12 ಕೋಟಿ ಮೌಲ್ಯದ ಪ್ರಧಾನಿ ಮೋದಿ ಕಾರು: ವಿಶೇಷತೆಗಳೇನು?
ನವದೆಹಲಿ, ಡಿಸೆಂಬರ್ 28: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬೆಂಗಾವಲು ವಾಹನಗಳ ಸಾಲಿನಲ್ಲಿ ಅತೀ ದುಬಾರಿಯಾದ ಕಾರೊಂದು ಸೇರ್ಪಡೆ ಆಗುತ್ತಿದೆ. ಮರ್ಸಿಡೆಸ್-ಮೇಬ್ಯಾಕ್ ಎಸ್650 (Mercedes-Maybach S650) ಕಾರು ವಿಶೇಷ ರಕ್ಷಣಾ ಸೌಲಭ್ಯಗಳನ್ನು ಹೊಂದಿದೆ.
ಈ ಶಸ್ತ್ರಸಜ್ಜಿತ ವಾಹನವು ಬೆಂಗಾವಲಿಗೆ ಸೇರಿಕೊಳ್ಳುವ ಮೂಲಕ ಪ್ರಧಾನ ಮಂತ್ರ ನರೇಂದ್ರ ಮೋದಿ ಅವರ ಭದ್ರತಾ ವಾಹನಗಳು ರೇಂಜ್ ರೋವರ್ ವೋಗ್ ಹಾಗೂ ಟೊಯೊಟಾ ಲ್ಯಾಂಡ್ ಕ್ರೂಸರ್‌ನಿಂದ ಉನ್ನತೀಕರಣಗೊಂಡಂತೆ ಆಗಿದೆ. ಈ ವಾಹನದ ಇಂಧನ ಟ್ಯಾಂಕ್ ವಿಶೇಷ ವಸ್ತುವಿನಿಂದ ಲೇಪಿತವಾಗಿದೆ. ಯಾವುದೇ ದಾಳಿಯಿಂದ ಉಂಟಾಗುವ ರಂಧ್ರಗಳನ್ನು ಈ ವಾಹನವು ಕೂಡಲೇ ಮುಚ್ಚುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಹಾಗೆಯೇ ಈ ವಾಹನವು ಹಲವಾರು ಸೌಲಭ್ಯಗಳನ್ನು ಹೊಂದಿದೆ.
ದೇಶದ ಮುಖ್ಯಸ್ಥರ ರಕ್ಷಣೆಯ ಹೊಣೆ ಹೊತ್ತಿರುವ ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ) ಸಾಮಾನ್ಯವಾಗಿ ಹೊಸ ಕಾರಿಗೆ ಬೇಡಿಕೆಯನ್ನು ಸಲ್ಲಿಸುತ್ತದೆ. ತಾವು ಭದ್ರತೆ ನೀಡುವ ವ್ಯಕ್ತಿಯ ರಕ್ಷಣೆಗೆ ಹೊಸ ವಾಹನ ಅಗತ್ಯವಿದೆಯೇ ಎಂದು ಪರಿಶೀಲಿಸಿ ನಿರ್ಧಾರ ಮಾಡುವ ಕಾರ್ಯವನ್ನು ಎಸ್‌ಪಿಜಿ ಹೊಂದಿದೆ. ಬೆಂಗಾವಲಿನಲ್ಲಿ ಡೆಕಾಯ್ ಕಾರುಗಳನ್ನು ಹೆಚ್ಚಾಗಿ ಬಳಸುವ ಕಾರಣದಿಂದಾಗಿ ಎಸ್‌ಪಿಜಿ ಸಾಮಾನ್ಯವಾಗಿ ಅದೇ ರೀತಿಯ ವಾಹನಕ್ಕೆ ಬೇಡಿಕೆ ಇರಿಸುತ್ತದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ರನ್ನು ಭೇಟಿ ಮಾಡಲು ಹೈದರಾಬಾದ್ ಹೌಸ್‌ಗೆ ಹೋದ ಸಂದರ್ಭದಲ್ಲಿ ಈ ಮರ್ಸಿಡೆಸ್-ಮೇಬ್ಯಾಕ್ ಎಸ್650 ಕಾರಿನಲ್ಲಿಯೇ ಸಂಚಾರ ಮಾಡಿದ್ದರು. ಈಗ ಈ ಕಾರು ಪ್ರಧಾನಿ ಮೋದಿ ಬೆಂಗಾವಲಿನ ಕಾರುಗಳಲ್ಲಿ ಕಂಡು ಬಂದಿದೆ. ಹಾಗಾದರೆ ಈ ಕಾರಿನ ಬೆಲೆ ಎಷ್ಟು?, ಇದರ ವೈಶಿಷ್ಟ್ಯತೆಗಳು ಏನು?, ಎಂಬುವುದನ್ನು ತಿಳಿಯಲು ಮುಂದೆ ಓದಿ...

ಈ ಕಾರಿನ ಮೌಲ್ಯವೆಷ್ಟು?
ಮರ್ಸಿಡೆಸ್-ಮೇಬ್ಯಾಚ್ ಎಸ್650 ಗಾರ್ಡ್ ವಿಆರ್10 ಮಟ್ಟದ ರಕ್ಷಣೆಯುಳ್ಳ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಕಾರು ಆಗಿದೆ. ಎಲ್ಲಾ ಕಾರುಗಳಿಗಿಂತ ಅಧಿಕ ರಕ್ಷಣೆ ಈ ಕಾರಿನಲ್ಲಿದೆ. ಕಳೆದ ವರ್ಷ ಭಾರತದಲ್ಲಿ ಮರ್ಸಿಡೆಸ್-ಮೇಬ್ಯಾಕ್ ಎಸ್600 ಗಾರ್ಡ್ ಕಾರು ಬಿಡುಗಡೆ ಆಗಿದ್ದು, ಅದರ ಬೆಲೆ 10.5 ಕೋಟಿ ರೂ ಇತ್ತು. ಆದರೆ ಈಗ ಮರ್ಸಿಡೆಸ್-ಮೇಬ್ಯಾಕ್ ಎಸ್650 ವಾಹನಕ್ಕೆ 12 ಕೋಟಿ ರೂಪಾಯಿಗೂ ಅಧಿಕ ಬೆಲೆ ಇದೆ.

ಈ ಕಾರಿನ ವಿಶೇಷತೆಗಳು ಏನು?
ಈ ಕಾರಿನಲ್ಲಿ ಇಂಧನ ಟ್ಯಾಂಕ್ ವಿಶೇಷ ವಸ್ತುವಿನಿಂದ ಲೇಪಿತವಾಗಿದೆ. ಯಾವುದೇ ದಾಳಿಯಿಂದ ಉಂಟಾಗುವ ರಂಧ್ರಗಳನ್ನು ಈ ವಾಹನವು ಕೂಡಲೇ ಮುಚ್ಚುತ್ತದೆ. ಈ ಲೇಪಿತವನ್ನು ಎಎಚ್-64 ಅಪಾಚೆ ದಾಳಿಕೋರ ಹೆಲಿಕಾಪ್ಟರ್‌ಗಳ ಟ್ಯಾಂಕ್‌ಗಳಲ್ಲಿ ಬೋಯಿಂಗ್ ಸಂಸ್ಥೆ ಬಳಕೆ ಮಾಡುವ ಸಾಮಾಗ್ರಿಗಳನ್ನೇ ಬಳಕೆ ಮಾಡಲಾಗಿರುತ್ತದೆ. ಈ ಕಾರು, ಟೈಯರ್‌ಗಳಿಗೆ ಯಾವುದೇ ಹಾನಿ ಉಂಟಾದರೆ ಅಥವಾ ಗಾಳಿ ಹೋಗಿ ಪಂಕ್ಚರ್ ಆದರೆ ಕೂಡಲೇ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ವಿಶೇಷವಾಗಿ ನಿರ್ಮಾಣ ಮಾಡಿರುವ ಫ್ಲಾಟ್ ಟೈರ್‌ಗಳಲ್ಲಿ ಚಲಿಸಲಿದೆ. ಈ ಮೂಲಕ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಲಿದೆ. ಐಷಾರಾಮಿ ಆದ ಒಳಾಂಗಣ ವಿನ್ಯಾಸ ಈ ಕಾರಿನಲ್ಲಿ ಇದೆ. ಇದು 6.0 ಲೀಟರ್ ಅವಳಿ-ಟರ್ಬೋ ವಿ12 ಎಂಜಿನ್ ಅನ್ನು ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 160 ಕಿಮೀ ಆಗಿದೆ.
ಮರ್ಸಿಡೆಸ್-ಮೇಬ್ಯಾಕ್ ಎಸ್650 (Mercedes-Maybach S650) ಕಾರು ಸಂಪೂರ್ಣವಾಗಿ ಬುಲೆಟ್ ಪ್ರೂಫ್ ಆಗಿದೆ. ಪ್ರಬಲವಾದ ಉಕ್ಕಿನ ತಿರುಳಿನ ಬುಲೆಟ್‌ಗಳನ್ನು ಎದುರಿಸುವಷ್ಟು ಸಾಮರ್ಥ್ಯವನ್ನು ಈ ಕಾರು ಹೊಂದಿದೆ. ಇದು ಸ್ಪೋಟಕ ನಿರೋಧಕ ವಾಹನವಾಗಿದೆ. ಹಾಗೆಯೇ ಎಕೆ-47 ರೈಫಲ್‌ಗಳ ದಾಳಿಯನ್ನು ಕೂಡಾ ತಡೆದುಕೊಳ್ಳಬಹುದಾದ ಸಾಮರ್ಥ್ಯವನ್ನು ಈ ಕಾರು ಹೊಂದಿದೆ. ಎರಡು ಮೀಟರ್ ದೂರದಲ್ಲಿ 15 ಕೆಜಿಯಷ್ಟು ಟಿಎನ್‌ಟಿ ಸ್ಫೋಟ ಆದರೂ ಕೂಡಾ ಅದರಿಂದ ಈ ಕಾರು ರಕ್ಷಣೆ ನೀಡುತ್ತದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications