ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

17 ವರ್ಷಗಳಿಂದ ವಿದ್ಯುತ್‌ನಲ್ಲಿ ಆತ್ಮನಿರ್ಭರತೆ ಸಾಧಿಸಿದ ಪುತ್ತೂರಿನ ಕೃಷಿಕ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಕ್ಟೋಬರ್ 9: ಇತ್ತೀಚಿನ ದಿನಗಳಲ್ಲಿ ಎಲ್ಲಾ ವಸ್ತುಗಳ ಬೇಡಿಕೆ ಹೆಚ್ಚಾಗಿದೆ. ಮನೆ ಬಾಡಿಗೆ, ಪೆಟ್ರೋಲ್, ದಿನಬಳಕೆ ವಸ್ತುಗಳು, ದಿನಸಿ ವಸ್ತುಗಳು ಎಲ್ಲದರ ದರವೂ ಗಗನಮುಖಿಯಾಗಿದೆ. ತಿಂಗಳ ಸಂಬಳವನ್ನೇ ನಂಬಿಕೊಂಡಿರುವ ಮಧ್ಯಮವರ್ಗದ ಜನರು ಅಳೆದು ತೂಗಿ ಜೀವನ ಮಾಡುವಂತಾಗಿದೆ.

ಇದರ ನಡುವೆ ವಿದ್ಯುತ್ ದರವೂ ಹೆಚ್ಚಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಪರ ಕೃಷಿಕನೋರ್ವ 17 ವರ್ಷಗಳಿಂದ ಸರ್ಕಾರಕ್ಕೆ ವಿದ್ಯುತ್ ಬಿಲ್‌ನ್ನೇ ಕಟ್ಟಿಲ್ಲ. ಸ್ವತಃ ವಿದ್ಯುತ್ ಉತ್ಪಾದನೆ ಮಾಡಿ, ಆತ್ಮ ನಿರ್ಭರತೆಯನ್ನು ಸಾಧಿಸಿದ್ದಾರೆ.

ತಮ್ಮದೇ ಜಾಗದಲ್ಲಿ ನೈಸರ್ಗಿಕವಾಗಿ ಉರಿಯುವ ನೀರಿನಿಂದ ವಿದ್ಯುತ್ ತಯಾರಿಸಿ, ವಿದ್ಯುತ್‌ನಲ್ಲಿ ಆತ್ಮ ನಿರ್ಭರತೆಯನ್ನು ಸಾಧಿಸಿದವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಪ್ರಗತಿಪರ ಕೃಷಿಕ ಸುರೇಶ್ ಎಂಬುವವರು. ಕಳೆದ 17 ವರ್ಷಗಳಿಂದ ವಿದ್ಯುತ್‌ಗಾಗಿ ಸರಕಾರಕ್ಕೆ ಅಂಗಲಾಚದೆ ತನ್ನದೇ ಸ್ವಂತ ಜಲ ವಿದ್ಯುತ್ ಘಟಕವನ್ನು ಸ್ಥಾಪಿಸುವ ಮೂಲಕ ಸುರೇಶ್ ನಿರಂತರ ವಿದ್ಯುತ್ ಪಡೆಯುತ್ತಿದ್ದಾರೆ.

ತನ್ನ ತೋಟದ ಸುಮಾರು 60 ಅಡಿ ಎತ್ತರದಲ್ಲಿ ಹರಿಯುವ ಹಳ್ಳದ ನೀರನ್ನು ಕೊಳವೆಯ ಮೂಲಕ ಟರ್ಬನ್‌ಗೆ ಹರಿಸುತ್ತಾರೆ. ಈ ಮೂಲಕ ಸುರೇಶ್ 2 ಕೆ.ವಿ ವಿದ್ಯುತ್ ಪಡೆಯುತ್ತಿದ್ದಾರೆ. 6 ಇಂಚು ಅಗಲದ ಕೊಳವೆಯ ಮೂಲಕ ನೀರನ್ನು ಹರಿಸಿ, 4 ಇಂಚು, 3 ಇಂಚು, 2.5 ಇಂಚು ಹಾಗೂ 1.50 ಇಂಚುಗಳ ಪೈಪ್‌ಗಳನ್ನು ಜೋಡಿಸುವ ಮೂಲಕ ನೀರಿನ ಹರಿವಿನ ರಭಸವನ್ನು ಹೆಚ್ಚಿಸಲಾಗಿದೆ.

Mangaluru: A Farmer From Puttur Who Has Been Producing Electricity For 17 Years

ಟರ್ಬೈನ್‌ಗೆ 1 ಇಂಚಿನ ಪೈಪ್‌ನ ರಭಸದ ನೀರನ್ನು ಬಿಡುವ ಮೂಲಕ ಟರ್ಬೈನ್ ಅನ್ನು ವೇಗವಾಗಿ ತಿರುಗಿಸಲಾಗುತ್ತದೆ. ಈ ಟರ್ಬೈನ್‌ಗೆ ಬೆಲ್ಟ್ ಅಳವಡಿಸಿ ಡೈನಮೋ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತದೆ. ಮನೆಗೆ ಬೇಕಾದ ಎಲ್ಲಾ ವಿದ್ಯುತ್ ಸಲಕರಣೆಗೆ ಇದೇ ವಿದ್ಯುತ್ ಅನ್ನು ಉಪಯೋಗಿಸಲಾಗುತ್ತಿದ್ದು, ವರ್ಷಕ್ಕೆ 9 ತಿಂಗಳು ಇದೇ ವಿದ್ಯುತ್ ಅನ್ನು ಸುರೇಶ್ ಬಳಸುತ್ತಿದ್ದಾರೆ.

"ಸರಿಸುಮಾರು 50 ರಿಂದ 60 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಅಳವಡಿಸಲಾಗಿರುವ ಈ ಟರ್ಬೈನ್‌ಗೆ ಖರ್ಚು ಮಾಡಿದ ಹಣಕ್ಕಿಂತ ಎಷ್ಟೋ ಪಾಲು ಹಣವನ್ನು ವಿದ್ಯುತ್ ಬಿಲ್‌ನಲ್ಲೇ ಉಳಿಸಿಕೊಂಡಿರುವ ಸುರೇಶ್, ತಮ್ಮಂತೆ ಇತರರೂ ಅವಕಾಶವಿದ್ದಲ್ಲಿ ಈ ರೀತಿಯ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ತಮ್ಮಂತೆಯೇ ವಿದ್ಯುತ್‌ನಲ್ಲಿ ಆತ್ಮನಿರ್ಭರತೆ ಸಾಧಿಸಲು ಸಾಧ್ಯವಿದೆ," ಎನ್ನುತ್ತಾರೆ ಸುರೇಶ್.

ಪ್ರಗತಿಪರ ಕೃಷಿಕರಾಗಿರುವ ಸುರೇಶ್ ನೈಸರ್ಗಿಕವಾಗಿ ಹರಿಯುವ ನೀರನ್ನೇ ತಮ್ಮ ತೋಟಗಳಿಗೆ ಬಳಸಿಕೊಳ್ಳುವ ಮೂಲಕ ಅಂತರ್ಜಲ ವೃದ್ಧಿಯಲ್ಲೂ ತಮ್ಮ ಪಾತ್ರ ನಿರ್ವಹಿಸುತ್ತಿದ್ದಾರೆ. ಹರಿಯುವ ನೀರನ್ನು ತೋಟದ ತುಂಬಾ ನೀರಿನ ಗುಂಡಿಗಳನ್ನು ನಿರ್ಮಿಸುವ ಮೂಲಕ ಅಂತರ್ಜಲ ವೃದ್ಧಿ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಇವರ ತೋಟದಲ್ಲಿ ಇದೀಗ ಕೊಳವೆ ಬಾವಿಯನ್ನು ಬಳಸಲಾಗುತ್ತಿಲ್ಲ.

ಈ ಕಿರು ಜಲವಿದ್ಯುತ್ ಘಟಕವನ್ನು ವೀಕ್ಷಿಸಲು ಹಾಗೂ ಮಾಹಿತಿ ಪಡೆದುಕೊಳ್ಳಲು ಊರು ಹಾಗೂ ಪರವೂರಿನಿಂದ ಹಲವರು ಸುರೇಶ್ ತೋಟಕ್ಕೆ ಭೇಟಿ ನೀಡುತ್ತಿದ್ದಾರೆ. "ಈ ಕಿರು ಜಲ ವಿದ್ಯುತ್ ಘಟಕವನ್ನು ವೀಕ್ಷಿಸಿದ ಮಂದಿ ಯಾವ ರೀತಿ ಬೃಹತ್ ಮಟ್ಟದ ಜಲ ವಿದ್ಯುತ್ ಘಟಕಗಳು ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ಹತ್ತಿರದಿಂದಲೇ ನೋಡಿದಂತಾಗುತ್ತದೆ," ಅಂತಾ ಬೆಂಗಳೂರು ಮೂಲದ ಸ್ವಾತಿ ಖುಷಿ ವ್ಯಕ್ತಪಡಿಸಿದ್ದಾರೆ.

ಎಲ್ಲಾ ವಿಚಾರಗಳಿಗೂ ಸರಕಾರವನ್ನು ಅವಲಂಬಿಸುವ ಜನರ ಮಧ್ಯೆ ಸುರೇಶ್ ಸ್ವಾವಲಂಬಿಯಾಗಿ ವಿದ್ಯುತ್ ಉತ್ಪಾದಿಸುವ ಮೂಲಕ ಗುರುತಿಸಿಕೊಂಡಿದ್ದಾರೆ. ಅನ್ನ ಬೆಳೆಯುವ ರೈತ, ಬೆಳೆಗಳನ್ನು ಪೋಷಿಸುವ ಕೃಷಿಕ ಮನಸ್ಸು ಮಾಡಿದರೆ, ಪೃಕೃತಿಯಲ್ಲಿ ಸಿಗುವ ವಸ್ತುಗಳನ್ನು ಬಳಸಿ ಸ್ವಾವಲಂಬಿಯಾಗಿ ಬದುಕಬಹುದು ಅಂತಾ ಸುರೇಶ್ ಸಾಧಿಸಿ ತೋರಿಸಿದ್ದಾರೆ.

English summary
Progressive farmer Suresh from Puttur of Dakshina Kannada district who has been producing electricity for 17 years from a mini Hydro power plant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X