ಕಾಡು ಜಾಗವನ್ನೇ ಸೇಲ್ ಮಾಡಿದ ಕಿರಾತಕ..! ಅಮೆಜಾನ್ ಅರಣ್ಯ ಫೇಸ್‌ಬುಕ್‌ನಲ್ಲಿ ಮಾರಾಟ..!
ಅವನೊಬ್ಬ ಕಿರಾತಕ, ಬಿಟ್ಟರೆ ಇಡೀ ಭೂಮಿಯನ್ನೇ ಮಾರಿಬಿಡುವಾತ. ಇಂತಹ ಕಿರಾತಕನ ಕೈಯಲ್ಲಿ ಮುಗ್ಧ ಕಾಡು ಜನರ ಭೂಮಿ ಸಿಕ್ಕರೆ ಉಳಿಯುವುದು ಉಂಟೆ..? ನೋ.. ನೋ.. ಚಾನ್ಸೇ ಇಲ್ಲ. ಹೀಗೆ ಅಮೆಜಾನ್ ಅರಣ್ಯ ಪ್ರದೇಶವನ್ನೇ ಮಾರಿ ಲಾಕ್ ಆಗಿದ್ದಾನೆ. ಫ್ಯಾಬ್ರಿಸಿಯೋ ಗಿಮರೀಸ್ ಎಂಬ ಕಿರಾತಕ ದಂಧೆಕೋರನ ವಿರುದ್ಧ ಅರಣ್ಯ ಭೂಮಿ ಮಾರಾಟ ಮಾಡಿದ ಆರೋಪ ಕೇಳಿಬಂದಿದೆ. ಅಷ್ಟಕ್ಕೂ ಅಮೆಜಾನ್ ಅರಣ್ಯ ದಕ್ಷಿಣ ಅಮೆರಿಕದ ಸಾಕಷ್ಟು ಪ್ರದೇಶವನ್ನು ಆವರಿಸಿದೆ. ಇದರಲ್ಲಿ ಬ್ರೆಜಿಲ್‌ನದ್ದೇ ಸಿಂಹಪಾಲಿದೆ.
ಆದರೆ ಅಮೆಜಾನ್ ಅರಣ್ಯದ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿರುವುದು ಇದೇ ದೇಶದಲ್ಲಿ. ಮಾಫಿಯಾ, ಡಾನ್‌ಗಳು ಕಡೆಗೆ ಅಲ್ಲಿನ ಜನಪ್ರತಿನಿಧಿಗಳೇ ಇಂತಹ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಕೇಳಿಬರುತ್ತಿದೆ. ಹೀಗೆ ಫ್ಯಾಬ್ರಿಸಿಯೋ ಫೇಸ್‌ಬುಕ್ ಮೂಲಕ ಅಮೆಜಾನ್ ಅರಣ್ಯಕ್ಕೆ ಸೇರಿದ ಭೂಮಿಯನ್ನೇ ಮಾರಾಟ ಮಾಡಿದ್ದಾನೆ.
ಅಮೆಜಾನ್ ಅರಣ್ಯದಲ್ಲಿ ವಾಸವಿರುವ ಬುಡಕಟ್ಟು ಜನರ ಭೂಮಿಯನ್ನ ಸೈಟ್ ಮಾಡಿ ಸೇಲ್ ಮಾಡಿದ್ದಾನೆ. ಈಗಾಗಲೇ ಅಮೆಜಾನ್ ಬಹುಪಾಲು ನಾಶವಾಗಿದೆ. ಕೃಷಿಯ ನೆಪ ಹೇಳುತ್ತಾ ಲಕ್ಷಾಂತರ ಎಕರೆ ಕಾಡನ್ನು ನಾಶ ಮಾಡಿ, ಒತ್ತುವರಿ ಮಾಡಿಕೊಳ್ಳಲಾಗಿದೆ. ಈ ಮಧ್ಯೆ ಅಮೆಜಾನ್ ಮೂಲ ನಿವಾಸಿಗಳ ಜಾಗಕ್ಕೂ ಕುತ್ತು ಎದುರಾಗಿದೆ.

ಮೀಸಲು ಅರಣ್ಯ ಕೂಡ ಸೋಲ್ಡ್..!
ತಂತ್ರಜ್ಞಾನವನ್ನು ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಫ್ಯಾಬ್ರಿಸಿಯೋ ಗಿಮರೀಸ್ ಒಂದು ಸಣ್ಣ ಉದಾಹರಣೆ. ಸ್ಥಳೀಯವಾಗಿ ಜನರನ್ನ ನಂಬಿಸಿ, ಬಲವಂತವಾಗಿ ಭೂಮಿ ಕಿತ್ತುಕೊಂಡಿರುವ ಈತ ಅದನ್ನ ಸೈಟ್ ಮಾಡಿ ಸೇಲ್ ಮಾಡಿದ್ದಾನೆ. ಮೀಸಲು ಅರಣ್ಯವನ್ನೂ ನುಂಗಿಹಾಕಿದ ಆರೋಪ ಫ್ಯಾಬ್ರಿಸಿಯೋ ವಿರುದ್ಧ ಕೇಳಿಬಂದಿದೆ. ಇಷ್ಟೆಲ್ಲಾ ನಡೆದರೂ ಬ್ರೆಜಿಲ್ ಸರ್ಕಾರ ಕ್ರಮ ಕೈಗೊಂಡಿಲ್ಲ. ಅಂತಹ ತಾಕತ್ತು ಅಲ್ಲಿನ ಅಧಿಕಾರಿ ವರ್ಗಕ್ಕೆ ಇಲ್ಲ. ಭ್ರಷ್ಟಾಚಾರ ವಿಪರೀತವಾಗಿ ಹರಡಿರುವ ಬ್ರೆಜಿಲ್‌ನಲ್ಲಿ ಇಂತಹ ಕಾನೂನು ಬಾಹೀರ ಕೃತ್ಯಗಳು ಮಾಮೂಲಾಗಿವೆ. ಅಲ್ಲಿನ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿರುವುದು ದುರಂತವೇ ಸರಿ.

ಮೂಲ ನಿವಾಸಿಗಳ ಜೀವಕ್ಕೆ ಕುತ್ತು
ಅಮೆಜಾನ್ ಅರಣ್ಯ ಸಸ್ಯ ಸಂಕುಲ ಹಾಗೂ ಪ್ರಾಣಿಗಳಿಗೆ ಮಾತ್ರ ಜಾಗ ನೀಡಿಲ್ಲ. ಇಲ್ಲಿ ಸಾವಿರಾರು ಕಾಡು ಜನಾಂಗಗಳು ವಾಸ ಇವೆ. ಇವರೆಲ್ಲಾ ಇಲ್ಲಿನ ಮೂಲ ನಿವಾಸಿಗಳು. ಆದರೆ ಆಧುನಿಕ ಜಗತ್ತಿನಲ್ಲಿ ಇವರಿಗೂ ಇಲ್ಲಿ ಸ್ಥಾನವೇ ಇಲ್ಲದಂತಾಗಿದೆ. ಸ್ಮಗ್ಲರ್ಸ್ ಹಾಗೂ ಕಾಡುಗಳ್ಳರ ಕೈಯಲ್ಲಿ ಸಿಲುಕಿ ಸಾವಿರಾರು ಕಾಡು ಜನರು ಪ್ರಾಣಬಿಟ್ಟಿದ್ದಾರೆ. ಹಲವರು ಕಾಡನ್ನೇ ತೊರೆದು ನಾಡು ಸೇರಿದ್ದಾರೆ. ಇನ್ನೂ ಆಧುನಿಕ ಜಗತ್ತಿನ ಜೊತೆಗೆ ಸಂಪರ್ಕವನ್ನೇ ಹೊಂದದ ಕೆಲವು ಜನಾಂಗಗಳು ಅಲ್ಲೇ ನರಳಿ ನರಳಿ ಪ್ರಾಣಬಿಡುವ ಸ್ಥಿತಿ ಇದೆ. ಆದರೆ ಇದ್ಯಾವುದೂ ಬ್ರೆಜಿಲ್ ಸರ್ಕಾರಕ್ಕೆ ಕಾಣುತ್ತಿಲ್ಲ. ಇದೇ ರೀತಿ ಅಮೆಜಾನ್ ಹರಡಿರುವ ಪೆರು, ಕೊಲಂಬಿಯಾ, ಬೊಲಿವಿಯಾ, ವೆನಿಜುವೆಲಾ ದೇಶಗಳಲ್ಲೂ ಮುಗ್ಧ ಕಾಡುಜನರ ಮಾರಣಹೋಮ ನಡೆಯುತ್ತಿದೆ.

ಕಾಡುಗಳ್ಳರಿಗೆ ಸ್ವರ್ಗ..!
ಅಮೆಜಾನ್‌ನಲ್ಲಿ ಅದರಲ್ಲೂ ಬ್ರೆಜಿಲ್‌ನಲ್ಲಿ ಹರಡಿರುವ ಅಮೆಜಾನ್ ಅರಣ್ಯದಲ್ಲಿ ಅಡಗಿರುವ ಸಂಪತ್ತಿನ ಮೇಲೆ ಸ್ಮಗ್ಲರ್ಸ್ ಹಾಗೂ ಕಾಡುಗಳ್ಳರು ಕಣ್ಣಿಟ್ಟಿದ್ದಾರೆ. ಒಂದ್ಕಡೆ ಕೃಷಿಕರು ಕಾಡು ಕಡಿದು ವ್ಯವಸಾಯ ಮಾಡಿದರೆ, ಸ್ಮಗ್ಲರ್ಸ್ ಇದೇ ಕಾಡಲ್ಲಿ ಕೊಕೇನ್ ರೀತಿಯ ಮಾದಕ ವಸ್ತುಗಳನ್ನ ಬೆಳೆಯುತ್ತಿದ್ದಾರೆ. ಇಲ್ಲಿ ಸಿಗುವ ಅಪಾರ ಪ್ರಮಾಣದ ಸಂಪತ್ತು ದೋಚುತ್ತಿದ್ದಾರೆ. ಇಷ್ಟೇ ಅಲ್ಲ ಅಮೆಜಾನ್‌ನ ಎಷ್ಟೋ ಗಣಿಗಾರಿಕೆಗಳು ಸ್ಮಗ್ಲರ್ಸ್ ಹಿಡಿತದಲ್ಲೇ ಇವೆ. ಕಳ್ಳದಾರಿ ಮೂಲಕ ಇಲ್ಲಿ ದೋಚಿದ ಅರಣ್ಯ ಸಂಪತ್ತನ್ನು ಕಾಡುಗಳ್ಳರು ನೆರೆಯ ಅಮೆರಿಕ ಸೇರಿದಂತೆ ದೂರದ ಯೂರೋಪ್ ರಾಷ್ಟ್ರಗಳಿಗೂ ಕದ್ದು ಸಾಗಿಸುತ್ತಿದ್ದಾರೆ. ಹೀಗಾಗಿ ಅಮೆಜಾನ್ ಪಾತ್ರದಲ್ಲಿ ಕತ್ತಲಾದರೆ ಸಾಕು ಜೆಸಿಬಿ, ಗರಗಸ, ಟ್ರಕ್ ಆರ್ಭಟ ಜೋರಾಗೇ ಇರುತ್ತೆ. ಬ್ರೆಜಿಲ್‌ನ ಸ್ಥಳೀಯ ಆಡಳಿತಗಳು ಸ್ಮಗ್ಲರ್ಸ್ ಬೆನ್ನಿಗೇ ನಿಂತಿವೆ. ಅಧಿಕಾರಿಗಳ ಕಥೆ ಕೇಳೋದೆ ಬೇಡ, ಅಷ್ಟರಮಟ್ಟಿಗೆ ಕಾಡುಗಳ್ಳರ ಹಾವಳಿ ಇದೆ. ಪೆರು, ಕೊಲಂಬಿಯಾ, ಬೊಲಿವಿಯಾ, ವೆನಿಜುವೆಲಾ ದೇಶಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.

ಲಾಭಕ್ಕಾಗಿ ಬಂಡವಾಳಿಗರ ಫೈಟಿಂಗ್..!
ಅರಣ್ಯ ಸಂಪತ್ತು ಇರುವ ಕಡೆ ಕೈಗಾರಿಕೆಗೆ ಬೇಕಾದ ಕಚ್ಚಾವಸ್ತುಗಳು ಸುಲಭವಾಗಿ ಸಿಗುತ್ತವೆ. ಇದೇ ಕಾರಣಕ್ಕೆ ಅಮೆಜಾನ್ ನಾಡು ಬ್ರೆಜಿಲ್‌ನಲ್ಲಿ ಹೂಡಿಕೆ ಮಾಡಲು ಜಗತ್ತಿನ ದೊಡ್ಡ ದೊಡ್ಡ ಉದ್ಯಮಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಈಗಾಗಲೇ ಲಕ್ಷಾಂತರ ಕೋಟಿ ಬಂಡವಾಳ ಇದೇ ಕಾಡನ್ನು ನಂಬಿ ಹರಿದುಬಂದಿದೆ. ಬ್ರೆಜಿಲ್ ಸದ್ಯದ ಮಟ್ಟಿಗೆ ಬಂಡವಾಳಿಗರ ಸ್ವರ್ಗ ಕೂಡ. ಇನ್ನು ಇಲ್ಲಿ ಅಡಗಿರುವ ಅಪಾರ ಗಣಿ ಸಂಪತ್ತು ದೋಚುವ ಹುನ್ನಾರ ಶ್ರೀಮಂತ ರಾಷ್ಟ್ರಗಳದ್ದು. ಹೀಗಾಗಿಯೇ ಅಮೆಜಾನ್‌ನಲ್ಲಿ ಗಣಿಗಾರಿಕೆಗೆ ವಿಶ್ವದ ಬಲಿಷ್ಠ ರಾಷ್ಟ್ರಗಳು ಅತ್ಯುತ್ಸಾಹ ತೋರುತ್ತಿವೆ. ಇದರ ಪರಿಣಾಮವೇ ದಟ್ಟ ಅರಣ್ಯ ನಾಶವಾಗಿ, ಬೆಂಗಾಡು ರೂಪುಗೊಳ್ಳುತ್ತಿದೆ. ಇಲ್ಲಿ ಪ್ರಮುಖವಾಗಿ ಟಿಂಬರ್ ಉದ್ಯಮ, ಫಾರ್ಮಸಿ, ಗಣಿಗಾರಿಕೆಗಳ ಮೇಲೆ ಉದ್ಯಮಿಗಳು ಕಣ್ಣು ನೆಟ್ಟಿದ್ದಾರೆ. ಅಲ್ಲದೆ ಅಪಾರ ಪ್ರಮಾಣದ ಔಷಧಿ ಸಸ್ಯಗಳನ್ನು ಕೂಡ ದೋಚುತ್ತಿದ್ದಾರೆ.

1 ವರ್ಷ, 22 ಲಕ್ಷ ಎಕರೆ ಕಾಡು ಭಸ್ಮ
ಇಲ್ಲಿ ಕೃಷಿ ಮಾಡುವ ನೆಪದಲ್ಲಿ ಕಾಡಿನ ಮೇಲೆ ಎಂತಹ ದೌರ್ಜನ್ಯ ನಡೆಯುತ್ತಿದೆ ಎಂದರೆ, 2019ರಲ್ಲಿ ಅಮೆಜಾನ್ ಕಾಡಿನಲ್ಲಿ ಬೆಂಕಿ ಹೊತ್ತಿತ್ತು. ಒಂದೆರಡು ಭಾಗದಲ್ಲಿ ಹಬ್ಬಿದ್ದ ಬೆಂಕಿಯನ್ನು ನಂದಿಸಲು ಬ್ರೆಜಿಲ್, ಬೊಲಿವಿಯಾ, ಪೆರು, ಕೊಲಂಬಿಯಾ ಸರ್ಕಾರಗಳು ಸರ್ಕಸ್ ಮಾಡುತ್ತಿದ್ದವು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಮಾಫಿಯಾ ಡಾನ್‌ಗಳು, ಒಣಗಿ ನಿಂತಿದ್ದ ಅಮೆಜಾನ್‌ನ ಹಲವು ಭಾಗಗಳಿಗೆ ಬೆಂಕಿ ಇಟ್ಟಿದ್ದರು. ಪರಿಣಾಮ ಅಮೆಜಾನ್ ಅರಣ್ಯದಲ್ಲಿ ಸುಮಾರು 40 ಸಾವಿರ ಕಡೆ ಬೆಂಕಿ ಕಾಣಿಸಿಕೊಂಡಿತ್ತು. ಈ ಕೃತ್ಯಕ್ಕೆ ಬಲಿಯಾಗಿದ್ದು 22 ಲಕ್ಷ ಎಕರೆಯಷ್ಟು ಅರಣ್ಯ ಪ್ರದೇಶ. ಇಷ್ಟು ಕಾಡು ಭಸ್ಮವಾಗುವುದರ ಜೊತೆಗೆ ಲಕ್ಷಾಂತರ ಪ್ರಾಣಿಗಳು ಹಾಗೂ ಕಾಡು ಜನರು ಕೂಡ ಅಗ್ನಿಗೆ ಆಹುತಿಯಾಗಿದ್ದರು. ಈಗಲಾದರೂ ಬ್ರೆಜಿಲ್ ಸರ್ಕಾರ ಎಚ್ಚೆತ್ತು ಅಮೆಜಾನ್ ರಕ್ಷಣೆಗೆ ಮುಂದಾಗಬೇಕಿದೆ. ಇಲ್ಲವಾದರೆ ಗ್ಲೋಬಲ್ ವಾರ್ಮಿಂಗ್ ಎಫೆಕ್ಟ್ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.
-
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications