ಪಾಕಿಸ್ತಾನವನ್ನು ಹದ ಹೊಡೆದ ಭಾರತದ ಬಳಿ ಉಗ್ರರ ಹೆಣ ಕೇಳ್ತಾರಲ್ಲ!

ಪುಲ್ವಾಮಾದಲ್ಲಿ ಉಗ್ರಗಾಮಿ ದಾಳಿ ನಂತರ ಭಾರತ ವಾಯುಸೇನೆ ಪಾಕಿಸ್ತಾನದೊಳಗಿನ ಬಾಲಕೋಟ್ ಜೈಶೆ ಉಗ್ರರ ನೆಲೆ ಮೇಲೆ ದಾಳಿ ಮಾಡಿ ಸಾಧಿಸಿದ್ದೇನು ಎಂಬುದು ಹಲವರ ಪ್ರಶ್ನೆ. ಕೆಲವರಿಗೆ ಭಯೋತ್ಪಾದಕರ ಹೆಣಗಳ ಚಿಂತೆ. ಮತ್ತೂ ಕೆಲವರಿಗೆ ಕಣ್ಣೆದುರಿನ ಲೋಕಸಭೆ ಚುನಾವಣೆ ಚಿಂತೆ. ಆದರೆ ಕೆಲವು ಮುಖ್ಯ ವಿಚಾರಗಳು ಚರ್ಚೆ ನಡೆಯುತ್ತಲೇ ಇಲ್ಲ. ಭಾರತ ಹೆಮ್ಮೆ ಪಡಬೇಕಾದ ಸನ್ನಿವೇಶವೊಂದನ್ನು ವೃಥಾ ಕೆಸರೆರಚಾಟದಲ್ಲಿ ಮರೆಯುತ್ತಿದ್ದೇವೆ.
ಬಹಳ ಹಿಂದೆ ಏನಲ್ಲ, ಇಪ್ಪತ್ತು ವರ್ಷಗಳ ಹಿಂದೆ ಕಾರ್ಗಿಲ್ ಯುದ್ಧ ನಡೆದಿತ್ತು. ಆಗ ಅಧಿಕಾರದಲ್ಲಿ ಇದ್ದದ್ದೂ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರವೇ. ಆದರೆ ತನ್ನ ಮೇಲೆ ಒಂದು ನಿರ್ಬಂಧ ಹಾಕಿಕೊಂಡಿದ್ದ ಭಾರತೀಯ ವಾಯು ಸೇನೆ, ಭಾರತ-ಪಾಕಿಸ್ತಾನ ಮಧ್ಯದ ಗಡಿ ನಿಯಂತ್ರಣ ರೇಖೆಯನ್ನು ದಾಟಲಿಲ್ಲ.
ಆದರೆ, ಭವಿಷ್ಯದಲ್ಲಿ ಅದ್ಯಾವುದೇ ಸರಕಾರ ಬರಬಹುದು. ಈಗಿನಂಥ ಅಂದರೆ ಪುಲ್ವಾಮಾ ದಾಳಿಯಂಥ ಸನ್ನಿವೇಶ ಎದುರಾದರೆ ಎಲ್ ಒಸಿ ದಾಟಿ ಹೋಗಿ ಉಗ್ರರನ್ನು ಹೊಡೆದು ಹಾಕಲು ಆಲೋಚಿಸುವ, ಆತಂಕ ಪಡುವ ಅಗತ್ಯ ಭಾರತಕ್ಕೆ ಬರಲಾರದು. ಅದರಲ್ಲೂ ಭಯೋತ್ಪಾದನಾ ಕೃತ್ಯಕ್ಕೆ ಭಾರತದ ಪ್ರತೀಕಾರ ಕ್ರಮ ಕೈಗೊಂಡರೆ ಭವಿಷ್ಯದಲ್ಲಿ ಬರುವ ಪಾಕಿಸ್ತಾನದ ಯಾವುದೇ ಸರಕಾರಕ್ಕೂ ಬೇರೆ ಆಯ್ಕೆಗಳು ಇರುವುದಿಲ್ಲ.
ಅಂದು ಬಾಲಕೋಟ್ ನಲ್ಲಿ ಏನಾಯ್ತು? ಜೈಷ್ ಮದರಸಾ ವಿದ್ಯಾರ್ಥಿ ಬಿಚ್ಚಿಟ್ಟ ಸತ್ಯ
ಅಣ್ವಸ್ತ್ರ ಇರುವ ಎರಡು ರಾಷ್ಟ್ರಗಳು ಸೇನೆಯ ಮಧ್ಯೆ ಕಾದಾಟ ನಡೆಸುವುದು ಹುಚ್ಚಾಟ ಆಗುತ್ತದೆ. ಆದರೆ ಇಡೀ ಜಗತ್ತಿನ ಎದುರು ಭಯೋತ್ಪಾದನೆ ವಿರುದ್ಧ ಹೋರಾಟದ ಕಾರಣ ನೀಡಿ, ಇಂಥ ಕಾರ್ಯಾಚರಣೆ ನಡೆಸುವುದು ಹಾಗೂ ಅದಕ್ಕೂ ಸಬೂತು ನೀಡಿದರೆ ಎಂಥ ಸನ್ನಿವೇಶ ಉದ್ಭವಿಸಬಹುದು ಎಂದು ಈಗಿನ ಸನ್ನಿವೇಶದಲ್ಲಿ ಗೊತ್ತಾಗಿದೆ.

ಈಗ ಕಡಿಮೆ ಖರ್ಚಿನ ಯುದ್ಧವಾಗಿ ಉಳಿದಿಲ್ಲ
ಒಂದು ಕಾಲ ಇತ್ತು. ಪಾಕಿಸ್ತಾನವು ಉಗ್ರಗಾಮಿಗಳನ್ನು ಛೂ ಬಿಟ್ಟು, ತನ್ನ ಸೈನಿಕರನ್ನು ಹೊದಿಕೆಯಡಿ ಮುಚ್ಚಿಟ್ಟು ಪರೋಕ್ಷ ಯುದ್ಧ ಮಾಡುತ್ತಿತ್ತು. ಧರ್ಮದ ಕಾರಣ ತಲೆಗೆ ತುಂಬಿ, ಹರೆಯದ ಯುವಕರ ಜೀವವನ್ನು ಬಂಡವಾಳ ಮಾಡಿಕೊಂಡಿದ್ದ ಪಾಕಿಸ್ತಾನಕ್ಕೆ ಅದರಿಂದ ಹೆಚ್ಚಿನ ನಷ್ಟ ಇರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಆ ದೇಶವನ್ನು ನಂಬುವ ಸ್ಥಿತಿಯಲ್ಲೇ ಇತರ ದೇಶಗಳು ಇಲ್ಲ. ತನ್ನ ಆರ್ಥಿಕತೆ ಸಮಸ್ಯೆಗೆ ನೆರವು ನೀಡಲು ಸಹ ಮತ್ತೊಂದು ದೇಶ ಬರಲಾರದು ಎಂಬ ಆತಂಕ ಪಾಕಿಸ್ತಾನಕ್ಕೆ ಎದುರಾಗಿದೆ. ಯಾವ ಮಾರ್ಗವನ್ನು ಕಡಿಮೆ ಖರ್ಚಿನ ಸುಲಭ ಯುದ್ಧ ಎಂದು ಭಾವಿಸಿತ್ತೋ ಅದೇ ಈಗ ದುಬಾರಿಯಾಗಿ ಪರಿಣಮಿಸಿದೆ. ರಾಜತಾಂತ್ರಿಕ ಸಂಬಂಧಗಳಿಗೆ ಸರಿಯಾದ ಪೆಟ್ಟು ನೀಡುತ್ತಿದೆ.

ಜೈಶೆ ಮುಖ್ಯಸ್ಥನ ಜತೆ ನಂಟು ಒಪ್ಪಿಕೊಂಡ ಪಾಕ್ ಸಚಿವ
ಇನ್ನು ಬಾಲಕೋಟ್ ನಲ್ಲಿ ಸತ್ತವರು ಎಷ್ಟು ಉಗ್ರರು ಎಂಬ ಸಂಖ್ಯೆಯ ಲೆಕ್ಕಕ್ಕೆ ಬರೋಣ. ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಅಮಿತ್ ಶಾ ಪ್ರಕಾರ ಇನ್ನೂರೈವತ್ತಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಆದರೆ ಪಾಕಿಸ್ತಾನ ಮಾಧ್ಯಮ, ಮಂತ್ರಿಗಳ ಪ್ರಕಾರ ಯಾವುದೇ ಸಾವು-ನೋವು ಸಂಭವಿಸಿಲ್ಲ. ಆದರೆ ಪಾಕಿಸ್ತಾನದ ಮಾತಲ್ಲೇ ಅನುಮಾನ ಬರುವಂತೆ ಘಟನೆ ನಡೆದಿದೆ. ನಮ್ಮ ವಿಮಾನ ಪತನ ಆಗಿಲ್ಲ ಎಂದಿತ್ತು ಪಾಕ್. ಆ ನಂತರ ವಿಮಾನ ಹೊಡೆದುರುಳಿಸಿದ್ದು ನಿಜ ಎಂಬುದು ಗೊತ್ತಾಯಿತು. ಉಗ್ರರು ಸತ್ತಿಲ್ಲ ಎನ್ನುತ್ತಿದೆ ಪಾಕಿಸ್ತಾನ. ಈಗಲೂ ಅದರ ಮಾತಲ್ಲಿ ಎಷ್ಟು ನಿಜ ಅಂತ ನಂಬಲು ಸಾಧ್ಯ? ಬಿಬಿಸಿ ಜತೆಗೆ ಸಂದರ್ಶನದಲ್ಲಿ ಭಾಗಿಯಾಗಿದ್ದ ಆ ದೇಶದ ವಿದೇಶಾಂಗ ಸಚಿವರೇ ಜೈಶೆ ಮುಖ್ಯಸ್ಥನ ಜತೆಗೆ ಪಾಕ್ ಸರಕಾರದ ನಂಟು ಹೇಗಿದೆ ಎಂಬ ಸಂಗತಿ ತೆರೆದಿಟ್ಟ ಮೇಲೆ ಹೇಳುವುದು ಏನಿದೆ?

ಅಕ್ಕಪಕ್ಕದ ಎಲ್ಲ ದೇಶದ ಜತೆಗೂ ಕಿರಿಕ್
ಭಾರತದಿಂದ ಪಾಕಿಸ್ತಾನಕ್ಕೆ ತಲುಪಿಸಬೇಕಿದ್ದ ಒಂದು ಸಂದೇಶ ಸ್ಪಷ್ಟವಾಗಿ ತಲುಪಿಸಿ ಆಗಿದೆ. ಹೋದಲ್ಲಿ- ಬಂದಲ್ಲಿ, ನಾವು ಅಣ್ವಸ್ತ್ರ ರಾಷ್ಟ್ರ. ನಮ್ಮ ತಂಟೆಗೆ ಭಾರತ ಬಂದರೆ ಅಷ್ಟೇ ಎಂದು ಹೇಳಿಕೊಂಡು ಬರುತ್ತಿತ್ತು ಪಾಕಿಸ್ತಾನ. ಅಣ್ವಸ್ತ್ರ ಇದೆ ಅನ್ನೋ ಏಕೈಕ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಂಡು ಕೂರುವುದಿಲ್ಲ. ನಿಮ್ಮದೇ ನೆಲಕ್ಕೆ ನುಗ್ಗಿ, ಉಗ್ರ ಸಂಹಾರ ಮಾಡಬಲ್ಲೆ ಎಂಬ ಸಂದೇಶ ನೀಡಿದಂತಾಯಿತು. ಒಂದು ವೇಳೆ ಉಗ್ರರು ಯಾರೂ ಸತ್ತಿಲ್ಲ ಅಂದುಕೊಳ್ಳಿ. ಗಡಿ ನಿಯಂತ್ರಣ ರೇಖೆ ದಾಟಿ, ನಮ್ಮ ವಾಯು ಸೇನೆ ಬರುವುದು ಕೂಡ ನಮಗೆ ಅಸಾಧ್ಯದ ವಿಚಾರವಲ್ಲ ಎಂಬ ಸಂದೇಶ ರವಾನಿಸಿದಂತಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಖ ಭಂಗವಾಗಿದೆ. ಅಕ್ಕಪಕ್ಕದ ರಾಷ್ಟ್ರಗಳ ಪೈಕಿ ಇರಾನ್, ಅಫ್ಘಾನಿಸ್ತಾನ, ಭಾರತ ಯಾರ ಜತೆಗೂ ಪಾಕ್ ಸಂಬಂಧ ಚೆನ್ನಾಗಿಲ್ಲ. ಇರೋದು ಒಂದು ಚೀನಾ ಕಷ್ಟ ಕಾಲದಲ್ಲಿ ಜತೆಗೆ ನಿಲ್ಲಲ್ಲ.

ಅಮೆರಿಕದ ಅನುದಾನಕ್ಕೂ ಕಲ್ಲು ಬಿತ್ತು
ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯನ್ನಾಗಿ ಮಾಡಬೇಕು, ಭಯೋತ್ಪಾದನೆ ಪ್ರಾಯೋಜಿತ ದೇಶ ಎಂಬ ಹಣೆಪಟ್ಟಿ ಅದಕ್ಕೆ ಅಂಟಿಸಬೇಕು ಎಂಬ ಭಾರತದ ನಿರಂತರ ಪ್ರಯತ್ನಕ್ಕೆ ಪ್ರಬಲ ಸಾಕ್ಷ್ಯ ದೊರೆತಂತೆ ಆಯಿತು. ಉಗ್ರರನ್ನು ಮಟ್ಟ ಹಾಕಬೇಕು ಎಂಬ ಒತ್ತಡ ಹೆಚ್ಚಾಯಿತು. ಮೊದಲೇ ಆರ್ಥಿಕವಾಗಿ ಕುಸಿದು ಹೋಗಿರುವ ಪಾಕಿಸ್ತಾನಕ್ಕೆ ಅಗತ್ಯ ನೆರವು ದೊರೆಯದಂತಾಯಿತು. ಅಮೆರಿಕದಿಂದ ದೊರೆಯುತ್ತಿದ್ದ ಹಣಕಾಸಿನ ಅನುದಾನಕ್ಕೂ ಕಲ್ಲು ಬಿತ್ತು. ಯಾವುದೇ ದೇಶದ ವಾಯು ಗಡಿಯನ್ನು ಮತ್ತೊಂದು ದೇಶವು ಉಲ್ಲಂಘಿಸಿದರೆ ಅಥವಾ ದಾಟಿ ಹೋದರೆ ಅದು ಸಾರ್ವಭೌಮತೆಯ ಪ್ರಶ್ನೆ. ಭಾರತದಿಂದ ಪಾಕಿಸ್ತಾನದ ಸಾರ್ವಭೌಮತೆಗೆ ಸವಾಲು ಹಾಕುವ ಕಾರ್ಯಾಚರಣೆ ನಡೆದರೂ ಯಾವ ದೇಶವೂ ಈ ಕ್ರಮವನ್ನು ಪ್ರಶ್ನಿಸಲಿಲ್ಲ, ಖಂಡಿಸಲಿಲ್ಲ. ಇಷ್ಟೆಲ್ಲ ಬದಲಾವಣೆ ತಂದಿರುವ ಭಾರತೀಯ ವಾಯು ಸೇನೆ ಬಗ್ಗೆ ಹೆಮ್ಮೆ ಪಡುವುದು ಬೇಡವೆ?