ವಿಧಾನಸಭೆ ಚುನಾವಣೆ 2023: ತೆರೆಮರೆಗೆ ಸರಿದಿದ್ದ ಪಕ್ಷಗಳಲ್ಲೂ ಶುರುವಾಯ್ತು ಸಂಚಲನ!

ಬೆಂಗಳೂರು, ಫೆಬ್ರವರಿ 5: 2023ರಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿರುವುದರಿಂದ ರಾಜ್ಯ ರಾಜಕೀಯದಲ್ಲಿ ಓಲೈಕೆ, ತಂತ್ರಗಾರಿಕೆಯೊಂದಿಗೆ ಯಾವ ವಿಚಾರ ಮುನ್ನಲೆಗೆ ತಂದರೆ? ಯಾರನ್ನು ಓಲೈಸಿದರೆ? ಪಕ್ಷಕ್ಕೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಪ್ರಮುಖ ಪಕ್ಷಗಳು ತೊಡಗಿವೆ. ಇನ್ನೊಂದೆಡೆ ತೆರೆಮರೆಗೆ ಸರಿದಿದ್ದ ರಾಜಕೀಯ ಪಕ್ಷಗಳು ಸೆಟೆದು ನಿಂತು ಸಂಘಟನೆಯತ್ತ ಮುಖ ಮಾಡುತ್ತಿವೆ.

ವಿರೋಧ ಪಕ್ಷಗಳಿಗೆ ಆಡಳಿತ ಪಕ್ಷದ ವಿರುದ್ಧ ಹೋರಾಟ ಮಾಡಲು ಬೇಕಾದಷ್ಟು ವಿಚಾರಗಳು ಸಿಗಬಹುದು. ಆದರೆ ಪ್ರತಿದಿನವೂ ವಿರೋಧ ಮತ್ತು ಹೋರಾಟಕ್ಕಿಳಿದರೆ ಅದು ಜನಸಾಮಾನ್ಯರಲ್ಲಿ ಅಸಹ್ಯ ಹುಟ್ಟಿಸಿಬಿಡುತ್ತದೆ. ಯಾವುದೇ ವಿಚಾರಗಳಾದರೂ ಅದನ್ನು ರಬ್ಬರ್‌ನಂತೆ ಎಳೆಯುತ್ತಾ ಹೋದರೆ ಒಂದು ಹಂತದವರೆಗೆ ಅದು ಒಂದಷ್ಟು ಲಾಭ ತಂದುಕೊಡಬಹುದು. ಬಳಿಕ ಅದು ರೇಜಿಗೆ ಹುಟ್ಟಿಸಿಬಿಡುತ್ತದೆ.

 ಈಗ ಮತದಾರರು ಪ್ರಬುದ್ಧರಾಗಿದ್ದಾರೆ

ಈಗ ಮತದಾರರು ಪ್ರಬುದ್ಧರಾಗಿದ್ದಾರೆ

ಈಗಾಗಲೇ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ನಡೆಸಿ ಒಂದಷ್ಟು ಯಶಸ್ಸು ಪಡೆದಿದೆ. ಕೊರೊನಾ ಕಾರಣದಿಂದ ಸಾರ್ವಜನಿಕ ವಲಯದಲ್ಲಿ ಟೀಕೆಗೂ ತುತ್ತಾದರೂ ರಾಜ್ಯದಲ್ಲೊಂದು ಸಂಚಲನ ಸೃಷ್ಟಿಸಿದೆ. ಜತೆಗೆ ಮೇಕೆದಾಟು ಯೋಜನೆ ಬಗ್ಗೆ ಸಾಕಷ್ಟು ಚರ್ಚೆಯೂ ಆಗಿದೆ. ಸಾಮಾನ್ಯ ಜನರು ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದಷ್ಟು ಮಾಹಿತಿಯನ್ನು ಅರಿತುಕೊಂಡಿದ್ದಾರೆ. ಹೀಗಿರುವಾಗ ಮತ್ತೆ ಅದನ್ನೇ ಹಿಡಿದುಕೊಂಡು ಕಾಂಗ್ರೆಸ್ ಎಳೆಯುತ್ತಾ ಹೋದರೆ ಮೊದಲಿನಂತೆ ಹೆಚ್ಚು ಪರಿಣಾಮ ಬೀರಲಾರದು. ಅದು ಜನೋದ್ದೇಶದ ಹೊರತಾಗಿ ರಾಜಕೀಯ ಉದ್ದೇಶಕ್ಕೆ ಬಳಕೆಯಾದಂತೆ ಗೋಚರಿಸಬಹುದು.

ಹಾಗೆ ನೋಡಿದರೆ ಚುನಾವಣೆ ವಿಚಾರದಲ್ಲಿ ನಮ್ಮ ಬಹಳಷ್ಟು ನಾಯಕರು ಮೂರ್ನಾಲ್ಕು ದಶಕಗಳ ಹಿಂದಿನ ಗುಂಗಿನಲ್ಲಿಯೇ ಇದ್ದಾರೆ. ಆದರೆ ಭರವಸೆಗಳನ್ನು ನಂಬಿ, ಆಮಿಷಕ್ಕೆ ಮಣಿದು ಮತ ನೀಡುವ ಕಾಲ ಬದಲಾಗಿದೆ. ಸಾಧನೆಗಳ ಸರಮಾಲೆಯನ್ನು ಮುಂದಿಟ್ಟುಕೊಂಡು ಹಿಂದಿನ ನಾಯಕರು ಮಾಡಿದ ಸಾಧನೆಯನ್ನು ಉರುಹಾಕಿ ಮತಗಿಟ್ಟಿಸಿಕೊಳ್ಳುವ ಕಾಲ ಹೋಗಿದೆ. ಈಗ ಮತದಾರರು ಪ್ರಬುದ್ಧರಾಗಿದ್ದಾರೆ. ವಿದ್ಯಾವಂತರಾಗಿದ್ದಾರೆ. ಎಲ್ಲ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಮತ್ತು ಪ್ರಶ್ನಿಸುವ ಮನೋಭಾವ ಹೊಂದಿದ್ದಾರೆ. ಆದ್ದರಿಂದ ಹಿಂದಿನದನ್ನೇ ಈಗಲೂ ಹೇಳಿದರೆ ಅದರಿಂದ ಯಾವುದೇ ಪ್ರಯೋಜನವಾಗಲಾರದು.

 ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಏಕೆ ಬೇಕು?

ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಏಕೆ ಬೇಕು?

ಇದೆಲ್ಲವನ್ನು ಅರಿತಿರುವ ಬಹುತೇಕ ಪಕ್ಷಗಳು ಮತ್ತು ನಾಯಕರು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ಆ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಜೊತೆಜೊತೆಯಲ್ಲಿ ತಳಮಟ್ಟದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇತರೆ ದಿನಗಳಲ್ಲಿ ನಾನು ಏನು ಮಾಡಿದರೂ ನಡೆಯುತ್ತದೆ ಎಂಬ ಧೈರ್ಯ ತೋರುವ ರಾಜಕೀಯ ನಾಯಕರು, ಚುನಾವಣೆ ಬಂದಾಗ ಮಾತ್ರ ಮತದಾರರಿಗೆ ಹೆದರುತ್ತಾರೆ. ಅಂತಹದೊಂದು ಭಯ ಇವತ್ತಿಗೂ ಉಳಿಯುವಂತೆ ಮಾಡಿರುವುದರ ಹಿಂದೆ ನಮ್ಮ ಪ್ರಜಾಪ್ರಭುತ್ವದ ಶಕ್ತಿ ಅಡಗಿದೆ. ಅದೆಲ್ಲವನ್ನು ಬದಿಗಿಟ್ಟು ರಾಜ್ಯ ರಾಜಕೀಯದತ್ತ ಕಣ್ಣು ಹೊರಳಿಸಿದರೆ ಇತ್ತೀಚೆಗಿನ ವರ್ಷಗಳಲ್ಲಿ ಬಹುತೇಕ ಜನ ರಾಜ್ಯದಲ್ಲೊಂದು ಪ್ರಬಲವಾದ ಪ್ರಾದೇಶಿಕ ಪಕ್ಷ ಅವಶ್ಯಕತೆಯ ಬಗ್ಗೆ ಮಾತನಾಡುತ್ತಿದ್ದಾರೆ.

ನಾವು ಪಕ್ಕದ ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶಗಳನ್ನು ನೋಡಿದರೆ ಅದು ನಿಜವೆನಿಸುತ್ತದೆ. ನಮ್ಮ ರಾಷ್ಟ್ರೀಯ ಪಕ್ಷಗಳ ನಾಯಕರು ಪ್ರಾದೇಶಿಕ ಆಡಳಿತದಲ್ಲಿರುವ ರಾಜ್ಯಗಳಿಗೆ ನೀಡಿದ ಮನ್ನಣೆಯನ್ನು ರಾಷ್ಟ್ರೀಯ ಪಕ್ಷಗಳ ಗೆಲುವಿಗೆ ಕಾರಣವಾದ ರಾಷ್ಟ್ರೀಯ ಪಕ್ಷಗಳ ಪ್ರಾಬಲ್ಯವಿರುವ ರಾಜ್ಯಕ್ಕೆ ನೀಡಿಲ್ಲ ಎಂಬುದು ನಾವೆಲ್ಲ ಒಪ್ಪಿಕೊಳ್ಳಲೇ ಬೇಕಾಗಿದೆ. ಇದರ ಅನುಭವವನ್ನು ಪ್ರಕೃತಿ ವಿಕೋಪ ಸೇರಿದಂತೆ ಹಲವು ಸಂಕಷ್ಟಗಳನ್ನು ರಾಜ್ಯ ಎದುರಿಸಿದಾಗ ಜನರು ಅನುಭವಿಸಿದ್ದಾರೆ.

 ಹೋಳಾದ ಪ್ರಾದೇಶಿಕ ಪಕ್ಷ ಪ್ರಬಲವಾಗಲಿಲ್ಲ

ಹೋಳಾದ ಪ್ರಾದೇಶಿಕ ಪಕ್ಷ ಪ್ರಬಲವಾಗಲಿಲ್ಲ

ಬಹುಶಃ ನಮ್ಮ ರಾಜಕೀಯ ನಾಯಕರು ಸ್ವಹಿತಾಸಕ್ತಿ, ಸ್ವಾರ್ಥ ಮತ್ತು ಕುಟುಂಬ ರಾಜಕಾರಣ ಬದಿಗೊತ್ತಿ ಎಲ್ಲರೂ ಒಟ್ಟಾಗಿ ಚಿಂತನೆ ನಡೆಸಿದ್ದರೆ ಬಹುಶಃ ಇವತ್ತು ಪ್ರಬಲವಾದ ಪ್ರಾದೇಶಿಕ ಪಕ್ಷವೊಂದು ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಯೂರುತ್ತಿತ್ತೇನೋ? ಆದರೆ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅದು ಸಾಧ್ಯವಾಗದೆ ಹೋಗಿರುವುದು ವಿಷಾದದ ಸಂಗತಿಯಾಗಿದೆ.

1983ರಲ್ಲಿ ಮೊದಲ ಬಾರಿಗೆ ರಾಮಕೃಷ್ಣ ಹೆಗ್ಗಡೆಯವರು ಮುಖ್ಯಮಂತ್ರಿಯಾಗುವುದರೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ಸೇತರ ಪಕ್ಷ ಚುಕ್ಕಾಣಿ ಹಿಡಿದಿತ್ತು. ತದನಂತರ ಒಂದಷ್ಟು ವರ್ಷಗಳ ಕಾಲ ಹಿರಿಯ ಭಿನ್ನಾಭಿಪ್ರಾಯಗಳ ನಡುವೆಯೂ ಪ್ರಾದೇಶಿಕ ಪಕ್ಷ ಪ್ರಬಲವಾಗಿತ್ತು. ಜನತಾಪಕ್ಷ ಬಳಿಕ ಜನತಾ ದಳ ರಾಜ್ಯದಲ್ಲಿ ಪ್ರಾಬಲ್ಯವನ್ನು ಉಳಿಸಿಕೊಂಡು ಆಡಳಿತ ಚುಕ್ಕಾಣಿ ಹಿಡಿಯುವ ಶಕ್ತಿಯನ್ನು ಹೊಂದಿತ್ತು. ಆದರೆ ಜನತಾದಳ ಸಂಯುಕ್ತ ಮತ್ತು ಜಾತ್ಯತೀತವಾಗಿ ಎರಡು ಹೋಳಾದ ಬಳಿಕ ರಾಜ್ಯದಲ್ಲಿ ಏನೆಲ್ಲ ನಡೆಯಿತು ಎಂಬುದು ಎಲ್ಲರ ಕಣ್ಣಿಗೆ ಕಟ್ಟಿದಂತಿದೆ.

 ನೇಗಿಲು ಹೊತ್ತ ರೈತ ಚಿನ್ಹೆಯ ಜನತಾ ಪಕ್ಷ

ನೇಗಿಲು ಹೊತ್ತ ರೈತ ಚಿನ್ಹೆಯ ಜನತಾ ಪಕ್ಷ

ಇವತ್ತು ರಾಜ್ಯದಲ್ಲಿ ಹಲವು ನಾಯಕರು ಪ್ರಾದೇಶಿಕ ಪಕ್ಷವನ್ನು ಕಟ್ಟುವ ಪ್ರಯತ್ನ ಮಾಡಿ ಸೋತು ರಾಷ್ಟ್ರೀಯ ಪಕ್ಷದತ್ತ ಮುಖ ಮಾಡಿದ್ದಾರೆ. ಸದ್ಯ ಇರುವ ಜೆಡಿಎಸ್ ರಾಷ್ಟ್ರೀಯ ಪಕ್ಷಗಳಿಗೆ ‘ಆಪ್ಷನ್' ಎನ್ನುವಂತಾಗಿದೆ. ಮುಂದಿನ ಚುನಾವಣೆ ವೇಳೆಗೆ ಕೆಲವು ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಳ್ಳಬಹುದು. ಈಗಾಗಲೇ ತೆರೆಮರೆಯಲ್ಲಿರುವ ರಾಷ್ಟ್ರೀಯ ಪಕ್ಷಗಳು ಜೀವ ಪಡೆದುಕೊಳ್ಳಬಹುದು. ಈ ನಡುವೆ ಎಪ್ಪತ್ತರಿಂದ ತೊಂಬತ್ತರ ದಶಕಗಳ ಕಾಲ ಪ್ರಬಲ ರಾಜಕೀಯ ಪಕ್ಷವಾಗಿದ್ದ ಜನತಾ ಪಕ್ಷ ಕರ್ನಾಟಕದಲ್ಲಿ ಸಂಘಟನೆಗಿಳಿದಿದೆ. (ಈ ಪಕ್ಷದ ನೇಗಿಲು ಹೊತ್ತ ರೈತನ ಚಿನ್ಹೆ ಎಲ್ಲರ ಮನಪಟಲದಲ್ಲಿ ಅಚ್ಚೊತ್ತಿರುತ್ತದೆ) ಇದೀಗ ಪಕ್ಷದ ಅಧ್ಯಕ್ಷರಾಗಿ ಬಿ.ಟಿ‌. ಲಲಿತಾನಾಯಕ್ ನೇಮಕಗೊಂಡಿದ್ದಾರೆ.

ಅವರ ಸಾರಥ್ಯದಲ್ಲಿ ರಾಜ್ಯದಲ್ಲಿ ಪಕ್ಷದ ಸಂಘಟನೆ ಮಾಡುವ ಕಾರ್ಯಕ್ಕೆ ರೂಪುರೇಷೆಗಳು ತಯಾರಾಗುತ್ತಿವೆ. ರಾಜ್ಯದಲ್ಲಿ ಜನತಾಪಕ್ಷದ ಸಂಘಟನೆಗೆ ಒತ್ತು ನೀಡುವಂತೆ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ಬಂಧು ಸೂಚಿಸಿದ್ದು, ಅದರಂತೆ ರಾಮಕೃಷ್ಣ ಹೆಗಡೆಯವರ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಸಂಘಟನೆ ಮಾಡುವತ್ತ ಆಲೋಚನೆಗಳಿವೆ ಎನ್ನಲಾಗುತ್ತಿದೆ. ಅದು ಏನೇ ಇರಲಿ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಬಹಳಷ್ಟು ಬದಲಾವಣೆಗಳಾಗುವುದಂತು ಖಚಿತ.

Recommended Video

      ಪಂಜಾಬ್ CM ಅಭ್ಯರ್ಥಿ ಘೋಷಣೆಯಾದ ಬೆನ್ನಲ್ಲೇ ನಿರಾಸೆಗೊಂಡ ಸಿಧು ಮುಂದಿನ ನಡೆ? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+