ಕಡಿಮೆ ಸಂಬಳದಲ್ಲಿ ಬೆಂಗಳೂರು ಜೀವನ ನಡೆಸೋ ಟಿಪ್ಸ್ ಕೊಟ್ಟ 22 ವರ್ಷದ ಯುವಕ
ಸಿಲಿಕಾನ್ ಸಿಟಿ ಬೆಂಗಳೂರು ಜೀವನ ಫುಲ್ ದುಬಾರಿ, ಲಕ್ಷ ಲಕ್ಷ ಸಂಬಳ ಬಂದ್ರೂ ನೆಮ್ಮದಿಯಾದ ಜೀವನ ನಡೆಸೋಕಾಗಲ್ಲ ಅಂತ ಇತ್ತೀಚೆಗೆ ಕೆಲ ಟೆಕ್ಕಿಗಳು ತಮ್ಮ ನೋವನ್ನ ತೋಡಿಕೊಂಡಿದ್ರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಭಾರಿ ಚರ್ಚೆ ನಡೆದಿತ್ತು. ಲಕ್ಷ ಲಕ್ಷ ಹಣ ಸಂಪಾದನೆ ಮಾಡಿದ್ರೂ ರಾಜಧಾನಿಯಲ್ಲಿ ಒಳ್ಳೆಯ ಜೀವನ ಸಿಗಲ್ಲ ಅನ್ನೋರಿಗೆ ಯುವಕನೊಬ್ಬ ಟಾಂಗ್ ನೀಡಿದ್ದಾನೆ. ಬೆಂಗಳೂರಿನ 22 ವರ್ಷದ ಹುಡುಗ ತಿಂಗಳಿಗೆ 20,000 ರೂಪಾಯಿ ಸಂಬಳದಲ್ಲಿ ಹೇಗೆ ನೆಮ್ಮದಿಯಾಗಿ ಬದುಕಬಹುದು ಎಂದು ಟಿಪ್ಸ್ ಕೂಡ ನೀಡಿದ್ದಾನೆ. ಇದನ್ನು ಕಂಡು ನೆಟ್ಟಿಗರೂ ನಿಜಕ್ಕೂ ಶಾಕ್ ಆಗಿದ್ದಾರೆ.
ಬೆಂಗಳೂರು ಇತ್ತೀಚೆಗೆ ದುಬಾರಿ ಜೀವನ, ವೆಚ್ಚ ಏರಿಕೆ ಮತ್ತು ಟ್ರಾಫಿಕ್ ಸಮಸ್ಯೆ ಸೇರಿ ಹಲವು ಕಾರಣಗಳಿಗೆ ಸುದ್ದಿಯಾಗುತ್ತಲೇ ಇದೆ. ಬೆಂಗಳೂರಲ್ಲಿ ಕಡಿಮೆ ಸಂಬಳ ಪಡೆದರೂ ಒಳ್ಳೆಯ ಜೀವನ ನಡೆಸೋ ಟಿಪ್ಸ್ ನೀಡಿರುವ ಈ ಯುವಕ ಯಾರೋ ಆರ್ಥಿಕ ತಜ್ಞನೂ ಅಲ್ಲ ಅಥವಾ ಸರ್ಕಾರಿ ಅಧಿಕಾರಿಯೂ ಅಲ್ಲ.

ಕೇವಲ 22 ವರ್ಷದ ಯುವಕನೊಬ್ಬ ತನ್ನ ಮಾಸಿಕ ವೆಚ್ಚಗಳ ವಿವರವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಸ್ವಂತ ಖರ್ಚುಗಳನ್ನು ನಿಭಾಯಿಸಿ, ಉಳಿಸುವುದು ಹೇಗೆ ಎಂದು ಲೆಕ್ಕವನ್ನೂ ನೀಡಿದ್ದಾನೆ. ಇದನ್ನು ನೋಡಿ ಹಲವರು ಬೆರಗುಗೊಂಡಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
ಭಾರತದಲ್ಲಿ 6 ತಿಂಗಳು ಒಂಟಿಯಾಗಿ ವಾಸಿಸುತ್ತಿದ್ದೇನೆ. ನನ್ನ ಮಾಸಿಕ ವೆಚ್ಚಗಳು ಹೇಗಿವೆ ಎಂದು ಆತ ಬರೆದುಕೊಂಡಿದ್ದಾನೆ. ಗಗನಕ್ಕೇರುತ್ತಿರುವ ಬಾಡಿಗೆ ಮತ್ತು ಹಣದುಬ್ಬರಕ್ಕೆ ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ ತಿಂಗಳಿಗೆ 20,000 ರೂಪಾಯಿ ಬಜೆಟ್‌ನಲ್ಲೇ ಆರಾಮವಾಗಿ ವಾಸಿಸುತ್ತಿದ್ದಾರೆ. ಇದು ಹೇಗೆ ಎಂದು ವಿವರಿಸಿದ್ದಾರೆ.

ನಾನು ಕಳೆದ ಆರು ತಿಂಗಳಿನಿಂದ ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದೇನೆ. 2 ಬಿಎಚ್‌ಕೆ ಫ್ಲಾಟ್‌ನಲ್ಲಿ ಇಬ್ಬರು ಸ್ನೇಹಿತರೊಂದಿಗೆ ಇದ್ದೇನೆ. ಟ್ರಾವೆಲ್ ಖರ್ಚಿಗೆ 2,000 ಆಗುತ್ತೆ. ಸಾರ್ವಜನಿಕ ಸಾರಿಗೆ ಮತ್ತು ರ್ಯಾಪಿಡೋ ಬಳಸುತ್ತೇನೆ. ಆಹಾರಕ್ಕಾಗಿ ಸುಮಾರು 8,000, ಬಾಡಿಗೆಗೆ 9,000 ರೂಪಾಯಿ, ಇತರ ಅಗತ್ಯ ವಸ್ತುಗಳಿಗೆ ಒಂದೆರಡು ಸಾವಿರ ರೂಪಾಯಿ ಖರ್ಚಾಗುತ್ತೆ ಎಂದು ಲೆಕ್ಕ ಬಿಚ್ಚಿಟ್ಟಿದ್ದಾನೆ.
ಆರಾಮದಾಯಕ ಜೀವನಶೈಲಿಗೆ ಇದು ಸಾಕು, ಇದೆಲ್ಲ ಐಷಾರಾಮಿ ಅಲ್ಲ, ಆದರೆ ಖಂಡಿತವಾಗಿಯೂ ನಿರ್ವಹಿಸಬಹುದಾಗಿದೆ. ನಾನು ಹೆಚ್ಚು ಮದ್ಯಪಾನ ಮಾಡುವುದಿಲ್ಲ. ಧೂಮಪಾನ ಮಾಡುವುದಿಲ್ಲ ಅಥವಾ ಪಾರ್ಟಿ ಕೂಡ ಮಾಡುವುದಿಲ್ಲ. ಆದ್ದರಿಂದ ನಿಮ್ಮ ಮೈಲೇಜ್ ಬದಲಾಗಬಹುದು ಎಂದು ಹೇಳಿದ್ದಾರೆ. ಅಲ್ಲದೆ ನೀವು ನನ್ನಂತೆ ಇರಬೇಡಿ, ನೀವು ಆ ರೀತಿಯ ವ್ಯಕ್ತಿಯಾಗಿದ್ದರೆ ಹೊರಗೆ ಹೋಗಿ ನಿಮ್ಮ 20ರ ವಯಸ್ಸನ್ನು ಆನಂದಿಸಿ ಎಂದು ಪ್ರಾಮಾಣಿಕತೆಯಿಂದ ಹೇಳಿದ್ದಾನೆ.
ಈ ಪೋಸ್ಟ್ ನೋಡಿ ಜನ ಶಾಕ್ ಕೂಡ ಆಗಿದ್ದಾರೆ. ಒಬ್ಬ ಬಳಕೆದಾರ ತಮ್ಮ ವಯಸ್ಸಿನವರಾಗಿದ್ದರೂ ಹೆಚ್ಚು ಖರ್ಚು ಮಾಡುವ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೊಬ್ಬರು ಈ ಪೋಸ್ಟ್ ಅನ್ನು ಬೆಂಗಳೂರಿನವರೊಂದಿಗೆ ಹಂಚಿಕೊಳ್ಳಲು ಶಿಫಾರಸು ಮಾಡಿದ್ದಾರೆ. ಅಲ್ಲಿನ ಜನರು 20 LPA ವೇತನ ಇದ್ದರೂ ಸಾಕಾಗುವುದಿಲ್ಲ ಎಂದಿದ್ದಾರೆ. ಕೆಲವರು ಮನೆಯಲ್ಲಿ ಅಡುಗೆ ಮಾಡುವ ಮೂಲಕ ಆಹಾರ ವೆಚ್ಚವನ್ನು ಕಡಿತಗೊಳಿಸಲು ಸಲಹೆ ನೀಡಿದ್ದಾರೆ. ಇನ್ನೂ ಕೆಲವರು ತಮ್ಮ ಸ್ವಂತ ಆರ್ಥಿಕ ತೊಂದರೆಗಳನ್ನು ಈ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ವಾಸಿಸುವ 22 ವರ್ಷದ ಯುವಕನೊಬ್ಬ 45 ಸಾವಿರ ರೂಪಾಯಿ ಉಳಿತಾಯದೊಂದಿಗೆ 8 LPA ಗಳಿಸುತ್ತಿದ್ದೇನೆ ಹಾಗೂ ವಿದೇಶದಲ್ಲಿ ಸ್ನಾತಕೋತ್ತರ ಪದವಿಗೆ ತಯಾರಿ ನಡೆಸುತ್ತಿದ್ದೇನೆ ಎಂದು ಹೇಳಿದ್ದಾನೆ.












Click it and Unblock the Notifications