಡಿದ ಮೂರು ತಿಂಗಳವರೆಗೆ ಗರ್ಭನಿರೋಧಕವನ್ನು ಬಳಸವುದು ಉತ್ತಮ. ಏಕೆಂದರೆ ಈ ಮಾತ್ರೆ ಸೇವಿಸಿದ ಮೂರು ತಿಂಗಳ ಅವಧಿಯಲ್ಲಿ ಗರ್ಭ ಧರಿಸಿದರೆ ಭ್ರೂಣಕ್ಕೆ ಹಾನಿ ಉಂಟಾಗಲಿದೆ. ಈ ಕಾರಣದಿಂದಾಗಿ ನಾವು ಈ ಮಾತ್ರೆಯನ್ನು ಕೋವಿಡ್ ಔಷದೀಯ ಮಾರ್ಗಸೂಚಿಯಲ್ಲಿ ಸೇರ್ಪಡೆ ಮಾಡಿಲ್ಲ. ಮಕ್ಕಳು, ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು, ಗರ್ಭ ಧರಿಸಲು ಯೋಜಿಸಿರುವವರು, ಗಾಯ ಇರುವವರು ಸೇವನೆ ಮಾಡಿದರೆ ತೊಂದರೆ ಉಂಟಾಗುವ ಸಾಧ್ಯತೆ ಇದೆ," ಎಂದು ತಿಳಿಸಿದ್ದಾರೆ.












Click it and Unblock the Notifications